Saturday, August 28, 2010

Family Portrait drawings

ಪುಟ್ಟಿ ಕೈಯಲ್ಲಿ ಅವಳ ಮತ್ತು ನಮ್ಮ ಚಿತ್ರಗಳು ಮೂಡಿದ್ದು ಹೀಗೆ :) ಇಲ್ಲಿ ’S' ಬರೆಯಲು ನಾನು ಚುಕ್ಕಿ ಹಾಕಿಕೊಟ್ಟಿರುವೆ, ಮಿಕ್ಕಿದೆಲ್ಲಾ ಬರೆದದ್ದು ಅವಳೇ!ಅಮ್ಮನಿಗೆ ಓಲೆ ಕೂಡ ಹಾಕಿದ್ದಾಳೆ ನೋಡಿ! ’M' ಬರೆಯಲು ಆಗದೇ ಇದ್ದಾಗ ನಾನೇ ಬರೆದದ್ದು..

Thursday, August 26, 2010

ಹಕ್ಕಿ ಗೂಡು...

ಮೊನ್ನೆ ನಾನು ಪುಟ್ಟಿ ಸೇರಿ shredded ಪೇಪರ್ ನಿಂದ ಈ ಹಕ್ಕಿ ಗೂಡು ಮಾಡಿದ್ವಿ. ಸದ್ಯಕ್ಕೆ ಅದರೊಳಗೆ ಈಸ್ಟರ್ ಮೊಟ್ಟೆ ಕುಳಿತಿದೆ:)
ಇದನ್ನ ಮಾಡೋದು ಬಲು ಸುಲಭ. ಒಂದು ಬಟ್ಟಲಿಗೆ ಪ್ಲಾಸ್ಟಿಕ್ ವ್ರಾಪ್ ಸುತ್ತುವುದು. ಅದರ ಮೇಲೆ ಸ್ವಲ್ಪ ಗೋಂದು (glue) ಬಳಿದು ಒಂದಷ್ಟು ಪೇಪರ್ ಹಾಕೋದು. ನಂತರ ಮತ್ತೆ ಗಮ್ ಮತ್ತೆ ಪೇಪರ್ ಹೀಗೆ ಮಾಡುತ್ತಾ ಅಗಾಗ್ಗೆ ಪೇಪರ್ ತುಂಡುಗಳನ್ನು ಬಟ್ಟಲಿಗೆ ಅದಮುವುದು. ಕೊನೆಯಲ್ಲಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ನಿಧಾನಕ್ಕೆ ಬಿಡಿಸಿಕೊಂಡರೆ ಆಯಿತು:)


ನಮ್ಮ ಮನೆಯಲ್ಲೊಂದು
ಗುಬ್ಬಿ ಗೂಡು ಕಟ್ಟಿತು
ಗೂಡಿನೊಳೊಗೆ ಹುಲ್ಲು ಹಾಸಿ
ಮೊಟ್ಟೆ ಇಟ್ಟಿತು
ಮೊಟ್ಟೆಯೊಡೆದು ಒಳಗಿನಿಂದ
ಮರಿಯು ಬಂದಿತು
ಮರಿಯ ಕೂಗು ಕೇಳಿ
ತಾಯಿ ಹೊರಗೆ ಹಾರಿತು
ತಿರುಗಿ ಬಂದು ಮರಿಗೆ ಅದು
ಗುಟುಕು ಕೊಟ್ಟಿತು
ಗುಟುಕು ನುಂಗಿ ಮರಿಯ ರೆಕ್ಕೆ
ಬಲಿಯ ತೊಡಗಿತು
ರೆಕ್ಕೆ ಬಲಿತ ಪುಟ್ಟ ಮರಿ
ಹೇಳ ತೊಡಗಿತು
ಬಲಿತ ಮರಿ ಒಂದು ದಿನ
ಮೇಲೆ ಮೇಲೆ ಹಾರಿತು


Saturday, August 21, 2010

ಬಾ ಬಾರೋ ಚಿನ್ನ...
ಬಾ ಬಾರೋ ಚಿನ್ನ,

ಇನ್ನೆಷ್ಟು ಆಡುವೇ?

ಬೇಡವೆ ಆಟಕೆ ಪುರುಸೊತ್ತು?

ಬೇಡವೆ ಆಟಕೆ ಪುರುಸೊತ್ತು, ನನ್ನ ಚಿನ್ನ?

ನಿದ್ದೆ ಮಾಡುವ ಹೊತ್ತು ಈಗಾಯ್ತು...||


ಬೆಳಗಿಂದ ನೀನು ಎಷ್ಟೊಂದು ಆಡಿದೆ,

ದಣಿವಿಲ್ಲವೇನೋ ನನ್ನ ರಾಜ

ದಣಿದಿಲ್ಲವೇನೋ ನನ್ನ ಮುದ್ದು ರಾಜಣ್ಣ

ನಿದ್ದೆ ಮಾಡುವ ಹೊತ್ತು ಈಗಾಯ್ತು...||


ನಾಳೆ ಆಡುವೆಯಂತೆ,

ತೀಟೆ ಮಾಡುವೆಯಂತೆ,

ನಿದ್ದೆಯ ಮಾಡೋ ಬಂಗಾರ

ನಿದ್ದೆ ಮಾಡೋ ಬಂಗಾರ - ದಮ್ಮಯ್ಯ

ಮಲಗುವ ಹೊತ್ತು ಈಗಾಯ್ತು...||


ಹಾಲು ಕೆನ್ನೆಯ ರಾಜ,

ಕಪ್ಪು ಕಂಗಳ ತೇಜ

ತೂಗುವೆ ಬಾರೋ ನನ್ನ ಪುಟ್ಟ

ತೂಗುವೆ ಬಾರೋ ನನ್ನ ಪುಟ್ಟಣ್ಣ

ಮಲಗುವ ಹೊತ್ತು ಈಗಾಯ್ತು...||


ಜೋಗುಳವಾ ಹಾಡುವೆನೋ,

ನಿನ್ನ ಮುದ್ದಾಡುವೆನೋ

ಬಿಗಿದಪ್ಪಿ ಹಾಡುವೆನೋ ನಿನ್ನ ಮುದ್ದಡುವೆನೋ

ಮಡಿಲಿಗೆ ಬಾರೋ ತುಂಟಣ್ಣ

ಮಡಿಲಿಗೆ ಬಾರೋ ತುಂಟಣ್ಣ


ನನ್ನೊಡೆಯ ಮಲಗುವ ಹೊತ್ತು ಈಗಾಯ್ತು

ನಿದ್ದೆ ಮಾಡುವ ಹೊತ್ತು ಈಗಾಯ್ತು...

ಮಲಗಲು ಬಾರೋ ತುಸು ಹೊತ್ತು...

ಮಲಗುವ ಹೊತ್ತು ಈಗಾಯ್ತು...||

ಶ್ರೀನಿವಾಸ್ ಅವರು ಅವರ ಅಕ್ಕನ ಮಗ ಪ್ರದ್ಯುಮ್ನನಿಗೆ ಮಧ್ಯಮಾವತಿ ರಾಗದಲ್ಲಿ ಹಾಡಿರುವ ಹಾಡು ಕೇಳಿ...
Get this widget | Track details | eSnips Social DNA

Friday, August 20, 2010

ಕೆನ್ನೆ ಇರೋದು ಪೈಂಟ್ ಮಾಡೋಕೆ !!!

ಪುಟ್ಟಿ ಅಪ್ಪನಿಗೆ ಪುಟ್ಟಿಯ ಮೃದುವಾದ ಕೆನ್ನೆಗಳ ಮೇಲೆ ಕಣ್ಣು. ಯಾವಾಗ್ಲೂ ಅದನ್ನ ಕಚ್ಚೋಕೆ ಪ್ರಯತ್ನಿಸೋದು, ಅವಳು ಬೇಡ ಬೇಡ ಅಂತ ಕಿರುಚೋದು ನಡದೇ ಇದೆ. ಮೊನ್ನೆ ಹೇಮಂತ್ “ಪುಟ್ಟಿ, ನಿನ್ನ್ ಕೆನ್ನೆ ಕೊಡು ಕಚ್ಚಿ ತಿಂತೀನಿ ಅಂದ್ರು. ಅದಕ್ಕೆ ತಟ್ಟಂತ ಪುಟ್ಟಿ “ಅಪ್ಪ, ಕೆನ್ನೆ ಇರೋದು ಪೈಂಟ್ ಮಾಡೋಕೆ. ಊಟ ಕಚ್ಚು” ಅಂದ್ಲು J

ಎಲ್ಲಿ ಹೋದ್ರು ಮುಖ(ಕೆನ್ನೆ)ಗೆ ಬಣ್ಣ ಹಚ್ಚಿಸಿಕೊಳ್ಳೊದು ಪುಟ್ಟಿಗೆ ಇಷ್ಟ. ಅಲ್ಲದೆ ಮನೆಯಲ್ಲೂ ಆಗಾಗ್ಗೆ ನನ್ನ ಹತ್ರ ಬಣ್ಣ ಹಾಕಿಸಿಕೊಳ್ತಾಳೆ. ಅವಳ ಬಣ್ಣಬಣ್ಣದ ಮುಖಗಳು....

ಏಳು ತಿಂಗಳ ಮಗುವಾಗಿದ್ದಾಗ ಸೇರಾ ಅಕ್ಕನ ಬರ್ತ್-ಡೇನಲ್ಲಿ ಮೊದಲ ಬಾರಿಗೆ ಬಣ್ಣ ಹಾಕಿಸಿಕೊಂಡಿದ್ದು


Sun n Baloons
Ladybug
Star
Monticello Watermelon Festival 2010
Fun Station 2010
Butterfly- a favourite
Balloons again


Wednesday, August 18, 2010

ಅಪ್ಪನಿಗೆ ಬುದ್ಧಿವಾದ ....


ಇವತ್ತು ಬೆಳಗ್ಗೆ ತಿಂಡಿಗೆ ರೊಟ್ಟಿ ತಿನ್ನೋವಾಗ ಹೇಮಂತ್ ಒಂದೂವರೆ ತಿಂದು ನಂಗೆ ಸಾಕಾಯ್ತು ಅಂದ್ರು. ನಾನು ಇನ್ನರ್ಧ ತಿನ್ನಿ ಅಂದೆ. ಅವರು ಸುಮ್ನೆ ಯಾಕೆ ನಂಗೆ ಬಲವಂತ ಮಾಡ್ತೀಯ ಬೇಡ ಅಂದ್ರು. ನಾನು ಸುಮ್ಮನಿರದೆ, ಅರ್ಧ ರೊಟ್ಟಿ ಹೆಚ್ಚೇನಾಗೊಲ್ಲ ತಿನ್ನಿ ಅಂತ ವತ್ತಾಯಿಸುತ್ತಿದ್ದೆ. ಅಡುಗೆಮನೆಲಿ exhaust fan ಓಡ್ತಾಯಿದ್ದರಿಂದ ಸ್ವಲ್ಪ ಧ್ವನಿ ಏರಿಸಿ ಮಾತಾಡುತ್ತಿದ್ದೆ. ಅವರೂ ಬೇಡ ಬೇಡ ಅಂತನೇ ಇದ್ದ್ರು. ಅಷ್ಟ್ರಲ್ಲಿ ತನ್ನ ಡ್ರಾಯಿಂಗ್ ಟೇಬಲ್ ನಲ್ಲಿ ತಿಂಡಿ ತಿನ್ನುತ್ತಿದ್ದ ಪುಟ್ಟಿ ಬಂದು “ಅಪ್ಪ ಸುಮ್ನೆ ರೊಟ್ಟಿ ತಿನ್ನು, ಅಮ್ಮ ಕೊಟ್ಟಿದ್ದು ನಾನು ತಿಂತಾಯಿಲ್ಲ(ತಿಂತಾಯಿಲ್ವಾ) ಹಂಗೆ ತಿನ್ನು” ಅಂತಂದ್ಲು. ಆಹಾ! ನನ್ನ ಖುಶಿಗೆ ಮಿತಿಯೇ ಇರಲಿಲ್ಲJ

Sunday, August 15, 2010

ನಮ್ಮ ದೇಶ ಭಾರತ !!

ಭಾರತದ ಸ್ವಾತಂತ್ರ ದಿನೋತ್ಸವದ ಅಂಗವಾಗಿ ಪುಟ್ಟಿ ಕೈಯಲ್ಲಿ ಇವನ್ನು ಪೈಂಟ್ ಮಾಡಿಸಿದೆ.

ಕೇಸರಿ (ಇಲ್ಲಿ ಕಂದು ಬಣ್ಣವಾಗಿದೆ) ಮತ್ತು ಹಸಿರು ಬಣ್ಣದ ಪಟ್ಟಿಗಳನ್ನು ಅಗಲ ಬ್ರಷ್ ನಲ್ಲಿ ಪುಟ್ಟಿ ಬರೆದಳು. ನೀಲಿ ಬಣ್ಣದ ಚಕ್ರ Fiori pasta ದಿಂದ ಮಾಡಿದ್ದು. Ruote ಉಪಯೋಗಿಸಿದರೆ ಚಕ್ರದ ಆಕಾರ ಇನ್ನೂ ಚೆನ್ನಾಗಿ ಮೂಡುತ್ತದೆ, ಅದು ಮನೆಯಲ್ಲಿ ಇರಲಿಲ್ಲ:(


ಹುಲಿ
ಅಂಗೈಗೆ ಬಣ್ಣ ಹಚ್ಚಿ ತಲೆ ಮಾಡಿದೆವು. ಆಮೇಲೆ ಹೆಬ್ಬೆರಳು ಬಿಟ್ಟು ಉಳಿದೆಲ್ಲಾ ಕಡೆ ಬಣ್ಣ ಬಳಿದು ದೇಹ, ಒಂದು ಬೆರಳಿನಿಂದ ಬಾಲ ಮತ್ತು ಕಾಲುಗಳು, ಬೆರಳ ತುದಿಯಿಂದ ಕಿವಿಗಳು. ಇದು ಒಣಗಿದ ಮೇಲೆ ಕಪ್ಪು ಬಣ್ಣದ ಗೆರೆ ಮತ್ತು ಚುಕ್ಕಿಗಳು!


ನವಿಲು

ಕಮಲ

ಕೈ ಗುರುತು ಪುಟ್ಟಿಯದು. ಕಪ್ಪು ಪೆನ್ನಿನಲ್ಲಿ ಬರೆದದ್ದು ನಾನು. ಈ ನವಿಲು ಮತ್ತು ಕಮಲವನ್ನು ಇಲ್ಲಿ ನೋಡಿದ್ದೆ!ಮಾವಿನ ಹಣ್ಣು!

ಮೊದಲು ಒಂದು ಪೇಪರ್ ಪೂರ್ತಿ ಬಣ್ಣ ಬಳಿದು ಅದನ್ನು ಒಣಗಲು ಬಿಟ್ಟೆವು. ನಂತರ ಅದನ್ನು ಚಿಕ್ಕ ಚಿಕ್ಕ ಚೂರುಗಳಾಗಿ ಕತ್ತರಿಸಿ, (ಪುಟ್ಟಿ ಈಗಷ್ತೆ ಕತ್ತರಿಸಲು ಕಲಿಯುತ್ತಿದ್ದಾಳೆ) ಒಂದು ಹೊಸ ಹಾಳೆಯ ಮೇಲೆ ಮಾವಿನ ಚಿತ್ರವನ್ನು ಬರೆದು ಅದರ ಒಳಗೆ ಚೂರುಗಳನ್ನು ಅಂಟಿಸುವುದು. ಕೊನೆಯಲ್ಲಿ ಬರೆದ ಚಿತ್ರವನ್ನು ಅಳಿಸಿಬಿಟ್ಟೆವು :)


Friday, August 06, 2010

ಬಾ ಬಾ ಚಂದು ಮಾಮ

ಪುಟ್ಟಿ ಬರೆದಿರುವ ಪೂರ್ಣ ಮತ್ತು ಅರ್ಧ ಚಂದ್ರ :)


ಬಾ ಬಾ ಚಂದು ಮಾಮ
ಮುತ್ತು ಕೊಡು ಬಾ
ಕಬ್ಬು ಹೆಚ್ಚಿ ತಿರುಳೇ ಕೊಡುವೆ
ಮಾವು ಹೆಚ್ಚಿ ವಾಟೀ ಕೊಡುವೆ
ಬಾಬಾ ಚಂದು ಮಾಮ
ತಿಂಡಿ ತಿನ್ನು ಬಾ
ಕೌಲಿ ಹಾಲು ಕರೆಯಿಸಿ ಕೊಡುವೆ
ಹಾಲು ಕುಡಿಯಲು ಬಟ್ಟಲು ಕೊಡುವೆ
ಬಾ ಬಾ ಚಂದು ಮಾಮ
ಹಾಲು ಕುಡಿ ಬಾ
ತುಪ್ಪದ ದೀಪ ಹಚ್ಚಿ ಇಡುವೆ
ಪುಟ್ಟ ಪುಸ್ತಕ ಓದಲು ಕೊಡುವೆ
ಬಾ ಬಾ ಚಂದು ಮಾಮ
ಪಾಠ ಓದು ಬಾ
ಆಟದ ಸಾಮಾನೆಲ್ಲಾ ಕೊಡುವೆ
ನಿನ್ನ ಸಂಗಡ ಆಡುತಲಿರುವೆ
ಬಾಬಾ ಚಂದು ಮಾಮ ಬಾ
ಕೂಡಿ ಆಡು ಬಾ


-ಹೊಯಿಸಳ