Monday, March 15, 2010

ಯುಗಾದಿ ಹಬ್ಬ !!!





ವರುಷದ ಮೊದಲು
ಬಂದಿತು ಹಬ್ಬ
ಯುಗಾದಿ ಅದರ ಹೆಸರಣ್ಣ


ಬೇವು ಬೆಲ್ಲವ ತಿಂದು
ಕಷ್ಟ ಸುಖ ಸಮನಾಗಿ
ನೋಡೋಣ ಬಾರಣ್ಣ

ಎಣ್ಣೆಯ ಹಚ್ಚಿ
ಸ್ನಾನ ಮಾಡಿ
ಹೊಸ ಬಟ್ಟೆಯನು ಧರಿಸೋಣ

ಮಾವಿನ ಬೇವಿನ
ತೋರಣ ಮಾಡಿ
ಬಾಗಿಲಿಗೆ ಕಟ್ಟೋಣ

ಪೂಜೆಯ ಮಾಡಿ
ಭಟ್ಟರು ಓದುವ
ಪಂಚಾಂಗವ ಕೇಳೋಣ


ಅಮ್ಮನು ಮಾಡುವ
ಬಿಸಿಬಿಸಿ ಹೋಳಿಗೆ
ಸವಿಯನು ಸವಿಯೋಣ


ಸಾಲಲಿ ಕೂತು
ಬಾಳೆಯ ಎಲೆಯಲ್ಲಿ
ಹಬ್ಬದೂಟವ ಮಾಡೋಣ

ತಿಂದು ತೇಗಿ
ಆಟವ ಆಡಿ
ಎಲ್ಲರಿಗೂ ಶುಭವ ಕೋರೋಣ
--ರೂpaश्री

ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!! ಬೆಂಗ್ಳೂರಿಂದ ಅಜ್ಜಿ-ತಾತಾ ಬಂದಿರೋದ್ರಿಂದ ಪುಟ್ಟಿ ಈಗ ಬಹಳ ಬಿಜಿ. ಜೊತೆಗೆ ನನ್ನ ಕೆಲಸ ಹೆಚ್ಚಾಗಿ/ ಸೋಮಾರಿತನ ಜಾಸ್ತಿಯಾಗಿ ಪುಟ್ಟಿ ಬ್ಲಾಗ್ ಇದುವರೆಗೆ ಒಂದು ಸಣ್ಣ ಬ್ರೇಕ್ ತಗೊಂಡಿತ್ತು. ಪ್ರೀತಿಯಿಂದ ವಿಚಾರಿಸಿದ ಎಲ್ಲರಿಗೂ ವಂದನೆಗಳು:)
ಮತ್ತೆ ಸಿಗೋಣ!

Sunday, January 17, 2010

ಸಂಕ್ರಾಂತಿ ಹಬ್ಬ 2010!

ಎಳ್ಳು ಬೀರಲು ಹೊರಟಿರುವ ಪುಟ್ಟಿ :)
ಈ ವರ್ಷ ಹಬ್ಬದ ದಿನ ಹೇಮಂತ್ ಕೆಲಸದ ಮೇಲೆ ದೂರದೂರು ಸ್ಯಾಂಡಿಯಾಗೋದಲ್ಲಿದ್ದರಿಂದ, ಮನೆಯಲ್ಲಿ ನಾವಿಬ್ಬ್ರು ಅಮ್ಮ ಮಗಳದ್ದೇ ಹಬ್ಬದ ಸಂಭ್ರಮ! ಕ್ಯಾಮೆರಾ ಹೇಮಂತ್ ಜೊತೆ ಹೋಗಿದ್ದರಿಂದ ಈ ಬಾರಿ ಪುಟ್ಟಿಯ ಆರತಿ ಫೋಟೊ ಇರುವುದಿಲ್ಲ ಅಂದುಕೊಂಡಿದ್ದೆ. ಆದ್ರೆ ಗೆಳತಿ ಅರ್ಚನಾಳಿಂದಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹಬ್ಬದ ಫೋಟೋಗಳಿವೆ:) ತನ್ನ ಮಗ 'ಶಿಶಿರ್'ನ ಮೊದಲ ಸಂಕ್ರಾಂತಿಗೆ ಆರತಿ ಮಾಡಲು ಮನೆಗೆ ಕರೆದಳು. ಜೊತೆ ನಮ್ಮ ಪುತ್ತಿಗೂ ಅಲ್ಲಿಯೇ ಆರತಿ ಮಾಡೋಣವೆಂದಳು. ಮನೆಯಲ್ಲಿ ಒಬ್ಬಳೇ ಮಾಡುವುದಕ್ಕಿಂತ ಅಲ್ಲಿ ಅವರ ಜೊತೆಗೂಡಿ ಹಬ್ಬ ಮಾಡೋಣವೆನಿಸಿ, ಸಂಜೆ ಅವರ ಮನೆಗೆ ಹೋಗಿದ್ವಿ.

ಸಂಕ್ರಾಂತಿಯಲ್ಲಿ ಸಂಜೆ ಆರತಿ ಮಾಡುವಾಗ ಮಕ್ಕಳಿಗೆ ಕುಸುರಿ ಕಾಳಿನ ಹಾರ ಹಾಕಿ ಅಲಂಕರಿಸುವುದು ಕೆಲವರಲ್ಲಿ ವಾಡಿಕೆ. ಅದು ನಮಗಿಲ್ಲಿ ಲಭ್ಯವಿಲ್ಲದಿರುವುದರಿಂದ ಅದರ ಬದಲಿಗೆ ಸಿಹಿ ಮಾರ್ಶ್-ಮೆಲ್ಲೊಸ್ ನ ಸುಂದರ ಹಾರ ಮಾಡಿದ್ಲು ಅರ್ಚನಾ. ಆಂಟಿ ಮಾಡಿಕೊಟ್ಟ ಹೊಸ ಸರ ಪುಟ್ಟಿಗೆ ಭಾರಿ ಇಷ್ಟವಾಯಿತು:)

ಆರತಿಗೆ ಸಿದ್ದವಾಗಿರುವ ಸಾಹಿತ್ಯ - ಶಿಶಿರ್!!
ಇದೇ ರೀತಿ ಸಕ್ಕರೆ ಕಾಳಿನ ಹಾರ ಹಾಕುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲೂ ಇದೆಯಂತೆ. ಅಲ್ಲದೇ ಮರಾಠಿಗರು ನಮ್ಮ ಯುಗಾದಿ ದಿನದಂದು ಅವರು ಆಚರಿಸುವ ಹೊಸ ವರ್ಷ ’ಗುಡಿಪಡ್ವಾ’ ದಂದು ಕೂಡ ಪುಟ್ಟ ಮಕ್ಕಳಿಗೆ ಸಕ್ಕ್ರೆ ಹಾರ ತೊಡಿಸಿ ಅಲಂಕಾರ ಮಾಡುತ್ತಾರೆಂದು ಅಮ್ಮುವಿನಮ್ಮ ಹೇಳಿದ್ದಾರೆ.

ನಮ್ಮಲ್ಲಿ ಎಳ್ಳು ಬೆಲ್ಲದ ಮಿಶ್ರಣ, ಕಬ್ಬಿನ ಚೂರು , ಕಾಸು, ಎಲಚಿ ಹಣ್ಣು ಇವುಗಳನ್ನ ಮಕ್ಕಳ ತಲೆ ಮೇಲೆ ಎರೆಯುವುದು ರೂಢಿ. ಇಲ್ಲಿ ಎಲಚಿ ಹಣ್ಣನ್ನು ಉಪಯೋಗಿಸುವುದರ ಉದ್ದೇಶ ಅದು ನೋಡಲು ಸೂರ್ಯನಂತೆ ಕೆಂಪಗೆ ಮತ್ತು ದುಂಡಗೆ ಇರುತ್ತದೆ ಎಂಬುದು. ಅಂದ್ರೆ ಈ ಹಣ್ಣು ತಲೆ ಮೇಲೆ ಬೀಳುವುದರಿಂದ ಸೂರ್ಯ ಆಶೀರ್ವಾದ ಪಡೆದಂತೆ ಅರ್ಥ! ಈಗ ನನಗನಿಸಿದ್ದು, ಎಳಚಿಹಣ್ಣಿನ ಬದಲಿಗೆ ಚೆರ್ರಿ ಹಣ್ಣನ್ನೋ ಅಥವಾ ಇನ್ಯಾವುದಾರು ಕೆಂಪನೆ ಬೆರ್ರಿಯನ್ನೋ ಉಪಯೋಗಿಸಬಹುದೇನೋ ಅಂತ!!

ನೆನಸಿದ ಕಡ್ಲೆಕಾಳು, ಗೋಡಂಬಿ, ಬಾದಾಮಿ, ಕಾಸು ಇವುಗಳನ್ನು ಎರೆಯುತ್ತಿರುವುದು..



ನಮ್ಮಂತೆಯೇ ಕೆಂಪುನೀರಿನ ಆರತಿ ಅಲ್ಲದೇ, ಗೋದಿಹಿಟ್ಟಿನ ದೀಪಗಳನ್ನು ಮಾಡಿ ಅದರ ರಕ್ಷೆಯಿಟ್ಟದ್ದು ನನಗೆ ಹೊಸ ವಿಚಾರ!

ಗೋದಿಹಿಟ್ಟಿನ ದೀಪಗಳ ರಕ್ಷೆ ಮಕ್ಕಳಿಗೆ...

ಇದಲ್ಲದೇ ನಮ್ಮ ತಾಯಿಯವರು ಚಿಕ್ಕಂದಿನಲ್ಲಿ ಕಳಸದಲ್ಲಿದ್ದಾಗ ಅಲ್ಲಿ ಹಬ್ಬದ ದಿನ ಎಳ್ಳು ಬೀರುವುದು ಮದುವೆಯಾದ ಹೆಂಗಸರು ಮಾತ್ರವಂತೆ. ಆದ್ರೆ ಮಾರನೆಯ ದಿನ ಚಿಕ್ಕ ಚಿಕ್ಕ ಮಕ್ಕಳು ಗೊಂಬೆ ಆಕಾರದ ಡಬ್ಬಿಗಳಲ್ಲಿ ಎಳ್ಳು ತುಂಬಿ ಬೀರುತ್ತಿದ್ದರಂತೆ, ಅದಕ್ಕೆ 'ಗೊಂಬೆ ಎಳ್ಳು' ಅಂತ ಕೆರೆಯುವರಂತೆ:)
ಹಬ್ಬಕ್ಕೆ ವಿಶ್ ಮಾಡಲು ಗೆಳತಿ ಸ್ಮಿತಾಗೆ ಫೋನಾಯಿಸಿದಾಗ ತಿಳಿದ ಮತ್ತೊಂದು ವಿಚಾರ. ಮನೆಯಲ್ಲಿ ನವಜಾತ ಶಿಶು ಇದ್ದರೇ ಆ ವರ್ಷ ಅವರಿಗೆ 'ಬೊಂಬೆ ಎಳ್ಳು' ಹಬ್ಬವಂತೆ. ತನ್ನ ಹಸುಗೂಸು 'ಸಾಗರಿಕಾ' ಜೊತೆ ಈ ವರ್ಷ ಅವಳ ಹಬ್ಬ!!

ಮದುವೆಯ ನಂತರ ಹೈದರಾಬಾದ್ ನಲ್ಲಿ ನೆಲೆಸಿರುವ ಈಗ ಬಹುತೇಕ ಹಬ್ಬಗಳನ್ನು ಅಲ್ಲಿನವರಂತೆಯೇ ಮಾಡುವ ನನ್ನ ನಾದಿನಿ ಹೇಳಿದ್ದು.... ಹಬ್ಬದ ಮೊದಲ ದಿನ ಸಂಜೆ ಅವರು ಸಣ್ಣ ಮಕ್ಕಳಿಗೆ ’ಭೋಗಿ ಪಳ್ಳು’ ಎರೆಯುವರೆಂದು! ಈ ಭೋಗಿ ಪಳ್ಳು ಅಂದ್ರೆ ನೆನಸಿದ ಕಡ್ಲೆಕಾಳು, ಕಬ್ಬಿನ ಚೂರು, ರೇಗಿ ಪಂಡ್ಲು(ಎಲ್ಚಿ ಹಣ್ಣು) ಮತ್ತು ತಾಮ್ರದ ನಾಣ್ಯಗಳ ಮಶ್ರಣ. (ನನ್ನ ಗೆಳತಿ ಅರ್ಚನಾ ಮೂಲತಃ ತೆಲುಗಿನವರೆ ಹಾಗಾಗಿ ಅವರು ಕಡಲೆಕಾಳು ಉಪಯೋಗಿಸಿದ್ದು). ಅಲ್ಲದೇ ಕೆಲವರ ಮನೆಯಲ್ಲಿ ’ಬೊಮ್ಮಲ ಕೊಲ್ಲುವು’ ಅಂದ್ರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತರಂತೆ.

ಆಂಧ್ರ ಪ್ರದೇಶದ ಇನ್ನು ಕೆಲವು ಕಡೆ ಅಕ್ಕಿ, ಮತಿತರೆ ಧಾನ್ಯದ ಮಿಶ್ರಣ ಜೊತೆಗೆ ಕಾಸು, ಹೂವಿನ ದಳ ಇವುಗಳನ್ನು ಮಕ್ಕಳ ಮೇಲೆ ಎರೆದು ಹರಸುತ್ತಾರೆ ಎಂಬ ವಿಚಾರ ಅಂತರ್ಜಾಲದಲ್ಲಿ ಸುತ್ತಾಡುವಾಗ ತಿಳಿಯಿತು.

ನನ್ನ ಗೆಳತಿ ಆರತಿ ಅವರು ಮಕ್ಕಳಿಗೆ ಎರೆಯಲು ಸುಂದರವಾಗಿ ಸಿದ್ಧಪಡಿಸಿರುವ ತಟ್ಟೆ ! ಇದರಲ್ಲಿಯೇ ಕಡಲೆಪುರಿ, ಕಬ್ಬಿಣ ಚೂರು, ಕಾಸು, ಸಿಹಿ ಮಿಠಾಯಿಗಳಿವೆ...
ಆಚರಣೆಯಲ್ಲಿ ಏನೇ ವೈವಿದ್ಯವಿದ್ದರೂ ಎಲ್ಲರ ಮೂಲ ಉದ್ದೇಶ ಒಂದೆ ಅಲ್ವಾ ನಮ್ಮ ಮಕ್ಕಳ ಒಳಿತಿಗಾಗಿ ಪ್ರಾರ್ಥಿಸೋದು :))

Wednesday, January 13, 2010

ಸಂಕ್ರಾಂತಿಯ ಸಂತಸ!!!

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !! ಕಳೆದ ವರ್ಷ ಬೆಂಗಳೂರಿನಲ್ಲಿ ಅಜ್ಜಿಯ ಮನೆಯಲ್ಲಿ ಎಲ್ಲರ ಜೊತೆಗೂಡಿ ಹಬ್ಬ ಮಾಡಿದ್ಲು ಪುಟ್ಟಿ. ಅವಳು ಮತ್ತು ಅವಳ ಸೋದರ ಮಾವನ ಮಗಳು 'ಖುಶಿ' ಗೆ ಸಂಜೆ ಎಳ್ಳು ಎರೆದು ಆರತಿ ಮಾಡಿದಾಗಿನ ಫೋಟೊಗಳಿವು:)


ಮಾವನ
ಮಗಳೆ ಖುಶಿ ಬಾರೆ
ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಕುಪ್ಪಸ ತೊಟ್ಟು ಬಾ
ರೇಷಿಮೆ ಲಂಗ ತೊಟ್ಟು ನಾ ಬರುವೆ
ಅಜ್ಜಿ ಕೊಟ್ಟ ಎಳ್ಳು ಬೆಲ್ಲವ
ಎಲ್ಲರ ಮನೆಗಳಿಗೆ ಬೀರೋಣ ಬಾ!!
(ತವಿಶ್ರೀ ಅವರು ಬರೆದ ಚೆಂದದ ಪದ್ಯವನ್ನು ಸ್ವಲ್ಪ ಮಾರ್ಪಡಿಸಿರುವೆ )


ಮಾಲಾ ರಾವ್ ಅವರು ನಂದಗೋಕುಲದಲ್ಲಿ ಪುಟ್ಟ ಅಮ್ಮುವಿಗೆ ಬರೆದ ಎಳ್ಳು ಎರೆಯುವ ಹಾಡು.


Thursday, December 31, 2009

ಬರ್ತ್ ಡೇ ಪಾರ್ಟಿ ಫೋಟೋಸ್...

ಪುಟ್ಟಿದು ಈ ಸಾರ್ತಿ ಫಿಶ್ ಥೀಮ್ ಪಾರ್ಟಿ ಅಂತ ಅವಳ ಆಮಂತ್ರಣ ನೋಡಿದಾಗ್ಲೇ ನಿಮಗೆಲ್ಲಾ ಗೊತ್ತಾಗಿದೆ. ಫಿಶ್ ಅಂತ ತಕ್ಷಣ ಹೆಚ್ಚಾಗಿ ಎಲ್ಲೆಡೆ ’ಫೈಂಡಿಂಗ್ ನೀಮೋ’ ಚಲನಚಿತ್ರ ಆಧಾರಿತ ಪಾರ್ಟಿ ಸಾಮಾನುಗಳೇ ಸಿಗುತ್ತವೆ, ಆದ್ರೆ ನಂಗೆ ಬೇಕಿದ್ದು ಅದಲ್ಲ.. ಹಾಗಾಗಿ ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಾಡಬೇಕಾಯ್ತು! ಫಿಶ್ ಬಲೂನ್ಸ್, ತಟ್ಟೆ, ಪಾರ್ಟಿ ಟೋಪಿ, ಟೇಬಲ್ ಕವರ್, ಸೆಂಟರ್ ಪೀಸ್, ಕ್ರೇಪ್ ರಿಬ್ಬನ್ ಎಲ್ಲವೂ ಸಿಕ್ಕ್ತು...
The party Deco....
ಫಿಶ್ ಫೋಟೊ ಫ್ರೇಮಿನಲ್ಲಿ ಪುಟ್ಟಿ ಫೋಟೋಗಳು..
ಡೆಕೊರೇಷನ್ ಹೇಗೋ ಹುಡುಕಾಡಿ ತರಿಸಿದ್ದಾತು, ಆದ್ರೆ ಫಿಶ್ ಶೇಪಿನ್ ಕೇಕ್ ಯಾವ ಅಂಗಡಿಯವರೂ ಮಾಡಿಕೊಡಲು ತಯಾರಿರಲಿಲ್ಲ. ಅಲ್ಲಿ ಇಲ್ಲಿ ವಿಚಾರಿಸಿ, ಕೊನೆಗೆ ನಮ್ಮೂರಿನ ಆನ್ಲೈನ್ ಫೋರಂ ನಲ್ಲಿ ಬಹಳಷ್ಟು ಜನ ಹೇಳಿದ ಹೆಸರು ’ಮಿಸ್. ಕ್ಯಾಥಿ ಕೋವನ್’. ಬೇರೆ ದಾರಿಯಿಲ್ಲದೆ ಅವರಿಗೇ ಆರ್ಡರ್ ಕೊಟ್ಟೆ. ಆದ್ರೆ ಮನಸಿನಲ್ಲಿ ಆತಂಕ ತುಂಬಿತ್ತು, ಯಾವತ್ತೂ ಅವರ ಕೇಕ್ ರುಚಿ ನೋಡಿಲ್ಲ, ಹೇಗಿರುತ್ತೋ ಏನೋ ಅಂತ. ಅವರು ಮಾಡಿದ ಕೇಕ್ ನೋಡಿ ಬಹಳ ಖುಶಿ ಆಯ್ತು, ತಿನ್ನಲೂ ಅಷ್ಟೇ ರುಚಿಯಾಗಿತ್ತು:))
ಫಿಶ್ ಕೇಕ್ ಮತ್ತು ಫಿಶ್ ಕ್ಯಾಂಡಲ್ಸ್.. 

ವಾರದ ದಿನವಾದ್ದರಿಂದ ಸಿಂಪಲ್ಲಾಗಿ ಪಿಜ್ಜಾ ಪಾರ್ಟಿ ಮಾಡೋಣ ಅಂತ ತೀರ್ಮಾನಿಸಿ, ಜೊತೆಗೆ ನಾನೇ ಮಾಡಿದ ಫಿಶ್ ಶೇಪಿನ ಸಿಹಿ ಮತ್ತು ಖಾರ ಬಿಸ್ಕತ್ತುಗಳು, ನೂಡಲ್ಸ್(ಮೇಲೆ ಕೆಚಪ್ ನಲ್ಲಿ ಮೀನಿನಾಕಾರ ಬರೆದೆ), ಸ್ಪ್ರಿಂಗ್ ರೋಲ್, ಚಿಪ್ಸ್ ಇತ್ಯಾದಿ..
ಬರ್ತ್ ಡೇ ಗರ್ಲ್ ಪುಟ್ಟಿ ..
ಕೇಕ್ ಕಟ್ ಮಾಡುತ್ತಾ ..ಎಲ್ಲಾ ಮಕ್ಕಳ ಜೊತೆಯಲ್ಲಿ ..
ಅಂಕಲ್ ಗಳ ಜೊತೆಯಲ್ಲಿ  ..


ತನ್ನ ರೂಮಿನಲ್ಲಿ ಫ್ರೆಂಡ್ಸ್ ಜೊತೆ ..
ತನ್ನ ಗಿಫ್ಟ್ ಗಳೊಂದಿಗೆ ಎಲ್ಲರಿಗೂ ಮತ್ತೊಮ್ಮೆ ಥ್ಯಾಂಕ್ಸ್ ಹೇಳುತ್ತಾ, ಜೊತೆಗೆ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!!

ಪುಟ್ಟಿ Thank you ಅಂತಾಳೆ :))

ತನ್ನ ಹುಟ್ಟುಹಬ್ಬದ ದಿನ ಫೋನ್ ಮಾಡಿ ವಿಶ್ ಮಾಡಿದ, ಬ್ಲಾಗಿನಲ್ಲಿ ಮತ್ತು ಈ ಮೇಲ್ ನಲ್ಲಿ ಹರಸಿದ, ಮನೆಗೆ ಬಂದು ಹಾರೈಸಿದ ಎಲ್ಲರಿಗೂ ತಾಂತು (ಥ್ಯಾಂಕ್ಸ್) ಹೀಗೆ ಹೇಳಿದ್ದಾಳೆ:))


This isn't just a Fish,
as anyone can see.
I made it with my hand,
which is part of me.
It comes with lots of love,
especially to say,
Thanks for joining me
On my 2nd Birthday !!
-Sahitya

ಈ ತರಹ ತನ್ನ ಪುಟ್ಟ ಕೈಗಳಿಗೆ ಬಣ್ಣ ಹಚ್ಚಿಕೊಂಡು ಬಂದ ಗೆಳೆಯರಿಗೆಲ್ಲಾ ಮಾಡಿಕೊಡುವ ಆಸೆ ಪುಟ್ಟಿಗಿತ್ತು, ಆದ್ರೆ ನನ್ನ ಸೋಮಾರಿತನ !! ಅವಳು ಮಾಡಿದ ಈ ಫಿಶ್ ಅನ್ನು ಸ್ಕ್ಯಾನ್ ಮಾಡಿ, ಫೋಟೋ ಪ್ರಿಂಟ್ ಹಾಕಿಸಿ ಎಲ್ಲಾ ಮಕ್ಕಳಿಗೆ ಥ್ಯಾಂಕ್ ಯೂ ಕಾರ್ಡ್ ಮಾಡಿ ಕೊಟ್ಟು ಬಿಟ್ಟೆ :)
ಬಂದ ಮಕ್ಕಳಿಗೆ ಅವರದೇ ಹೆಸರಿನ ಬಿಸ್ಕತ್ತುಗಳು.. 

ಬಣ್ಣದ ಫಿಶ್ ಕವರಿನಲ್ಲಿ..

ಅಲ್ಲದೆ ವಯಸ್ಸಿಗನುಗುಣವಾಗಿ ಫಿಶ್ ಬುಕ್ಸ್ ...

ಕೆಲವು ಫಿಶ್ ಸ್ಟ್ಯಾಂಪ್ ಗಳು...

ಮತ್ತು ಸಿಡಿಗಳು, ಕ್ರಯಾನ್ಸ್, ಇತ್ಯಾದಿ...

Tuesday, December 29, 2009

ಹ್ಯಾಪಿ ಬರ್ತ್ ಡೇ ಪುಟ್ಟಿ!!

ಇಷ್ಟು ಬೇಗ ಪುಟ್ಟಿಗೆ ಎರಡು ವರ್ಷ ಆಗಿಬಿಡ್ತಾ ಅಂತ ಅನ್ನಿಸ್ತಾಯಿದೆ. ಒಮ್ಮೆ ಹಿಂತಿರುಗಿ ನೋಡಿದರೆ ಈ ಕಾಲ ಸರಿಯಾದ ಗತಿಯಲ್ಲೇ ಸಾಗುತ್ತಿದ್ದರೂ ನನಗೇಕೋ ಅದು ಓಡುತ್ತಿದೆ ಅನಿಸುತ್ತೆ. ನಿನಗ್ಯಾಕೆ ಪುಟ್ಟಿ ದೊಡ್ದವಳಾಗೊಕೆ ಇಷ್ಟು ಅವಸರ, ಸ್ವಲ್ಪ ನಿಧಾನಿಸು ಅನ್ನೋಣ ಅನಿಸುತ್ತೆ.
ಡಿಸಿಂಬರ್ ೨೦೦೭ರಿಂದ(ಅದಕ್ಕೂ ೯ ತಿಂಗಳ ಮುಂಚಿನಿಂದ) ಇಲ್ಲಿಯವರೆಗಿನ ನನ್ನ, ಪುಟ್ಟಿಯ ಒಡನಾಟ ನನ್ನಲ್ಲಿ ಪ್ರತಿದಿನ ಹೊಸ ಅಚ್ಚರಿ, ಉಲ್ಲಾಸಗಳನ್ನ ತುಂಬಿ, ನಾಳೆ ಬರಬಹುದಾದ ಹೊಸ ವಿಸ್ಮಯಗಳಿಗಾಗಿ ಕಾಯೋ ಹಾಗೆ ಮಾಡಿದೆ. ಅಮ್ಮನಾಗಿದ್ದಕ್ಕೆ ಬಂದಿರೋ ಎಲ್ಲಾ ಹೊಸ ಜವಾಬ್ದಾರಿಗಳು ನನ್ನಲ್ಲಿ ಸಹನೆ, ಸ್ಪೂರ್ತಿ ಹೆಚ್ಚೋ ಹಾಗೇ ಮಾಡ್ತಿರೋದಕ್ಕೆ ಪುಟ್ಟಿಗೆ ಥ್ಯಾಂಕ್ಸ್ ಹೇಳಿಕೊಳ್ಳುತ್ತಾ... 

Sunday, December 27, 2009

ನನ್ನ ಎರಡನೇ ಹುಟ್ಟು ಹಬ್ಬಕ್ಕೆ ಬನ್ನಿ ಅಂತಾಳೆ


ಪುಟ್ಟಿ ತನ್ನ ಎರಡನೆ ಹುಟ್ಟುಹಬ್ಬಕ್ಕೆ ಸ್ನೇಹಿತರನ್ನ ಆಹ್ವಾನಿಸಿದ್ದು ಹೀಗೆ..

ತನ್ನೆಲ್ಲಾ ಬ್ಲಾಗ್ ಸ್ನೇಹಿತರಿಗೂ, ಹಿರಿಯರಿಗೂ, ಹಿತೈಷಿಗಳಿಗೂ ಬನ್ನಿ ಅಂತ ಹೇಳ್ತಾಳೆ...

ಮರಿಬೇಡಿ, ಬರ್ತೀರಾ ಅಲ್ವ ?