Showing posts with label Holi. Show all posts
Showing posts with label Holi. Show all posts

Monday, March 21, 2011

ಚೆಲ್ಲಿದರೋಕುಳಿಯಾ

 ಮೊದಲೇ ಅಂದಿಕೊಂಡಂತೆ ನಮ್ಮೂರಿನ ಭಾರತೀಯ ಅಸೋಷಿಯೇಶನ್ ಅವರು ಆಯೋಜಿಸಿದ್ದ ಹೋಳಿ ಹಬ್ಬದ ಆಚರಣೆಗೆ ನನ್ನ ನೆಗಡಿ ಹೆಚ್ಚಾಗಿದ್ದರಿಂದ ಹೋಗಲಾಗಲಿಲ್ಲ. ಪುಟ್ಟಿಗೆ ಇದು ಬಹಳ ಬೇಸರ ಮಾಡಿಸಿತ್ತು, ಅದಕ್ಕೆ ಮನೆಯಲ್ಲಿ ನಾವು ಮೂವರೇ ಸಣ್ಣದಾಗಿ ಒಬ್ಬರಿಗೊಬ್ಬರು ಬಣ್ಣಗಳನ್ನು ಹಚ್ಚಿಕೊಳ್ಳುತ್ತಾ ಆಟವಾಡಿದೆವು. ಪುಟ್ಟಿ ತನಗೆ ತಾನೇ ಬಣ್ಣ ಹಚ್ಚಿಕೊಳ್ಳುವುದು ಹೆಚ್ಚು ಮೋಜೆನಿಸಿತು. ತಟ್ಟೆಯಲ್ಲಿದ್ದ ಬಣ್ಣಗಳನ್ನೆಲ್ಲಾ ಕೈಗೆ ಹಚ್ಚಿಕೊಂಡಳು. ಬಣ್ಣಗಳಿಂದ ತುಂಬಿದ್ದ ಆ ಪುಟ್ಟ ಕೈಗಳನ್ನು ನೋಡುವುದೇ ಖುಶಿ:) ಕೊನೆಗೆ ಅವಳ ಇಡೀ ಮೈಯಿಗೆ ಬಣ್ಣ ಹಚ್ಚಿಕೊಂಡಿದ್ದಳು.
ಚಿಕ್ಕಂದಿನಲ್ಲಿ ಕೋಲಾಟವಾಡಿದ್ದ ಈ ಹಾಡು ನೆನಪಾಯ್ತು. ಈ ಹಾಡಿನ ಲಿಂಕ್ ಇದ್ರೆ ತಿಳಿಸಿ ಪ್ಲೀಸ್...

ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ
ಬಲ್ಲಿದ ರಂಗನ್‌ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯಾ 
ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ
ಅಂದವುಳ್ಳ ರಂಗನ್‌ ಮೇಲೆ ಚೆಲ್ಲಿದರೋಕುಳಿಯಾ 
ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ
ಲೋಲನಾದ ರಂಗನ್‌ ಮ್ಯಾಲೆ ಚೆಲ್ಲಿದರೋಕುಳಿಯಾ
 ತುಪ್ಪದೋಕುಳ್ಲಿಯೋ ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ್‌ ಮ್ಯಾಲೆ ಚೆಲ್ಲಿದರೋಕುಳಿಯಾ
  
  

  

Saturday, March 19, 2011

ಬಣ್ಣಗಳ ಹಬ್ಬ ಹೋಳಿ

ಕೆಂಪು, ನೀಲಿ, ಹಳದಿ,ಗುಲಾಬಿ,ಹಸಿರು, ಕಂದು - ಎಲ್ಲೆಲ್ಲೂ ರಂಗು...ಇದು ಹೋಳಿ ಹಬ್ಬದ ಗುಂಗು!! ಬಣ್ಣಗಳ ಈ ಹಬ್ಬದ ಬಗ್ಗೆ ಪುಟ್ಟಿಗೆ ತಿಳಿಸುತ್ತಾ ಗೂಗಲ್ ನಲ್ಲಿದ್ದ ಒಂದಷ್ಟು ಫೋಟೋಗಳನ್ನು ತೋರಿಸಿದೆ. ಬಣ್ಣಗಳನ್ನು ಮೈಮೇಲೆಲ್ಲಾ ಹಾಕಿಕೊಂಡದನ್ನು ಕಂಡು ಖುಶಿಪಟ್ಟು "ನಾನೂ ಮಾಡ್ತೀನಿ ಅಮ್ಮ, ಇದು ಮುಖಕ್ಕೆ ಪೈಂಟ್ ಹಚ್ಚೋ ತರಹ!!" ಅಂದ್ಲು. ಆಯ್ತು ಕಂದ ಕಲರ್ಸ್ ತರ್ತೀನಿ ಅಂದೆ. ಸರಿ, ಇಲ್ಲಿನ ಭಾರತೀಯ ಅಸೋಸಿಯೇಷನ್ ಅವರು ಆಯೋಜಿಸುವ ಹೋಳಿ ಹಬ್ಬಕ್ಕೆ ಹೋಗೋಣ ಅಂತಂದೆ. ಜೊತೆಗೆ ಹೋಳಿಕಾ ದಹನದ ಕಥೆಯನ್ನೂ ನನಗೆ ತಿಳಿದಂತೆ ತಿಳಿಸಿದೆ. ಇದರ ಕುರಿತು ಯಾವುದಾದರು ವಿಡಿಯೋ ಸಿಕ್ಕರೆ ತಿಳಿಸಿ ಪ್ಲೀಸ್. 
ಜೊತೆಗೆ ಎಂದಿನಂತೆ ಪುಟ್ಟಿ ಮನೆಯಲ್ಲಿ ತನ್ನ ಬಣ್ಣಗಳ ಜೊತೆ ಆಟವಾಡಿದಳು. ಇದು ಅವಳು ಮಾಡಿದ ಹಬ್ಬದ ಶುಭಾಶಯ ಪತ್ರ.
ಯಾವುದೋ ಸಾಮಾನಿನ ಪ್ಯಾಕೇಜಿಂಗ್ ನಲ್ಲಿ ಬಂದಿದ್ದ ಪೇಪರ್ ಜೊತೆಗೆ ಬಣ್ಣಗಳನ್ನು ಪುಟ್ಟಿಗೆ ಕೊಟ್ಟೆ. ಬಹಳ ಖುಶಿಯಿಂದಲೇ ಪೈಂಟ್ ಮಾಡಿದಳು. ಎಲ್ಲೂ ಗ್ಯಾಪ್ ಬಿಡದೇ ಪೈಂಟ್ ಮಾಡೋದು ಈಗವಳಿಗೆ ಬಲು ಇಷ್ಟ. 
ಪೈಂಟ್ ಒಣಗಿದ ಮೇಲೆ ಬೇರೆ ಹಾಳೆಯ ಮೇಲೆ ಶುಭಾಶಯ ಬರೆದು, ಕಟ್ ಮಾಡಿ ಅಂಟಿಸಿದೆವು. ಇಂಗ್ಳೀಷ್ ನಲ್ಲಿ ಬರೆದು ಕಟ್ ಮಾಡಿದ್ದು ಪುಟ್ಟಿ. ನಂಗೆ ಕನ್ನಡ ಬರಲ್ಲ ನೀನು ಬರೀ ಅಮ್ಮ ಅಂತಂದ್ಲು :)

ನಿಮಗೆಲ್ಲರಿಗೂ ಬಣ್ಣಗಳ ಹಬ್ಬದ ಶುಭಾಶಯಗಳು !!!!


ಹೋಳಿ ಹೋಳಿ ಹೋಳಿ ಹೋಳಿ

ಏಳೇಳು ಬಣ್ಣದ ಬೆಳ್ಳಿ ಹೋಳಿ
ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ