Saturday, March 14, 2009

ಪುಟ್ಟಿ ಕಣ್ಣೆಲ್ಲಿ?

ಪುಟ್ಟಿಗೆ ಎಣ್ಣೆ ಹಚ್ಚೋವಾಗ "ಕೈ ಉದ್ದ, ಕಾಲ್ ಉದ್ದ" ಅಂತ ಹೇಳ್ತಾ ಮಸಾಜ್ ಮಾಡೋದು ರೂಢಿ. ಅಲ್ಲದೆ ಅಜ್ಜಿ ಹೇಳೊ ಹಾಡು ತುಂಬಾ ಇಷ್ಟ.


ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಣ್ಣುಗಳು
ದೇವರಿಗೋಸ್ಕರ ಕಣ್ಣಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ನೋಟವನ್ನು ನೋಡಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕೈಗಳು
ದೇವರಿಗೋಸ್ಕರ ಕೈಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಕೆಲಸವನ್ನು ಮಾಡಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಾಲ್ ಗಳು
ದೇವರಿಗೋಸ್ಕರ ಕಾಲ್ ಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಜಾಗಕೂ ಹೋಗಬಾರದು
ದೇವರು ನಮಗೆ ತಂದೆಯು
ಎರಡು ವರವ ಕೊಟ್ಟಿದ್ದಾನೆ
ಎರಡು ವರವು ಏನೆಂದ್ರೆ ಪುಟ್ಟ ಕಿವಿಗಳು
ದೇವರಿಗೋಸ್ಕರ ಕಿವಿಗಳು
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಮಾತನ್ನು ಕೇಳಬಾರದು
ದೇವರು ನಮಗೆ ತಂದೆಯು
ಒಂದು ವರವ ಕೊಟ್ಟಿದ್ದಾನೆ
ಆ ಒಂದು ವರವು ಏನೆಂದ್ರೆ ಪುಟ್ಟ ಬಾಯಿ
ದೇವರಿಗೋಸ್ಕರ ಬಾಯಿ
ಇರಬೇಕು ಎಲ್ಲರಿಗೂ
ಯಾವ ಕೆಟ್ಟ ಮಾತನ್ನು ಆಡಬಾರದು

ನಂದಗೋಕುಲದ ಅಮ್ಮುವಿನ ಅಮ್ಮ ಮಾಲಾ ಅವರು ಬರೆದ ಈ ಹಾಡು ಕೂಡ ಬಹಳ ಚೆಂದ ಇದೆ ಓದಿ.
ಇವೆಲ್ಲದರ ಪರಿಣಾಮ ಈಗ ತನ್ನ ಪುಟ್ಟ ಕೈ-ಕಾಲು ಇತರೆ ಅಂಗಾಂಗಗಳ ಪರಿಚಯ ಚೆನ್ನಾಗಿ ಆಗಿದೆ. ಎಲ್ಲವನ್ನು ಬೆರಳು ಮಾಡಿ ತೋರಿಸುತ್ತಾಳೆ.

Thursday, March 12, 2009

ತಾಯಿತ ಯಾರು ಗೊತ್ತಾ??

ಅಪ್ಪ, ಅಮ್ಮ, ಪಾಪ, ತಾತಾ, ಮಾಮ ಇವಿಷ್ಟೆ ಮಾತಾಡುತ್ತಿದ್ದ ಪುಟ್ಟಿಗೆ ಈಗ ನಾವು ಮಾತಾಡೋದೆಲ್ಲ ಚೆನ್ನಾಗಿ ಅರ್ಥ ಆಗುತ್ತೆ. ತನಗೆ ಹಸಿವಾದ್ರೆ ಅಡಿಗೆ ಮನೆಗೆ ಕರೆದೊಯ್ದು ಬಟ್ಟಲು, ಸ್ಪೂನ್ ತೋರ್ಸಿತಾಳೆ. ನಿದ್ದೆ ಬಂದಾಗ ಹಾಸಿಗೆ ತೋರಿಸ್ತಾಳೆ. ಅಷ್ಟೆ ಅಲ್ಲ ತಾನೂ ಎಲ್ಲಾ ಮಾತಾಡಲು ಪ್ರಯತ್ನಿಸುತ್ತಾಳೆ.
ನಿನ್ನ್ ಹೆಸ್ರು ಏನು ಅಂದ್ರೆ "ತಾಯಿತ" ಅಂತ ಮುದ್ದಾಗಿ ಹೇಳ್ತಾಳೆ. ಸಾಹಿತ್ಯ ಯಾರು ಅಂತ ಪ್ರಶ್ನಿಸಿದ್ರೆ "ನಾಆಅನ್..ನಾಆಆನ್" ಅಂತ ತನ್ನ ಪುಟ್ಟ ಕೈಗಳಿಂದ ಎದೆ ತಟ್ಟುತ್ತಾಳೆ. ಅಮ್ಮ ಹೆಸ್ರೇನು ಅಂದ್ರೆ "ಊಪ, ಪೂಪ" ಅಂತ ನಗ್ತಾಳೆ. ನಾಯಿ ನೋಡಿದ್ರೆ "ದಾಗೀಈ.." ಅಂತ ತೋರಿಸ್ತಾಳೆ. ಡಾಗಿ ಏನ್ ಅನ್ನುತ್ತೆ ಅಂದ್ರೆ "ಬಾಬು..ಬೌಬು" ಅಂತಾಳೆ. ದೋಸೆ, ಚಪಾತಿ ಇವೆಲ್ಲ ಅವಳ ಬಾಯಲ್ಲಿ "ಚಾಪ" ಆದ್ರೆ, ಸೊಪ್ಪು "ತೊಪ್ಪು, ಚೊಪ್ಪು" ಆಗಿದೆ. ಬೆಕ್ಕು ನೋಡಿದ್ರೆ "ಮಯ್ಯ ಮಯ್ಯ" ಅಂತ ಸಂತಸ ಪಡ್ತಾಳೆ. ಅಮ್ಮನ ಕೈಯಲ್ಲಿ ಹಾಲಿನ ಲೋಟ ನೋಡಿದ್ರೆ ಬಹಳ ಖುಶಿಯಿಂದ "ಹಾಆಲ್...." ಅಂತಾಳೆ. ಸಂಜೆ ಹಾಲು ಕುಡಿದ ತಕ್ಷಣ ಚಪ್ಪಲಿ ತೋರಿಸಿ "ಚಪ್ಪ ಚಪ್ಪ" ಅಂತ ತನ್ನ ಕಾಲುಗಳನ್ನ ತೋರಿಸಿ ಹಾಕು ಅಂತ ಸನ್ನೆ ಮಾಡ್ತಾಳೆ. ನಿದ್ದೆ ಮಾಡಲು ಹಾಸಿಗೆ ಬಳಿ ಹೋದ್ರೆ "ತಾತಿ.. ತಾಗಿ" ಅಂತಾಳೆ. ಮುದ್ದು ಮಾಡೋ ಅಜ್ಜಿನ ಕಂಡು "ಅಗ್ಗಿ" ಅಂತ ಕೂಗ್ತಾಳೆ. ಅವಳು ಕೆನ್ನೆ ಮುತ್ತು ಕೊಟ್ಟಾಗ ಅಮ್ಮ ಥ್ಯಾಂಕ್ಯೂ ಅಂದ್ರೆ ತಾನೂ " ತಾಕ್" ಅಂತಾಳೆ. ಅಜ್ಜ ಪೂಜೆ ಮಾಡೋವಾಗ ಅವರ ಜೊತೆ ದೇವರಮನೆಲಿ ಕೂತು "ಊವಾ (ಹೂವು), ಅನ್ನ(ಹಣ್ಣು)" ತೋರಿಸ್ತಾಳೆ. ಮನೆಗೆ ಬರುವ ಅಕ್ಕ ಪಕ್ಕದ ಮನೆಯ ಮಕ್ಕಳನ್ನ "ಅತ್ತ, ಅನ್ನಾಆಅ..." ಅಂತ ಕರೆಯುತ್ತಾ ಅವರೊಂದಿಗೆ ಆಟವಾಡ್ತಾಳೆ. ಅವಳಿಗಿಷ್ಟವಾದ ಬಾಳೆಹಣ್ಣು ಕಾಣಿಸಿದ್ರೆ "ನಾನಾ" ಅಂತ ಕೈ ತೋರಿಸಿ ಕೇಳ್ತಾಳೆ.
ಅವಳ ಈ ಮುದ್ದು ಮಾತುಗಳನ್ನ ವಿಡಿಯೋ ರೆಕಾರ್ಡ್ ಮಾಡೋಣ ಅಂತ ಕ್ಯಾಮೆರಾ ಕೈಗೆತ್ತಿದರೆ ಸಾಕು ಪೋಸ್ ಕೊಟ್ಟು ನಗಲು ಶುರು ಮಾಡ್ತಾಳೆ. ಆಗ ಎಷ್ಟು ಮಾತಾಡ್ಸಿದ್ರೂ ನಗುನೇ ಮಾತಾಗುತ್ತೆ. ಆದ್ರೂ ಕೆಲವನ್ನು ರೆಕಾರ್ಡ್ ಮಾಡಿದ್ದೀನಿ. ಅದರ ತುಣುಕು ಇಲ್ಲಿದೆ ನೋಡಿ.

Sunday, March 08, 2009

ತಾತು ಅಂದ್ರೆ ತಾಯಿನ್!!

ಪುಟ್ಟಿ ಸಣ್ಣ ಮಗುವಾಗಿದ್ದಾಗಿನಿಂದ ಪ್ರತಿ ದಿನ ಎದ್ದ ಕೂಡಲೆ ಅವಳನ್ನ ದೇವರ ಮುಂದೆ ಕರೆತರೋದು ರೂಢಿ. ಒಂದೆರಡು ಶ್ಲೋಕಗಳನ್ನು ಹೇಳಿ, ಅವಳ ಕೈಯಿಂದ ಹುಂಡಿಗೆ ಕಾಸು ಹಾಕಿಸೋದು ಅವರಪ್ಪನ ಕೆಲಸ. ಇತ್ತೀಚೆಗೆ ಎದ್ದ ಕೂಡಲೆ ಪುಟ್ಟಿ ರೂಮ್ ನಲ್ಲಿರೋ ದೇವರಿಗೆ ಕೈ ಮುಗಿದು, "ಓಂ" ಹೇಳ್ತಾಳೆ. ಅವರಪ್ಪನ ಸ್ನಾನವಾದ ನಂತರ, ಅವರೊಂದಿಗೆ ದೇವರ ಮುಂದೆ ಹೋಗಿ ತಾನೂ ಕೈ ಮುಗಿದು, ಅವರಪ್ಪ ಮರೆತರೆ ತಾನೇ "ತಾತು ಅಥವಾ ತಾಯಿನ್" ಅಂತ ಕೇಳಿ ಹುಂಡಿಗೆ ದುಡ್ಡು ಹಾಕ್ತಾಳೆ.
ಅಲ್ಲದೇ ಅವರಪ್ಪನ ಕಾಯಿನ್ ಕಲೆಕ್ಷನ್ ನೋಡೋದು ಅವಳಿಗೆ ಬಲು ಖುಶಿ! ಅಪ್ಪನ ಆಲ್ಬಂನೆಲ್ಲಾ ದಿನಾ ಒಂದ್ ಸರ್ತಿ ಜಾಲಾಡ್ತಾಳೆ. ಪ್ರತಿಯೊಂದು ಕಾಯಿನ್ ತೋರಿಸಿ "ಅದು ತಾತು, ಇದು ತಾತು" ಅಂತ ಹೇಳ್ತಾಳೆ. ಅವರಪ್ಪ ಕಾಯಿನ್ ಜೋಡಿಸಲು ಕುಳಿತರೆ ತಾನೂ ಕೂರ್ತಾಳೆ.

ಝಣ ಝಣ ಝಣ
ಜೇಬು ತುಂಬ ಹಣ
ಮೇಲಕೆತ್ತಿ ಬಿಡಲು ಸದ್ದು
ಠಣ್ ಠಣಾ ಠಣ.
ನದಿಯೊಲ್ಲೊಂದು ಬಕ
ಮುದುರಿಕೊಂಡು ಮುಖ
ಕಾಲನೆತ್ತಿ
ಕುಣಿಯುತ್ತಿತ್ತು
ಥೈ ಥಕಾ ಥಕಾ..
ಸುತ್ತ ಹಸಿರು ವನ
ನಡುವೆ ಮೇವ ದನ
ಕೊಳಲನೂದಿ ಗೊಲ್ಲನೊಬ್ಬ
ತನನ ನಾ ತನಾ...

Thursday, March 05, 2009

ಖುಶಿ ಮೊದಲ ಹುಟ್ಟುಹಬ್ಬ !!!

ಇಂದು ಪುಟ್ಟಿಯ ಸೋದರಮಾವನ ಮಗಳು "ಖುಶಿ"ಯ ಹುಟ್ಟುಹಬ್ಬ. ಅಪ್ಪ-ಅಮ್ಮನ ಜೊತೆ ಇಂಗ್ಲ್ಯಾಂಡಿನಲ್ಲಿ ಹಬ್ಬ ಆಚರಿಸಿಕೊಳ್ಳ್ತಾಯಿರೋ ಬಂಗಾರಮ್ಮನಿಗೆ ನಮ್ಮೆಲ್ಲರ ತುಂಬು ಹೃದಯದ ಹಾರೈಕೆಗಳು.


ನೀ ಹುಟ್ಟಿದ ಆ ದಿನ
ಶಿವರಾತ್ರಿಯ ಸುದಿನ
ಮನೆಯವರೆಲ್ಲ ನಲಿದ ದಿನ


ನೀ ಬೋರಲು ಬೀಳಲು ಮನಕಾನಂದ
ಇಂಡಿಯಾಗೆ ಬಂದಾಗ ನೀ ಅಂಬೆಗಾಲ ಕಂದ
ಹಲ್ಲಿಲ್ಲದ ನಿನ್ನ ಬೊಚ್ಚು ಬಾಯ ನಗುವು ಚಂದ


ಬಲು ಬೇಗ ಸೆಳೆದೆ ನೀ ನಮ್ಮೆಲ್ಲರ ಮನ
ಕೃಷ್ಣನ ಕೊಳಲು ಹಿಡಿದು ಹಾಡಿದೆ ತನನನ
ಮರಳಿ ಹಾರಿ ಸೇರಿದೆ ನೀ ಲಂಡನ

ವರುಷ ತುಂಬಿದೆ ನಿನಗೆ ಇಂದು
ಆಯುರಾರೋಗ್ಯ ಕೊಡಲಿ ಎಂದು
ಪರಶಿವನಾ ನಾವೆಲ್ಲ ಬೇಡುವೆವು ಇಂದು