Wednesday, September 03, 2008

ನಮ್ಮ್ ಪುಟ್ಟ್ ಗೌರಿ !!!

ನಮ್ಮ್ ಪುಟ್ಟಿ ಗಣೇಶ ಹಬ್ಬದ ದಿನ ತನ್ನಜ್ಜಿ ಕೊಟ್ಟ ಗಾಗ್ರಾ ಹಾಕೊಂಡು ಮನೆತುಂಬಾ ಅಂಬೆಗಾಲಿಟ್ಟು ಓಡಾಡಿದ್ಲು. ಆಶ್ಚರ್ಯದ ವಿಷ್ಯ ಅಂದ್ರೆ ಎಲ್ಲವನ್ನೂ ಎಳೆಯಲು ಮುಂದಾಗುವ ನಮ್ಮ್ ಪುಟ್ಟಿ ಅವರಮ್ಮ ಮಾಡಿದ್ದ ಮಣ್ಣಿನ ಗಣಪನ ಅಲಂಕಾರವನ್ನ ಯಾಕೋ ದೂರದಿಂದಲೇ ನೋಡಿ ಖುಶಿ ಪಟ್ಟಳು. ಅಂದು ಮನೆಗೆ ಬಂದವರಿಗೆಲ್ಲಾ ಎಂದಿನಂತೆ ಹಾಯ್ ಹೇಳುವ ಬದಲು "ತಾರಮ್ಮಯ್ಯ" ಅನ್ನುವಂತೆ ತನ್ನ ಪುಟ್ಟು ಕೈಗಳನ್ನ ಆಡಿಸ್ತಿದ್ದ್ಲು. ರಾಗ ನಾದನಾಮಕ್ರಿಯ/ಆದಿ ತಾಳ

ತಾರಮ್ಮಯ್ಯ, ಯದುಕುಲ ವಾರಿಧಿ ಚಂದ್ರಮನ /ಪಲ್ಲವಿ /
ಮಾರಜನಕನ ಮೋಹನಾಂಗನ ಸೇರಿ ಸುಖಿಸಲು ಹಾರೈಸಿ ಬಂದೆವು /ಅನು ಪಲ್ಲವಿ /
ಬಿಲ್ಲ ಹಬ್ಬಗಳಂತೆ, ಅಲ್ಲಿ ಬೀದಿ ಶೃಂಗಾರವಂತೆ
ಮಲ್ಲರ ಕಾಳಗ ಮದ್ದಾನೆಯಂತೆ
ಪುಲ್ಲಾಕ್ಷನು ತಾನಲ್ಲಿಗೆ ತೆರಳಿದ /೧ /
ಮಧುರಾಪುರಿಯಂತೆ, ಅಲ್ಲಿ ಮಾವ ಕಂಸನಂತೆ
ಒದಗಿದ ಮದಗಜ ತುರಗ ಸಾಲಿನಲಿ
ಮದಮೋಹನ ಕೃಷ್ಣ ಮಧುರೆಗೆ ತೆರಳಿದ /೨/
ಅತ್ತೆ ಮಾವನ ಬಿಟ್ಟು, ಬಂದೆವು ಹಿತ್ತಲ ಬಾಗಿಲಿಂದ
ಭಕ್ತವತ್ಸಲನ ಬಹು ನಂಬಿದ್ದೆವು
ಉತ್ಸಾಹ ಭಂಗ ಮಾಡಿದನಮ್ಮ /೩ /
ರಂಗನ ಸೆರೆ ನಂಬಿ ಬಂದೆವು ಸಂಗ ಸುಖವ ಬಯಸಿ
ಭಂಗಿಸಿ ನಮ್ಮನು ಹ್ಯಾಂಗೆ ಪೋದನಮ್ಮ
ಮಂಗಳಮೂರುತಿ ಮದನಗೋಪಾಲನು /೪ /
ಶೇಷಗಿರಿಯ ಮೇಲೆ, ಹರಿ ತಾ ವಾಸವಾಗಿಹ ಕಾಣೆ
ಸಾಸಿರನಾಮದ ಒಡೆಯನೆಂದೆನಿಸಿದ
ಶ್ರೀಶ ಪುರಂದರವಿಠ್ಠಲರಾಯನ /೫ /
~~~ * ~~~
[ಶ್ರೀ ಕೃಷ್ಣನು ಗೋಕುಲವನ್ನು ಬಿಟ್ಟು, ಮಥುರೆಗೆ ಹೋದ ಸಂಗತಿ ತಿಳಿದು ಗೋಕುಲದ ಗೋಪಿಯರು ಕೃಷ್ಣನ ವಿರಹದಿಂದ ವ್ಯಾಕುಲಗೊಂಡ ಬಗೆ ಇಲ್ಲಿ ವರ್ಣಿತವಾಗಿದೆ]

ಗಣೇಶ ಹಬ್ಬದ ಶುಭಾಶಯಗಳು!!!

ಇಂದು ವಿನಾಯಕ ಚತುರ್ಥಿ. ಬೆಂಗಳೂರಿನಲ್ಲಿದ್ದಾಗ ಗೌರೀ ಗಣೇಶ ಹಬ್ಬಗಳು ಬಂದರೆ ಎಲ್ಲೆಲ್ಲಿದ ಸಂಭ್ರಮ. ರಸ್ತೆಗಳ ತುಂಬಾ ವಿವಿಧ ಎತ್ತರ, ಬಣ್ಣದ ಗಣೇಶನ ಮಣ್ಣಿನ ಮೂರ್ತಿಗಳ ಸಾಲುಸಾಲು ಕಣ್ಣಿಗೆ ಹಬ್ಬ ಉಂಟು ಮಾಡುತ್ತದೆ. ಅಲ್ಲದೇ ಮಾರುಕಟ್ಟೆಯ ತುಂಬಾ ಹಬ್ಬಕ್ಕೆ ಬೇಕಾಗುವ ಹೂವು ಪತ್ರೆಗಳು, ಹಣ್ಣುಗಳು, ಗರಿಕೆ ಹುಲ್ಲು, ಮಾವಿನ ಸೊಪ್ಪು-ಬಾಳೆ ಕಂದು, ಅಲಂಕಾರಕ್ಕೆ ಬಣ್ಣಬಣ್ಣದ ಕಾಗದಗಳು.

ಚಿಕ್ಕಂದಿನಿಂದಲೂ ಗಣಪ ನನ್ನ ಜೀವನದಲ್ಲಿ ವಿಶೇಷ ರೀತಿಯಲ್ಲಿ ಹಾಸುಹೊಕ್ಕಿಬಿಟ್ಟಿದ್ದಾನೆ. ಬೆಳಗ್ಗೆ ಸ್ನಾನ ಮುಗಿಸಿ ಹೊಸ ಬಟ್ಟೆ ಹಾಕಿಕೊಂಡು, ಅಪ್ಪನ ಜೊತೆ ನಾವ್ ಮೂರೂ ಜನ ಹೋಗ್ಬೇಕು ಅಂಗಡಿಗೆ ಗಣೇಶನ ಸೆಲೆಕ್ಟ್ ಮಾಡೋಕೆ. ಮನೆಗೆ ಬಂದು ಪೂಜೆ ಮುಗಿಸಿ, ಮದ್ಯಾಹ್ನ ಭರ್ಜರಿ ಊಟವಾದ ನಂತರ ದೊಡ್ಡ ಬಟ್ಟಲಿನಲ್ಲಿ ಅಕ್ಷತೆ ತುಂಬಿಕೊಂಡು ಗೆಳೆಯರೊಂದಿಗೆ ಮನೆ ಮನೆಗೆ ಹೋಗಿ "ಗಣೇಶ ಕೂರ್ಸಿದ್ದೀರಾ?" ಅಂತಾ ಕೇಳ್ತಾ ಅವರ ಮನೆಗಳಿಗೆ ಹೋಗಿ ವಿನಾಯಾಕನಿಗೆ ನಮಸ್ಕಾರ ಮಾಡಿ, ಅವರು ಕೊಟ್ಟ ತಿಂಡಿ ತಿಂದು ಮುಂದಿನ ಮನೆಗೆ ಹೋಗ್ತಾಯಿದ್ವಿ. ನೂರಾಎಂಟು ಮನೆಗಳಿಗೆ ಹೋಗಿ ವಿವಿಧ ಬಣ್ಣ, ಎತ್ತರದ, ಗಣಪತಿಯನ್ನ ನೋಡಿ ಬರ್ತಾಯಿದ್ವಿ. ಕೊನೆಕೊನೆಗೆ ಕೊಟ್ಟ ತಿಂಡಿ ತಿನ್ನಲಾರದೆ ಕವರಿನಲ್ಲಿ ತುಂಬಿಕೊಂಡು ಮನೆಗೆ ಬರ್ತಾಯಿದ್ದದ್ದು ಉಂಟು.

ಆಮೇಲೆ ಸ್ವಲ್ಪ ವರ್ಷ ಅಣ್ಣ-ತಮ್ಮ ಮತ್ತಿತರ ನೆರೆಮನೆ ಹುಡುಗರೊಂದಿಗೆ ಸೇರಿ ಬೀದಿಯಲ್ಲಿ ಗಣಪತಿ ಕೂರಿಸ್ತೀವಿ ಎಂದು ಮನೆ ಮನೆಗೆ ಹೋಗಿ ಚಂದಾ ಎತ್ತುತ್ತಿದ್ದೆವು. ಹಬ್ಬಕ್ಕೆ ತಿಂಗಳು ಇರುವಾಗಲೇ ಡ್ಯಾನ್ಸ್, ಡ್ರಾಮಾ ಇತ್ಯಾದಿ ಸಾಂಸ್ಕೃತಿಕ ಕಾರಯಕ್ರಮಗಳ ತಾಯಾರಿ ಶುರುವಾಗುತ್ತಿತ್ತು. ಹಬ್ಬದ ದಿನ "ಅಮ್ಮ ಬೇಗ ಪೂಜೆ ಮುಗಿಸಮ್ಮ , ನಮ್ಮ್ ಗಣೇಶ ಕಾಯ್ತಿದ್ದಾನೆ" ಅಂತ ಬೀದಿಗೆ ಓಡುತ್ತಿದ್ವಿ. ಸಂಜೆ ಎಲ್ಲಾ ಸಾಂಸ್ಕೃತಿಕ ಕಾರಯಕ್ರಮಗಳು ಮುಗಿದು ಮಹಾಮಂಗಳಾರತಿ ಆದ್ಮೇಲೆ ನಾಲ್ಕಾರು ಬೀದಿಯಲ್ಲಿ ನಮ್ಮ್ ಗಣಪನ ಮೆರವಣಿಗೆ ಮಾಡುತ್ತಾ
"ಗಣೇಶ ಬಂದ
ಕಾಯ್ ಕಡ್ಬು ತಿಂದ
ಹೊಟ್ಟೆ ಮೇಲೆ ಗಂಧ
ಚಿಕ್ಕ್ ಕೆರೇಲ್ ಬಿದ್ದ
ದೊಡ್ಡ್ ಕೆರೇಲ್ ಎದ್ದ "

ಅಂತಾ ಹಾಡಿ ಕುಣಿದಾಡಿ, ಕೊನೆಗೆ ಮತ್ತೆ ಮುಂದಿನ ವರ್ಷ ಬಾರಯ್ಯ ಪ್ರಭುವೇ ಅಂತ ವಿಸರ್ಜನೆ ಮಾಡಿ ಮನೆ ಬರ್ತಾಯಿದ್ದದ್ದು. ಛೆ, ಆಗೆಲ್ಲಾ ನಮ್ಮ್ ಮನೇಲಿ ಕ್ಯಾಮೆರಾ ಇರಲಿಲ್ಲ, ಆ ಎಲ್ಲಾ ಸವಿ ನೆನಪುಗಳು ಮನಸಿನಲ್ಲಿದೆ ಅಷ್ಟೆ.

ನಾವು ಮನೆ ಬದಲಾಯಿಸಿದ ನಂತರ ಇದೆಲ್ಲಾ ನಿಂತು ಹೋಯಿತು. ಆಗ ಶುರುವಾಯಿತು "ಗಣಪನ ವಿಗ್ರಹ" ಸಂಗ್ರಹಿಸುವ ನನ್ನ ಹವ್ಯಾಸ. ಮಣ್ಣು, ಹಿತ್ತಾಳೆ, ಪ್ಲಾಸ್ಟಿಕ್, ಪೇಪರ್ ಗಣೇಶ.. ವಾದ್ಯ ಗಣಪತಿ, ನಾಟ್ಯ ಗಣಪತಿ ಎಲ್ಲಾ ಬಂದು ನನ್ನ ಕೈಸೇರಿದವು. ಪ್ರತಿ ವರ್ಷ ಹಬ್ಬ ಬಂತೆಂದರೆ ಪೂಜಿಸುವ ಮೂರ್ತಿಯ ಕೆಳಗಡೆ ನನ್ನೆಲ್ಲಾ ಕಲೆಕ್ಷನ್ ಗಣಪಗಳನ್ನು ಜೋಡಿಸ್ತಾಯಿದ್ದೆ, ಜೊತೆಗೆ ಹಲವು ಬಗೆಯ ಗಣಪನ ರಂಗೋಲಿಯನ್ನು ಹಾಕಿ ಸಿಂಗರಿಸ್ತಾಯಿದ್ದೆ. ವರ್ಷದಿಂದ ವರ್ಷಕ್ಕೆ ನನ್ನ ಗಣಪ ವಿಗ್ರಹಗಳ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮನೆಯ ಶೋಕೇಸ್ ನಲ್ಲಿ ಜಾಗ ಕಮ್ಮಿಯಾಗ್ತಾ ಬಂತು. ಮದುವೆಯ ನಂತರ ಅತ್ತೆಮನೆನೂ ತುಂಬೋಕೆ ಶುರು ಮಾಡಿದೆ:)

ಈಗ ಈ ಪರದೇಶ ಅಮೇರಿಕಾದ ತಲಹಾಸಿಯಲ್ಲಿ ಮಣ್ಣಿನ ಮೂರ್ತಿ ಸಿಗದೇ ಪರದಾಡುತ್ತಿದ್ದಾಗ ಗೆಳತಿಯೊಬ್ಬರು ತಾವೇ ಮೂರ್ತಿಯನ್ನು ಮಾಡಿಕೊಳ್ಳುತ್ತೇವೆ ಅಂತ ಹೇಳಿದ್ದು ಕೇಳಿ, ನಾವೂ ಪ್ರಯತ್ನಿಸೋಣ ಅಂತ ಹೋದ ವರುಷ ಅಂಗಡಿಯಿಂದ ತಂದ ಜೇಡಿ ಮಣ್ಣಿನಿಂದ ಗಣಪನ ಮೂರ್ತಿ ಮಾಡಿ ಹಬ್ಬ ಮಾಡಿದ್ದೆವು.

ನನಗೆ ಸ್ಫೂರ್ತಿ ಕೊಟ್ಟ ನನ್ನ ಗೆಳತಿ ಮಣ್ಣಿನ ಗಣಪನಿಗೆ ನವಧಾನ್ಯದ ಅಲಂಕಾರ ಮಾಡಿದ್ದು ಹೀಗೆ.
ಈ ವರ್ಷದ ನಮ್ಮ ಮನೆಯಲ್ಲಿ ೮ ತಿಂಗಳ ನಮ್ಮ ಪುಟ್ಟು ಗೌರಮ್ಮನ ಜೊತೆಗೂಡಿ ನಾವು ಮಾಡಿದ ವಿನಾಯಕ.

ಹಬ್ಬದ ರಂಗೋಲಿ.

ಶ್ರೀ ಸಿದ್ದಿವಿನಾಯಕನ ಕೃಪೆ ಎಲ್ಲರ ಮೇಲೆ ಸದಾಯಿರಲಿ:)

Saturday, August 30, 2008

ಎಂಟನೇ ತಿಂಗಳ ಹುಟ್ಟು ಹಬ್ಬ !!

ಪುಟ್ಟಿ ಬೀಗ ಬೇಗ ದೊಡ್ಡವಳು ಆಗ್ತಾಯಿದ್ದಾಳೆ ಅನ್ನಿಸ್ತಾಯಿದೆ. ಆಗ್ಲೆ ಎಂಟನೇ ತಿಂಗಳ ಹುಟ್ಟು ಹಬ್ಬ ಬಂತು. ಈ ಸರ್ತಿ ಅವಳ ಜೊತೆ ಆಡಿ ನಲಿಯಲು ಬಂದವರು ಅವಳಿ ಅಕ್ಕ ತಂಗಿ, ಸಹನಾ - ಸುರಭಿ :) ತನ್ನ ಊಟದ ಚೇರ್ -ಹೈಚೇರ್ ನಲ್ಲಿ ಕುಳಿತು ಕೊಕೊನಟ್ ಕೇಕ್ ಕಟ್ ಮಾಡಿದ್ಲು. ಅವರಪ್ಪ ತಂದಿದ್ದ ಹೊಸ ಕುದುರೆಯೇರಿ ಆಟವಾಡಿದ್ಲು. ಮೂರೂ ಜನ ನಕ್ಕು ನಲಿದ್ರು. ಅವರ ಸಂತಸದಲ್ಲಿ ದೊಡ್ಡವರೂ ಜೊತೆಗೂಡಿದೆವು.

ಅಪ್ಪ ನನಗೆ ತಂದಕುದುರೆ
ಹಾಲಿನಂತ ಮೈಯ್ಯ ಬಿಳಿ ಕುದುರೆ
ನೀಲಯ ಬಾಲದ ಪುಟ್ಟು ಕುದುರೆ
ಕೆಂಪನೆ ಸೀಟಿನ ಅಂದದ ಕುದುರೆ !!



ಹೆಜ್ಜೆ ಹೆಜ್ಜೆಗೆ ಕುಣಿಯುವ ಕುದುರೆ
ಬ್ಯಾಟರಿಯ ಹಾಕಿದರೆ ನಡೆಯುವ ಕುದುರೆ
ಹಾಡನು ಹೇಳುತಾ ನಲಿಸುವ ಕುದುರೆ
ನನ್ನಯ ಮುದ್ದಿನ ಚೆಂದದ ಕುದುರೆ !!

Wednesday, July 30, 2008

ಏಳು ತಿಂಗಳು ತುಂಬಿತು...

ನಮ್ಮ್ ಪುಟ್ಟಿಗೆ ಇವತ್ತಿಗೆ ಏಳು ತಿಂಗಳು ತುಂಬಿತು. ಸ್ವಲ್ಪ ಸಪೊರ್ಟ್ ಕೊಟ್ಟರೆ ಆರಾಮಾಗಿ ಕೂರುತ್ತಿದ್ದವಳು, ಈಗ ಸಲೀಸಾಗಿ ತಾನೆ ಆವುದೆ ಅಧಾರವಿಲ್ಲದೇ ಕೂರುತ್ತಾಳೆ. ಅವಳ ಬಿರ್ತ್’ಡೇಗೆ ಅವಳಪ್ಪ ದಿಸ್ನಿ ಪ್ರಿಂಸೆಸ್ಸ್ ಚೇರ್ ತಂದರು ಅದರಲ್ಲಿ ಕೂರೋದು ಪುಟ್ಟಿಗೆ ಬಲು ಇಷ್ಟ. ಬರ್ತ್’ಡೇ ಬಂದಿದ್ದ ’ಅಭಿ ಅಕ್ಕ’ ಕೇಕ್ ಕಟ್ ಮಾಡಿದ ಮೇಲೆ ಪುಟ್ಟಿಗೆ ಒಂದು ಚೂರು ಕೆಕ್ ತಿನ್ನಿಸಿದಳು. ಅದು ನಮ್ಮ್ ಪುಟ್ಟಿಗೆ ಸಾಕಾಗ್ಲಿಲ್ಲ ಅನ್ನ್ ಸುತ್ತೆ, ಎಲ್ಲರೂ ಆಚೀಚೆ ನೋಡುತ್ತಿದ್ದಾಗ ತಾನೆ ಕೈ ಹಾಕಿ ಒಂದು ದೊಡ್ಡ ಪೀಸ್ ಬಾಯಿಗೆ ಇಟ್ಟುಕೊಂಡೇ ಬಿಟ್ಟಳು ಪುಟ್ಟಿ :)

ನನ್ನ ಚಿನ್ನ ನನ್ನ ರನ್ನ
ನಮ್ಮ ಬಾಳ ಭಾಗ್ಯ ತಾರೆ
ಓ ಮುದ್ದು ಕಣ್ಮಣಿ
ನೀ ಪ್ರೀತಿ ಅರಗಿಣಿ!



ಮನೆಯ ಬೆಳಗೋ ದೀಪಲಕ್ಷ್ಮಿ ನೀನೆ ಮಗಳೆ
ದಿನ ಮನವ ಬೆಳಗೋ ಆದೀಲಕ್ಷ್ಮಿ ನೀನೇ
ಅದುಕ ಬೆಳಗೋ ಬಾಳ ಸೂರ್ಯ ನೀನೇ ಮಗಳೆ
ನಮ್ಮ ಕುಲವ ಬೆಳಗೋ ಜ್ಯೋತಿದಾರಿ ನೀನೆ
ತೇಲಾಡುವ ಬಿಳಿ ಹಂಸವೇ
ನಗುತಾಯಿರುವಾ ಬೆಳದಿಂಗಳೇ
ಸಿರಿ ಹೂವೆ ನನ್ನ ಒಲವೆ ನಮ್ಮ ಮುದ್ದು ಮಗುವೆ
ನಮ್ಮ ಮನೆಗೆ ಘಣಿಯೇ ನಮ್ಮ ನಲ್ಮೆನಿಧಿಯೇ
//ನನ್ನ ಚಿನ್ನ//






ಗೆಲುವಕೊಡುವ ಧೈರ್ಯಲಕ್ಷ್ಮಿ ನೀನೆ ಮಗಳೆ
ದಿನ ನಲಿವ ತರುವ ವಿಜಯಲಕ್ಷ್ಮಿ ನೀನೇ
ಮುದವ ಕೊಡುವ ನಿಜದ ದೈವ ನೀನೆ ಮಗಳೆ
ನಮ್ಮ ವಂಶ ಬೆಳೆಸೋ ಪ್ರೇಮದ ಕುವರಿ ನೀನೇ
ಒಡನಾಡುವ ಸಿಂಗಾರವೆ
ಹರಿದಾಡುವ ಬಂಗಾರವೆ
ನಮ್ಮ ಉಸಿರೆ ಪ್ರೀತಿ ಹಸಿರೆ
ಕಣ್ಣ ರಮ್ಯಾ ಚೆಲುವೆ
ಮುದ್ದು ಮನಸೆ ನಮ್ಮ ಕನಸೇ
ನಾವು ಪಡೆದ ಪುಣ್ಯವೇ //ನನ್ನ ಚಿನ್ನ//

Monday, July 28, 2008

ನಂಗೀಗ ಕೂರೋಕೆ ಬರುತ್ತೆ !!

ನಾನೀಗ ದೊಡ್ಡ್ ಹುಡ್ಗಿ, ನಂಗೀಗ ಕೂರೋಕೆ ಬರುತ್ತೆ. ಇಷ್ಟ್ ದಿನ ಮಲ್ಗಿ ಮಲ್ಗೀ ತುಂಬಾ ಬೋರ್ ಆಗಿತ್ತು. ಈಗ ಕೂತ್ಕೊಂಡು ಆಟ ಆಡಬಹುದು.
ಬರ್ತೀರಾ ನನ್ನ್ ಜೊತೆ ಆಟ ಆಡೋಕೆ?


ಇದು ABC ಬಾಲ್, ಜೊತೆಗೆ ಹಾಡೂ ಹೇಳುತ್ತೆ !!


ಚೆಂಡಾಟ ಆಡೋಣ ಬರ್ತೀರಾ?


ಆಟ ಆಡಿ ಸಾಕಾಯ್ತು, ಬನ್ನಿ ಊಟ ಮಾಡೋಣ !
ಊಟ ಆಯ್ತು ಈಗ ಪಾಠದ ಟೈಮು..

Thursday, July 17, 2008

ಕೈಗೆ ಸಿಕ್ಕಿದೆಲ್ಲಾ ಬಾಯಿಗೆ :)

ಪುಟ್ಟಿಗೆ ಈಗ ಎಲ್ಲವನ್ನು ತಿನ್ನೋ ಆಸೆ. ಇವಳು ಹೀಗೆ ಮಾಡಲು ಶುರು ಮಾಡಿ ಬಹಳ ದಿನ/ ತಿಂಗಳೇ ಆಯಿತು. ನೋಡಿದವರೆಲ್ಲಾ ಹಲ್ಲು ಬರುತ್ತಿರಬೇಕು ಅನ್ನುತ್ತಾರೆ. ಇವನೆಲ್ಲಾ ಇಷ್ಟು ಸಲೀಸಾಗಿ ಬಾಯಿಗೆ ಹಾಕೊಳ್ಳೊ ನನ್ನ್ ಕಂದ ಊಟ ಮಾಡಲು ಕುಳಿತರೆ, ಬಾಯೇ ಬಿಡೊಲ್ಲ. ಕೈಗೆ ಸಿಕ್ಕ ಆಟದ ಸಾಮನು, ಬಟ್ಟೆ, ಪೆನ್ನು, ಫೋನು, ಪೇಪರ್... ಹೀಗೆ ಎಲ್ಲವೂ ಪುಟ್ಟಿ ಬಾಯಿಗೆ ಹೋಗ್ತಾಯಿದೆ.

ಆಹಾ ಏನು ರುಚಿಯಾಗಿದೆ ಗೊತ್ತಾ ನನ್ನ ಈ ಪುಟ್ಟ crab!

ಇದು ನನ್ನ ಟೀತರ್ .... ಒಳಗೆ ನೀರು ತುಂಬಿರೋದ್ರಿಂದ ಅಗಿಯಲು ಬಲು ಮಜಾ...

ನೀವು ಟ್ರೈ ಮಾಡ್ತೀರಾ ಒಂದ್ ಸರ್ತಿ?


ಚಿಕ್ಕ ಸ್ಪೂನ್’ನಲ್ಲಿ ಊಟ ಮಾಡಿ ತುಂಬಾ ಬೋರ್ ಆಗಿದೆ.. ಇದ್ರಲ್ಲಿ ತಿಂದ್ರೆ ಹೇಗೆ.. ಊಟ ಬೇಗ ಖಾಲಿ ಆಗುತ್ತೆ, ಆಮೇಲೆ ಆಟ ಆಡ್-ಬಹುದು ಅಲ್ವಾ? ನೀವ್ ಎನ್ ಅಂತೀರಾ?



ನಮ್ಮ್ ಮನೆ ಕಿಟಕಿ ಬ್ಲೈಂಡ್ಸ್ ಸಕ್ಕತ್ ಸಿಹಿಯಾಗಿದೆ ಗೊತ್ತಾ ?



ಟಿ.ವಿ ರಿಮೋಟ್’ನ ಬಾಯಲ್ಲಿ ಹ್ಯಾಂಡಲ್ ಮಾಡೋದು ಹೇಗೆ ಅಂತಾ ಪ್ರ್ಯಾಕ್ಟೀಸ್ ಮಾಡ್ತಾಯಿದ್ದೀನಿ :)





ಇದು ನನ್ನ ಫೇವರೇಟ್.. ಅಪ್ಪನ ಕಾಫಿ ಮಗ್!

Wednesday, July 02, 2008

ಫ್ಲೋರಿಡಾದಲ್ಲಿ ತುಂಬಾ ಬಿಸಿಲು !!!

ಫ್ಲೋರಿಡಾದಲ್ಲಿ ತುಂಬಾ ಬಿಸಿಲು ... ಅಮ್ಮ ಅಪ್ಪ, ನೀವ್ ಮಾತ್ರ ಕಣ್ಣಿಗೆ ತಂಪು ಕನ್ನಡಕ ಹಾಕ್ತೀರಾ, ನಂಗೂ ಬೇಕು ಕೊಡ್ಸಿ ಅಂತ ಯಾವಾಗಲೂ ಅಪ್ಪನ ಅಮ್ಮನ ಕಣ್ಣಿಗೆ ಕೈ ಹಾಕ್ತಾಯಿದ್ದಳು ಪುಟ್ಟಿ. ಸರಿ, ತಗೋ ಕಂದ ನಿನ್ನದೇ ಗಾಗಲ್ಸ್ ಹಾಕಿ ನಲಿದಾಡು ಅಂತ ಅವರಪ್ಪ ಅವಳಿಗೇಂತ ತಂದೇಬಿಟ್ಟರು. ಪುಟ್ಟಿಗೆ ಖುಷಿಯೋ ಖುಷಿ :)