Monday, December 31, 2007

ಆಕಾಶದಿಂದ ಧರೆಗಿಳಿದ ಗೊಂಬೆ

ಆಕಾಶದಿಂದ ಧರೆಗಿಳಿದ ಗೊಂಬೆ 
ಇವಳೆ ಇವಳೆ ನಮ್ಮ್ ಮನೆಯ ಗೊಂಬೆ 
ಚೆಲುವಾದ ಗೊಂಬೆ ಚಂದನದ ಗೊಂಬೆ !! 
ಡಿಸೆಂಬರ್ ತಿಂಗಳ ಕೊರೆವ ಚಳಿಯನ್ನು ಬೆಚ್ಚಗೆ ಮಾಡಲು ನಮ್ಮ ಮನೆಗೆ ಬಂದಳು ಈ ಪುಟ್ಟು ಮರಿ. ಅಪ್ಪ ಕ್ಯಾಮೆರಾ ಹಿಡಿದು “ಸಾಹಿತ್ಯಾ, ಕಣ್ಣ್ ಬಿಡಮ್ಮ ಅಪ್ಪನ್ನ ನೋಡಮ್ಮ” ಅಂದಿದ್ದೆ ತಡ.. ಜಾಣೆಯಂತೆ ತನ್ನ ಪಿಳಿ ಪಿಳಿ ಬಟ್ಟಲು ಕಣ್ಣು ಬಿಟ್ಟು ಎಲ್ಲರ ನೋಡಿದಳು. ಆಸ್ಪತ್ರೆಯಲ್ಲಿ ತೆಗೆದ ಮೊದಲ ಕೆಲುವು ಫೋಟೋಗಳು ಇವು.

Sunday, December 30, 2007

ಮೊದಲ ಹೆಜ್ಜೆ !!



ಬಹಳ ತಿಂಗಳುಗಳಿಂದ ಒಂದು ಬ್ಲಾಗ್ ಶುರು ಮಾಡೋಣ ಅಂತ ಮನಸ್ಸಿನಲ್ಲೇ ಅಂದು ಕೊಳ್ಳೋದು, ಆದ್ರೆ ಏನು ಬರೆಯೋದು ಅಂತ ಗೊತ್ತಾಗದೆ ಹಾಗೆ ಸುಮ್ಮನಾಗೋದು ಹೀಗೆ ನಡೀತಾಯಿತ್ತು. ನಾನು ಶಾಲೆಯಲ್ಲಿ ಕನ್ನಡ ಓದಿದ್ದು ಮೂರನೆ ಭಾಷೆಯಾಗಿ. ಅಮ್ಮ ಮನೆಯಲ್ಲಿ ಹೇಳಿಕೊಟ್ಟ ಮಕ್ಕಳ ಪದ್ಯಗಳಲ್ಲಿ ಕೆಲವು ಮಾತ್ರ ನೆನಪುಂಟು. ಈಗ ಪರದೇಶದಲ್ಲಿ ಬೆಳೆಯುತ್ತಿರುವ ನನ್ನ ಪುಟ್ಟ ಕಂದಮ್ಮಗೆ ಹೇಳುಕೊಡುವ ಸಲುವಾಗಿ ನಾನು ಈಗ ಮಕ್ಕಳ ಪದ್ಯಗಳು, ಹಾಡು, ಚಿತ್ರಗೀತೆ ಇವೆಲ್ಲವನ್ನು ಬಾಯಿಪಾಠ ಮಾಡುತ್ತಿದ್ದೇನೆ. ಈ ಬ್ಲಾಗಿನಲ್ಲಿ ನಾನು ಕಲಿತಿದ್ದೆಲ್ಲವನ್ನು ಬರೆಯೋಣ ಅಂತ ಕೊನೆಗೂ ನನ್ನ ಬ್ಲಾಗ್ ಪ್ರಾರಂಭ ಮಾಡಿದ್ದೇನೆ. ನನ್ನ ಮಗಳ ಆಟೋಟ, ಫೋಟೋ ಎಲ್ಲವನ್ನು ಇಲ್ಲಿ ಹಂಚಿಕೊಳ್ಳುತೀನಿ. ಕೆಲವು ಆಂಗ್ಲ ಪದ್ಯಗಳೂ ಇತರೆ ವಿಚಾರಗಳೂ ಇಲ್ಲಿ ಬರೆಯುತ್ತೇನೆ.
ಸರಿ ಬ್ಲಾಗಿಗೆ ಹೆಸರೇನು ಇಡೋಣ ಅಂತ ಯೋಚಿಸುತ್ತಿದ್ದಾಗ ಹೊಳೆದದ್ದು "ಸವರನ್". ಇದು ನನ್ನ ತಾತ ನನಗೆ ಇಟ್ಟ ಮುದ್ದಿನ ಹೆಸರು, ನನ್ನ ಮಗಳಿಗೆ ಅವರ ಅಜ್ಜ ಕರೆವ ಹೆಸರು. ಜೊತೆಗೆ ನಾಣ್ಯ ಸಂಗ್ರಹಿಸುವೆ ನನ್ನ ಪತಿರಾಯರ ಅದಮ್ಯ ಕನಸು ಬ್ರಿಟೀಶ್ ಕಾಲದ ಒಂದು ಸವರನ್ ನಾಣ್ಯದ ಒಡೆಯನಾಗಬೇಕೆಂಬುದು. ಮನೆಯಲ್ಲಿ ನಾವಿಬ್ಬರು ಜೀವಂತ "ಸವರನ್"ಗಳಿರಬೇಕಾದರೆ ನಿಮ್ಗ್ಯಾಕೆ ಆ ನಾಣ್ಯದ ಚಪಲ ಅಂತ ಅವರನ್ನು ಚುಡಾಯಿಸ್ತೀನಿ. ಅಮ್ಮ, ಅಪ್ಪ, ಮಗಳು ಎಲ್ಲರೂ "ಸವರನ್"ಗೆ ಸೈ ಅಂದಮೇಲೆ ತಡಮಾಡದೇ ಅದನ್ನು ನೊಂದಾಯಿಸಿ, ನನ್ನ ಮೊದಲ ಪೋಸ್ಟ್ ಬರೆದೇಬಿಟ್ಟೆ. ಚಿತ್ರದಲ್ಲಿರುವ ಮುದ್ದಾದ ಹೆಜ್ಜೆ ಗುರುತುಗಳು ನನ್ನ ಮಗಳು ಹುಟ್ಟಿದಾಗಿನವು.. ನಿಮ್ಮ ಅನಿಸಿಕೆಗಳನ್ನು ದಯವಿಟ್ಟು ತಿಳಿಸಿ ಅದೇ ನನಗೆ ಪ್ರೋತ್ಸಾಹ. ಆಗಾಗ್ಗೆ ಇಲ್ಲಿ ಮತ್ತೆ ಭೇಟಿಯಾಗೋಣ..