Saturday, June 05, 2010

ಅಮ್ಮ ರಾಗ :)


ಪುಟ್ಟಿ ದಿನಾ ಬೆಳಗ್ಗೆ ಎದ್ದಾಗ “ಅಮ್ಮ ಅಮ್ಮ” ಅಂತ ಕೂಗಿ ಕರೆಯೋದು ರೂಢಿ. ಅಪ್ಪ ಹೋದ್ರೆ ಕೆಲವೊಮ್ಮೆ ಬರೊಲ್ಲ ಅವ್ಳು, ನಾನೇ ಬೇಕು. ಅಡುಗೆ ಮನೆಯಲ್ಲಿ ತಿಂಡಿ ಕೆಲಸದ್ದಲ್ಲಿದ್ದಾಗ ಕೆಲವೊಮ್ಮೆ ಹೋಗೋದು ಲೇಟ್ ಆಗುತ್ತೆ. ಇವತ್ತೂ ಹಾಗೆ ಆಯ್ತು ನಾನು ಹೋಗೋಷ್ಟ್ರಲ್ಲಿ “ಅಮ್ಮ, ಅಮ್ಮಾ, ಆಆಮ್ಮ, ಆಮ್ಮ್ಮಾಆಆ.....” ಇತ್ಯಾದಿ ಕೂಗ್ತಾಯಿದ್ಲು. ಅದೇನೇ ಅದು ನಿಂದು ಪುಟ್ಟಿ ರಾಗ ಅಂದೆ “ಅದು ಅಮ್ಮ ರಾಗ” ಅಂತ ಕಿಸಕ್ಕನೆ ನಕ್ಕಳುJ

Monday, May 17, 2010

ಕುದುರೆ ಸವಾರಿ !


ಚಡ್ಡಿ ಗಿಡ್ಡಿ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ! ಹೈ! ಹೈ!

ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ! ಹೈ! ಹೈ!

ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ! ನಮ್ಮ ಕುದುರೆ!
ಹೈ! ಹೈ! ಹೈ!

ಕುದುರೆ ಮೇಲೆ ಕುಳಿತುಕೊಂಡು
ಅದರ ಬೆನ್ನ ತಟಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ! ಹೈ! ಹೈ!

ಕುದುರೆ ಮೇಲೆ ಕುಳಿತುಕೊಂಡು
ಹಳ್ಳ ಗಿಳ್ಳ ಹಾರಿಕೊಂಡು
ಮನೆಗೆ ಬಂದು ಸೇರಿಕೊಂಡು
ಹೈ! ಹೈ! ಹೈ!

ಕುದುರೆ ಮೈಯ ಸವರಿ ತಟ್ಟಿ
ಹುರುಳಿ ಗಿರಳಿ ತಂದು ಕೊಟ್ಟು
ಸಾಕುವೆವು ನಮ್ಮ ತಟ್ಟು
ಹೈ! ಹೈ! ಹೈ!

--ಜೆ. ಪಿ. ರಾಜರತ್ನಂ ಅವರ ’ಕಡ್ಲೆಪುರಿ’ ಸಂಕಲನದಿಂದ.



Thursday, May 06, 2010

ಯಾರು ನಗಿಸಿದರೋ ನಿನ್ನ ಕಂದ ....


ಯಾರು ನಗಿಸಿದರೋ
ನಿನ್ನ ಕಂದ ..
ನಿನ್ನ ನಗುವೆ ನಮಗೆಲ್ಲ
ಆನಂದ ಆನಂದ...

ಪೀಲಾಂಗೋವಿ ಕಳ್ಳ ಕೃಷ್ಣ
ನಿನ್ನ ನಗಿಸಿದನ?
ತನ್ನ ನವಿಲುಗರಿಯಿಂದ
ತನ್ನ ಮುರಳಿ ರಾಗದಿಂದ
ನಿನ್ನ ನಗಿಸಿದನಾ ಕಂದ ಕಂದ....?

ಏಕದಂತ ಗಣಪಾ
ನಿನ್ನ ನಗಿಸಿದನ?
ತನ್ನ ಸೊಂಡಲಿಂದ
ತನ್ನ ಡುಮ್ಮು ಹೊಟ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ...?

ಕಪಿಯರಾಜ ಹನುಮ
ನಿನ್ನ ನಗಿಸಿದನ?
ತನ್ನ ಬಲದಿಂದ
ತನ್ನ ಕಪೀಚೆಸ್ಟೆಯಿಂದ
ನಿನ್ನ ನಗಿಸಿದನಾ ಕಂದ ಕಂದ... ?


ಈ ಪದ್ಯ ಇಲ್ಲಿಂದ ಎರವಲು ಪಡೆದದ್ದು...

Thursday, April 29, 2010

ಕಾಮನ ಬಿಲ್ಲು

ಪುಟ್ಟಿಗೆ ಬಣ್ಣಗಳೊಂದಿಗೆ ಆಟವಾಡೋದು ಬಲು ಇಷ್ಟ. ಯಾವಾಗ ಕೇಳಿದ್ರೂ ’ಪೈಂಟಿಂಗ್/ ಕಲರಿಂಗ್ ಮಾಡೋಣ’ ಅಂತಾಳೆ. ಅದ್ರಲ್ಲೂ ಅವಳ ನೆಚ್ಚಿನದು ’ರೈನ್-ಬೋ’ :)) ಅವಳು ಮಾಡಿರೋ ಹತ್ತಾರು ಚಿತ್ರಗಳಲ್ಲಿ ಕೆಲವು ಇಲ್ಲಿವೆ.









ಅವಳು ತಿನ್ನುವ ’Fruitloops' ನಿಂದ ಕಾಮನಬಿಲ್ಲು ಮಾಡಿರೋದು:) ಜೊತೆಗೆ ಅವಳ ನೆಚ್ಚಿನ ಹಾಡು.

ಕಾಮನ ಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ
ಬಣ್ಣಗಳೇಳನು ತೋರಣ ಮಾಡಿದೆಕ೦ದನ ಕಣ್ಣಿಗೆ ಚಂದವ ಮಾಡಿದೆ
ಹಣ್ಣಿನ ಹೂವಿನ ಹೊನ್ನನು ಕೂಡಿದೆಮಕ್ಕಳಿಗೊಕುಳಿಯಾಟವನಾಡಿದೆ
ತೆಂಗಿನ ತೋಟದ ಬುಡದಲಿ ಮೂಡಿದೆಭೂಮಿಗೆ ಬಾನಿಗೆ ಸೇತುವೆ ಹೂಡಿದೆ
ಕಾಮನ ಬಿಲ್ಲು ಕಮಾನು ಕಟ್ಟಿದೆಮೋಡದ ನಾಡಿನ ಬಾಗಿಲಿಗೆ
(ಕವಿ : ಕುವೆಂಪು)

Sunday, April 25, 2010

ಕೋಲಿದು ನನ್ನಯ ಕುದುರೆ !!

ಮೊನ್ನೆ ಪುಟ್ಟಿಯ ಅಪ್ಪನ ಫೋನ್ ನಲ್ಲಿದ್ದ ಫೋಟೋಗಳನ್ನ ಖಾಲಿ ಮಾಡ್ತಾಯಿರುವಾಗ ಡಿಸೆಂಬರ್ 2009ರಲ್ಲಿ ತೆಗೆದಿದ್ದ ಈ ಫೋಟೋ ನೋಡಿದ ತಕ್ಷಣ ’ಅಜ್ಜನ ಕೋಲಿದು ನನ್ನಯ ಕುದುರೆ’ ನೆನಪಾಯ್ತು:)
ಅಜ್ಜನ ಕೋಲಿದು ನನ್ನಯ ಕುದುರೆ

ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ಚಂದಪ್ಪನಿಗೆ
ಚಿಗರೆಯೇ ಕುದುರೆ
ಮಾದೇವನಿಗೆ ನಂದಿಯೇ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೇ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ

ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗೆ ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


--ಕವಿ ಸಿದ್ದಯ್ಯ ಪುರಾಣಿಕ್

’ಅವಧಿ’ ಯಲ್ಲಿ ಕಲಾವಿದ ಪ ಸ ಕುಮಾರ್ ಅವರು ಈ ಹಾಡಿಗೆ ತಕ್ಕದಾದ ಸುಂದರ ಚಿತ್ರ ಬಿಡಿಸಿದ್ದಾರೆ!

Monday, April 12, 2010

ಒಂದೂರಲ್ಲಿ...

ಪುಟ್ಟಿಗೆ ಈಗ ಕಥೆ ಹೇಳೋಕೆ ಅಮ್ಮ ಅಪ್ಪನ ಜೊತೆ ಅಜ್ಜಿ ತಾತಾ ಕೂಡ ಇದ್ದಾರೆ. ದಿನ ನಿತ್ಯ ತನಗೆ ಯಾವ ಕಥೆ ಬೇಕು ಅಂತ ಡಿಸೈಡ್ ಮಾಡೊದು ಪುಟ್ಟಿನೇ. ಹೀಗೆ ದಿನಕ್ಕೆ ನಾಲ್ಕಾರು ಕಥೆ ಕೇಳಿ ಕೇಳಿ, ಇತ್ತೀಚೆಗೆ ತಾನೇ ಕಥೆ ಹೇಳೋಕೆ ಶುರು ಮಾಡಿದ್ದಾಳೆ. ಅವಳು ಕಥೆ ಹೇಳೋಕೆ ಶುರು ಮಾಡಿ ೨ ವಾರಗಳೇ ಆಯ್ತಾದ್ರೂ ವಿಡಿಯೋ ತೆಗೆಯಲು ಆಗಿರಲಿಲ್ಲ, ನಿನ್ನೆ ಕೊನೆಗೂ ಸ್ವಲ್ಪ ರೆಕಾರ್ಡ್ ಮಾಡಿರುವೆ.
ಬನ್ನಿ ಕಥೆ ಹೇಳುವ ಕಥೆ ಕೇಳೋಣ :)

ಒಂದೂರಲ್ಲಿ....


Monday, March 15, 2010

ಯುಗಾದಿ ಹಬ್ಬ !!!





ವರುಷದ ಮೊದಲು
ಬಂದಿತು ಹಬ್ಬ
ಯುಗಾದಿ ಅದರ ಹೆಸರಣ್ಣ


ಬೇವು ಬೆಲ್ಲವ ತಿಂದು
ಕಷ್ಟ ಸುಖ ಸಮನಾಗಿ
ನೋಡೋಣ ಬಾರಣ್ಣ

ಎಣ್ಣೆಯ ಹಚ್ಚಿ
ಸ್ನಾನ ಮಾಡಿ
ಹೊಸ ಬಟ್ಟೆಯನು ಧರಿಸೋಣ

ಮಾವಿನ ಬೇವಿನ
ತೋರಣ ಮಾಡಿ
ಬಾಗಿಲಿಗೆ ಕಟ್ಟೋಣ

ಪೂಜೆಯ ಮಾಡಿ
ಭಟ್ಟರು ಓದುವ
ಪಂಚಾಂಗವ ಕೇಳೋಣ


ಅಮ್ಮನು ಮಾಡುವ
ಬಿಸಿಬಿಸಿ ಹೋಳಿಗೆ
ಸವಿಯನು ಸವಿಯೋಣ


ಸಾಲಲಿ ಕೂತು
ಬಾಳೆಯ ಎಲೆಯಲ್ಲಿ
ಹಬ್ಬದೂಟವ ಮಾಡೋಣ

ತಿಂದು ತೇಗಿ
ಆಟವ ಆಡಿ
ಎಲ್ಲರಿಗೂ ಶುಭವ ಕೋರೋಣ
--ರೂpaश्री

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!! ಬೆಂಗ್ಳೂರಿಂದ ಅಜ್ಜಿ-ತಾತಾ ಬಂದಿರೋದ್ರಿಂದ ಪುಟ್ಟಿ ಈಗ ಬಹಳ ಬಿಜಿ. ಜೊತೆಗೆ ನನ್ನ ಕೆಲಸ ಹೆಚ್ಚಾಗಿ/ ಸೋಮಾರಿತನ ಜಾಸ್ತಿಯಾಗಿ ಪುಟ್ಟಿ ಬ್ಲಾಗ್ ಇದುವರೆಗೆ ಒಂದು ಸಣ್ಣ ಬ್ರೇಕ್ ತಗೊಂಡಿತ್ತು. ಪ್ರೀತಿಯಿಂದ ವಿಚಾರಿಸಿದ ಎಲ್ಲರಿಗೂ ವಂದನೆಗಳು:)
ಮತ್ತೆ ಸಿಗೋಣ!