Showing posts with label ಮಕ್ಕಳ ಪದ್ಯ. Show all posts
Showing posts with label ಮಕ್ಕಳ ಪದ್ಯ. Show all posts

Wednesday, January 02, 2013

ಮತ್ತೆ ಬಂತು ಸಂಕ್ರಾಂತಿ...

ಸಂಕ್ರಾಂತಿ Sankranti Pongal
ಮತ್ತೆ ಬಂತು ಸಂಕ್ರಾಂತಿ
ಎಳ್ಳು ಬೆಲ್ಲದ ಜೊತೆಯಲ್ಲಿ
ದುಡಿಮೆಯ ಮುಗಿಸಿದ
ಸಂಭ್ರಮ ರೈತನ ಮುಖದಲ್ಲಿ

ಗುಡ್ಡೆಯ ಸಾಲು ಹೊಲದಿ
ಧಾನ್ಯ ಧವಸ ಕಾಳು
ಉದ್ದನೆ ಕಬ್ಬಿನ ಜಲ್ಲೆ
ಆಯ್ತು ಸಮ ಸಮ ಪಾಲು

ಜೋಡಿ ಎತ್ತಿಗೆ ಸಿಂಗಾರ
ಚೆಂದದ ಚಕ್ಕಡಿ ಜೊತೆಗೆ
ಹಳ್ಳಿಯ ವಾಹನ ಅದುವೆ
ಎಲ್ಲ ರೈತರ ಮನೆಗೆ

ಚಿಣ್ಣರಿಗೆಲ್ಲಾ ಸಂಜೆಗೆ ಆರತಿ
ಅಜ್ಜಿಯ ಹರಕೆಯ ಹಾಡು
ಸಂಕ್ರಾಂತಿ ಅಂದರೆ
ಸಂತಸ, ಸಂಭ್ರಮ ಗೂಡು

--ಎಸ್. ಆರ್. ಸತ್ಯ ಕುಮಾರ್

Thursday, August 09, 2012

ಪುಟ್ಟ ಮುದ್ದು ಕೃಷ್ಣ

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಬಂದನು ಮುದ್ದು ಕೃಷ್ಣ
ಬೆಣ್ಣೆ ಮುದ್ದೆ ಕದ್ದು
ತಿನ್ನೋ ಕಳ್ಳ ಕೃಷ್ಣ ! 

ನವಿಲ ಗರಿಯ ಸೊಗಸಿಗೆ
ಮನಸೋತ ಕೃಷ್ಣ
ತೆಗೆದು ತಲೆಯೊಳಿರಿಸಿ
ಮೆರೆವ ಪುಟಾಣಿ ಕೃಷ್ಣ

ಬಾರೋ ಬಾರೋ ನನ್ನ ಬಳಿ
ಬೇಗನೆ ಕೃಷ್ಣ
ಹಾಲು ಮೊಸರು ಬೆಣ್ಣೆ ಕೊಡುವೆ
ತಿನ್ನೋ ಕೃಷ್ಣ

***
ಕವಿ :ಸುಬ್ರಹ್ಮಣ್ಯ ಭಟ್

Tuesday, July 24, 2012

ಗುಬ್ಬಿ ಮರಿ ಎಲ್ಲಮ್ಮ?



ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?

ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ

ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ

Friday, May 11, 2012

ಗಡಿಯಾರದ ಸಡಗರ

ಗಡಿಯಾರದ ಸಡಗರ gadiyarada sadagara

ಕೋಳಿ ಕೂಗಿತೇಳು ಕಂದ!
ಸೂರ್ಯ ಪೂರ್ವದಲಿ ಬಂದ

ಹೆಚ್ಚು ಮಲಗಲೇನು ಚಂದ?
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಹಲ್ಲನುಜ್ಜಿ ತಿಂಡಿ ತಿಂದು
ಪಾಠವೋದಿ ಬಳಿಕ ಮಿಂದು
ಊಟಮಾಡಿ ಶಾಲೆಗೆಂದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ಶಾಲೆ ಮುಗಿದ ಬಳಿಕ ಓಟ
ಸಂಜೆವರೆಗೆ ಆಟ ಪಾಟ
ಮನೆಗೆ ಬಂದು ಸ್ತೋತ್ರಪಾಠ
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!

ರಾತ್ರೆ ದೇವಗಡ್ಡ ಬಿದ್ದು
ಊಟಮಾಡಿ ನಿದ್ರಿಸಿದ್ದು
ನಾಳೆ ತಿರುಗಿ ಬೇಗನೆದ್ದು
ಬಾ! ಕಂದ ಬಾ!
ಟಿಕ್! ಟಾಕ್! ಟಿಕ್! ಟಾಕ್!
ಟಿಕ್! ಟಿಕ್! ಟಿಕ್!




-ಜಿ. ಪಿ. ರಾಜರತ್ನಂ

Tuesday, March 27, 2012

ಮಂಗಗಳ ಉಪವಾಸ


kannada rhyme mangagala upavasa
Photo via Sweet Clip Art
 ಬಾಳೆಯ ತೋಟದ ಪಕ್ಕದ ಕಾಡೊಳು
ವಾಸಿಸುತಿದ್ದವು ಮಂಗಗಳು
ಮಂಗಗಳೆಲ್ಲವು ಒಟ್ಟಿಗೆ ಸೇರುತ
ಒಂದುಪವಾಸವ ಮಾಡಿದವು .

ಏನೂ ತಿನ್ನದೆ ಮಟ ಮಟ ನೋಡುತ
ಇದ್ದವು ಮರದಲಿ ಕುಳಿತಲ್ಲೇ
"ನಾಳೆಗೆ ತಿಂಡಿಯ ಈಗಲೇ ಹುಡುಕುವ
ಬನ್ನಿರಿ " ಎಂದಿತು ಕಪಿಯೊಂದು

"ಹೌದೌದಣ್ಣಾ" ಎಂದೆನ್ನುತ ಎಲ್ಲವು
ಬಾಳೆಯ ತೋಟಕೆ ಹಾರಿದವು
ತೋಟದಿ ಬಾಳೆಯ ಹಣ್ಣನು ನೋಡಲು
ಆಶೆಯು ಹೆಚ್ಚಿತು ನೀರೂರಿ

"ಸುಲಿದೇ ಇಡುವ ಆಗದೆ " ಎಂದಿತು
ಆಶೆಯ ಮರಿಕಪಿಯೊಂದಾಗ
"ಹೌದೌದೆನ್ನುತ" ಹಣ್ಣನು ಸುಲಿದವು
ಕೈಯೊಳೆ ಹಿಡಿದು ಕುಳಿತಿರಲು

"ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
ಆಗದೆ ? " ಎಂದಿತು ಇನ್ನೊಂದು
ಹಣ್ಣನು ಬಾಯಲಿ ಇಟ್ಟವು
"ಜಗಿದೇ ಇಡುವೆವು " ಎಂದಿತು ಕಪಿ ಮತ್ತೊಂದು
ಜಗಿದೂ ಜಗಿದೂ ನುಂಗಿದವೆಲ್ಲವು
ಆಗಲೇ ಮುಗಿಯಿತು ಉಪವಾಸ .

(ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )
ಹಾಡು ಕೇಳಲು ಇಲ್ಲಿ ಕ್ಲಿಕ್ ಮಾಡಿರಿ.

Saturday, February 25, 2012

ಬುಗುರಿ


ನನ್ನಯ ಬುಗುರಿ ಬಣ್ಣದ ಬುಗುರಿ’ಗುರು ಗುರು’ ಸದ್ದನು ಮಾಡುವ ಬುಗುರಿಜಾಳಿಗೆ ಸುತ್ತಿ ಕೈಯನು ಎತ್ತಿಬೀಸಲು ಭರದಿಸುತ್ತುವ ಬುಗುರಿ
ಹೊಡೆತಕೆ ಅ೦ಜದೆ ಕೆಚ್ಚೆದೆಯಿ೦ದಲಿ
’ಗಿರಿ ಗಿರಿ’ ತಿರುಗುವಮೆಚ್ಚಿನ ಬುಗುರಿ
ಅ೦ಗೈ ಮೇಲೆ
ಆಡುವ ಬುಗುರಿಕಚಗುಳಿಯಿಕ್ಕುವ ಮೋಜಿನ ಬುಗುರಿ
ಕಾಮನ ಬಿಲ್ಲನು
ಭೂಮಿಗೆ ಇಳಿಸಿ’ಗರ ಗರ’ ಸುತ್ತುವಬಣ್ಣದ ಬುಗುರಿ

Sunday, February 05, 2012

ಎಳೆಯುತ ಗಾಡೀ, ಎತ್ತಿನ ಜೋಡಿ



ಎಳೆಯುತ ಗಾಡೀ ! ಎತ್ತಿನ ಜೋಡಿ


ದಡ ಬಡ ಸದ್ದಿನ ನಮ್ಗಾಡಿ

ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ

ಘಣ ! ಘಣ ! ಗ೦ಟೆ

ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ

ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ

ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು

ಗಾಡಿಯು ಓಡುವ ದಡ ಬಡ ಸದ್ದು

ದಡ ! ಬಡ ! ದಡ ! ಸದ್ದು

Saturday, July 16, 2011

ಗಾಳಿಪಟ!!!



ಅಣ್ಣನು ಮಾಡಿದ ಗಾಳಿಪಟ
ಬಣ್ಣದ ಹಾಳೆಯ ಗಾಳಿಪಟ

ನೀಲಿಯ ಬಾನಲಿ ತೇಲುವ ಸುಂದರ
ಬಾಲಂಗೊಸಿಯ ನನ್ನ ಪಟ

ಬಿದಿರಿನ ಕಡ್ಡಿಯ ಗಾಳಿಪಟ
ಬೆದರದ ಬೆಚ್ಚದ ಗಾಳಿಪಟ

ದಾರವ ಜಗ್ಗಿ
ದೂರದ ನಗಿಸುವ ನನ್ನ ಪಟ


Saturday, June 11, 2011

ಜಾರಬಂಡಿ ಆಟ !!

ಜಾರ ಬಂಡಿ ಆಟ
ಜಾರಿ ಬೀಳೊ ಆಟ
ಜಾರಿ ಬಿದ್ದ ರಾಮಣ್ಣ
ಹಲ್ಲು ಮುರಿದು ಚೂರಾಗಿ
ಕಣ್ಣಲ್ ಬಂತು ನೀರು
ಆಡುತ್ತಿದ್ದ ಮಕ್ಕಳು
ಅವನ ನಗಿಸಿ ನಕ್ಕರು
ಹ್ಹ ಹ್ಹ ಹ್ಹ ...

Saturday, June 04, 2011

ಮಳೆ ಮಳೆ ಮಲ್ಲಪ್ಪ !!


ಮಳೆ ಮಳೆ ಮಲ್ಲಪ್ಪ
ಕೈಯ ಚಾಚೋ ಕರಿಯಪ್ಪ
ಮಳೆ ಮಳೆ ಮಲ್ಲಪ್ಪ
ಕೈಯ ಚಾಚೋ ಕರಿಯಪ್ಪ
ತಿರುಗೊ ತಿರುಗೊ ತಿಮ್ಮಪ್ಪ
ತಿರುಗಲಾರೆ ಉಸ್ಸಪ್ಪ !!
ಮಳೆ ಬಂತು ಮಳೆ
ಕೊಡೆ ಹಿಡಿದು ನಡೆ
ಮಣ್ಣಿನಲ್ಲಿ ಜಾರಿ ಬಿದ್ದು
ಬಟ್ಟೆ ಎಲ್ಲಾ ಕೊಳೆ

ಬಿಸಿಲು ಬಂತು ಬಿಸಿಲು
ಕೋಟು ಟೋಪಿ ತೆಗೆ
ಬಾವಿಯಿಂದ ನೀರು ಸೇದಿ
ಸೋಪು ಹಾಕಿ ಒಗೆ

Sunday, May 22, 2011

ತೋಟಕೆ ಹೋಗೊ ತಿಮ್ಮ..

ತೋಟಕೆ ಹೋಗೊ ತಿಮ್ಮ
ತೋಳ ಬಂದೀತಮ್ಮ
ಹಸು ಮೇಯ್ಸೋ ತಿಮ್ಮ
ಹಸು ಹಾದೀತಮ್ಮ
ಒಲೆ ಉರಿಸೊ ತಿಮ್ಮ
ಉರಿ ಸುಟ್ಟೀತಮ್ಮ
ಪಾಠ ಬರೆಯೋ ತಿಮ್ಮ
ಬಳಪ ಇಲ್ಲ ಅಮ್ಮ

ಹೂವು ಬಿಡಿಸೊ ತಿಮ್ಮ
ಹಾವು ಕಚ್ಚೀತಮ್ಮ
ಕಾವಲಿ ತಾರೋ ತಿಮ್ಮ
ಕಾಲು ನೋವು ಅಮ್ಮ
ನೀರು ಸೇದೊ ತಿಮ್ಮ
ಕೈ ನೋವು ಅಮ್ಮ
ಊಟಕೆ ಬಾರೋ ತಿಮ್ಮ
ಓಡಿ ಬಂದೆ ಅಮ್ಮ

Saturday, May 21, 2011

ಹಂಪ್ಟಿ ಡಂಪ್ಟಿ ಕನ್ನಡದಲ್ಲಿ

ಇಂಗ್ಲಿಷ್ ಶಿಶು ಗೀತೆಗಳನ್ನ ಕನ್ನಡಕ್ಕೆ ಅನುವಾದ ಮಾಡಿರುವುದನ್ನು ಹಿಂದೊಮ್ಮೆ ಇಲ್ಲಿ ಬರೆದಿದ್ದೆ.  ಮಕ್ಕಳಿಗೆ ಕಲಿಸಲು ಕನ್ನಡದಲ್ಲೇ ಬೇಕಾದಷ್ಟು ಚೆಂದದ ಶಿಶುಗೀತೆಗಳಿವೆ. ಅವುಗಳ ಜೊತೆಗೆ ಈ ಕನ್ನಡೀಕರಿಸಿದ ಆಂಗ್ಳ ಪದ್ಯಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಕೊಡಬಹುದು.
Humpty Dumpty sat on a wall
Humpty Dumpty had a great fall
All the king's horses and all the king's men
Couldn't put Humpty Dumpty together again

ಈ ಹಾಡನ್ನ ನಿಶುಮನೆಯಲ್ಲಿ ಅವರಮ್ಮ ಚಿತ್ರಗಳ ಜೊತೆಗೆ ಬರ್ದಿದ್ದು ಹೀಗೆ.... ಅಲ್ಲಿ ಪುಟ್ಟ ನಿಶು ಈ ಹಾಡನ್ನ ಮುದ್ದಾಗಿ ಹಾಡಿರೋ ವಿಡಿಯೋ ಕೂಡ ಇದೆ ನೋಡಿ ಖುಶಿ ಪಡಿ!!
ಮೊಟ್ಟೆರಾಯ ಕೂತ್ಕೊಂಡಿದ್ದ ಮೋಟು ಗೋಡೆ ಮೇಲೆ
ಬಿದ್ದೇ ಹೋದನಂತೆ ಎತ್ತೋರ್ಯಾರ್ರೀ ಮೇಲೆ ?
ಕುದ್ರೆ ಹತ್ತಿ ಬಂದರಂತೆ ದಂಡಿನೋರು ನೂರು...
ಯಾರು ಬಂದ್ರೆ ತಾನೆ ಮೊಟ್ಟೆ ಚೂರು ಚೂರು
  ಈಗ ’ಅಪ್ಪು ಸೀರೀಸ್’ ನವರು ಈ ಇಂಗ್ಳೀಶ್ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿ ಕಾರ್ಟೂನ್ ಮಾಡಿ ಹಾಕಿದ್ದಾರೆ ನೋಡಿ. ಇಂಗ್ಳೀಶಿನವರು ಒಟ್ಟುಗೂಡಿಸಲಾಗದ ’ಹಂಪ್ಟಿ ಡಂಪ್ಟ” ಯನ್ನ  ಇವರು ಸರಿ ಮಾಡಿದ್ದಾರೆ ;)
ಚಿಣ್ಣರ ನಾಯಕ ಡುಮ್ಮಣ್ಣ
ಗೋಡೆ ಮೇಲಿಂದ ಜಾರಿದ್ದ
ಸೇನೆ ಜೊತೆಯಲಿ ರಾಜನು
ಡುಮ್ಮನ ಸರಿ ಮಾಡ್ದಿದ್ದ

Sunday, April 10, 2011

ಬೇಟೆಗಾರ !!



ಬೇಟೆಗಾರ ಬಂದ
ಬಿಲ್ಲು ಬಾಣ ತಂದ
ಕಾಡು ಹಂದಿ ಕೊಂದ
ಬೆಂದ ಹಂದಿ ತಿಂದ
ಹೊಟ್ಟೆ ನೋವು ಅಂದ
ಮರದ ಕೆಳಗೆ ಬಿದ್ದ
ಹುಲಿರಾಯ ಬಂದ
ಹೊಟ್ಟೆ ತುಂಬ  ತಿಂದ
ಹುಲಿರಾಯ ಬಂದ
ಹೊಟ್ಟೆ ತುಂಬ ತಿಂದ 

Thursday, April 07, 2011

ದಿನಚರಿ

ದಿನಚರಿ
ದಿನವು ಬೇಗ ಏಳಬೇಕು
ಎದ್ದು ಹಲ್ಲನುಜ್ಜಬೇಕು
ಉಜ್ಜಿ ಮುಖವ ತೊಳೆಯಬೇಕು
ದಿನವು ಸ್ನಾನ ಮಾಡ ಬೇಕು

ದೇವರಿಗೆ ನಮಸ್ಕರಿಸಿ
ತಿಂಡಿಯನ್ನು ತಿನ್ನಬೇಕು
ಗುರುವಿಗೆ ನಮಸ್ಕರಿಸಿ
ಶಾಲೆಯಲ್ಲಿ ಕಲಿಯಬೇಕು

Thursday, March 31, 2011

ನಾವೆಲ್ಲ ಹಕ್ಕಿಗಳು...

ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಪಕ್ಷಿಗಳ ಪರಿಚಯ ಮಾಡಿಸುವ ಈ ಪದ್ಯ ನೆನಪು ಮಾಡಿಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಅಂತೂ ಇಂತೂ ಗೆಳಯರ ಸಹಾಯದಿಂದ ಇದು ಪೂರ್ತಿ ನೆನಪಾಯ್ತು.

ನಾವೆಲ್ಲ ಹಕ್ಕಿಗಳು
ರೆಕ್ಕೆ ಬಡಿದು ಹಾರುವೆವು
ಸಂತಸವ ಬೀರುವೆವು
ನಾನು ಗುಬ್ಬಚ್ಚಿ
ಬಹಳ ಚಿಕ್ಕದು
ನನ್ನಂತ ಚಿಕ್ಕದು
ಬೇರೆಲ್ಲೂ ಸಿಗದು //ನಾವೆಲ್ಲ//
ನಾನು ಗಿಡುಗ
ಬಹಳ ದೊಡ್ಡದು
ನನ್ನಂತ ದೊಡ್ಡದು
ಬೇರೆಲ್ಲೂ ಸಿಗದು//ನಾವೆಲ್ಲ//

ನಾನು ಕಾಗೆ
ಬಹಳ ಕಪ್ಪು
ನನ್ನಂತ ಕಪ್ಪು
ಬೇರೆಲ್ಲೂ ಸಿಗದು//ನಾವೆಲ್ಲ//
ನಾನು ನವಿಲು
ಬಹಳ ಚೆಂದ
ನನ್ನಂತ ಚೆಂದ 
ಬೇರೆಲ್ಲೂ ಸಿಗದು //ನಾವೆಲ್ಲ//

ನಾಲ್ಕು ಮಕ್ಕಳು ಸೇರಿ ಇದನ್ನು ಹಾಡುತ್ತಾ, ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡಿದ್ರೆ ಚೆನ್ನಾಗಿರುತ್ತೆ ಅಲ್ವಾ? :)
ಚಿತ್ರಕೃಪೆ : ಅಂತರ್ಜಾಲ 

Wednesday, December 22, 2010

ಬ್ಯಾ ಬ್ಯಾ ಕುರಿ ಮರಿ..

ಇದು ಪುಟ್ಟಿ ಮಾಡಿರೋ ಕುರಿಮರಿ. ಇದನ್ನ ನೋಡ್ತಾ ಪುಟ್ಟಿ ’baa baa white sheep' ಅಂತ ಹಾಡನ್ನ ಮಾರ್ಪಡಿಸಿ ಹಾಡ್ತಾಳೆ!! ಈ ಆಂಗ್ಳ ಶಿಶುಗೀತೆಯ ಕನ್ನಡ ಅನುವಾದ ಹೀಗಿದೆ..
ಬ್ಯಾ ಬ್ಯಾ ಕುರಿ ಮರಿ
ನಿನ್ ತವ ವುಲ್ ಐತ?

ಇದೆ ಸಾರ್ ಇದೆ ಸಾರ್

ಮೂರ್ ಚೀಲದ್ ತುಂಬ



ಒಂದ್ ನಮ್ ದಣಿಗೋಳ್ಗೆ
ಒಂದ್ ಅವ್ರ್ ಎಂಡ್ರುಗೆ
ಮತ್ತೊಂದ್ ಈ ರಸ್ತೆ ಮೂಲೇಲಿರೊ
ಚಿಕ್ಕ್ ಮಗೀಗೆ



ಬಾ ಬಾರೋ ಕರಿ ಕುರಿ
ಉಣ್ಣೆ ಇದೆಯಾ ಕುರಿ ಮರಿ
ಇದೆ ಗುರು ಇದೆ ಗುರು
ಮೂರ್ ಮೂಟೆ ತುಂಬಾ ಗುರು

ನಮ್ಮ್ ಮಾಲೀಕಂಗೊಂದು
ಅವನ್ ಹೆಂಡ್ರಿಗಿನ್ನೊಂದು
ಕೊನೆ ಮೂಟೆ ಯಾರಿಗೆಂದು
ನಮ್ಮ್ ಕೊನೆ ಬೀದಿ ಭಾಸ್ಕರಂದು
-ಇದನ್ನ ಬರೆದವರು ಯಾರು ಗೊತ್ತಿಲ್ಲ

Wednesday, November 17, 2010

ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪ

ವಿದ್ಯೆಯ ಕಲಿಸುವ ನನ್ನಪ್ಪ
ಬುದ್ದಿಯ ಹೇಳುವ ನನ್ನಪ್ಪ

ಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ
--ಸುಬ್ರಹ್ಮಣ್ಯ ಭಟ್

Friday, August 06, 2010

ಬಾ ಬಾ ಚಂದು ಮಾಮ

ಪುಟ್ಟಿ ಬರೆದಿರುವ ಪೂರ್ಣ ಮತ್ತು ಅರ್ಧ ಚಂದ್ರ :)


ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ




ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೀ ಕೊಡುವೆ
ಬಾಬಾ ಚಂದು ಮಾಮ
ತಿಂಡಿ ತಿನ್ನು ಬಾ




ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ




ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ




ಆಟದ ಸಾಮಾನೆಲ್ಲಾ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾಬಾ ಚಂದು ಮಾಮ ಬಾ
ಕೂಡಿ ಆಡು ಬಾ


-ಹೊಯಿಸಳ

Monday, May 17, 2010

ಕುದುರೆ ಸವಾರಿ !


ಚಡ್ಡಿ ಗಿಡ್ಡಿ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಲಗಾಮು ಹಿಡಿದುಕೊಂಡು
ಹೈ! ಹೈ! ಹೈ!

ಲಂಗ ಗಿಂಗ ಹಾಕಿಕೊಂಡು
ಕುದುರೆ ಮೇಲೆ ಕುಳಿತುಕೊಂಡು
ಅಣ್ಣನ ಸೊಂಟ ಹಿಡಿದುಕೊಂಡು
ಹೈ! ಹೈ! ಹೈ!

ಕಂದು ಬಣ್ಣ ನಮ್ಮ ಕುದುರೆ
ಗಾಳಿ ಹಾಗೆ ಓಡೊ ಕುದುರೆ
ನಮ್ಮ ಕುದುರೆ! ನಮ್ಮ ಕುದುರೆ!
ಹೈ! ಹೈ! ಹೈ!

ಕುದುರೆ ಮೇಲೆ ಕುಳಿತುಕೊಂಡು
ಅದರ ಬೆನ್ನ ತಟಕೊಂಡು
ಅಲ್ಲಿ ಇಲ್ಲಿ ಸುತ್ತಿಕೊಂಡು
ಹೈ! ಹೈ! ಹೈ!

ಕುದುರೆ ಮೇಲೆ ಕುಳಿತುಕೊಂಡು
ಹಳ್ಳ ಗಿಳ್ಳ ಹಾರಿಕೊಂಡು
ಮನೆಗೆ ಬಂದು ಸೇರಿಕೊಂಡು
ಹೈ! ಹೈ! ಹೈ!

ಕುದುರೆ ಮೈಯ ಸವರಿ ತಟ್ಟಿ
ಹುರುಳಿ ಗಿರಳಿ ತಂದು ಕೊಟ್ಟು
ಸಾಕುವೆವು ನಮ್ಮ ತಟ್ಟು
ಹೈ! ಹೈ! ಹೈ!

--ಜೆ. ಪಿ. ರಾಜರತ್ನಂ ಅವರ ’ಕಡ್ಲೆಪುರಿ’ ಸಂಕಲನದಿಂದ.



Sunday, April 25, 2010

ಕೋಲಿದು ನನ್ನಯ ಕುದುರೆ !!

ಮೊನ್ನೆ ಪುಟ್ಟಿಯ ಅಪ್ಪನ ಫೋನ್ ನಲ್ಲಿದ್ದ ಫೋಟೋಗಳನ್ನ ಖಾಲಿ ಮಾಡ್ತಾಯಿರುವಾಗ ಡಿಸೆಂಬರ್ 2009ರಲ್ಲಿ ತೆಗೆದಿದ್ದ ಈ ಫೋಟೋ ನೋಡಿದ ತಕ್ಷಣ ’ಅಜ್ಜನ ಕೋಲಿದು ನನ್ನಯ ಕುದುರೆ’ ನೆನಪಾಯ್ತು:)
ಅಜ್ಜನ ಕೋಲಿದು ನನ್ನಯ ಕುದುರೆ

ಹೆಜ್ಜೆಗೆ ಹೆಜ್ಜೆಗೆ ಕುಣಿಯುವ ಕುದುರೆ
ಕಾಲಿಲ್ಲದೆಯೇ ನಡೆಯುವ ಕುದುರೆ
ಕೂಳಿಲ್ಲದೆಯೇ ಬದುಕುವ ಕುದುರೆ
ನಾಲನು ಬಡಿಸದ ಜೂಲವ ಹೊದಿಸದ
ಲಾಲನೆ ಪಾಲನೆ ಬಯಸದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ಚಂದಪ್ಪನಿಗೆ
ಚಿಗರೆಯೇ ಕುದುರೆ
ಮಾದೇವನಿಗೆ ನಂದಿಯೇ ಕುದುರೆ
ರಾಮಚಂದ್ರನಿಗೆ ಹನುಮನೆ ಕುದುರೆ
ಹೊಟ್ಟೆಯ ಗಣಪಗೆ ಇಲಿಯೇ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


ನಿಂತರೆ ನಿಲ್ಲುವ ಒಳ್ಳೆಯ ಕುದುರೆ
ಓಡಿದರೋಡುವ ನನ್ನಿಯ ಕುದುರೆ
ಕಾಡದ ಬೇಡದ ಕರುಳಿನ ಕುದುರೆ
ನೋಡಲು ಬಿಡದಿಹ ಬೆತ್ತದ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ

ಅರಬರ ದೇಶದಿ ದೊರೆಯದ ಕುದುರೆ
ಕಾಠೇವಾಡದಿ ಕಾಣದ ಕುದುರೆ
ಅರಸು ಮಕ್ಕಳಿಗೆ ಸಿಕ್ಕದ ಕುದುರೆ
ನನಗೇ ಸಿಕ್ಕಿದೆ ನನ್ನೀ ಕುದುರೆ

ಅಜ್ಜನ ಕೋಲಿದು ನನ್ನಯ ಕುದುರೆ


--ಕವಿ ಸಿದ್ದಯ್ಯ ಪುರಾಣಿಕ್

’ಅವಧಿ’ ಯಲ್ಲಿ ಕಲಾವಿದ ಪ ಸ ಕುಮಾರ್ ಅವರು ಈ ಹಾಡಿಗೆ ತಕ್ಕದಾದ ಸುಂದರ ಚಿತ್ರ ಬಿಡಿಸಿದ್ದಾರೆ!