Saturday, March 14, 2009

ಪುಟ್ಟಿ ಕಣ್ಣೆಲ್ಲಿ?

ಪುಟ್ಟಿಗೆ ಎಣ್ಣೆ ಹಚ್ಚೋವಾಗ "ಕೈ ಉದ್ದ, ಕಾಲ್ ಉದ್ದ" ಅಂತ ಹೇಳ್ತಾ ಮಸಾಜ್ ಮಾಡೋದು ರೂಢಿ. ಅಲ್ಲದೆ ಅಜ್ಜಿ ಹೇಳೊ ಹಾಡು ತುಂಬಾ ಇಷ್ಟ.


ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಣ್ಣುಗಳು
ದೇವರಿಗೋಸ್ಕರ ಕಣ್ಣಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ನೋಟವನ್ನು ನೋಡಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕೈಗಳು
ದೇವರಿಗೋಸ್ಕರ ಕೈಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಕೆಲಸವನ್ನು ಮಾಡಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಾಲ್ ಗಳು
ದೇವರಿಗೋಸ್ಕರ ಕಾಲ್ ಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಜಾಗಕೂ ಹೋಗಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಿವಿಗಳು
ದೇವರಿಗೋಸ್ಕರ ಕಿವಿಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಮಾತನ್ನು ಕೇಳಬಾರದು
ದೇವರು ನಮಗೆ ತಂದೆಯು
ಒಂದು ವರವ ಕೊಟ್ಟಿದ್ದಾನೆ
ಆ ಒಂದು ವರವು ಏನೆಂದ್ರೆ ಪುಟ್ಟ ಬಾಯಿ
ದೇವರಿಗೋಸ್ಕರ ಬಾಯಿ
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಮಾತನ್ನು ಆಡಬಾರದು

ನಂದಗೋಕುಲದ ಅಮ್ಮುವಿನ ಅಮ್ಮ ಮಾಲಾ ಅವರು ಬರೆದ ಈ ಹಾಡು ಕೂಡ ಬಹಳ ಚೆಂದ ಇದೆ ಓದಿ.
ಇವೆಲ್ಲದರ ಪರಿಣಾಮ ಈಗ ತನ್ನ ಪುಟ್ಟ ಕೈ-ಕಾಲು ಇತರೆ ಅಂಗಾಂಗಗಳ ಪರಿಚಯ ಚೆನ್ನಾಗಿ ಆಗಿದೆ. ಎಲ್ಲವನ್ನು ಬೆರಳು ಮಾಡಿ ತೋರಿಸುತ್ತಾಳೆ.

Thursday, March 12, 2009

ತಾಯಿತ ಯಾರು ಗೊತ್ತಾ??

ಅಪ್ಪ, ಅಮ್ಮ, ಪಾಪ, ತಾತಾ, ಮಾಮ ಇವಿಷ್ಟೆ ಮಾತಾಡುತ್ತಿದ್ದ ಪುಟ್ಟಿಗೆ ಈಗ ನಾವು ಮಾತಾಡೋದೆಲ್ಲ ಚೆನ್ನಾಗಿ ಅರ್ಥ ಆಗುತ್ತೆ. ತನಗೆ ಹಸಿವಾದ್ರೆ ಅಡಿಗೆ ಮನೆಗೆ ಕರೆದೊಯ್ದು ಬಟ್ಟಲು, ಸ್ಪೂನ್ ತೋರ್ಸಿತಾಳೆ. ನಿದ್ದೆ ಬಂದಾಗ ಹಾಸಿಗೆ ತೋರಿಸ್ತಾಳೆ. ಅಷ್ಟೆ ಅಲ್ಲ ತಾನೂ ಎಲ್ಲಾ ಮಾತಾಡಲು ಪ್ರಯತ್ನಿಸುತ್ತಾಳೆ.
ನಿನ್ನ್ ಹೆಸ್ರು ಏನು ಅಂದ್ರೆ "ತಾಯಿತ" ಅಂತ ಮುದ್ದಾಗಿ ಹೇಳ್ತಾಳೆ. ಸಾಹಿತ್ಯ ಯಾರು ಅಂತ ಪ್ರಶ್ನಿಸಿದ್ರೆ "ನಾಆಅನ್..ನಾಆಆನ್" ಅಂತ ತನ್ನ ಪುಟ್ಟ ಕೈಗಳಿಂದ ಎದೆ ತಟ್ಟುತ್ತಾಳೆ. ಅಮ್ಮ ಹೆಸ್ರೇನು ಅಂದ್ರೆ "ಊಪ, ಪೂಪ" ಅಂತ ನಗ್ತಾಳೆ. ನಾಯಿ ನೋಡಿದ್ರೆ "ದಾಗೀಈ.." ಅಂತ ತೋರಿಸ್ತಾಳೆ. ಡಾಗಿ ಏನ್ ಅನ್ನುತ್ತೆ ಅಂದ್ರೆ "ಬಾಬು..ಬೌಬು" ಅಂತಾಳೆ. ದೋಸೆ, ಚಪಾತಿ ಇವೆಲ್ಲ ಅವಳ ಬಾಯಲ್ಲಿ "ಚಾಪ" ಆದ್ರೆ, ಸೊಪ್ಪು "ತೊಪ್ಪು, ಚೊಪ್ಪು" ಆಗಿದೆ. ಬೆಕ್ಕು ನೋಡಿದ್ರೆ "ಮಯ್ಯ ಮಯ್ಯ" ಅಂತ ಸಂತಸ ಪಡ್ತಾಳೆ. ಅಮ್ಮನ ಕೈಯಲ್ಲಿ ಹಾಲಿನ ಲೋಟ ನೋಡಿದ್ರೆ ಬಹಳ ಖುಶಿಯಿಂದ "ಹಾಆಲ್...." ಅಂತಾಳೆ. ಸಂಜೆ ಹಾಲು ಕುಡಿದ ತಕ್ಷಣ ಚಪ್ಪಲಿ ತೋರಿಸಿ "ಚಪ್ಪ ಚಪ್ಪ" ಅಂತ ತನ್ನ ಕಾಲುಗಳನ್ನ ತೋರಿಸಿ ಹಾಕು ಅಂತ ಸನ್ನೆ ಮಾಡ್ತಾಳೆ. ನಿದ್ದೆ ಮಾಡಲು ಹಾಸಿಗೆ ಬಳಿ ಹೋದ್ರೆ "ತಾತಿ.. ತಾಗಿ" ಅಂತಾಳೆ. ಮುದ್ದು ಮಾಡೋ ಅಜ್ಜಿನ ಕಂಡು "ಅಗ್ಗಿ" ಅಂತ ಕೂಗ್ತಾಳೆ. ಅವಳು ಕೆನ್ನೆ ಮುತ್ತು ಕೊಟ್ಟಾಗ ಅಮ್ಮ ಥ್ಯಾಂಕ್ಯೂ ಅಂದ್ರೆ ತಾನೂ " ತಾಕ್" ಅಂತಾಳೆ. ಅಜ್ಜ ಪೂಜೆ ಮಾಡೋವಾಗ ಅವರ ಜೊತೆ ದೇವರಮನೆಲಿ ಕೂತು "ಊವಾ (ಹೂವು), ಅನ್ನ(ಹಣ್ಣು)" ತೋರಿಸ್ತಾಳೆ. ಮನೆಗೆ ಬರುವ ಅಕ್ಕ ಪಕ್ಕದ ಮನೆಯ ಮಕ್ಕಳನ್ನ "ಅತ್ತ, ಅನ್ನಾಆಅ..." ಅಂತ ಕರೆಯುತ್ತಾ ಅವರೊಂದಿಗೆ ಆಟವಾಡ್ತಾಳೆ. ಅವಳಿಗಿಷ್ಟವಾದ ಬಾಳೆಹಣ್ಣು ಕಾಣಿಸಿದ್ರೆ "ನಾನಾ" ಅಂತ ಕೈ ತೋರಿಸಿ ಕೇಳ್ತಾಳೆ.
ಅವಳ ಈ ಮುದ್ದು ಮಾತುಗಳನ್ನ ವಿಡಿಯೋ ರೆಕಾರ್ಡ್ ಮಾಡೋಣ ಅಂತ ಕ್ಯಾಮೆರಾ ಕೈಗೆತ್ತಿದರೆ ಸಾಕು ಪೋಸ್ ಕೊಟ್ಟು ನಗಲು ಶುರು ಮಾಡ್ತಾಳೆ. ಆಗ ಎಷ್ಟು ಮಾತಾಡ್ಸಿದ್ರೂ ನಗುನೇ ಮಾತಾಗುತ್ತೆ. ಆದ್ರೂ ಕೆಲವನ್ನು ರೆಕಾರ್ಡ್ ಮಾಡಿದ್ದೀನಿ. ಅದರ ತುಣುಕು ಇಲ್ಲಿದೆ ನೋಡಿ.

Sunday, March 08, 2009

ತಾತು ಅಂದ್ರೆ ತಾಯಿನ್!!

ಪುಟ್ಟಿ ಸಣ್ಣ ಮಗುವಾಗಿದ್ದಾಗಿನಿಂದ ಪ್ರತಿ ದಿನ ಎದ್ದ ಕೂಡಲೆ ಅವಳನ್ನ ದೇವರ ಮುಂದೆ ಕರೆತರೋದು ರೂಢಿ. ಒಂದೆರಡು ಶ್ಲೋಕಗಳನ್ನು ಹೇಳಿ, ಅವಳ ಕೈಯಿಂದ ಹುಂಡಿಗೆ ಕಾಸು ಹಾಕಿಸೋದು ಅವರಪ್ಪನ ಕೆಲಸ. ಇತ್ತೀಚೆಗೆ ಎದ್ದ ಕೂಡಲೆ ಪುಟ್ಟಿ ರೂಮ್ ನಲ್ಲಿರೋ ದೇವರಿಗೆ ಕೈ ಮುಗಿದು, "ಓಂ" ಹೇಳ್ತಾಳೆ. ಅವರಪ್ಪನ ಸ್ನಾನವಾದ ನಂತರ, ಅವರೊಂದಿಗೆ ದೇವರ ಮುಂದೆ ಹೋಗಿ ತಾನೂ ಕೈ ಮುಗಿದು, ಅವರಪ್ಪ ಮರೆತರೆ ತಾನೇ "ತಾತು ಅಥವಾ ತಾಯಿನ್" ಅಂತ ಕೇಳಿ ಹುಂಡಿಗೆ ದುಡ್ಡು ಹಾಕ್ತಾಳೆ.
ಅಲ್ಲದೇ ಅವರಪ್ಪನ ಕಾಯಿನ್ ಕಲೆಕ್ಷನ್ ನೋಡೋದು ಅವಳಿಗೆ ಬಲು ಖುಶಿ! ಅಪ್ಪನ ಆಲ್ಬಂನೆಲ್ಲಾ ದಿನಾ ಒಂದ್ ಸರ್ತಿ ಜಾಲಾಡ್ತಾಳೆ. ಪ್ರತಿಯೊಂದು ಕಾಯಿನ್ ತೋರಿಸಿ "ಅದು ತಾತು, ಇದು ತಾತು" ಅಂತ ಹೇಳ್ತಾಳೆ. ಅವರಪ್ಪ ಕಾಯಿನ್ ಜೋಡಿಸಲು ಕುಳಿತರೆ ತಾನೂ ಕೂರ್ತಾಳೆ.

ಝಣ ಝಣ ಝಣ
ಜೇಬು ತುಂಬ ಹಣ
ಮೇಲಕೆತ್ತಿ ಬಿಡಲು ಸದ್ದು
ಠಣ್ ಠಣಾ ಠಣ.
ನದಿಯೊಲ್ಲೊಂದು ಬಕ
ಮುದುರಿಕೊಂಡು ಮುಖ
ಕಾಲನೆತ್ತಿ
ಕುಣಿಯುತ್ತಿತ್ತು
ಥೈ ಥಕಾ ಥಕಾ..
ಸುತ್ತ ಹಸಿರು ವನ
ನಡುವೆ ಮೇವ ದನ
ಕೊಳಲನೂದಿ ಗೊಲ್ಲನೊಬ್ಬ
ತನನ ನಾ ತನಾ...

Thursday, March 05, 2009

ಖುಶಿ ಮೊದಲ ಹುಟ್ಟುಹಬ್ಬ !!!

ಇಂದು ಪುಟ್ಟಿಯ ಸೋದರಮಾವನ ಮಗಳು "ಖುಶಿ"ಯ ಹುಟ್ಟುಹಬ್ಬ. ಅಪ್ಪ-ಅಮ್ಮನ ಜೊತೆ ಇಂಗ್ಲ್ಯಾಂಡಿನಲ್ಲಿ ಹಬ್ಬ ಆಚರಿಸಿಕೊಳ್ಳ್ತಾಯಿರೋ ಬಂಗಾರಮ್ಮನಿಗೆ ನಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳು.


ನೀ ಹುಟ್ಟಿದ ಆ ದಿನ
ಶಿವರಾತ್ರಿಯ ಸುದಿನ
ಮನೆಯವರೆಲ್ಲ ನಲಿದ ದಿನ


ನೀ ಬೋರಲು ಬೀಳಲು ಮನಕಾನಂದ
ಇಂಡಿಯಾಗೆ ಬಂದಾಗ ನೀ ಅಂಬೆಗಾಲ ಕಂದ
ಹಲ್ಲಿಲ್ಲದ ನಿನ್ನ ಬೊಚ್ಚು ಬಾಯ ನಗುವು ಚಂದ


ಬಲು ಬೇಗ ಸೆಳೆದೆ ನೀ ನಮ್ಮೆಲ್ಲರ ಮನ
ಕೃಷ್ಣನ ಕೊಳಲು ಹಿಡಿದು ಹಾಡಿದೆ ತನನನ
ಮರಳಿ ಹಾರಿ ಸೇರಿದೆ ನೀ ಲಂಡನ

ವರುಷ ತುಂಬಿದೆ ನಿನಗೆ ಇಂದು
ಆಯುರಾರೋಗ್ಯ ಕೊಡಲಿ ಎಂದು
ಪರಶಿವನಾ ನಾವೆಲ್ಲ ಬೇಡುವೆವು ಇಂದು




Wednesday, February 25, 2009

ಮೊಲದ ಮರಿ!!

ಹೆಬ್ಬಾಳದಲ್ಲಿ ಪ್ರಥಮ ಜಾನುವಾರು, ಕುಕ್ಕುಟ ಮತ್ಸ್ಯ ಮೇಳ ನಡೆದಾಗ ಪುಟ್ಟಿಗೆ ಪ್ರಾಣಿ-ಪಕ್ಷಿಗಳನ್ನು ತೋರಿಸೋಕೆ ಅಂತ ಅವರಪ್ಪ ಅವಳನ್ನ ಕರ್ಕೊಂಡ್ ಹೋಗಿದ್ರು. ಅವಳು ಮೊಲಗಳನ್ನು ನೋಡಿ ಖುಶಿ ಪಟ್ಟಿದ್ದು ಹೀಗೆ.



ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
ದೊಡ್ಡದಾದ ಕಾಡಿನೊಳಗೆ ನಿನ್ನ ಠಾವೆ
ಹೆಡ್ಡ ನೀನು ಪೊದರಿನೊಳಗೆ ವಾಸಿಸುವೆ
ಪೊದರಿನಿಂದ ಪೊದರ ಬಳಿಗೆ ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ ಸೊಗಸಿನೂಟ
ಗಿಡ್ಡ ಬಾಲ ದೊಡ್ಡ ಕಿವಿಯು ನಿನಗೆ ಚಂದ
ಎದ್ದು ಎನ್ನ ಬಳಿಗೆ ಬಂದು ಆಡೋ ಕಂದಾ
ಗೂಡು ಕಟ್ಟಿ ತಿಂಡಿ ಕೊಡುವೆ ಪ್ರೀತಿಯಿಂದಾ
ಕಾಡ ಬಿಟ್ಟು ಗೂಡು ಸೇರೋ ಮೊಲದ ಕಂದಾ
ಮುದ್ದು ಮುದ್ದು ಮಾತುಗಳನು ನಿನಗೆ ಕಲಿಸುವೆ
ಮುದ್ದು ಮಾಡಿ ಪ್ರೀತಿಯಿಂದ ನಿನ್ನ ಸಲಹುವೆ
ಮೊಲದ ಮರಿ ಮೊಲದ ಮರಿ ಆಡ ಬಾರೆ
ಚುಪಕೆ ಚುಪಕೆ ಚುಪಕೆ ಚುಪಕೆ ನೆಗೆದು ಬಾರೆ
-- ಕೆಮ್ತೂರು ದೊಡ್ಡಣ್ಣ ಶೆಟ್ಟಿ

ಮೊಲದ ಮರಿ ಹಾಡು ಕೇಳಲು ಇಲ್ಲಿ ಕ್ಲಿಕ್ಕಿಸಿ.

Monday, February 23, 2009

ರುದ್ರಾಕ್ಷಿ ಪ್ರದರ್ಶನ!!!

"ಶಿವರಾತ್ರಿ ಪ್ರಯುಕ್ತ ಬೆಂಗಳೂರಿನ ಬಸವಭವನದಲ್ಲಿ ’ರುದ್ರಾಕ್ಷಿ ಪ್ರದರ್ಶನ ಮತ್ತು ಮಾರಾಟ’ ವನ್ನು ಏರ್ಪಡಿಸಲಾಗಿದೆ. ನಿಮ್ಮ ಜನ್ಮ ದಿನಾಂಕದ ಪ್ರಕಾರ ನೀವು ಯಾವ ರುದ್ರಾಕ್ಷಿಯನ್ನು ಧರಿಸಬೇಕೆಂದು ತಿಳಿಸುತ್ತಾರೆ, ಅಲ್ಲದೆ ಅತ್ಯಪರೂಪವಾದ ನೀಪಾಳದ "ಏಕಮುಖಿ" ರುದ್ರಾಕ್ಷಿಯ ದರ್ಶನ ಪಡೆದು ನಿಮ್ಮೆಲ್ಲಾ ಪಾಪಗಳಿದ ಮುಕ್ತಿ ಹೊಂದಬಹುದು" ಎಂಬ ಜಾಹೀರಾತನ್ನು ಪೇಪರಿನಲ್ಲಿ ಓದಿ ಕುತೂಹಲ ಉಂಟಾಯಿತು. ರುದ್ರಾಕ್ಷಿಯ ಬಗ್ಗೆ ನನಗೆ ಹೆಚ್ಚೇನೂ ಗೊತ್ತಿರಲಿಲ್ಲ. ಅವುಗಳಲ್ಲಿ ಹೀಗೆಲ್ಲಾ ಮುಖಗಳು ಇರುತ್ವಾ ಅಂತ ಹೇಮಂತರನ್ನು ಕೇಳಿದಾಗ ಅವರು ಪುಟ್ಟ ಲೆಕ್ಚರೇ ಕೊಟ್ಟರು. ರುದ್ರಾಕ್ಷಿ ಮರದ ಬಟಾನಿಕಲ್ ಹೆಸರು:Elaeocarpus sphaericus. ಸುಮಾರು ೩೫-೪೦ ಅಡಿ ಎತ್ತರದ ಮರ. ನೋಡಲು ಮಾವಿನ ಮರದ ಹಾಗೆ ಇರುತ್ತದೆ. ಏಪ್ರೆಲ್ -ಮೇ ನಲ್ಲಿ ಹಳದಿ ಬಣ್ಣದ ಹೂವುಗಳು ಗೊಂಚಲು ಗೊಂಚಲಾಗಿ ಅರಳುತ್ತವೆ. ನೀಲಿ ಬಣ್ಣದ ನಯವಾದ ಹಣ್ಣುಗಳು ಒಣಗಿದ ನಂತರ ಸುಕ್ಕುಸುಕ್ಕಾಗುವುದು. ಇದರ ಬೀಜವೇ ರುದ್ರಾಕ್ಷಿ. ಬೀಜದಲ್ಲಿ ಹಲವು ಗೆರೆಗಳಿರುತ್ತವೆ, ಅದರಲ್ಲಿ ಎಷ್ಟು ಗೆರೆಗಳಿವೆಯೋ ಅಷ್ಟು ಮುಖದ ರುದ್ರಾಕ್ಷಿಯದು. ರುದ್ರಾಕ್ಷಿ ಮಣಿಗೆ ಕೆಲವು ಔಷಧೀಯ ಗುಣಗಳಿವೆ ಎಂದರು. ಪ್ರದರ್ಶನದ ಬಗ್ಗೆ ಅವರಿಗೂ ಕುತೂಹಲ ಉಂಟಾಗಿ ಹೋಗಿ ನೋಡಿ ಬರೋಣವೆಂದು ಹೊರಟೇಬಿಟ್ಟ್ವಿ.

ಪ್ರದರ್ಶನದಲ್ಲಿ ಬಟಾಣಿ ಗಾತ್ರದಿಂದ ಹಿಡಿದು ನಿಂಬೆಹಣ್ಣಿನಷ್ಟು ದಪ್ಪದ ರುದ್ರಾಕ್ಷಿಗಳಿದ್ದವು. ೪೦೦ ರೂಪಾಯಿಂದ ಶುರುವಾಗಿ ೧೦ ಲಕ್ಷದವರೆಗಿನ ಮಣಿಗಳಿದ್ದವು. ಬಂದಿದ್ದ ಸಾರ್ವಜನಿಕರಿಗೆ ಯಾರ್ ಯಾರು ಯಾವ ರುದ್ರಾಕ್ಷಿ ಧರಿಸಬೇಕೆಂಬುದನ್ನು ೩-೪ ಮಂದಿ ಪರಿಣಿತರು ಹೇಳುತ್ತಿದ್ದರು. ನಾವು ರುದ್ರಾಕ್ಷಿ ಕೊಳ್ಳಲು ಬಂದಿಲ್ಲ ಕೇವಲ ವಿಚಾರತಿಳಿದುಕೊಳ್ಳಲು ಬಂದಿರುವುದು ಎಂದರಿತ ಕೌಂಟರ್-ನ ಹುಡುಗರು ನಮ್ಮ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅಲ್ಲಿ ದರ್ಶನಕ್ಕೆ ಇದ್ದ ಏಕಮುಖಿ ರುದ್ರಾಕ್ಷಿ ಬಹಳ ಅಪರೂಪವಾದದ್ದಂತೆ, ಅದರ ಬೆಲೆ ಹಲವು ಕೋಟಿ ಆಗುವುದು ಎಂದರು. ಸರಿ ಇನ್ನೇನು ಹೊರಡೋಣ ಅನ್ನುವಷ್ಟರಲ್ಲಿ, ನಾವು ಫೋಟೋ ತೆಗೆಯುತ್ತಿದ್ದನ್ನು ಗಮನಿಸಿದ ವ್ಯಕ್ತಿಯೊಬ್ಬರು ಬಂದು ಮಾತಾಡಿಸಿದರು. ಅವರು ರುದ್ರಶಕ್ತಿ ಸಂಸ್ಥೆಯ ಅಧ್ಯಕ್ಷರಾದ ತನ್ಮಯ್. ಅವರು ನಮ್ಮ ಹಲವು ಪ್ರಶ್ನೆಗಳಿಗೆ ಉತ್ತರಿಸಿದರು. ರುದ್ರಾಕ್ಷಿ ಮಣಿಯನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಎದ್ದು ಆ ನೀರನ್ನು ಕುಡಿದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೃದಯ ರೋಗ, ಸ್ನಾಯು ರೋಗ, ಅಪಸ್ಮಾರ, ಮೂತ್ರಪಿಂಡ, ಸಕ್ಕ್ರರೆಖಾಯಿಲೆ, ಮೂರ್ಚೆ ರೋಗ, ಚ್ರಮರೋಗ, ರಕ್ತದೊತ್ತಡ, ಸಂತಾನ ದೋಷ, ನರದೌರ್ಬಲ್ಯ, ಮಾನಸಿಕ ರೋಗ, ದೃಷ್ಟಿ ದೋಷ ಮುಂತಾದ ಖಾಯಿಲೆಗಳಿಗೆ ಔಷದಿಯಾಗಿ ಆಯುರ್ವೇದದಲ್ಲಿ ರುದ್ರಾಕ್ಷಿಯನ್ನು ಬಳಸುತ್ತಾರೆ ಎಂದು ತಿಳಿಸಿದರು.

ಪೇಟೆಯಲ್ಲಿ ಹಲವರು ನಕಲಿ ರುದ್ರಾಕ್ಷಿಯನ್ನು ಕಮ್ಮಿ ಬೆಲೆಗೆ ಮಾರುತ್ತಿದ್ದಾರೆ. ನಿಜವಾದ ರುದ್ರಾಕ್ಷಿಯನ್ನು ಗುರುತಿಸೋದು ಹೇಗೆ ಎಂಬುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅದ್ಭುತವಾದ ಈ ರುದ್ರಾಕ್ಷಿಯ ಶಕ್ತಿಯ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತಮ್ಮ ಈ ಪ್ರದರ್ಶನದ ಗುರಿ ಎಂದರು ತನ್ಮಯ್. ಅಸಲಿ ರುದ್ರಾಕ್ಷಿಯನ್ನು ಗುರುತಿಸುವ ಬಗ್ಗೆ ದೊಡ್ಡ ದೊಡ್ಡ ಬ್ಯಾನರ್ ಹಾಕಿದ್ದರು. ನಿಜವಾದ ರುದ್ರಾಕ್ಷಿ ಮಣಿಯು ನೀರಿನಲ್ಲಿ ಮುಳುಗುತ್ತದಂತೆ. ಬೆಲೆಬಾಳುವ ರುದ್ರಾಕ್ಷಿಯನ್ನು ಕೊಳ್ಳುವ ಮುನ್ನ ಅದರ X-ray ತೆಗೆಸಿ ಒಳಗಿರುವ ಕಂಪಾರ್ಟ್ಮೆಂಟ್-ಗಳು ಹೊರಗಿನ ಗೆರೆಗಳಿಗೆ ಸಮವಾಗಿದ್ದರೆ ಅದು ಅಸಲಿ ರುದ್ರಾಕ್ಷಿ.

ಇನ್ನೂ ಹಲವು ಮಾಹಿತಿ ಇಲ್ಲಿದೆ ಓದಿ.

ರುದ್ರ+ಅಕ್ಷಿ -ರುದ್ರ ಅಂದರೆ ಶಿವನ ರೌದ್ರ ಅವತಾರ,ಅಕ್ಷಿ ಅಂದರೆ ಕಣ್ಣು. ಇದು ಹಿಮಾಲಯ ಪರ್ವತದ ಸಮೀಪ ಹೆಚ್ಚಾಗಿ ನೇಪಾಳದಲ್ಲಿ ಬೆಳೆಯುವುದು, ದಕ್ಷಿಣದಲ್ಲಿ ರಾಮೇಶ್ವರದಲ್ಲಿ ಕೆಲವು ಮರಗಳಿವೆಯಂತೆ.ರುದ್ರಾಕ್ಷಿಯಲ್ಲಿ ಒಂದು ಮುಖದಿಂದ ಹಿಡಿದು ೨೧ ಮುಖದವರೆಗೆ ಭೇದಗಳಿವೆ. ೧,೧೪,೨೧ ಮುಖದ ರುದ್ರಾಕ್ಷಿ ಅಪರೂಪ. ಅದರಲ್ಲೂ ಒಂದು ಮುಖದ ರುದ್ರಾಕ್ಷಿ ಅಪರೂಪದಲ್ಲಿ ಅಪರೂಪ.

ಶಿವನಿಗೂ ರುದ್ರಾಕ್ಷಿಗೂ ಏನು ಸಂಬಂಧ ಎಂಬುದಕ್ಕೆ ಪುರಾಣಗಳಲ್ಲಿ ಒಂದೆರಡು ಕತೆಗಳಿವೆ-
ದೇವಿ ಭಗವತ್ ಪುರಾಣದ ಪ್ರಕಾರ ’ಮಾಯ’ ಎಂಬ ಅತಿ ಶಕ್ತಿಶಾಲಿಯೂ, ಕ್ರೂರಿಯೂ ಆದ ಒಬ್ಬ ರಾಕ್ಷಸನಿದ್ದನು. ಸಾಧು-ಸಂತರಿಗೂ ದೇವತೆಗಳಿಗೂ ತೊಂದರೆಯುಂಟು ಮಾಡುತ್ತಿದ್ದನು. ಅವನನ್ನು ಯುದ್ಧದಲ್ಲಿ ಸೋಲಿಸಲು ಯಾರಿಂದಲೂ ಸಾದ್ಯವಾಗಲಿಲ್ಲ. ಆತನು ಚಿನ್ನ, ಬೆಳ್ಳಿ ಮತ್ತು ಕಬ್ಬಿಣದಿಂದ ಮೂರು ಊರುಗಳನ್ನು ನಿರ್ಮಿಸಿದನು. ಅವಗಳನ್ನು ಬೇಧಿಸಲು ಅಸಾಧ್ಯವಾಗಿತ್ತು, ಅದನ್ನು ’ತ್ರಿಪುರಾ’ ಅಂತಲೂ ಅದರ ಒಡೆಯನಾದ್ದರಿಂದ ಆ ರಾಕ್ಷಸನಿಗೆ "ತ್ರಿಪುರಾಸುರ" ಅಂತಲೂ ಹೆಸರು ಬಂತು. ತನ್ನ ಇಬ್ಬರು ತಮ್ಮಂದಿರೊಡಗೂಡಿ ಸ್ವರ್ಗಾಧಿಪತಿ ಇಂದ್ರನನ್ನೂ ಇತರೆ ದೇವತೆಗಳನ್ನೂ ಸೋಲಿಸಿ ಅವರನ್ನು ಲೂಟಿ ಮಾಡಿದ. ಕಂಗೆಟ್ಟ ದೇವತೆಗಳು ಬ್ರಹ್ಮ,ವಿಷ್ಣು ಜೊತೆಗೂಡಿ ಶಿವನ ಬಳಿ ಬಂದು ತ್ರಿಪುರಾಸುರನನ್ನೂ ನಾಶಮಾಡಿ ತಮ್ಮನ್ನು ಕಾಪಾಡಬೇಕೆಂದು ಬೇಡಿಕೊಂಡರು. ಶಿವ-ತ್ರಿಪುರಾಸುರನ ಯುದ್ಧಕ್ಕೆ ವಿಶೇಷ ಸಿದ್ಧತೆಗಳು ನಡೆದವು. ಭೂಮಿಯೇ ರಥವಾಯಿತು, ಸೂರ್ಯ-ಚಂದಿರರು ಕಾಲ್ಚಕ್ರಗಳಾದರು. ವಿಷ್ಣು ಬಾಣವಾಗಿ, ಬ್ರಹ್ಮ ಸಾರಥಿಯಾಗಿ ಶಿವನ ಜೊತೆಗೂಡಿದರು. ಈ ವಿಶೇಷ ರಥವನ್ನೇರಿ ಹೊರಟ ಶಿವನು ಒಂದೇ ಬಾಣದಿಂದ ತ್ರಿಪುರವನ್ನೂ ಅದರಲ್ಲಿದ್ದ ತ್ರಿಪುರಾಸುರನನ್ನೂ ಕೊನೆಗೊಳಿಸಿದನು. ದೇವತೆಗಳು ಹರ್ಷೋದ್ಗಾರದಿಂದ ಶಿವನ ಹೊಗಳುತ್ತಾ, ಅವನಿಗೆ ಧನ್ಯವಾದಗಳನ್ನು ಅರ್ಪಿಸಿದರು. ತದನಂತರ ಶಿವನು ಹಿಮಾಲಯಕ್ಕೆ ಬಂದು ಕಣ್ಣ್ಮುಚ್ಚಿ ಧ್ಯಾನಮಾಡುತ್ತಾ ಕುಳಿತ. ಧ್ಯಾನಮುಗಿಸಿ ಕಣ್ಣು ತೆರೆದಾಗ ಶಿವನ ಕಣ್ಣಿನಿಂದ ಜಾರಿದ ನೀರಿನ ಹನಿಗಳು ಭೂಮಿಯಮೇಲೆ ಬಿದ್ದವು. ಅವೇ ಮುಂದೆ ರುದ್ರಾಕ್ಷಿ ಮರಗಳಾದವು.

ಶಿವ ಪುರಾಣದ ಪ್ರಕಾರ ಶಿವ ೧೦೦೦ ವರ್ಷ ತಪಗೈದ ಬಳಿಕ ಕಣ್ಣು ತೆರೆದಾಗ ಕಣ್ಣೀರ ಹನಿ ನೆಲಕ್ಕೆ ಬಿತ್ತು.

ಬ್ರಹಜ್ಜಬಾಲ ಉಪನಿಷದ್ ಪ್ರಕಾರ ರುದ್ರ ವಿಶ್ವನಾಶಕ್ಕೆ ಮೂರನೇ ಕಣ್ಣನ್ನು ತೆರೆದ. ನಂತರ ಮುಚ್ಚಿದಾಗ ಉದುರಿದ ಕಣ್ಣೀರಿನ ಹನಿಯೇ ರುದ್ರಾಕ್ಷಿ.

ಒಂದೊಂದು ರುದ್ರಾಕ್ಷಿಗೂ ತನ್ನದೇ ಆದ ವಿಶೇಷ ಶಕ್ತಿಯಿದೆಯಂತೆ. ಅದನ್ನು ಧರಿಸಿದರೆ ಹಲವು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಎಂದರು. ಪ್ರತಿಯೊಂದು ರುದ್ರಾಕ್ಷಿಗೂ ಪ್ರತ್ಯೇಕ ಮಂತ್ರ ಇದೆ ಎಂದು ವಿವರಿಸಿವ pamphlet ಕೊಟ್ಟರು.

Thursday, February 12, 2009

ಸೀರೆಯುಟ್ಟ ಚೋರಿ!!!

ನನ್ನ ಸೋದರತ್ತೆಯ ಮಗನ ಮದ್ವೆಗೆ ಪುಟ್ಟಿಗೂ ಒಂದ್ ಪುಟ್ಟ್ ಸೀರೆ ಉಡಿಸಿ ಮೆರೆಸಿದ್ವಿ. ಒಂದ್ ಚೂರು ಗಲಾಟೆ ಮಾಡದೆ ಸಿಂಗಾರ ಮಾಡಿಸ್ಕೊಂಡು ಅವಳೂ ಖುಶಿ ಪಟ್ಲು. ಆಮೇಲೆ ಮದುವೆ ಮನೆ ತುಂಬಾ ಓಡಾಡಿ ಕೊಂಡಿದ್ದು ಎಲ್ಲರ ಮನ ಗೆದ್ಲು:)
ಪುಟ್ಟ್ ದೊಂದು ಸೀರೆ ಉಟ್ಟ್ಕೊಂಡು
ಹೊಟ್ಟೆನೆಲ್ಲ ತೋರ್ಸ್ ಕೊಂಡು
ಪುಟ್ಟ್ ಪುಟ್ಟ್ ಹೆಜ್ಜೆಯಿಟ್ಟು ಬಂದ್ಲು ಪೋರಿ
ಎಲ್ಲರ್ ಮನ್ಸನ್ನು ಗೆದ್ದು ಓಡಿದ್ಲು ಚೋರಿ !!