ಮರುಳ ಕಾಗೆ
ಕಾಗೆಯೊಂದು ಹಾರಿಬಂದು
ಮರದಮೇಲೆ ಕುಳಿತುಕೊಂಡು
ಬಾಯೊಳಿದ್ದ ಮಾಂಸವನ್ನು ತಿನ್ನತೊಡಗಿತು ।।
ಠಕ್ಕನರಿಯು ಇದನು ಕಂಡು
ಮಾಂಸವನ್ನು ಕಸಿಯಲೆಂದು
ಮರದಕೆಳಗೆ ಓಡಿಬಂದು ನಿಂತುಕೊಂಡಿತು ।।
ಕಾಕರಾಜ ನೀನು ನಮ್ಮ
ವನಕೆ ಬಹಳ ದಿನಕೆ ಬಂದೆ
ನಿನ್ನ ನೋಡಿ ನನ್ನ ಮನಕೆ ಹರುಷವಾಯಿತು ।।
ನಿನ್ನ ಗರಿಗಳೆಷ್ಟು ಚೆಂದ
ನಿನ್ನ ಬಣ್ಣವೆಷ್ಟು ಅಂದ
ನಿನ್ನ ರಾಗವನ್ನು ಕೇಳಿ ಜನರು ನಲಿವರು ।।
ಕಾಕರಾಜ ನೀನು ಈಗ
ಹಾಡನೊಂದು ಹಾಡು ಬೇಗ
ವನದೊಳಿರುವ ಪಶುಗಳೆಲ್ಲ ಕೇಳಿ ಕುಣಿಯಲಿ ।।
ಮರುಳ ಕಾಗೆ ನರಿಯ ನುಡಿಗೆ
ಮರಳುಗೊಂಡು ಹರುಷದಿಂದ
ಕಾವು ಕಾವು ಎಂದು ದೊಡ್ಡದನಿಯ ತೆಗೆಯಿತು ।।
ದನಿಯ ತೆಗೆಯಲೊಡನೆ ಅದರ
ಬಾಯೊಳಿದ್ದ ಮಾಂಸವೆಲ್ಲ
ನರಿಯ ಬಾಯಿಯೊಳಗೆ ಬಂದು ಬಿದ್ದುಬಿಟ್ಟಿತು ।।
ಮಾಂಸವನ್ನು ನುಂಗಿ ನರಿಯು
ಹರುಷದಿಂದ ಕುಣಿದು ಕುಣಿದು
ಕಾಗೆಯನ್ನು ನೋಡಿ ನಗುತ ನಿಂತಿತು ।।
ಮಾಂಸವನ್ನು ಕಳೆದುಕೊಂಡು
ಅದಕೆ ಬಹಳ ಬುದ್ಧಿ ಬಂದು
ಠಕ್ಕರನ್ನು ನಂಬಬೇಡಿ ಎಂದು ಸಾರಿತು ।।