Thursday, December 29, 2011

ಪುಟ್ಟಿಗೆ ನಾಲ್ಕು ವರ್ಷ


ಪುಟ್ಟಿಗೆ ಇವತ್ತಿಗೆ ನಾಲ್ಕು ವರ್ಷ ಅಂದ್ರೆ ನಂಬೋಕೆ ಆಗ್ತಾಯಿಲ್ಲ! ಆಸ್ಪತ್ರೆಯಲ್ಲಿ ಇವಳು ಜನಿಸಿದ ತಕ್ಷ್ಣಣ ಡಾಕ್ಟರ್ "ಓಹ್! ಮುದ್ದಾದ ಮಗು" ಎಂದು ಉದ್ಗರಿಸಿದ್ದು ಈಗಷ್ಟೇ ಕೇಳಿದಂತೆ ಅನಿಸುತ್ತಿದೆ. ಈ ಪುಟ್ಟಿ ನನ್ನ ಮಡಿಲು ತುಂಬಿ ನಾಲ್ಕು ವರ್ಷಗಳಾಗಿವೆ.  ಅಂದಿನ ಮುದ್ದು ಮುಖದಲ್ಲೀಗ ತುಂಟತನ ತುಂಬಿದೆ:)
ಅಪ್ಪ ಅಮ್ಮನ ಮುದ್ದಿನ ಪುಟ್ಟಿಗೆ ಹುಟ್ಟುಹಬ್ಬದ ಶುಭಾಶಯಗಳು!

Monday, November 14, 2011

ಮರಳಿ ಬ್ಲಾಗಿಗೆ ಹಾಜರ್ !

ಮೂರು ತಿಂಗಳ ಕಾಲ ಭಾರತದಲ್ಲಿದ್ದು ಈಗಷ್ಟೇ ಅಮೆರಿಕಾದ ನಮ್ಮ ಮನೆಗೆ ಬಂದಿರುವೆವು. ಅಲ್ಲಿನ ಕೆಲವು ಫೋಟೋಗಳು. ಗಣಪತಿ ಹಬ್ಬ..
ಅತ್ತೆ ಮಗಳು ಖುಷಿ ಜೊತೆ..

ತಾತನ ಸ್ಕೂಟರ್ ಸವಾರಿ ಅಂದ್ರೆ ಇಬ್ಬರಿಗೂ ಬಲು ಇಷ್ಟ 

ಚಿಕ್ಕಪ್ಪನ ಮಗಳು 'ಸುಹಾನಿ' ಅಕ್ಕ ಅಂತ ಕರೆದರೆ ಹಿಗ್ಗಿ ಉಬ್ಬುತ್ತಿದ್ದ ಪುಟ್ಟಿ 

ಎರಡೂ ಕೈಗಳಿಗೆ ಮೆಹಂದಿ ಹಾಕಿಸಿಕೊಂಡ ಪುಟ್ಟಿ 

ಬೀದಿ ಬಸವಣ್ಣನ ಜೊತೆ ತಾನೂ ಒಳಗಾ ಊದುತ್ತಾ..

ಬೀದಿಯ ಹೊಸ ಸ್ನೇಹಿತರ ಜೊತೆ..

ಮನೆಗೆ ಬಂದ ಸ್ನೇಹಿತರ ಜೊತೆ ಆಟವಾಡುತ್ತಾ..

ಉಯಾಲೆಯಲ್ಲಿ ..
  ತಾತನ ಕಾರ್ ತೊಳೆಯುತ್ತಾ..
  ಇನ್ನು ಮುಂದೆ ನಮ್ಮ ಆಟೋಟಗಳು ಮತ್ತೆ ಬ್ಲಾಗಿನಲ್ಲಿ ಎಂದಿನಂತೆ !

  Sunday, August 21, 2011

  ವರಮಹಾಲಕ್ಷ್ಮಿ ಹಬ್ಬ 2011 !!!

  ಪುಟ್ಟಿ ಈ ಸರ್ತಿ 'ವರಮಹಾಲಕ್ಷ್ಮಿ ಹಬ್ಬ' ವನ್ನು ಅಜ್ಜಿ ತಾತ, ಅತ್ತೆ, ಚಿಕ್ಕಪ್ಪ, ಅತ್ತೆ ಮಗಳ ಜೊತೆ ಆಚರಿಸಿದಳು.
   ಅಮೆರಿಕಾದಲ್ಲಿ  ನಾವು ಮಾಡುತ್ತಿದ್ದ ಸಾಧಾರಣ ಪೂಜೆಗೆ ಹೋಲಿಸಿದರೆ, ಹಣ್ಣು-ಹೂವು-ಬಾಳೆಕಂದು-ಮಾವಿನ ಸೊಪ್ಪು ಎಲ್ಲದರಿಂದ ಅಲಂಕರಿಸಿದ ಲಕ್ಷ್ಮಿಯನ್ನು ನೋಡಿ ಪುಟ್ಟಿ ಗೆ  ಬಲು ಸಂತಸ.  ಅಜ್ಜಿ ತಾತ ಪೂಜೆ ಮಾಡುವುದನ್ನು ನೋಡಿಯೇ ಸಂಭ್ರಮಿಸಿದಳು. 
   ಅತ್ತೆ ಮಗಳು ಖುಷಿ ಜೊತೆಯಲ್ಲಿ..
   ಪೂಜೆಯೇ ಕೊನೆಯಲ್ಲಿ ಅಜ್ಜಿ ಕಟ್ಟಿದ ಅರಿಶಿನದ ದಾರ :)
   ಸಂಜೆ ಮುತೈದೆಯರು ಮನೆಗೆ ಬರುವ ಸಮಯಕ್ಕೆ ಹೊಸ ಬಟ್ಟೆ ಹಾಕಿ ರೆಡಿಯಾಗಿರುವ ಪುಟ್ಟಿ...
   ಬಂದವರಿಗೆ ಅರಿಶಿನ-ಕುಂಕುಮ, ತಾಂಬೂಲ ಕೊಡುವುದು ಅಂದ್ರೆ ಬಲು ಖುಷಿ.. 
    ಅಜ್ಜಿಯ ಜೊತೆಯಲ್ಲಿ...
   ತಾತನ ಮನೆಯ ಉಯ್ಯಾಲೆಯಲ್ಲಿ 

  Saturday, August 20, 2011

  ತೂಗುವೆ ರಂಗನ ತೂಗುವೆ ಕೃಷ್ಣನ!!!
  ತೂಗುವೆ ರಂಗನ ತೂಗುವೆ ಕೃಷ್ಣನ
  ತೂಗಿ ಜೋ ಜೋ ಹಾಡುವೆ

  ಮೇಲುಕೋಟೆಯ ಸ್ವಾಮಿ ಚೆಲುವರಾಯನ
  ಬೇಲೂರ ಶ್ರೀಚೆನ್ನಕೇಶವನ
  ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ
  ಶ್ರೀರಂಗಪಟ್ಟಣದಿ ಮಲಗಿದವನ

  ತೂಗುವೆ ರಂಗನ ತೂಗುವೆ ಕೃಷ್ಣನ
  ತೂಗಿ ಜೋ ಜೋ ಹಾಡುವೆ  ಕಣ್ಣಲ್ಲಿ ಹುಣ್ಣಿಮೆ ತಂದವನ
  ನಗುವಲ್ಲೇ ಮಲ್ಲಿಗೆ ಚೆಲ್ಲುವನಾ
  ಚಲುವಲ್ಲೆ ತಾವರೆಯ ನಾಚಿಸುನವ
   ಮನೆಯ ಬೆಳಕಾಗಿ ಬಂದವನ

  ತೂಗುವೆ ರಂಗನ ತೂಗುವೆ ಕೃಷ್ಣನ
  ತೂಗಿ ಜೋ ಜೋ ಹಾಡುವೆ  ಆಲದೆಲೆಯ ಮೇಲೆ ಮಲಗಿದವನ
  ಹತ್ತವತಾರದ ಪರಮಾಥ್ಮನ
  ಮತ್ತೆ ನಮಗಾಗಿಳೆಗೆ ಬಂದವನ
  ಜಗವನ್ನೆ ತೂಗುವ ಜಗದೀಶನ


  ತೂಗುವೆ ರಂಗನ ತೂಗುವೆ ಕೃಷ್ಣನ
  ತೂಗಿ ಜೋ ಜೋ ಹಾಡುವೆ

  Sunday, August 14, 2011

  ಬೆಂಗಳೂರಿನಲ್ಲಿ ಪುಟ್ಟಿ !!!

  ಪುಟ್ಟಿ ಮತ್ತು ನಾನು ಈಗ ನಮ್ಮೂರು ಬೆಂಗಳೂರಿನಲ್ಲಿ ಅಮ್ಮ ಅಪ್ಪ ನ ಜೊತೆಯಿದ್ದೀವಿ. ನಮ್ಮ  ವಿಮಾನ ಪ್ರಯಾಣ ಪುತ್ತಿಗೆ ಬಲು ಇಷ್ಟವಾಯ್ತು. ಸಹ ಪ್ರಯಾಣಿಕರ ಜೊತೆ ಹರಟುತ್ತಾ ಕಾಲ ಕಳೆದಳು ಪುಟ್ಟಿ. 
  ಇಲ್ಲಿಗೆ ಬಂದಾಗಿನಿಂದಲೂ ಮನೆಯ ಯಾವ ಕೆಲಸ ಇಲ್ಲದಿದ್ದರೂ ಕಂಪ್ಯೂಟರ್ ಮುಂದೆ ಕೂರಲು ಪುರುಸೊತ್ತೇ ಇಲ್ಲ. ಪುಟ್ಟಿಗಂತೂ ಬೀದಿ ತುಂಬಾ ಹೊಸ ಸ್ನೇಹಿತರು.  ಅವರ ಜೊತೆ ಆಟವಾಡುತ್ತಾ ಅವಳಿಗೆ ಮಜವಾಗಿದೆ.  

  Tuesday, August 02, 2011

  ಬ್ಲಾಗ್-ಗೆ ಬಿಡುವು !!

  ಇವತ್ತು ನಾನು ಮತ್ತು ಪುಟ್ಟಿ ಬಹಳ ಉತ್ಸುಕರಾಗಿ ಭಾರತಕ್ಕೆ ಹೊರಟಿದ್ದೇವೆ. ಪುಟ್ಟಿಯ ಅಪ್ಪ ಅಕ್ಟೋಬರ್ ನಲ್ಲಿ ಬರುವರು. ಎರಡು ಸ್ತಾಪ್ ಗಳು ಸೇರಿ, ೨೬ ಘಂಟೆಗಳ ವಿಮಾನ ಅದೂ ತಂಟೆಮಾಡುವ ಪುಟ್ಟಿ ಜೊತೆ ಅನ್ನೋ ವಿಷಯ ಸ್ವಲ್ಪ ಶ್ರಮದಾಯಕವೇ ಆದ್ರೂ ಮರಳಿ ಮನೆಗೆ ಹೋಗುವ ಖುಶಿ ಅದನ್ನು ಮರಎಮಾಡಿದೆ!!


  ೨ ವರ್ಷಗಳ ನಂತರ ಒರ್ರಿಗೆ ಹೋಗ್ತಾಯಿದ್ದು, ಈ ಸರ್ತಿ ೩ ತಿಂಗಳು ಅಲ್ಲಿ ಇರುವ ಇರಾದೆ ಇದೆ. Llanelli, UK ನಲ್ಲಿರುವ ನನ್ನ ಅಣ್ಣನ ಕುಟುಂಬ ಮತ್ತು Melbourne, Australia ದಲ್ಲಿರುವ ತಮ್ಮ ಕೂಡ ಬರುವುದು ನಮ್ಮ ಉತ್ಸಾಹವನ್ನು ಇನ್ನೂ ಹೆಚ್ಚು ಮಾಡಿದೆ. ಅಲ್ಲದೆ ಶ್ರಾವಣ ಮಾಸಕ್ಕೆ ಸರಿಯಾಗಿ ಅಲ್ಲಿ ಹೋಗುತ್ತಿರುವುದರಿಂದ ಈ ಸರ್ತಿ ಎಲ್ಲಾ ಹಬ್ಬಗಳೂ ಮನೆಯಲ್ಲಿ ಅಮ್ಮ-ಅಪ್ಪ-ಅಣ್ಣ-ತಮ್ಮ ಜೊತೆ!  


  ಅಲ್ಲದೆ ನನ್ನ ಮೈದುನನ ಮಗಳು 'ಸುಹಾನಿ' ಆಗಲೇ ಒಂದೂವರೆ ವರ್ಷದವಲಾದರೂ ಅವಳನ್ನು ನಾವು ನೋಡುವುದು ಇದೆ ಮೊದಲ ಸಲ.ಪುಟ್ಟಿಯಂತೂ ಅಲ್ಲಿ ಎಲ್ಲರ ಜೊತೆಗೂಡಿ ಆದಿ ನಲಿಯಲು ಕಾಯ್ತಾಯಿದ್ದಾಳೆ.  ಇನ್ನು ನಮ್ಮ ನಿಮ್ಮ ಭೇಟಿ ಇಂಡಿಯಾ ದಿಂದಲೇ  !!!

  Friday, July 29, 2011

  ಕೈ-ಗುರುತಿನ ಭಾರತ ಬಾವುಟ!!


  ಕೈಗಳಿಗೆ ಬಣ್ಣ ಹಚ್ಚಿಕೊಂಡು ಮಾಡಿದ ನಮ್ಮ ಭಾರತದ ಬಾವುಟ ಇದು. ಇದನ್ನ ಮಾಡಿದ್ದು ಹೇಗೆ ಹೆಚ್ಚಿನ ಫೋಟೋಗಳ ಜೊತೆ ವಿವರಗಳು ಇಲ್ಲಿ .  

  Monday, July 25, 2011

  ಭಾರತದ ಸ್ವಾತಂತ್ರ್ಯೋತ್ಸವ - ಮಕ್ಕಳ ಚಟುವಟಿಕೆಗಳು !

  ಭಾರತದ ಸ್ವಾತಂತ್ರ್ಯೋತ್ಸವದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಲು ಹಲವು ಚಟುವಟಿಕೆಗಳನ್ನು ಮಾಡಿಸಬಹುದು. ಅಂತರ್ಜಾಲದಲ್ಲಿ ನನಗೆ ಸಿಕ್ಕ ಕೆಲವು ಚಟುವಟಿಕೆಗಳಿವು:
  Little Food Junction ನಲ್ಲಿ ಸ್ಮಿತಾ ಅವರು ಮಾಡಿದ ತ್ರಿವರ್ಣ ಊಟ!!


  Creative Ideasನ ಪೂಜಾ ಅವರ ಬ್ಲಾಗಿನಲ್ಲಿ ೨೫ಕ್ಕೂ ಹೆಚ್ಚಿನ ತ್ರಿವರ್ಣ ಖಾದ್ಯಗಳು ಉಂಟು!

  ಹಾಗೇನೆ ಮಹಾನಂದಿ ಬ್ಲಾಗಿನ ಇಂದಿರಾ ಅವರು ಸ್ವಾತಂತ್ರ್ಯೋತ್ಸವ ಖಾದ್ಯಗಳ ಮೆರವಣಿಗೆಯನ್ನೇ ಮಾಡಿದ್ದಾರೆ !!


  ತ್ರಿವರ್ಣ ಬಳೆಗಳು 

  ಮಸೂರ್ ಧಾಲ್ , ಅಕ್ಕಿ ಮತ್ತು ಹೆಸರು ಕಾಳು 
   ಮಸೂರ್ ಧಾಲ್ , ಅಕ್ಕಿ, ಹೆಸರು ಕಾಳು  ಮತ್ತು ಲವಂಗದ  ಚಕ್ರ 

  'ರೋಗದಿಂದ ಸ್ವಾತಂತ್ರ ' ಎಂಬ ಘೋಷಣೆ  ಇದ್ದ ಈ ಹಣ್ಣು ಮತ್ತು ತರಕಾರಿ ಸಲಾಡ್ ತಟ್ಟೆ ನನ್ನ ಅಚ್ಚುಮೆಚ್ಚು!

   ತ್ರಿವರ್ಣ ಪೇಡ 
   ತ್ರಿವರ್ಣ ಬರ್ಫಿ 
   ತ್ರಿವರ್ಣ ಪಾನೀಯ ಮತ್ತು ಮೊಂಬತ್ತಿ 
   ತ್ರಿವರ್ಣ ಬ್ರೆಡ್ ರೋಲ್  (ketchup and mint chutney)

   ತ್ರಿವರ್ಣ ಅನ್ನ 

  ನೀವೂ ಇದೆ ರೀತಿ ನಿಮ್ಮ ಪುಟಾಣಿಗಳ ಜೊತೆ ಯಾವುದಾದರು ತ್ರಿವರ್ಣ ಕಾತುವತಿಕೆ ಮಾಡಿದ್ರೆ ನನ್ನೊಡನೆ ಹಂಚಿಕೊಳ್ಳಿ !

  Saturday, July 16, 2011

  ಗಾಳಿಪಟ!!!  ಅಣ್ಣನು ಮಾಡಿದ ಗಾಳಿಪಟ
  ಬಣ್ಣದ ಹಾಳೆಯ ಗಾಳಿಪಟ

  ನೀಲಿಯ ಬಾನಲಿ ತೇಲುವ ಸುಂದರ
  ಬಾಲಂಗೊಸಿಯ ನನ್ನ ಪಟ

  ಬಿದಿರಿನ ಕಡ್ಡಿಯ ಗಾಳಿಪಟ
  ಬೆದರದ ಬೆಚ್ಚದ ಗಾಳಿಪಟ

  ದಾರವ ಜಗ್ಗಿ
  ದೂರದ ನಗಿಸುವ ನನ್ನ ಪಟ


  Saturday, July 09, 2011

  ಕಿ ಕಿ ಕಿ ಕಿ ಎನ್ನುತ ಹಾಡೋಣ..

  "ಪುಟಾಣಿ ಏಜೆಂಟ್ ೧ ೨ ೩"  ಚಲನಚಿತ್ರದ ಈ ಹಾಡು ಪುಟ್ಟಿಗೆ ಬಲು ಇಷ್ಟ. ಬಹುತೇಕ ಪೂರ್ತಿ ಹಾಡು ಅವಳಿಗೆ ಕಂಠಪಾಠವೂ ಆಗಿದೆ. ಈ ಹಾಡನ್ನು ಆಗಾಗ್ಗೆ ಕೇಳಿ ಸಿಡಿ ಹಾಕಿಸಿಕೊಂಡು ನೋಡುತ್ತಾಳೆ. ಈ ಚಿತ್ರ ಟಿವಿಯಲ್ಲಿ ಬರುತ್ತಿರುವಾಗ ಅವಳು ನಮ್ಮ ಕ್ಯಾಮೆರಾದಲ್ಲಿ ತೆಗೆದಿರುವ ಕೆಲವು ಚಿತ್ರಗಳಿವು:

  ಸಹ್ಯಾದ್ರಿ ಸಾಲಿನಲಿ ಮಲೆನಾಡ ಕಾಡಿನಲಿ ಬೆಳೆದಿತ್ತು ಭಾರಿ ಆಲದ
  ಮರವು ಮೊರದಿತ್ತು ನೂರಾರು ಹಕ್ಕಿಗಳ ಸ್ವರವು
  ಕಿ ಕಿ ಕಿ ಕಿ ಎನ್ನುತ ಹಾಡೋಣ
  ತೂಗಿ ಸಾಗಿ ಎಲ್ಲರು ಹಾರೋಣ
  ಸಿಹಿಯಾದ ರುಚಿಯಾದ ಹಣ್ಣಿನ ರಸವ ಹೀರೋಣ
  ಕಿ ಕಿ ಕಿ ಕಿ ಎನ್ನುತ ಹಾಡೋಣ
  ಕಲಕಲ ಕುಣಿಯೋಣ
  ಮೈ ಮನ ಮರೆಯೋಣ
  ಒಟ್ಟಿಗೆ ಸಾಗಿ ಮೆತ್ತಗೆ ಹೋಗಿ ಇಂದೆ ಮೆರೆಯೋಣ 
  ಕಿ ಕಿ ಕಿ ಕಿ ಎನ್ನುತ ಹಾಡೋಣ
  ತೂಗಿ ಬಾಗಿ ಎಲ್ಲರು ಹಾಡೋಣ
  ಎಲ್ಲರು ಹಾಡೋಣ
  ಎಲ್ಲರು ಹಾಡೋಣ
  ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
  ಕಾಡಿತೆ ವಿಷವು ತೀರಿತೆ ಋಣವು
  ಕಾಳ ಸರ್ಪದ ಕಾಗು ತಾಳಾಲಾರ ನೋವು
  ಇದಕೆ ಕೊನೆ ಇಲ್ಲವೆ
  ಯಾರು ಗತಿ ಇಲ್ಲವೆ
  ಇಲ್ಲವೆ
  ಇಲ್ಲವೆ
  ಕಂದ ನೀ ಬಲಿಯಾದೆಯ ತಂದೆ ತಾಯಿಯ ತೊರೆದೆಯ
  ಅಗಲಿ ಇರಲಾರೆ ನಾ ಅಗಲಿ ಇರಲಾರೆ ಇರಲಾರೆ
  ಏನಾಯ್ತು ಹೇಗಾಯ್ತು ಯಾರಿಂದ ಹೇಳಿ ಹೇಳಿ
  ಅಳಬೇಡಿ ಹೆದರಬೇಡಿ ಈ ನರಿ ಮಾತು ಕೇಳಿ
  ಅಪಾಯ ಬಂದಾಗ ಉಪಾಯ ಹೇಳ್ತೀನಿ
  ಆ ಸರ್ಪಾನೆ ಸಾಯೊ ಹಾಗ್ ಮಾಡ್ತೀನಿ
  ಬನ್ನಿ ಎಲ್ಲ ಬನ್ನಿ
  ಏ ಪಕ್ಷಿ ರಾಜ ಬಾನ ತೇಜ ಬಾ ಬಾ
  ಆಹಾ ಆಹಾ ಏನು ರೋಷ ಏನೋ ಆವೇಶ ಎಲ್ಲ ನಮ್ಮಂಥ ಬಡ ಪ್ರಾಣಿಗಳ ಮೇಲೇನೆ ನಿನ್ನ ಪೌರುಷ
  ಸಾಕು ಸಾಕು ಬರಿ ಒಣ ಜಂಬದಿಂದ ಏನು ಪ್ರಯೋಜನವಿಲ್ಲ
  ವೃತ ಕೋಪ ತಾಪ ಪ್ರತಾಪ ಏನು ಸುಖವಿಲ್ಲ
  ನಮ್ಮ ಸರ್ಪ ರಾಜನ ಮುಂದೆ ನಿನ್ನ ದರ್ಪ ಏನು ನಡೆಯೊಲ್ಲ
  ತಾಳು ತಾಳು ನಿನ್ನ ಪೌರುಷ ಆವೇಶ ರೋಷ ಅಲ್ಲಿ ತೊರ್ಸು ಬಾ
  ಅಪಾಯ ಬಂದಾಗ ಉಪಾಯದಿಂದ ಕಾರ್ಯ ಸಾಧಿಸಬೇಕು
  ವೈರಿ ಎದುರಾದಾಗ ಧೈರ್ಯ ತೋರಿ ಛಲದಿಂದ ಗೆಲ್ಲಬೇಕು
  ಕಿ ಕಿ ಕಿ ಕಿ ಎನುತ ಹಾಡೋಣ
  ತೂಗಿ ಬಾಗಿ ಎಲ್ಲರು ಹಾಡೋಣ
  ಎಲ್ಲರು ಹಾಡೋಣ
  ಎಲ್ಲರು ಹಾಡೋಣ  Putti loves this song from the 1979 kannada movie 'Putani Agent 123" . The photos are taken by her with our Canon S3IS while the song is being played on TV. That reminds I need to share some of the photographs she has taken. 

  Saturday, June 11, 2011

  ಜಾರಬಂಡಿ ಆಟ !!

  ಜಾರ ಬಂಡಿ ಆಟ
  ಜಾರಿ ಬೀಳೊ ಆಟ
  ಜಾರಿ ಬಿದ್ದ ರಾಮಣ್ಣ
  ಹಲ್ಲು ಮುರಿದು ಚೂರಾಗಿ
  ಕಣ್ಣಲ್ ಬಂತು ನೀರು
  ಆಡುತ್ತಿದ್ದ ಮಕ್ಕಳು
  ಅವನ ನಗಿಸಿ ನಕ್ಕರು
  ಹ್ಹ ಹ್ಹ ಹ್ಹ ...

  Saturday, June 04, 2011

  ಮಳೆ ಮಳೆ ಮಲ್ಲಪ್ಪ !!


  ಮಳೆ ಮಳೆ ಮಲ್ಲಪ್ಪ
  ಕೈಯ ಚಾಚೋ ಕರಿಯಪ್ಪ
  ಮಳೆ ಮಳೆ ಮಲ್ಲಪ್ಪ
  ಕೈಯ ಚಾಚೋ ಕರಿಯಪ್ಪ
  ತಿರುಗೊ ತಿರುಗೊ ತಿಮ್ಮಪ್ಪ
  ತಿರುಗಲಾರೆ ಉಸ್ಸಪ್ಪ !!
  ಮಳೆ ಬಂತು ಮಳೆ
  ಕೊಡೆ ಹಿಡಿದು ನಡೆ
  ಮಣ್ಣಿನಲ್ಲಿ ಜಾರಿ ಬಿದ್ದು
  ಬಟ್ಟೆ ಎಲ್ಲಾ ಕೊಳೆ

  ಬಿಸಿಲು ಬಂತು ಬಿಸಿಲು
  ಕೋಟು ಟೋಪಿ ತೆಗೆ
  ಬಾವಿಯಿಂದ ನೀರು ಸೇದಿ
  ಸೋಪು ಹಾಕಿ ಒಗೆ

  Sunday, May 22, 2011

  ತೋಟಕೆ ಹೋಗೊ ತಿಮ್ಮ..

  ತೋಟಕೆ ಹೋಗೊ ತಿಮ್ಮ
  ತೋಳ ಬಂದೀತಮ್ಮ
  ಹಸು ಮೇಯ್ಸೋ ತಿಮ್ಮ
  ಹಸು ಹಾದೀತಮ್ಮ
  ಒಲೆ ಉರಿಸೊ ತಿಮ್ಮ
  ಉರಿ ಸುಟ್ಟೀತಮ್ಮ
  ಪಾಠ ಬರೆಯೋ ತಿಮ್ಮ
  ಬಳಪ ಇಲ್ಲ ಅಮ್ಮ

  ಹೂವು ಬಿಡಿಸೊ ತಿಮ್ಮ
  ಹಾವು ಕಚ್ಚೀತಮ್ಮ
  ಕಾವಲಿ ತಾರೋ ತಿಮ್ಮ
  ಕಾಲು ನೋವು ಅಮ್ಮ
  ನೀರು ಸೇದೊ ತಿಮ್ಮ
  ಕೈ ನೋವು ಅಮ್ಮ
  ಊಟಕೆ ಬಾರೋ ತಿಮ್ಮ
  ಓಡಿ ಬಂದೆ ಅಮ್ಮ

  Saturday, May 21, 2011

  ಹಂಪ್ಟಿ ಡಂಪ್ಟಿ ಕನ್ನಡದಲ್ಲಿ

  ಇಂಗ್ಲಿಷ್ ಶಿಶು ಗೀತೆಗಳನ್ನ ಕನ್ನಡಕ್ಕೆ ಅನುವಾದ ಮಾಡಿರುವುದನ್ನು ಹಿಂದೊಮ್ಮೆ ಇಲ್ಲಿ ಬರೆದಿದ್ದೆ.  ಮಕ್ಕಳಿಗೆ ಕಲಿಸಲು ಕನ್ನಡದಲ್ಲೇ ಬೇಕಾದಷ್ಟು ಚೆಂದದ ಶಿಶುಗೀತೆಗಳಿವೆ. ಅವುಗಳ ಜೊತೆಗೆ ಈ ಕನ್ನಡೀಕರಿಸಿದ ಆಂಗ್ಳ ಪದ್ಯಗಳನ್ನೂ ಮಕ್ಕಳಿಗೆ ಪರಿಚಯ ಮಾಡಿಕೊಡಬಹುದು.
  Humpty Dumpty sat on a wall
  Humpty Dumpty had a great fall
  All the king's horses and all the king's men
  Couldn't put Humpty Dumpty together again

  ಈ ಹಾಡನ್ನ ನಿಶುಮನೆಯಲ್ಲಿ ಅವರಮ್ಮ ಚಿತ್ರಗಳ ಜೊತೆಗೆ ಬರ್ದಿದ್ದು ಹೀಗೆ.... ಅಲ್ಲಿ ಪುಟ್ಟ ನಿಶು ಈ ಹಾಡನ್ನ ಮುದ್ದಾಗಿ ಹಾಡಿರೋ ವಿಡಿಯೋ ಕೂಡ ಇದೆ ನೋಡಿ ಖುಶಿ ಪಡಿ!!
  ಮೊಟ್ಟೆರಾಯ ಕೂತ್ಕೊಂಡಿದ್ದ ಮೋಟು ಗೋಡೆ ಮೇಲೆ
  ಬಿದ್ದೇ ಹೋದನಂತೆ ಎತ್ತೋರ್ಯಾರ್ರೀ ಮೇಲೆ ?
  ಕುದ್ರೆ ಹತ್ತಿ ಬಂದರಂತೆ ದಂಡಿನೋರು ನೂರು...
  ಯಾರು ಬಂದ್ರೆ ತಾನೆ ಮೊಟ್ಟೆ ಚೂರು ಚೂರು
    ಈಗ ’ಅಪ್ಪು ಸೀರೀಸ್’ ನವರು ಈ ಇಂಗ್ಳೀಶ್ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿ ಕಾರ್ಟೂನ್ ಮಾಡಿ ಹಾಕಿದ್ದಾರೆ ನೋಡಿ. ಇಂಗ್ಳೀಶಿನವರು ಒಟ್ಟುಗೂಡಿಸಲಾಗದ ’ಹಂಪ್ಟಿ ಡಂಪ್ಟ” ಯನ್ನ  ಇವರು ಸರಿ ಮಾಡಿದ್ದಾರೆ ;)
  ಚಿಣ್ಣರ ನಾಯಕ ಡುಮ್ಮಣ್ಣ
  ಗೋಡೆ ಮೇಲಿಂದ ಜಾರಿದ್ದ
  ಸೇನೆ ಜೊತೆಯಲಿ ರಾಜನು
  ಡುಮ್ಮನ ಸರಿ ಮಾಡ್ದಿದ್ದ

  Thursday, May 12, 2011

  ಕುಂಟೆ ಬಿಲ್ಲೆ

  ಶಾಲೆಯಿಂದ ಬಂದ್ಮೇಲೆ ಆಡ್ತಾಯಿದ್ದ ಕುಂಟೆ ಬಿಲ್ಲೆ ಆಟ ನೆನಪಿದ್ಯಾ? ಚಪಟ್ಟೆಯಾದ ಕಲ್ಲನ್ನು "ಬಚ್ಚ"ಅಂತ ಇದ್ದದ್ದು.....ಕಡ್ಡಿ ಹಿಡಿದು ಮಣ್ಣಿನ ನೆಲದ ಮೇಲೆ  ಗೆರೆಗಳ ಬರೆಯೋದು.. ರೋಡಿಗೆ ಟಾರ್(ಡಾಂಬಾರು) ಹಾಕಿದ ಮೇಲೆ ಸೀಮೆಸುಣ್ಣ ಅಥವಾ ಇಟ್ಟಿಗೆ ಚೂರಿನಿಂದ ಬರೀತಾ ಇದ್ವಿ.. ಆಮೇಲೆ ”ಬಚ್ಚ’ಗೆ ಮುತ್ತು ಕೊಟ್ಟು, ದೇವರನ್ನು ನೆನದು ಬಚ್ಚ ಗೆರೆಗೆ ತಾಕದಿರಲಿ ಅಂತ ಅವನ ಬೇಡಿ ಕೊಂಡು ಎಸೆದು. ಪಾದ ಗೆರೆಗೆ ತಾಕದಂತೆ ಎಚ್ಚರ ವಹಿಸಿ ಎಲ್ಲಾ ಮನೆಗಳಿಗೆ ಕುಂಟುತ್ತ ಹೋಗಿ, ಹಿಂತಿರುಗಿ ಬರುವಾಗ ಮರೆಯದೇ ಬಚ್ಚವನ್ನು ಎತ್ತಿಕೊಂಡು ಬರೋದು. ಆಮೇಲೆ ಚಾಚಿದ ಅಂಗೈ ಮೇಲೆ ಬಚ್ಚ ಇಟ್ಟುಕೊಂಡು ಕುಂಟೋದು, ಕೈಯನ್ನು ಮುಷ್ಟಿ ಮಾಡಿ ಅದರ ಮೇಲೆ ಬಚ್ಚ ಇಟ್ಟುಕೊಂಡು ಕುಂಟೋದು, ಕಣ್ಣು ಮುಚ್ಚಿಕೊಂಡು ಮನೆಗಳಿಗೆ ನಡೆದು ಕೊಂಡು ಹೋಗುತ್ತಾ "Am I right" ಅಂತ ಕೇಳೋದು. ಆ ದಿನಗಳೇ ಚೆಂದ ಅಲ್ವಾ :))

  ಇವೆಲ್ಲಾ ಈಗಿನ ಮಕ್ಕಳು ಆಡ್ತಾರಾ? ಅವರಿಗೆ ಹೇಳಿ ಕೊಡಲು ದೊಡ್ಡವರಿಗೆ ಪುರುಸೊತ್ತು ಇದ್ಯಾ?

  ನಮ್ಮ್ ಪುಟ್ಟಿಗಂತು ಈಗ ಇದು ನೆಚ್ಚಿನ ಆಟ. ಅವಳ ಆಟಕ್ಕೆ ಯಾವುದೇ ರೂಲ್ಸ್ ಇಲ್ಲ. ಅವಳಿನ್ನೂ ಒಂದು ಕಾಲಿನಲ್ಲಿ ನೆಗೆಯುವುದು(ಕುಂಟೋದು) ಕಲಿತಿಲ್ಲ. ಸುಮ್ಮನೆ ಎಲ್ಲಾ ಮನೆಗಳಿಗೂ ಅಂಕಿಗಳ ಎಣಿಸುತ್ತಾ ನೆಗೆಯುತ್ತಾ ಹೋಗ್ತಾಳೆ. ನೆಗೆಯುವುದರ ಜೊತೆಗೆ ’ಒಂದು ಎರಡು’ ಎಣಿಕೆಯ ಹಾಡನ್ನು ಹೇಳುತ್ತಾ ನೆಗೆಯುವುದು ರೂಢಿ ಮಾಡಿರುವೆ. ಈಗವಳಿಗೆ ಈ ಹಾಡು ಬಾಯಿಪಾಠವಾಗಿದೆ.
  ಒಂದು ಎರಡು ಬಾಳೆಲೆ ಹರಡು
  ಮೂರು ನಾಲ್ಕು ಅನ್ನ ಹಾಕು
  ಐದು ಆರು ಬೇಳೆ ಸಾರು
  ಏಳು ಎಂಟು ಪಲ್ಯಕೆ ದಂಟು
  ಒಂಬತ್ತು ಹತ್ತು ಎಲೆ ಮುದಿರೆತ್ತು
  ಒಂದರಿಂದ ಹತ್ತು ಹೀಗಿತ್ತು 
  ಊಟದ ಆಟವು ಮುಗಿದಿತ್ತು !!
  ಅಲ್ಲದೆ ಈ ಮನೆಗಳಲ್ಲಿ ಅಂಕಿಗಳನ್ನು ಕನ್ನಡದಲ್ಲಿ ಬರೆದು, ’ಒಂದನೆ’ ಮನೆಗೆ ಹೋಗಿ ನಿಲ್ಲು ಅಥ್ವಾ ’ನಾಲ್ಕನೆ’ ಮನೆಗೆ ಹೋಗು ಎಂದು ಹೇಳುತ್ತಾ ಆಟವಾಡುತ್ತಾ ಸುಲಭವಾಗಿ ಅಂಕಿಗಳನ್ನೂ ಕಲೀಬಹುದು:)
  ಅಂಕಿಗಳ ಮತ್ತೊಂದು ಹಾಡು:

  ಒಂದು ಎರಡು ತಿಂಡಿ ತಿನ್ನಕ್ ಹೊರಡು
  ಮೂರು ನಾಲ್ಕು ನಾಲ್ಕೇ ದೋಸೆ ಸಾಕು
  ಐದು ಆರು ಬಿಸಿ ಕಾಫಿ ಹೀರು
  ಏಳು ಎಂಟು ಸ್ಕೂಲಿಗೆ ರಜ ಉಂಟು
  ಒಂಬತ್ತು ಹತ್ತು ಬಂತು ಆಟದ ಹೊತ್ತು!!


  ಒಂದು ಎರಡು ಬೇಸನ್ ಲಾಡು
  ಮೂರು ನಾಲ್ಕು ಮೈಸೂರ್ ಪಾಕು
  ಐದು ಆರು ಶ್ಯಾವಿಗೆ ಖೀರು(ಬಾದಾಮಿ ಖೀರು)
  ಏಳು ಎಂಟು ಪೆಪ್ಪರ್‍ಮಿಂಟು(ಮಿಠಾಯಿ ಗಂಟು)
  ಒಂಬತ್ತು ಹತ್ತು ಕೇಸರಿ ಬಾತು( ಗರಂ ಗರಂ ಬಿಸ್ಕತ್ತು) !!

  Sunday, May 01, 2011

  ಮಲ್ನಾಡಿನ್ ಮೂಲೆನಾಗೆ..

  ಚಿತ್ರ: ಸುವರ್ಣ ಸೇತುವೆ (1983)

  ಸಾಹಿತ್ಯ: ಗೀತಪ್ರಿಯ
  ಸಂಗೀತ: ವಿಜಯ ಭಾಸ್ಕರ್
  ಗಾಯನ: ವಾಣಿ ಜಯರಾಂ

  ತಂದಾನಿ ತಂದ ನಾನ ತನ ನನನಾ

  ಮಲ್ನಾಡಿನ ಮೂಲೆನಾಗೆ ಇತ್ತೊಂದು ಸೋಮನ ಹಳ್ಳಿ
  ಆ ಹಳ್ಳಿಲೆಲ್ಲ ಜನರು ಲೋಕನೆ ಗೊತ್ತಿಲ್ದೋರು
  ಅದರೊಳಗೆ ಮುದುಕಿ ಒಬ್ಬಳು ದೌಲಿಂದ್ಲೆ ಮೆರಿತಿದ್ಲು
  ಅವಳಂತು ಬೋ ಘಾಟಿ ಜಂಬಗಾತಿ

  ಆ ಮುದುಕಿ ಜಂಬದ ಕೋಳಿ ಸಾಕಿರಲು
  ಆ ಕೋಳಿ ಕೊಕ್ಕೋ ಅಂತ ಕೂಗಿರಲು
  ಅದ್ರಿಂದ್ಲೇ ಉರಿಯೋ ಸೂರ್ಯ ಮೂಡ್ತೈತೆಂದು
  ತನ್ನಿಂದ್ಲೇ ಲೋಕ ಬೆಳಕು ಕಾಣ್ತೈತೆಂದು
  ತಾನಿಲ್ದೇ ಲೋಕವೇ ಇಲ್ಲ ತನ್ನ ಬಿಟ್ಟರೆ ಬದುಕೆ ಇಲ್ಲ
  ಅಂದ್ಕೊಂಡೆ ಕೊಬ್ಬಿಂದ ಸೊಕ್ಕಿದ್ದಳು

  ತಂದಾನಿ ತಂದ ನಾನ ತನ ನನನಾ

  ಊರ್ನೋರ್ಗೆ ತನ್ನ ದರ್ಪ ತೋರಿಸ್ಬೇಕೆಂದು
  ಕಂಕ್ಳಾಗೆ ತನ್ನ ಕೋಳಿ ಬಚ್ಚಿಟ್ಕೊಂಡು
  ಕತ್ಲಾಗೆ ಒಂದೊಂದೇನೆ ಹೆಜ್ಜೆ ಇಟ್ಕೊಂಡು
  ಕಾಡ್ನಾಗೆ ಸೇರ್ಕೊಂಡ್ಲು ಹೊತ್ ನೋಡ್ಕೊಂದು
  ಬೆಳ್ಗಾಯ್ತು ಯಾವತ್ನಂಗೆ ಪೆಚ್ಚಾದ್ಲು ಮುದುಕಿ ಹಂಗೆ
  ನಡೆದೈತೆ ಈ ಲೋಕ ಮಾಮೂಲ್ನಂಗೆ
  ತಂದಾನಿ ತಂದ ನಾನ ತನ ನನನಾ

  Monday, April 18, 2011

  ಶ್ರೀ ಮಹಾತ್ಮ ಗಾಂಧಿ !

  ಬಲಗೈಯಲ್ಲಿ ಗೀತೆ
  ಎಡಗೈಯಲ್ಲಿ ರಾಠೆ
  ಹಿಡಿದವರ್ಯಾರು ಗೊತ್ತೆ
  ಅವರೆ ನಮ್ಮ ಗಾಂಧಿ
  ಶ್ರೀ ಮಹಾತ್ಮ ಗಾಂಧಿ

  ಮಕ್ಕಳಿಗೆಲ್ಲಾ ತಾತ
  ವಿಶ್ವಕ್ಕೆಲ್ಲ ಧಾತ
  ಅಂತಹವರ್ಯಾರು ಗೊತ್ತೆ
  ಅವರೆ ನಮ್ಮ ಗಾಂಧಿ
  ಶ್ರೀ ಮಹಾತ್ಮ ಗಾಂಧಿ

  ಕೈಯಲ್ಲೊಂದು ಕೋಲು
  ಅವರಿಗಿಲ್ಲಾ ಸೋಲು
  ಅಂತಹವರ್ಯಾರು ಗೊತ್ತೆ
  ಅವರೆ ನಮ್ಮ ಗಾಂಧಿ
  ಶ್ರೀ ಮಹಾತ್ಮ ಗಾಂಧಿ

  ಇನ್ನೊಂದು ವಿಡಿಯೋ ಇಲ್ಲಿದೆ

  Sunday, April 10, 2011

  ಬೇಟೆಗಾರ !!  ಬೇಟೆಗಾರ ಬಂದ
  ಬಿಲ್ಲು ಬಾಣ ತಂದ
  ಕಾಡು ಹಂದಿ ಕೊಂದ
  ಬೆಂದ ಹಂದಿ ತಿಂದ
  ಹೊಟ್ಟೆ ನೋವು ಅಂದ
  ಮರದ ಕೆಳಗೆ ಬಿದ್ದ
  ಹುಲಿರಾಯ ಬಂದ
  ಹೊಟ್ಟೆ ತುಂಬ  ತಿಂದ
  ಹುಲಿರಾಯ ಬಂದ
  ಹೊಟ್ಟೆ ತುಂಬ ತಿಂದ 

  Thursday, April 07, 2011

  ದಿನಚರಿ

  ದಿನಚರಿ
  ದಿನವು ಬೇಗ ಏಳಬೇಕು
  ಎದ್ದು ಹಲ್ಲನುಜ್ಜಬೇಕು
  ಉಜ್ಜಿ ಮುಖವ ತೊಳೆಯಬೇಕು
  ದಿನವು ಸ್ನಾನ ಮಾಡ ಬೇಕು

  ದೇವರಿಗೆ ನಮಸ್ಕರಿಸಿ
  ತಿಂಡಿಯನ್ನು ತಿನ್ನಬೇಕು
  ಗುರುವಿಗೆ ನಮಸ್ಕರಿಸಿ
  ಶಾಲೆಯಲ್ಲಿ ಕಲಿಯಬೇಕು

  Wednesday, April 06, 2011

  ವಸಂತ ಬಂದ!!

  ವಸಂತ ಬಂದ ಋತುಗಳ ರಾಜ ತಾ ಬಂದ
  ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
  ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
  ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

  ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
  ಇನಿಯರ ಬೇಟ ಬನದಲಿ ಬೆಳದಿಂಗಳೂಟ
  ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
  ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

  ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
  ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
  ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
  ಕೊವೂ ಜಗ್ ಜಗ್ ಪುವ್ವೀ ಟೂವಿ ಟ್ಟವೂ !

  ಬಂದ ವಸಂತ -ನಮ್ಮಾ ರಾಜ ವಸಂತ !!
  -ಬಿ. ಎಂ.ಶ್ರೀ.
  ಇದು ಬಿ.ಎಂ .ಶ್ರೀಕಂಠಯ್ಯನವರು ಅನುವಾದಿಸಿರುವ 'ಇಂಗ್ಲಿಷ್ ಗೀತೆಗಳು’  ಕವನ ಸಂಕಲನದ್ದು. ಇದರ ಮೂಲ ಪದ್ಯ Thomas Nashe ರವರ `Spring, the Sweet Spring’