Monday, October 25, 2010

ಮಲ್ಟಿ ಕಲ್ಚರ್ ಡೇ!!

ಪುಟ್ಟಿ ಶಾಲೆಯಲ್ಲಿ ನಿನ್ನೆ ಭಾನುವಾರ ’ಮಲ್ಟಿ ಕಲ್ಚರ್ ಡೇ’ ಆಚರಿಸಿದರು. ಎಲ್ಲರೂ ಅವರವರ ದೇಶದ ಉಡುಗೆ ತೊಟ್ಟು ಹೋಗಬೇಕಿತ್ತು. ಪುಟ್ಟಿ ಎಂದಿನಂತೆ ಉತ್ಸಾಹದಿಂದ ಸಿಂಗರಿಸಿಕೊಂಡು ಹೊರಟಳು. ಅಲ್ಲಿ ಎಲ್ಲಾ ಮಕ್ಕಳಿಂದ ಒಂದು ಸಣ್ಣ ಕಾರ್ಯಕ್ರಮವೂ ಇತ್ತು. ಅದರ ವಿಡಿಯೋ ತುಣುಕು.....

ನಮ್ಮ ತ್ರಿರಂಗ..
ನೆಚ್ಚಿನ ಐರೀನ್ ಜೊತೆಯಲ್ಲಿ...

ಇದಾದ ನಂತರ ಎಲ್ಲರ ಜೊತೆಗೂಡಿ ಊಟ ಮಾಡುವ ಕಾರ್ಯಕ್ರಮ. ಎಲ್ಲರೂ ಅವರವರ ದೇಶದ ಒಂದು ಅಡಿಗೆಯನ್ನು ತಂದಿದ್ದರು. ಇದೊಂದು ತರಹ ವಿಶೇಷ ಅನುಭವ!!
ನಮ್ಮ ಶ್ಯಾವಿಗೆ ಪಾಯಸ...

Thursday, October 14, 2010

ಸಂಪಿಗೆ ಮರದ ಹಸಿರೆಲೆ ನಡುವೆ ..





ಚಲನಚಿತ್ರ: ಉಪಾಸನೆ (1974)
ಸಾಹಿತ್ಯ : ಆರ್.ಎನ್. ಜಯಗೋಪಾಲ್
ಸಂಗೀತ : ವಿಜಯಭಾಸ್ಕರ್
ಗಾಯನ : 
ಬಿ.ಕೆ. ಸುಮಿತ್ರ
ಸಂಪಿಗೆ ಮರದ ಹಸಿರೆಲೆ ನಡುವೆ ಕೋಗಿಲೆ ಹಾಡಿತ್ತು
ಚಿಕ್ಕವ್ವ....ಚಿಕ್ಕವ್ವ.....ಎನ್ನುತ ತನ್ನಾ ಗೆಳೆಯರ ಕರೆದಿತ್ತು
ಅದ ಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ದೂರದ ಗುಡಿಯಲಿ ಪೂಜೆಯ ವೇಳೆಗೆ ಘಂಟೆಯು ಮೊಳಗಿತ್ತು
ಟಣ್ ಡಣ್ ಟಣ್ ಡಣ್......
ಎನ್ನುತ ಸೇವೆಗೆ ಎಲ್ಲರ ಕರೆದಿತ್ತು
ಅದಕೇಳಿ ನಾ ಮೈಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ
ಹರಿಯುವ ನದಿಯಾ ನೋಡುತ ನಿಂತೆ ಅಲೆಗಳು ಕುಣಿದಿತ್ತು
ಕಲ ಕಲ ಕಲ ಕಲ......
ಮಂಜುಳ ನಾದವು ಕಿವಿಗಳ ತುಂಬಿತ್ತು
ಅದಕೇಳಿ ನಾ ಮೈ ಮರೆತೆ ಸ್ವರವೊಂದು ಆಗಲೆ ಕಲಿತೆ
ಹಾಡಿದೆ ಈ ಕವಿತೆ ನಾ ಹಾಡಿದೆ ಈ ಕವಿತೆ



Wednesday, October 13, 2010

ಕನ್ನಡ ಕಲಿ ಕಂದ...

ಕನ್ನಡವಿಲ್ಲದ ಈ ಹೊರದೇಶದಲ್ಲಿ ಪುಟ್ಟಿಗೆ ಕನ್ನಡ ಕಲಿಸುವುದು ಒಂದು ಸಾಹಸವೇ ಅನ್ನೋದು ಮೊದಲಿಂದಾ ಗೊತ್ತಿದ್ದೆ ಆದರೂ ಇತ್ತೀಚೆಗೆ ಅದರ ಅರಿವಾಗುತ್ತಿದೆ. ಇಲ್ಲಿಯವರೆಗೆ ಮನೆಯಲ್ಲಿಯೇ ಇದ್ದ ಪುಟ್ಟಿ ಈಗ ವಾರಕ್ಕೆರಡು ಅರ್ಧ ದಿನ ಶಾಲೆಗೆ ಹೋಗಲು ಆರಂಭಿಸಿದ ಮೇಲೆ ಬಹಳ ಬೇಗ ’english' ಮಾತಾಡಲು ಶುರು ಮಾಡಿದ್ದಾಳೆ. ಎಷ್ಟೇ ನೆನಪು ಮಾಡಿದ್ರೂ ಅವಳು ಮೊದಲು ಮಾತಾಡೋದು ಇಂಗ್ಳೀಷಿನಲ್ಲೇ. ಅವಳ ವಯಸ್ಸಿನ ಮಕ್ಕಳೇ ನಮ್ಮ ಕನ್ನಡ ಮಾತಾಡುವ ಹಾಗೆ ಆದ್ರೆ ಅವಳಿಗೂ ಮಾತಾಡಲು ಉತ್ಸಾಹ ಬರುತ್ತೆ ಅನಿಸಿ ಕ್ಲಾಸ್ ಶುರು ಮಾಡೋಣ ಅಂದುಕೊಂಡೆ.
ಕ್ಲಾಸ್ ಶುರು ಮಾಡೋದೇನೋ ಸರಿ. ಆದ್ರೆ ಹೇಳಿ ಕೊಡೋದೇನು? ಹೇಗೆ? ಅಂತ ಬಹಳಷ್ಟು ತಲೆ ಕೆಡಿಸಿಕೊಂಡೆ. ನಾನೇ ಕನ್ನಡ ಸರಿಯಾಗಿ ಕಲಿತಿಲ್ಲ, ಇನ್ನೂ ಈ ಪುಟ್ಟ ಮಕ್ಕಳಿಗೆ ಹೇಳಿ ಕೊಡೋದು ಹೇಗಪ್ಪ... ಸರಿ, ಎಂದಿನಂತೆ 'ಗೂಗಲ್ ದೇವರ’ ಮೊರೆ ಹೋದೆ. 


ಆಗ ನಂಗೆ ಸಿಕ್ಕ ಮೊದಲ ತಾಣ ಕನ್ನಡ ಕಲಿ. ಅಲ್ಲಿಯ ಶ್ರೀ. ವಿಷ್ವೇಶ್ವರ ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದಾಗ ಅವರ  ಉತ್ತರ "ಭಾಷೆ ಕಲಿಸ/ಯಲು ತಕ್ಕ ವಾತಾವರಣ ಅವಶ್ಯ. ಕನ್ನಡ ಮಾತಾಡುವವರ ಮಧ್ಯೆ ಇದ್ದರೆ, ಕನ್ನಡ ಕಿವಿಯ ಮೇಲೆ ಸದಾ ಬಿಳುತ್ತಿದ್ದರೆ ಅದು ತಾನಾಗೆ ಬರುತ್ತದೆ. ಈ ದಿಶೆಯಲ್ಲಿ, ಮನೆಯಲ್ಲಿ ಕನ್ನಡ ಮಾತಾಡುತ್ತ ಸರಿಯಾದುದನ್ನೆ ಮಾಡುತ್ತಿದ್ದೀರಿ. ಮಕ್ಕಳು ಇಲ್ಲಿ ಶಾಲೆಗೆ ಹೋಗುವ ವರೆಗೆ ಯಾವ ಸಂಕೋಚವೂ ಇಲ್ಲದೆ ಸ್ಪಷ್ಟವಾಗಿ ನಿಮ್ಮಡನೆ ಕನ್ನಡದಲ್ಲೆ ಮಾತಾಡುತ್ತಾರೆ. ಶಾಲೆಯ ವಾತಾವರಣದಲ್ಲಿ ತಾವೊಬ್ಬರೆ ಕನ್ನಡ ಮಾತಾಡುವುದನ್ನು ಕಂಡು ಕನ್ನಡ ಮಾತಾಡಲು ಹಿಂದೇಟು ಹೊಡೆಯುತ್ತಾರೆ. ನೀವು ಕನ್ನಡದಲ್ಲಿ ಪ್ರಶ್ನಿಸಿದರೂ ಉತ್ತರ ಇಂಗ್ಲೀಷಿನಲ್ಲೆ ಹೊರಬರುತ್ತದೆ. ಇದಕ್ಕೆ ಧೈರ್ಯಗುಂದದೆ ಮನೆಯಲ್ಲಿ ಕನ್ನಡ ಮಾತಾಡುವದನ್ನು ಮುಂದುವರೆಸಬೇಕು. ಸಮಾಧಾನದಿಂದ ತಿದ್ದುತ್ತ, ಅವರು ಹೇಳಿದ್ದನ್ನೆ  ಕನ್ನಡದಲ್ಲಿ ಹೇಳಿ, ಮಕ್ಕಳಿಂದ ಹೇಳಿಸಬೇಕು. ಕನ್ನಡ ಮಾತಾಡುವದು fun ಅನಿಸಬೇಕು; ಹೋರಾಟ ಬೇಡ. ಬೇರೆ ಕನ್ನಡ ಮಕ್ಕಳೊಡನೆ ಬೆರೆಯಬೇಕು. ಕನ್ನಡ ಕಲಿ ಈ ನಿಟ್ಟಿನಲ್ಲಿ ಬಹಳ ಅವಶ್ಯ. ಬೇರೆ ಕನ್ನಡ ಮಕ್ಕಳು ಕನ್ನಡ ಮಾತಾಡುವದನ್ನು ನೋಡಿ, ಅದು 'ಅಸಹಜ' ಎಂಬ ಭಾವನೆ ಬಾರದು. " ಹೀಗಿತ್ತು. 


ಅಂತೆಯೇ Kannada koota of northern california ದ ಶ್ರೀಮತಿ. ಸಂಧ್ಯಾ ಅವರನ್ನು ಸಂಪರ್ಕಿಸಿದಾಗ ಅವರು ಹೀಗೆಂದರು "ಮಕ್ಕಳಿಗೆ ಈ ಕನ್ನಡವಿಲ್ಲದ ಪರಿಸರದಲ್ಲಿ ಕನ್ನಡ ಕಲಿಸುವುದು ಒಂದು ಸಾಹಸವೇ ಸರಿ.  ಟೀ.ವಿ. ಯಲ್ಲಿ ಆಕರ್ಷಕ ಇಂಗ್ಲಿಷ್ ಕಾರ್ಯಕ್ರಮಗಳನ್ನು ನೋಡುವುದರಿಂದ ಮತ್ತು ಉಳಿದ ಮಕ್ಕಳು (ಕನ್ನಡದವರೂ) ಬರಿ ಇಂಗ್ಲಿಷಿನಲ್ಲೇ   ಮಾತನಾಡುವುದರಿಂದ ಕನ್ನಡ ಬೇಗ ಮರೆತು ಹೋಗುತ್ತದೆ. ನೀವು ಮಕ್ಕಳಿಗೆ ಕಲಿಸುವುದಾದರೆ, ನಾನು ಸಹಾಯ ಮಾಡುತ್ತೇನೆ""


ಹಾಗೆಯೇ ಕಾವೇರಿ ಕನ್ನಡ ಕೂಟದ ಶ್ರೀ ಫಣೀಂದ್ರ ಅವರು ನನ್ನನ್ನ ಅವರ ’ಕನ್ನಡ ಕಲಿಯೋಣ’ ಗುಂಪಿಗೆ ಸೇರಿಸಿಕೊಂಡರು. 


ಇವರೆಲ್ಲರ ಬೆಂಬಲ ಮತ್ತು ಹಿರಿಯರ ಆಶೀರ್ವಾದ ’ಕನ್ನಡ ಕಲಿ ಕಂದ’ ಅನ್ನೋ ಪುಟ್ಟ ಕಾರ್ಯಕ್ರಮವನ್ನ ಇನ್ನ್ಮೇಲೆ ನಮ್ಮ ಮನೆಯಲ್ಲಿ ಶುರು ಮಾಡಲು ನಿರ್ಧರಿಸಿರುವೆ. ಅದರ ಆರಂಭ ನವರಾತ್ರಿಯ ಈ ಶುಭ ಘಳಿಗೆಯಲ್ಲಿ.  
 

ಸದ್ಯಕ್ಕೆ ನಮ್ಮ ಗಮನ ಮಾತಿನ ಕಡೆಗೆ ಹೆಚ್ಚು, ಮಕ್ಕಳಿಗೆ ಕಥೆ ಹೇಳುತ್ತಾ, ಅವರ ಕೈಯಲ್ಲೇ ಹೇಳಿಸೋದು.. ಅಲ್ಲದೆ ’ವಾರಕ್ಕೊಂದು ಅಕ್ಷರ’ ಕಲಿಸೋ ಯೋಜನೆ ಅದು ಆಟದ ಜೊತೆಗೆ ಪಾಠ ಅನ್ನೋ ರೀತಿಯಲ್ಲಿ. ಇದಕ್ಕೆ ನಾನ್ಗೆ ಸ್ಪೂರ್ತಿ ಈ ತಾಣಗಳು ’Kids matter' ಮತ್ತು ’No time for flash cards'. ಇದನ್ನ ನಮ್ಮ ಕನ್ನಡ ಅಕ್ಷರಗಳಿಗೆ ಅಳವಡಿಸೋದು ಹೇಗೆ ಅನ್ನೋದು ಇನ್ನೊ ತಿಳಿದಿಲ್ಲಾ... ನೋಡೋಣ ಏನ್ ಮಾಡ್ತೀವಿ ಅಂತ... ಸದ್ಯಕ್ಕೆ ’ಅ’ ಅಕ್ಷರದ printout ಗೆ ಅಕ್ಕಿ ಕಾಳನ್ನು ಅಂಟಿಸುವುದು. ತಿನ್ನಲು ’ಅನಾನಸ್’, ’ಅನ್ನ’, ’ಅ’ ಆಕಾರದ ದೋಸೆ... ಏನಂತೀರಾ? 

ಇದಕ್ಕೆ ನಿಮ್ಮೆಲ್ಲರ ಸಹಾಯನೂ ಬೇಕು. ನಿಮಗೆ ತಿಳಿದ ಹೊಸ ಕಲಿಕಾ ವಿಧಾನಗಳನ್ನ ಹಂಚಿಕೊಳ್ಳಿ. ನಮ್ಮ ಪುಟಾಣಿಗಳಿಗೆ ಮತ್ತು ನಮಗೆ ನಿಮ್ಮ ಪ್ರೋತ್ಸಾಹ ಇರಲಿ. 

Monday, October 04, 2010

ಗಣಪನ ಹಬ್ಬ 2010 !!

                                                                    ಬೆನಕ ಬೆನಕ ಏಕದಂತ
ಪಚ್ಚೆ ಕಲ್ಲು ಪಾಣಿ ಮೆಟ್ಲು
ಮುತ್ತಿನುಂಡೆ ಹೊನ್ನಗಂಟೆ
ಒಪ್ಪುವ ಶ್ರೀ ವಿಘ್ನೇಶ್ವರನಿಗೆ
21 ನಮಸ್ಕಾರಗಳು !




ಈ ನಮ್ಮ ಗಣಪನ ಮೆಚ್ಚಿ ಶೃತಿಯವರು ತಮ್ಮ ಬ್ಲಾಗಿನಲ್ಲಿ ಅವರು ಪ್ರತಿ ತಿಂಗಳೂ ನಡೆಸುವ ಸ್ಪರ್ಧೆಗೆ ಸೇರಿಕೊಂಡಿದ್ದರು, ನಮಗೆ ಬಹುಮಾನನೂ ಕೊಟ್ಟಿದ್ದಾರೆ. ಜೊತೆಗೆ ಮತ್ತಷ್ಟು ಬಹುಮಾನ ಕೊಡುತ್ತಿರುವ ವಿನುತಾ ಅವರಿಗೂ ವಂದನೆಗಳು!



Sunday, October 03, 2010

ತೆಂಗಿನಕಾಯಿ ಚಿಪ್ಪು ಪೈಂಟಿಂಗ್

ಗಣಪನ ಹಬ್ಬಕ್ಕೆ ತಂದಿದ್ದ ತೆಂಗಿನಕಾಯಿ, ಗಣಪತಿಗೆ ಅರ್ಪಿಸಿ ಹಬ್ಬ ಮಾಡಿದಾಯ್ತು. ಅದರ ಚಿಪ್ಪನ್ನು ಎಸೆಯುವ ಬದಲು ಪುಟ್ಟಿ ಕೈಯಲ್ಲಿ ಏನಾದ್ರೂ ಮಾಡಿಸೋಣ ಅಂತ ಇಟ್ಟಿದ್ದೆ. ಪುಟ್ಟಿಗೆ ಪೈಂಟ್ ಮಾಡೋಣವಾ ಅಂದಿದ್ದೆ ತಡ ಹೂಂ ಅಂತ ಕುಣಿದಾಡಿದ್ಲು. ಮೊದಲು ಚಿಪ್ಪಿಗೆ ಅವಳು ಕೇಳಿದ ಹಳದಿ ಬಣ್ಣ ಹಚ್ಚಿದಳು. ಎಷ್ಟೇ ನಾರು ತೆಗೆದರೂ ಅದರ ಮೇಲೆ ಬಣ್ಣ ಹಚ್ಚುವುದು ಪುಟ್ಟಿಗೆ ಸ್ವಲ್ಪ ಕಷ್ಟವೇ ಆಯ್ತು, ಅಮ್ಮ ಇದು ಕಟ್ಟಿ ಅನ್ನುತ್ತಲೇ ಮಾಡಿದ್ಲು. ಕೊನೆಗೆ ಅಲ್ಲಲ್ಲಿ ಉಳಿದ ಗ್ಯಾಪ್ ಅನ್ನು ನಾನು ತುಂಬಿದೆ.
ಇದಕ್ಕೆ ಎರಡು ಸರ್ತಿ ಬಣ್ಣ ಹಚ್ಚಿದಾಯ್ತು. ಅಂತೂ ಒಂದು ಇಡೀ ದಿನ ಇದೇ ಆಯ್ತು :) ಆ ಹಳದಿ ಚಿಪ್ಪು ನೋಡಿ ಅದನ್ನು "bee" ಮಾಡಬಹುದು ಅನ್ನಿಸಿ, ಅದಕ್ಕೆ ಕಪ್ಪು ಬಣ್ಣದ ಗೆರೆಗಳನ್ನು ಹಾಕಿಕೊಟ್ಟೆ ಪುಟ್ಟಿ ಅದರ ಮೇಲೆ ಪೈಂಟ್ ಮಾಡಿದ್ಲು. ಕೊನೆಗೆ ಅದಕ್ಕೆ ’googly eye' ಅಂಟಿಸಿದೆವು.
ನಮ್ಮ ’bee' ಪುಟ್ಟಿಗೆ ಇಷ್ಟವಾದದ್ದನ್ನು ನೋಡಿ ಮತ್ತೊಂದು ಚಿಪ್ಪನ್ನೂ ಪೈಂಟ್ ಮಾಡಲು ಮನಸಾಯ್ತು. ಅದಕ್ಕೆ ಕೆಂಪು ಬಣ್ಣ ಹಾಕಿ, ದುಂಡನೆ ಸ್ಪಾಂಜ್ ಬ್ರಷ್ ನಿಂದ ಕಪ್ಪು ಚುಕ್ಕಿ ಇಟ್ಟು ’Lady bug' ಮಾಡಿದ್ವಿ!!


ಇದೇ ಸಮಯಕ್ಕೆ ಆ ವಾರ ಲೈಬ್ರರಿಯಿಂದ ನಾವು ತಂದು ಓದಿದ ಪುಸ್ತಕಗಳಿವು... The Grouchy Ladybug,   Honeybee's Busy Day