Tuesday, March 27, 2012

ಮಂಗಗಳ ಉಪವಾಸ


kannada rhyme mangagala upavasa
Photo via Sweet Clip Art
 ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .

ಏನೂ ತಿನ್ನದೆ ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು

"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು
ತೋಟದಿ ಬಾಳೆಯ ಹಣ್ಣನು ನೋಡಲು
ಆಶೆಯು ಹೆಚ್ಚಿತು ನೀರೂರಿ

"ಸುಲಿದೇ ಇಡುವ ಆಗದೆ " ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು

"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ ಇಟ್ಟವು
"ಜಗಿದೇ ಇಡುವೆವು " ಎಂದಿತು ಕಪಿ ಮತ್ತೊಂದು
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ .

(ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )
ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿರಿ.

Saturday, March 10, 2012

ನಮ್ಮ ಮನೆಯಲೊಂದು ಪುಟ್ಟ ಪಾಪ

ನಮ್ಮ ಮನೆಯಲೊಂದು ಪುಟ್ಟ ಪಾಪ ಇರುವುದು

ಎತ್ತಿಕೊಳದೆ ಹೋದರದಕೆ ಕೋಪ ಬರುವುದು ।



ಕೋಪಬರಲು ಗಟ್ಟಿಯಾಗಿ ಕಿರಚಿಕೊಳುವುದು

ಕಿರಚಿಕೊಂಡು ತನ್ನ ಮೈಯಪರಚಿಕೊಳುವುದು।



ಮೈಯ ಪರಚಿಕೊಂಡು ಪಾಪ ಅತ್ತುಕರೆವುದು

ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು ।



ಪಾಪ ಅಳಲು ಅಮ್ಮ ತಾನು ಅತ್ತುಬಿಡುವಳು

ಅಯ್ಯೊ ಪಾಪ ಎಂದು ಎತ್ತಿಕೊಂಡು ಮುತ್ತು ಕೊಡುವಳು ।



ಪಾಪ ಪಟ್ಟುಹಿಡಿದ ಹಠವು ಸಾರ್ಥವಾಯಿತು

ಕಿರಚಿ ಪರಚಿ ಅಳುವುದೆಲ್ಲ ಅರ್ಥವಾಯಿತು ।।


Friday, March 02, 2012

ತಾರೆಗಳ ತೋಟದಿಂದ ಚಂದಿರ ಬಂದಾ...

ಈ ಹಾಡು ನೆನಪಿದ್ಯಾ ?

ಚಿತ್ರ : ನಮ್ಮ ಮಕ್ಕಳು (೧೯೬೯)
ಸಾಹಿತ್ಯ : ಆರ್.ಎನ್ ಜಯಗೋಪಾಲ್

ಸಂಗೀತ : ವಿಜಯ ಭಾಸ್ಕರ್

ಗಾಯಕಿ : ಎಸ್.ಜಾನಕಿ,ಸಂಗಡಿಗರು


ಚಂ ಚಂ ಚಂ ಚಂ ಚಂ ಚಂ ಚಂ
ಚಂ ಚಂ ಚಂ ಚಂ ಚಂ ಚಂ ಚಂ

ತಾರೆಗಳ ತೋಟದಿಂದ ಚಂದಿರ ಬಂದಾ
ನೈದಿಲೆಯ ಅಂದ ನೋಡಿ ಆಡಲು ಬಂದಾ...ತಾರೆಗಳ..

ಹಾಲಿನ ಕೊಳದಿ ಮಿಂದು ಬಂದು.ಹೊ.ಹೊ.ಹೊ
ಹೂಬಳ್ಳೀ ಉಯ್ಯಾಲೆ ಆಡಿ ನಿಂದು.ಹೊ.ಹೊ.ಹೊ
ಹೇಳಬೇಡವೆಂದು ಸನ್ನೆ ಮಾಡಿ ಮುಂದು
ಮೆಲ್ಲಗೆ ತಾ ಹುವ್ವಿಗಿತ್ತ ಮುತ್ತನೊಂದು..ಮುತ್ತನೊಂದು...ತಾರೆ..

ಹೂವಿನ ರಾಣಿಯ ಜೊತೆಗೂಡಿ .ಹೊ.ಹೊ.ಹೊ
ನಗುವ ಸಖನ ಪರಿ ನೋಡಿ .ಹೊ.ಹೊ.ಹೊ
ಕೋಪದಿಂದ ಕೂಡಿ ಕಂದು ಮುಖ ಬಾಡಿ
ತಾರೆಗಳು ನೋಡುತ್ತಿತ್ತು ದೂರ ಓಡಿ..ದೂರ ಓಡಿ...ತಾರೆ..

ಮೂಡಿರೆ ಬಾನಲ್ಲಿ ಕೆಂಪು ಬಣ್ಣಾ .ಹೊ.ಹೊ.ಹೊ
ಚಂದಿರ ತೆರೆದ ತನ್ನ ಕಣ್ಣಾ.ಹೊ.ಹೊ.ಹೊ
ಕಾಲ ಮೀರಿತೆಂದು ಬಾನ ಮೇಲೆ ನಿಂದು
ನೈದಿಲೆಗೆ ಕೈಯ್ಯ ಬೀಸಿ ಹೋದ ಮುಂದು..ಹೋದ ಮುಂದು

ಚಂದಿರನ ಆಟ ನೋಡಿ ನಕ್ಕನು ಬಾನೂ
ನೈದಿಲೆಯು ತನ್ನ ಮುಖ ಮುಚ್ಚಿತು ತಾನೂ..

ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ
ಲಾ ಲ ಲಲ್ಲ ಲಾ ಲ ಲಲ್ಲ ಲಾ ಲ ಲಲ್ಲ ಲಾ....