Wednesday, June 10, 2009

ವಕುಲ್ಲಾ ಸ್ಪ್ರಿಂಗ್ಸ್ !!

ಫ್ಲೋರಿಡಾದಲ್ಲಿ ಬೇಸಿಗೆಯ ಧಗೆ ತಾಳಲಾರದೆ ಈಜುಕೊಳದಲ್ಲಿ ಮುಳುಗೆದ್ದು ಬೋರ್ ಹೊಡೆದಿದ್ದ ಪುಟ್ಟಿ ಮತ್ತವಳ ಅಕ್ಕ ’ಅಭಿ’ ಮೊನ್ನೆ ಹತ್ತಿರದಲ್ಲೇ ಇರುವ ವಕುಲ್ಲಾ ಸ್ಪ್ರಿಂಗ್ಸ್ ಎಂಬಲ್ಲಿಗೆ ಅಪ್ಪ ಅಮ್ಮನ ಜೊತೆ ಹೋಗಿದ್ರು.
ಅಲ್ಲಿ ನೀರು ಸದಾ ಕಾಲ ತಣ್ಣಗೆ ಕೊರೆಯುತ್ತಿರುತ್ತದೆ. ಅಲ್ಲಿ ಇವರಿಬ್ಬರೂ ನೀರಿನಲ್ಲಿ ಆಟವಾಡಿ, ಒಬ್ಬರಿಗೊಬ್ಬರು ನೀರು ಎರಚಾಡಿ ಮಜ ಮಾಡಿದ್ರು. ಕೊನೆಗೆ ಇಬ್ಬರನ್ನೂ ಬಲವಂತವಾಗಿಯೇ ಅಲ್ಲಿಂದ ಎಳೆದು ತರಬೇಕಾಯಿತು !!


Putti enjoying the water..

On the Aligator chair
At the gift shop..

Saturday, June 06, 2009

ನಾಲಗೆ ತಿರುಚು (ಟಂಗ್ ಟ್ವಿಸ್ಟರ್) !

ಮೊನ್ನೆ ಗೆಳೆಯರು ಬಂದಿದ್ರು. ಊಟದ ನಂತರ ನಮ್ಮ್ ಪುಟ್ಟಿ ಮಲಗಿ ಬಿಟ್ಟಿದ್ರಿಂದ ಬಂದಿದ್ದ ಗೆಳೆಯರ ಮಗಳೊಂದಿಗೆ ನಾನೇ ಆಡಬೇಕಾಯ್ತು. ಅವಳೂ ಅದೂ ಇದೂ ಹಾಡುಗಳನ್ನು ಹೇಳುತ್ತಾ ಕುಣಿಯುತ್ತಾ ಕೊನೆಗೆ ಇದನ್ನ ಫಾಸ್ಟ್ ಆಗಿ ಹೇಳಿ ನೋಡೋಣ ಅಂತ " ಬೆಟ್ಟಿ ಬಾಟ್ ಅ ಬಿಟ್ ಆಫ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್" ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಹೇಳಿದ್ಲು. ಅದನ್ನ ಹೇಳಲೋಗಿ ಅವಳೊಂದಿಗೆ ನಾವೂ ಸ್ವಲ್ಪ ಬ್ ಬ್ಬ್ ಬ್ ಅಂತೆಲ್ಲ ಬೊಬ್ಬೆ ಹಾಕಿ ನಕ್ಕಿದ್ದು ಆಯ್ತು.

ಅವರೆಲ್ಲ ಮನೆ ಸೇರಿದ ಮೇಲೆ ನನಗೆ ನಮ್ಮ ಕನ್ನಡದ ನಾಲಗೆ ತಿರುಚುಗಳ ನೆನಪಾಯಿತು. ಕನ್ನಡದ ಕೆಲವು ನಾಲಗೆ ತಿರಚುಗಳು ಮಾತ್ರ ನನಗೆ ಗೊತ್ತಿದ್ದವು. ಸರಿ ಅಮ್ಮನಿಗೆ ಒಂದು ಫೋನ್ ಮಾಡಿ ಅವರಿಂದ ಇನ್ನೊಂದಿಷ್ಟನ್ನ ಕಲಿತೆ. ಅವುಗಳ ಪಟ್ಟಿ ಇಲ್ಲಿದೆ.



"ಕಪ್ಪು ಕುಂಕುಮ, ಕೆಂಪು ಕುಂಕುಮ"

"ಕಾಗೆ ಪುಕ್ಕ, ಗುಬ್ಬಿ ಪುಕ್ಕ"

ಮೇಲಿನ ಸಾಲುಗಳು ನೋಡಲು ಸರಳವಾಗಿ ಕಂಡರೂ, ಅದರ ಒಳಗುಟ್ಟು ಗೊತ್ತಾಗೋದು ಅದನ್ನ ನಾವು ವೇಗವಾಗಿ ಹೇಳಲು ಯತ್ನಿಸಿದಾಗ ಮಾತ್ರ.

"ಅವಳರಳಳೆದ ಕೊಳಗದಲಿ ಇವಳರಳಳೆದಳು'



‘ಅರಳೀಮರಬುಡ ತಳಿರೊಡೆದೆರಡೆಲೆ ಮತ್ತೆರಡೆಲೆ ಹೆಚ್ಚಾಯ್ತು



"ಆಲದಮರಬುಡತಳಿರೊಡೆದೆರೆಡೆಲೆಯಾಯಿತು"



"ತರಿಕೆರೆಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತು" ಇದನ್ನ ಹೇಳೋಕೆ ನಾವು ಕಷ್ಟ ಪಡುವಾಗ ’ದೇವರ ದುಡ್ಡ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಎಷ್ಟ್ ಚೆನ್ನಾಗಿ ಹಾಡಿದ್ದಾರೆ ಕೇಳಿ.









"ಯಾಕ್ ಯಕ್ ಚಿಕ್ಕಪ್ಪ ಕಣ್ ಕಣ್ ಬಿಡ್ತಿಯ" ಇದನ್ನು ವೇಗವಾಗಿ ಹೇಳುತ್ತಾ ಹೋದರೆ.. ಚಿಕ್ಕಪ್ಪ.. ಚಿಪ್ಪಕ್ಕ ಆಗಿರುತ್ತಾನೆ..



"ಸಂಪಂಗಪ್ಪನ ಮಗ ಮರಿಸಂಪಂಗಪ್ಪ" ಇದರಲ್ಲೇ ಸ್ವಲ್ಪ ಭಿನ್ನವಾದದ್ದು ಇನ್ನೆರಡು

"ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ"

’ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪ’ ಅನ್ನೋದನ್ನ ಬೇಗಬೇಗ ಹೇಳುತ್ತಾ ಹೋದರೆ ಗಂಗಪ್ಪ ಗಂಗಮ್ಮನಾಗಿ ಬದಲಾಗುತ್ತಾನೆ.



"ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ"

‘ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ'

"ತಾತಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ"

"ಕುರುಡು ಕುದುರೆಗೆ ಹುರಿದ ಹುರ್ಕಡ್ಲಿ"



ತಮಿಳಿನಲ್ಲೂ ಇಂಥದೊಂದು ಇದೆಯೆಂದು ಸ್ನೇಹಿತರು ಹೇಳಿದ್ರು: ಇದು ಯಾರ್‍ ತೆಚ್ಚ ಚಟ್ಟೆ, ಎಂಗ ತಾತ ತೆಚ್ಚ ಚಟ್ಟೆ (ಇದು ಯಾರು ಹೊಲಿದ ಅಂಗಿ, ನಮ್ಮ ತಾತ ಹೊಲಿದ ಅಂಗಿ) ಇದನ್ನು ವೇಗವಾಗಿ ಹೇಳುತ್ತಿದ್ದರೆ ಎಲ್ಲೋ ಒಂದು ಕಡೆ ’ತಾತ ಚತ್ತ’ (ತಾತ ಸತ್ತ) ಅಂತ ಆಗಿಬಿಡುತ್ತೆ.



ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ಎರಡು ಅಥವಾ ಮೂರು ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಈ ನಾಲಗೆ ತಿರುಚುಗಳ ಮೋಜಿನ ಆಟ ಹೇಗಿತ್ತು ಅಂತ ತಪ್ಪದೇ ತಿಳಿಸಿ ಆಯ್ತಾ ;) ಹಾಗೇನೆ ನಿಮಗೆ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?



ಇದು ಯಾವ ಭಾಷೆ?

ಪುಟ್ಟಿಯನ್ನ ಯಾರು ಯಾವುದೇ ಭಾಷೇಲಿ ಮಾತಾಡಿಸಿದ್ರೂ ಅವಳಿಗೆ ಎಲ್ಲಾ ಅರ್ಥ ಆಯ್ತು ಅನ್ನೋ ತರಹ ತಲೆ ಅಲ್ಲಾಡಿಸಿ ಕಿಸಕಿಸನೆ ನಗುತ್ತಾಳೆ. ಹೀಗೆ ಎಲ್ಲಾ ಭಾಷೆಗಳ ಪ್ರವೀಣೆಯಾದ ನಮ್ಮ್ ಪುಟ್ಟಿ ಮಾತಾಡೋದು ಮಾತ್ರ ಕೆಲವೊಮ್ಮೆ ನಮಗೆ ಅರ್ಥನೇ ಆಗೊಲ್ಲ. ಅದ್ಯಾವ ಭಾಷೆ ಮಾತಾಡ್ತಾಯಿರ್ತಾಳೊ ಅವಳಿಗೇ ಗೊತ್ತು. ಇತ್ತೀಚೆಗೆ ಇದರ ಅನುಭವ ನನ್ನ ಸ್ನೇಹಿತೆಯ ಮಗ ಸಿದ್ಧಾರ್ಥನಿಗೂ ಆಯಿತು. ಇವಳೋ ಪಟಪಟ ಅಂತ ಮಾತಾಡ್ತಿದ್ದಾಳೆ. ಅವನಿಗೆ ಏನೂ ಅರ್ಥವಾಗದೆ "ವಾಟ್, ವಾಟ್" ಅಂತ ಕೇಳ್ತಾಯಿದ್ದಾನೆ. ಇವರಿಬ್ಬರ ಈ ಮಾತಿನಾಟ ನೋಡ್ತಾ ಸಿದ್ಧಾರ್ಥನ ತಮ್ಮ ಸುಮುಖ್ ನಗ್ತಿದ್ದಾನೆ ನೋಡಿ :)
 

Saturday, May 23, 2009

ಅ ಅ ಇ ಈ...

ಪುಟ್ಟಿಗೆ ಮೊದಲಿಂದ ಬಣ್ಣ ಬಣ್ಣದ ಚಿತ್ರಗಳಿರೋ ಬುಕ್ ಅಂದ್ರೆ ಬಲು ಇಷ್ಟ. ನಾನು ಅವಳಿಗೆ ಓದಿ ಹೇಳಲು ಹೋದ್ರೆ ಕಿತ್ಕೊಂಡು ತಾನೆ ಓದೊ ಹಾಗೆ ನಟಿಸೋಳು. ಮಾತಾಡೋದು ಕಲಿತ ಮೇಲೆ ಅವಳು ಬುಕ್ ಹಿಡಿದಾಗ ಅಥವಾ ಪೆನ್/ಪೆನ್ಸಿಲ್ ಹಿಡಿದು ಗೀಚುವಾಗ ಏನು ಓದ್ತಾಯಿದ್ದೀಯಾ/ಬರಿತಾಯಿದ್ದೀಯಾ? ಅಂತ ಕೇಳಿದ್ರೆ. ಥಟ್ ಅಂತ " ಆ ಈ..." ಅನ್ನೋಳು, ಅದನ್ಯಾರು ಅವ್ಳಿಗೆ ಹೇಳ್ ಕೊಟ್ಟ್ರೊ ಗೊತ್ತಿಲ್ಲ. ಯೂ ಟ್ಯೂಬಿನಲ್ಲಿ ನಾನ್ ತೋರಿಸ್ತಾಯಿದ್ದ ಕರುಳಿನ ಕರೆ ಚಿತ್ರದ ಅಕ್ಷರಮಾಲೆ ಹಾಡಿನ ಪ್ರಭಾವವಿರಬೇಕು !! ಈಗಂತೂ ಅಮ್ಮನ ಸಹಾಯದಿಂದ ಅ ಇಂದ ಅಃ ವರೆಗೆ ಹೇಳ್ತಾಳೆ.

ಹ್ಯಾಪಿ ಬಿರ್ತ್ ಡೇ ಅಮ್ಮು !!

ಪುಟ್ಟಿಯ ಬ್ಲಾಗ್ ಫ್ರೆಂಡ್ ನಂದಗೋಕುಲದ ಅಣ್ಣ ಅಮಾರ್ತ್ಯನಿಗೆ ಎರಡು ವರ್ಷ ತುಂಬಲಿದೆ. ಅವನಿಗೆ ಶುಭವನ್ನು ಹಾರೈಸುತ್ತೇವೆ.

From morning till night
May your birthday be bright
And nicer than ever before……
And as years come and go
May your happiness grow
And your dreams be fulfilled
Even more

Happy Birthday to you!

Friday, May 22, 2009

ವಿಸ್ಮಯ ವೃಕ್ಷಗಳು!!!

ಬಾವ್ಬಾಬ್ (Baobab) :

ಕಲ್ಪವೃಕ್ಷ ಎಂದು ಕರೆಸಿ ಕೊಳ್ಳುವ 100 ಅಡಿ ಎತ್ತರ, 35 ಅಡಿ ಸುತ್ತಳತೆ ಬೆಳೆಯುವ ಈ ಮರ ಆಫ್ರಿಕಾ , ಆಸ್ಟ್ರೇಲಿಯಾ ಮತ್ತು ಭಾರತದ ಕೆಲವು ಭಾಗಗಳಲ್ಲಿ ಕಾಣಸಿಗುತ್ತೆ. ಉಬ್ಬಿದ ಅದರ ಬೊಡ್ಡೆಯಲ್ಲಿ ಸುಮಾರು 120,000ಲಿ ನಷ್ಟು ನೀರು ಶೇಖರಿಸಿಟ್ಟುಕೊಂಡು ಬರಬಂದಾಗ ಉಪಯೋಗಿಸಿಕೊಳ್ಳುತ್ತದೆ. ಇದು ಮಡಗ್ಯಾಸ್ಕ

ರ್ ದೇಶದ ರಾಷ್ಟ್ರೀಯ ಮರ. ವರ್ಷದ 9 ತಿಂಗಳು ಇದರಲ್ಲಿ ಎಲೆಗಳೆ ಇರೊಲ್ಲ, ಇದನ್ನು ಆಗ ನೋಡಿದ್ರೆ ಯಾರೊ ಇದನ್ನ ಬುಡ ಸಮೇತ ಕಿತ್ತು ತಲೆಕೆಳಗಾಗಿ ಮತ್ತೆ ನೆಟ್ಟಂತೆ ಕಾಣಿಸುತ್ತೆ. ಕರ್ನಾಟಕದ ಹಾವೇರಿ ಜಿಲ್ಲೆಯ ಸವಣೂರ್ ನಲ್ಲಿ ಬೃಹತ್ ಮರಗಳಿವೆ.

ಈ ಮರಗಳು ಭಾರತದಲ್ಲಿ ಕಣ್ಮರೆಯಾಗುತ್ತಿರುವುದು ನೋವಿನ ವಿಷಯ. ಇದರ ಕುರಿತು ಒಂದು ವಿಡಿಯೋ.





ಅತಿ ದೊಡ್ಡ ಬೊಡ್ಡೆಯುಳ್ಳ ಮರ - El Árbol del Tule

El Árbol del Tule (”ಟ್ಯೂಲ್ ಟ್ರೀ”) ಅತಿ ಅಗಲವಾದ ಸೈಪ್ರೆಸ್ಸ್ ಮರ. ಇದು ಮೆಕ್ಸಿಕೋ ದೇಶದ ಓಕ್ಸಾಕ (Oaxaca) ನಲ್ಲಿದೆ. 190 ಅಡಿ ಎತ್ತರದಲ್ಲಿ ಇದರ ಸುತ್ತರಳತೆ 37ಅಡಿ!! ಜಗತ್ತಿನ ಅತಿ ಅಗಲವಾದ ಮರ ಇದು ಅಂತ ಒಪ್ಪದ ಕೆಲವರು ಇದು ಮೂರು ಪ್ರತ್ಯೆಕ ಮರಗಳು ಒಂದರ ಪಕ್ಕದಲ್ಲೇ ಬೆಳೆದಿವೆ ಅಂತೆಲ್ಲ ವಾದಿಸಿದ್ರು. ಆದ್ರೆ DNA ಅನಾಲಿಸಿಸ್ ನಿಂದ ಒಂದೇ ಮರ ಇಷ್ಟು ದೊಡ್ಡದಾಗಿ ಬೆಳೆದಿದು ಅನ್ನೋದು ಖಚಿತವಾಯ್ತು.


ಜನರೆಲ್ ಶೇರ್ ಮನ್:


ಕ್ಯಾಲಿಫೋರ್ನಿಯಾದಲ್ಲಿ ಬೆಳೆಯುವ ದೈತ್ಯ ಸೆಕ್ವಾಯಿಯಾ ಮರಗಳು ಪ್ರಪಂಚದ ದೊಡ್ಡ ಮರಗಳು (ಪರಿಮಾಣ/ volume ಲೆಖ್ಖದಲ್ಲಿ). ಅದರಲ್ಲಿ ಅತಿ ದೊಡ್ಡದು ಎಂಬ ಖ್ಯಾತಿಗೆ ಒಳಗಾಗಿರೋದು ಸೆಕ್ವಾಯಿಯಾ ನ್ಯಾಶನಲ್ ಪಾರ್ಕ್ ನಲ್ಲಿರೋ ಜೆನರಲ್ ಶೇರ್ ಮನ್ - 275ಅಡಿ ಎತ್ತರ, 52,500 cubic feet (1,486 m³) ಪರಿಮಾಣವಿರೋ ಇದರ ತೂಕ 6000 ಟನ್!!! ಇದು ಸುಮಾರು 2,200 ವರ್ಷಗಳ ಹಿರಿಯ ಮರ.


ಬ್ರಿಸ್ಟಲ್ ಕೋನ್ ಪೈನ್ - ಮೆತುಸೇಲಹ್

ಬೈಬಲ್ ನಲ್ಲಿ ಬರುವ ’ಮೆತುಸೇಲಹ್’ ಎಂಬಾತ 969ವರ್ಷಗಳು ಬದುಕಿದ್ದನಂತೆ!! ಅವನ ಹೆಸರನ್ನೇ ಈಗ ಜಗತ್ತಿನ ಅತಿ ಹಿರಿಯ 4,838 ಹರೆಯದ ಈ ಮರಕ್ಕೆ ಇಡಲಾಗಿದೆ. ಇದು ಕ್ಯಾಲಿಫೋರ್ನಿಯಾದಲ್ಲಿದೆ. 1957ರಲ್ಲಿ ಎಡ್-ಮಂಡ್ ಶೂಲ್-ಮನ್ ಅವರು ಇದರಲ್ಲಿ ಒಂದು ಸಣ್ಣ ರದ್ರ ಕೊರೆದು, ಮರದ ಒಳ ತಿರುಳನ್ನು ತೆಗೆದು ಅದರ ವಯಸನ್ನು ಅಳೆದಿದ್ದರು.

1964ರಲ್ಲಿ ಆಗ ಸ್ನಾತಕೋತ್ತರ ವಿದ್ಯಾರ್ಥಿಯಾದಿದ್ದ ಡೋನಾಲ್ಡ್ ಕರ್ರಿ (Donald R. Currey) ಎಂಬುವವರು "ಪ್ರೋಮೆಥಸ್" ಎಂಬ ಮರದಿಂದ ಸ್ಯಾಂಪಲ್ಸ್ ಅನ್ನು ಕೊರೆದು ತೆಗೆಯುತ್ತಿದ್ದರು. ಆಗ ಅಕಸ್ಮಾತ್ ಅವರ ರಂದ್ರ ಕೊರೆಯುವ ಸಲಕರಣೆ ಮುರಿದು ಒಂದು ಭಾಗ ಮರದ ಒಳಗೇ ಉಳಿಯಿತು. ಇದನ್ನು US ಅರಣ್ಯ ಇಲಾಖೆಗೆ ತಿಳಿಸಿ, ಮರವನ್ನ ಕತ್ತರಿಸಿ ಅದನ್ನು ಪರೀಕ್ಷಿಸಿಸಲು ಅನುಮತಿ ಕೋರಿದರು. ಕಡಿದನಂತರದ ಪರೀಕ್ಷೆಯಿಂದ ಅದರ ವಯಸ್ಸು 5,000 ವರ್ಷಗಳಿಗೂ ಹೆಚ್ಚು ಅಂತ ತಿಳಿಯಿತು. ಜಗತ್ತಿನ ಅತಿ ಹಿರಿಯ ಜೀವಿ ಎನಿಸಿ ಕೊಳ್ಳಬಹುದಿದ್ದ ಆ ಮರ ಅವರ ಅಚಾತುರ್ಯದಿಂದಾಗಿ ಆಗಲೆ ನೆಲಕ್ಕುರುಳಿತ್ತು:(

ಈಗ ಇರುವ ಮೆತುಸೇಲಹ್ ಮರವನ್ನು ಜೋಪಾನ ಮಾಡಬೇಕಾದ್ದು ಎಲ್ಲರ ಕರ್ತವ್ಯ.


ಆಲದ ಮರ:

Largest Banyan Tree

ಹಿಂದಿನ ಕಾಲದಲ್ಲಿ ಇದರ ನೆರಳಿನಲ್ಲಿ ಬನಿಯಾ(ಹಿಂದುವರ್ತಕರು)ಗಳು ತಮ್ಮ ವ್ಯಾಪಾರ ಮಾಡುತ್ತಿದ್ದುದರಿಂದ ಇದನ್ನು ಪ್ರವಾಸಿಗಳು ಬನಿಯಾನ್ ಟ್ರೀ ಎಂದು ಕರೆದರು.ಇದು ಬೃಹತ ಪ್ರಾಮಾಣದ್ದಾಗಿದ್ದು ಅಗಲವಾಗಿ ಹರಡಿರುವ ಕೊಂಬೆಗಳಿಂದ ಕೂಡಿದೆ. ಇದು ಭಾರತದ ರಾಷ್ಟ್ರವೃಕ್ಷ. ಸಂಸ್ಕೃತದಲ್ಲಿ 'ವಟವೃಕ್ಷ 'ಎಂದು ಕರೆಯುತ್ತಾರೆ.

ಇದು ವಿಶಾಲ ಕೊಂಬೆಗಳಿಂದ ಕೂಡಿದ ಮರ. ಈ ಕೊಂಬೆಗಳಿಂದ ಬೀಳಲುಗಳು ಹೊರಟು ನೆಲವನ್ನು ತಾಗಿ ಕಾಂಡಗಳಾಗಿ ಪರಿವರ್ತಿಸುತ್ತವೆ. ಈ ರೀತಿಯಿಂದ ಹಲವು ಎಕರೆ ಪ್ರದೇಶಗಳನ್ನೂ ವ್ಯಾಪಿಸುವುದುಂಟು.

ಕಲ್ಕತ್ತದ ಶಿಬಿಪುರದಲ್ಲಿರುವ 250ವರ್ಷಗಳ ಆಲದ ಮರ ಒಂದೂವರೆ ಎಕರೆಯಷ್ಟು ವಿಸ್ತಾರವಾಗಿದೆ. ಎರಡು ಸಾವಿರಕ್ಕೂ ಹೆಚ್ಚು ಬೇರುಗಳು ಇದಕ್ಕಿವೆ. ಇದರ ವಿಡಿಯೋ ತುಣುಕು ಇಲ್ಲಿದೆ .



ಮರಗಳ ಸರ್ಕಸ್:
ಅಕ್ಸೆಲ್ ಎರ್ಲ್ಯಾಂಡ್-ಸನ್(Axel Erlandson) ಅವರು ಮರಗಳಲ್ಲಿ ನಿರ್ಮಿಸುವ ಈ ಅದ್ಭುತಕ್ಕೆ ಅವರಿಟ್ಟ ಹೆಸರು "ಟ್ರೀ ಸರ್ಕಸ್" !! ಹೆಚ್ಚಿನ ವಿವರಗಳು ಇಲ್ಲಿ.

crafted_tree2.jpg

crafted_tree3.jpg

crafted_tree4.jpg

crafted_tree5.jpg

crafted_tree6.jpg

ಈ ಲೇಖನದ ಕ್ರೆಡಿಟ್ ನನ್ನ ಹೇಮಂತ್ ಅವರಿಗೆ ಸೇರಬೇಕು. ಅವರಿಂದ ತಿಳಿದದ್ದು/ ಕಲಿತಾಯಿರೋದು ತುಂಬಾಯಿದೆ. ಅವರು ವೃತ್ತಿಯಲ್ಲಿ ಹಾರ್ಟಿಕಲ್ಚರ್ ಮಾಲಿಕ್ಯುಲಾರ್ ಬಯಾಲಜಿಸ್ಟ್. ಗಿಡಗಳು ಅಂದ್ರೆ ಅವರಿಗೆ ಎಲ್ಲೆಲ್ಲಿದ ಆಸಕ್ತಿ, ಪ್ರೀತಿ:) ಮೊದಲ ಸರ್ತಿ ಅಮೇರಿಕಾಗೆ ಕಾನ್-ಫರೆನ್ಸ್ ಗೆ ಬಂದಿದ್ದಾಗ ಹತ್ತಿರದ ಯಾವುದೇ ಜಾಗಗಳನ್ನು ನೋಡದೇ ಕೇವಲ ಜೊಶುವಾ ಟ್ರೀ ನ್ಯಾಷನಲ್ ಪಾರ್ಕಿಗೆ ಭೇಟ್ಟಿ ಕೊಟ್ಟು ಮನೆಯಲ್ಲಿ ಸೋದರರ ನಗೆಗೆ ತುತ್ತಾಗಿದ್ದರು:( ನನಗೆ ಹೊಸ ವಿಷಯಗಳನ್ನು ಹೇಳೋದಲ್ಲದೆ ಆಗಾಗ್ಗೆ ಅದರ ಬಗ್ಗೆ ಕ್ವಿಜ್ ಕೂಡ ಮಾಡ್ತಾರೆ! ಅವರು ಹೇಳಿಕೊಟ್ಟ ಪಾಠದ ಪ್ರತಿಫಲವೇ ಈ ಲೇಖನ.

ಚಿತ್ರ ಕೃಪೆ: ಅಂತರ್ಜಾಲ

Tuesday, May 12, 2009

ಪುಟ್ಟಿಯ ಪುಟ್ಟ್ ತಂಗಿ:)

ಪುಟ್ಟಿಗೆ ಈಗ ಒಬ್ಳು ಪುಟ್ಟ್ ತಂಗಿ ಬಂದಿದ್ದಾಳೆ. ಬೆಂಗಳೂರಿನಲ್ಲಿರೋ ಚಿಕ್ಕಮ್ಮ-ಚಿಕ್ಕಪ್ಪ ಸೀಮಾ ಶರತ್-ಗೆ ಹುಟ್ಟಿರೊ ಮುದ್ದಾದ ಮಗೂ ಫೋಟೋ ನೋಡ್ತಾ ಪುಟ್ಟಿ ತನ್ನ ಎಂದಿನ ಸ್ಟೈಲ್-ನಲ್ಲಿ "ಪಾಪೂಊಊಊ..." ಅಂತ ಚಪ್ಪಾಳೆ ತಟ್ಟುತ್ತಾ ಕೂಗಿದ್ಲು.



ಮಲಗು ಮಲಗೆನ್ನ ಮರಿಯೆ
ಬಣ್ಣದ ನವಿಲಿನ ಗರಿಯೆ
ಎಲ್ಲಿಂದ ಬಂದೆ ಈ ಮನೆಗೆ
ನಂದನ ಇಳಿದಂತೆ ಧರೆಗೆ
ಜೋ..ಜೋಜೋಜೋ...

ತಾವರೆ ದಳ ನಿನ್ನ ಕಣ್ಣು
ಕೆನ್ನೆ ಮಾವಿನ ಹಣ್ಣು
ಸಣ್ಣ ತುಟಿಯ ಅಂದ
ಬಣ್ಣ್ದ ಚಿಗುರಿಗು ಚಂದ
ನಿದಿರೆ ಮರುಳಲ್ಲಿ ನಗಲು
ಮಂಕಾಯ್ತು ಉರಿಯುವ ಹಗಲು
ಜೋ..ಜೋಜೋಜೋ...

ಒಲುಮೆ ಹರಸಿದ ಕಂದ
ಹುಣ್ಣಿಮೆ ದೇವಗು ಚಂದ
ಬೆಳಕ ಕರೆವ ಅರುಣ
ನಿನ್ನ ನಗೆಯ ಕಿರಣ
ಚೆಲುವಿಗೆ ಸಾಟಿಯೆ ಕಾಮ
ತಿಮ್ಮಪ್ಪನಿಗೆ ಮೂರು ನಾಮ
ಜೋ..ಜೋಜೋಜೋ...

--ಎನ್.ಎಸ್.ಲಕ್ಶ್ಮಿನಾರಾಯಣ ಭಟ್ಟ್