Wednesday, January 30, 2008

ಪುಟ್ಟಿಗೆ ಒಂದು ತಿಂಗಳು ತುಂಬಿತು


ಪುಟ್ಟಿಗೆ ಮೊದಲ ವರ್ಷ ಪ್ರತಿ ತಿಂಗಳೂ ಹುಟ್ಟಿದಹಬ್ಬ ಆಚರಿಸಬೇಕು ಅಂತ ಅವರ ಅಪ್ಪನ ಆಸೆ. ಆದರೆ ಮಕ್ಕಳಿಗೆ ೩ ವರ್ಷ ತುಂಬುವವರೆಗೆ ಬರ್ತ್ ಡೆ ಪಾರ್ಟಿ ಮಾಡೋದೆಲ್ಲ ನಮ್ಮ್ ಖುಶಿಗೆ ಅಷ್ಟೆ, ಆ ಕಂದಮ್ಮಗೆ ಏನೂ ಗೊತ್ತಾಗೊಲ್ಲ, ಕೆಲವೊಮ್ಮೆ ಆ ಜನಗಳ ಮಧ್ಯೆ ಹಿಂಸೆಯೂ ಆಗುತ್ತೆ ಬೇಡ ಸುಮ್ನಿರಿ ಅಂತ ನಾನ್ ಅಂದ್ರೆ. "ನಮ್ಮ್ ಪುಟ್ಟಿಗೆ ಎಲ್ಲರ ಪರಿಚಯ ಆಗ್ಬೇಕು ಅಲ್ವ, ಊಟಕ್ಕೆ ಬನ್ನಿ ಅಂತ ಕರಿದಿದ್ದ್ರೆ ಇಲ್ಲಿ ಯಾರೂ ಮನೆಗೆ ಬರೋಲ್ಲ, ಇದು ಒಂದು ನೆಪ ಅಷ್ಟೆ ಸ್ನೇಹಿತರನ್ನ ಕರಿಯೋಕೆ" ಅಂದ್ರು. ಅವರ ಮಾತು ಸರಿ ಎನ್ನಿಸಿ ಮಗಳಿಗೆ ಪ್ರತಿ ತಿಂಗಳು ತುಂಬಿದಾಗ ೨-೩ ಗೆಳೆಯರನ್ನ ಮನೆಗೆ ಕರೆಯೋದು ರೂಢಿಯಾಯಿತು. ಅಂತೂ ಪುಟ್ಟಿ ಹೆಸರಲ್ಲಿ ಪ್ರತಿ ತಿಂಗಳು ನಾವ್ ಕೇಕ್ ತಿನ್ನೋದು ಶುರುವಾಯಿತು.


ಹುಟ್ಟಿದ ಹಬ್ಬ ಬಂದಾಯ್ತು
ಗೆಳೆಯರೆಲ್ಲ ಸೇರಾಯ್ತು
ಕೇಕನ್ನು ತಿಂದಾಯ್ತು !!

Thursday, January 10, 2008

ನಾಮಕರಣ ಮತ್ತು ತೊಟ್ಟಿಲ ಪೂಜೆ


ಹನ್ನೊಂದನೆ ದಿನ ಪುಣ್ಯಾಹ ಮಾಡಿಸಿಕೊಂಡು ಮಗುವನ್ನು ತೊಟ್ಟಿಲಿನಲ್ಲಿ ಮಲಗಿಸುವ ರೂಡಿ ನಮ್ಮಲ್ಲಿದೆ. ಅದರ ಜೊತೆಯಲ್ಲೇ ನಾಮಕರಣವನ್ನೂ ಮಾಡಿಬಿಡಿ ಎಂದು ನಮ್ಮತ್ತೆಯವರು ಹೇಳಿದರು. ನಮ್ಮ ಬಂಗಾರಿಗೆ ವ್ಯವಹಾರ ನಾಮವಾಗಿ "ಸಾಹಿತ್ಯ" ಹೆಸರು ಆಗಲೇ ಅಸ್ಪತ್ರೆಯಲ್ಲಿನ ಎಲ್ಲಾ ದಾಖಲೆಗಳಲ್ಲಿ ಸೇರಿತ್ತು. ಹಸ್ತಾ ನಕ್ಷತ್ರದಲ್ಲಿ ಜನಿಸಿದ ಅವಳಿಗೆ ’ಪು’ ಅಕ್ಷರದಿಂದ ಶುರುವಾಗುವ ಹೆಸರು ಇಡಬೇಕಿದ್ದರಿಂದ ’ಪುಟ್ಟಿ’ ಅಂತ ಇಟ್ಟರೆ ಅದು ನಕ್ಷತ್ರನಾಮವೂ ಆಗುತ್ತೆ ಜೊತೆಗೆ ಅವಳಿಗೆ ಮುದ್ದುಹೆಸರಾಗಿಯೂ(nickname) ಇರುತ್ತೆ ಅಂತ "ಪುಟ್ಟಿ" ಹೆಸರನ್ನೆ ಇಟ್ಟೆವು.

ಹೆಸರನ್ನು ಅಕ್ಕಿಯ ಮೇಲೆ ಬರೆದು, ಅವಳ ಕಿವಿಯಲ್ಲಿ ಮೂರು ಬಾರಿ ಹೇಳಿ ನಂತರ ತೊಟ್ಟಿಲಿಗೆ ಪೂಜೆಮಾಡಿದೆವು. ಮೊದಲಿಗೆ ಒಂದು ಗುಂಡುಕಲ್ಲನ್ನು ಮಲಗಿಸಬೇಕು ಅಂದ್ರು ಅಮ್ಮ, ಇಲ್ಲೆಲ್ಲಿ ಗುಂಡುಕಲ್ಲು ಹುಡುಕೋದು ಅಂತ ಅದರ ಬದಲಿಗೆ ಸೌತೆಕಾಯನ್ನ ಮಲಗಿಸಿದ್ವಿ. ನಂತರ ಗೆಳೆತಿಯ ಮಗುವನ್ನು ಮಲಗಿಸಿದ ಶಾಸ್ತ್ರಮಾಡಿ ಕೊನೆಯಲ್ಲಿ ನಮ್ಮ್ ಪುಟ್ಟಿಯನ್ನ ತೊಟ್ಟಿಲಿಗೆ ಹಾಕಿ ಲಾಲಿ ಹಾಡಿದೆವು.
ಅಮ್ಮ ಹೇಳಿದ ಲಾಲಿ ಹಾಡು ಇದು :
ರಾಗ :ಮಧ್ಯಮಾವತಿ

ಜೋ ಜೋ ಜೋ ಜೋ ಮಂಗಳ ಮಂಜುಳವಾಣೀ
ಜೋ ಜೋ ಜೋ ಜೋ ಶ್ರೀಕರ ಶುಭಕರ ರಾಣಿ //ಪ//

ಪತಿತ ಪಾವನೆ ಪರಮೇಶ್ವರಿಯೇ
ಪಾಲಿಸು ನಮ್ಮನು ಶ್ರೀಶಂಕರಿಯೇ
ಪಂಕಜನೇತ್ರೆ ಪರಮ ಪವಿತ್ರೇ
ಪರಶಿವಸತಿ ನಿನ್ನ ಪಾಡಿ ತೂಗುವೆನಮ್ಮ //ಜೋ ಜೋ//

ಭಕ್ತಿಗೆ ಒಲಿದು ಮುಕ್ತಿಯ ನೀಡುವೆ
ಭಗವತಿ ತಾಯೇ ಆನಂದಮಾಯೇ
ಬಾಲಹನುಮನ ತಾಯೇ ಜಗನ್ಮಾಯೆ
ಭಕ್ತಿಯಿಂ ಜೋಗುಳ ಪಾಡಿ ತೂಗುವೆನಮ್ಮ //ಜೋ ಜೋ//

Thursday, January 03, 2008

ಮುದ್ದುಮರಿ ಮನೆಗೆ ಬಂದಳು


ಆಸ್ಪತ್ರೆ ವಾಸ ಸಾಕು ನಡಿರಿ ನಮ್ಮ್ ಮನೆಗೆ ಹೋಗೋಣ ಅಂತ, ತನ್ನ ಚಿಕ್ಕ ಸೋದರ ಮಾವ ಆಸ್ಟ್ರೆಲಿಯಾದಿಂದ ಕಳುಹಿಸಿದ್ದ ಗುಲಾಬಿ ಸ್ಕರ್ಟ್, ಮೇಲಂಗಿ, ಕಾಲ್ಚೀಲ, ಟೊಪ್ಪಿ, ಮೇಲೆ ಕೆಂಪು ಜಾಕೆಟ್ ಧರಿಸಿ ರೆಡಿ ಆಗೇಬಿಟ್ಟ್ಲು.

ಸರಿ, ಆಸ್ಪತ್ರೆ ಸಿಬ್ಬಂದಿಗೆಲ್ಲ ಸಿಹಿ ಹಂಚಿ, ಅಪ್ಪನ ಕಾರಿನಲ್ಲಿ ತನ್ನದೇ ಕಾರ್ ಸೀಟಿನಲ್ಲಿ ಕೂತು ಮನೆಗೆ ಬಂದ್ಲು. ಅಜ್ಜಿ ಆರತಿ ರೆಡಿ ಮಾಡಿಟ್ಟು ಕಾಯ್ತಾಯಿದ್ರು. ಹಾಡು ಹೇಳಿ ಮೊಮ್ಮಗಳನ್ನು ಮನೆಗೆ ಬರಮಾಡಿಕೊಂಡರು.

ಅಜ್ಜಿ ಅವಳಿಗಾಗಿ ಹಾಡಿದ ಹಾಡು ಇದು:

ರಾಗ: ಮಧ್ಯಮಾವತಿ
ಎತ್ತಿರೇ ನವರತ್ನದಾರತಿ ಪಾರ್ವತಿ ದೇವಿಗೆ
ಶ್ರದ್ದೆಯಿಂದಲಿ ಭಕ್ತಿಯಿಂದಲಿ ಬೆಳಗಿರೆಲ್ಲ ಆರತಿ //ಪ//

ದೇವಿ ಶಾರದೆ ಗೌರಿ ಲಕ್ಷ್ಮಿಗೆ ಲಲಿತ ದುರ್ಗಾ ಮಾತೆಗೆ
ಸರ್ವ ಪಾಪಾಹಾರಿಣಿ ಶ್ರೀ ಪಾರ್ವತೀದೇವಿಗೆ //ಎತ್ತಿರೇ//

ಹರಿಯ ಸೋದರಿ ಹರನ ವಲ್ಲಭೆ ಗಣಪನಾ ಮಾತೆ ಗೌರಿಗೆ
ಸರ್ವ ದುಃಖತಾಪ ಹಾರಿಣಿ ಪಾರ್ವತಿದೇವಿಗೆ//ಎತ್ತಿರೇ//