Sunday, January 17, 2010

ಸಂಕ್ರಾಂತಿ ಹಬ್ಬ 2010!

ಎಳ್ಳು ಬೀರಲು ಹೊರಟಿರುವ ಪುಟ್ಟಿ :)
ಈ ವರ್ಷ ಹಬ್ಬದ ದಿನ ಹೇಮಂತ್ ಕೆಲಸದ ಮೇಲೆ ದೂರದೂರು ಸ್ಯಾಂಡಿಯಾಗೋದಲ್ಲಿದ್ದರಿಂದ, ಮನೆಯಲ್ಲಿ ನಾವಿಬ್ಬ್ರು ಅಮ್ಮ ಮಗಳದ್ದೇ ಹಬ್ಬದ ಸಂಭ್ರಮ! ಕ್ಯಾಮೆರಾ ಹೇಮಂತ್ ಜೊತೆ ಹೋಗಿದ್ದರಿಂದ ಈ ಬಾರಿ ಪುಟ್ಟಿಯ ಆರತಿ ಫೋಟೊ ಇರುವುದಿಲ್ಲ ಅಂದುಕೊಂಡಿದ್ದೆ. ಆದ್ರೆ ಗೆಳತಿ ಅರ್ಚನಾಳಿಂದಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಹಬ್ಬದ ಫೋಟೋಗಳಿವೆ:) ತನ್ನ ಮಗ 'ಶಿಶಿರ್'ನ ಮೊದಲ ಸಂಕ್ರಾಂತಿಗೆ ಆರತಿ ಮಾಡಲು ಮನೆಗೆ ಕರೆದಳು. ಜೊತೆ ನಮ್ಮ ಪುತ್ತಿಗೂ ಅಲ್ಲಿಯೇ ಆರತಿ ಮಾಡೋಣವೆಂದಳು. ಮನೆಯಲ್ಲಿ ಒಬ್ಬಳೇ ಮಾಡುವುದಕ್ಕಿಂತ ಅಲ್ಲಿ ಅವರ ಜೊತೆಗೂಡಿ ಹಬ್ಬ ಮಾಡೋಣವೆನಿಸಿ, ಸಂಜೆ ಅವರ ಮನೆಗೆ ಹೋಗಿದ್ವಿ.

ಸಂಕ್ರಾಂತಿಯಲ್ಲಿ ಸಂಜೆ ಆರತಿ ಮಾಡುವಾಗ ಮಕ್ಕಳಿಗೆ ಕುಸುರಿ ಕಾಳಿನ ಹಾರ ಹಾಕಿ ಅಲಂಕರಿಸುವುದು ಕೆಲವರಲ್ಲಿ ವಾಡಿಕೆ. ಅದು ನಮಗಿಲ್ಲಿ ಲಭ್ಯವಿಲ್ಲದಿರುವುದರಿಂದ ಅದರ ಬದಲಿಗೆ ಸಿಹಿ ಮಾರ್ಶ್-ಮೆಲ್ಲೊಸ್ ನ ಸುಂದರ ಹಾರ ಮಾಡಿದ್ಲು ಅರ್ಚನಾ. ಆಂಟಿ ಮಾಡಿಕೊಟ್ಟ ಹೊಸ ಸರ ಪುಟ್ಟಿಗೆ ಭಾರಿ ಇಷ್ಟವಾಯಿತು:)

ಆರತಿಗೆ ಸಿದ್ದವಾಗಿರುವ ಸಾಹಿತ್ಯ - ಶಿಶಿರ್!!
ಇದೇ ರೀತಿ ಸಕ್ಕರೆ ಕಾಳಿನ ಹಾರ ಹಾಕುವ ಸಂಪ್ರದಾಯ ಉತ್ತರ ಕರ್ನಾಟಕದಲ್ಲೂ ಇದೆಯಂತೆ. ಅಲ್ಲದೇ ಮರಾಠಿಗರು ನಮ್ಮ ಯುಗಾದಿ ದಿನದಂದು ಅವರು ಆಚರಿಸುವ ಹೊಸ ವರ್ಷ ’ಗುಡಿಪಡ್ವಾ’ ದಂದು ಕೂಡ ಪುಟ್ಟ ಮಕ್ಕಳಿಗೆ ಸಕ್ಕ್ರೆ ಹಾರ ತೊಡಿಸಿ ಅಲಂಕಾರ ಮಾಡುತ್ತಾರೆಂದು ಅಮ್ಮುವಿನಮ್ಮ ಹೇಳಿದ್ದಾರೆ.

ನಮ್ಮಲ್ಲಿ ಎಳ್ಳು ಬೆಲ್ಲದ ಮಿಶ್ರಣ, ಕಬ್ಬಿನ ಚೂರು , ಕಾಸು, ಎಲಚಿ ಹಣ್ಣು ಇವುಗಳನ್ನ ಮಕ್ಕಳ ತಲೆ ಮೇಲೆ ಎರೆಯುವುದು ರೂಢಿ. ಇಲ್ಲಿ ಎಲಚಿ ಹಣ್ಣನ್ನು ಉಪಯೋಗಿಸುವುದರ ಉದ್ದೇಶ ಅದು ನೋಡಲು ಸೂರ್ಯನಂತೆ ಕೆಂಪಗೆ ಮತ್ತು ದುಂಡಗೆ ಇರುತ್ತದೆ ಎಂಬುದು. ಅಂದ್ರೆ ಈ ಹಣ್ಣು ತಲೆ ಮೇಲೆ ಬೀಳುವುದರಿಂದ ಸೂರ್ಯ ಆಶೀರ್ವಾದ ಪಡೆದಂತೆ ಅರ್ಥ! ಈಗ ನನಗನಿಸಿದ್ದು, ಎಳಚಿಹಣ್ಣಿನ ಬದಲಿಗೆ ಚೆರ್ರಿ ಹಣ್ಣನ್ನೋ ಅಥವಾ ಇನ್ಯಾವುದಾರು ಕೆಂಪನೆ ಬೆರ್ರಿಯನ್ನೋ ಉಪಯೋಗಿಸಬಹುದೇನೋ ಅಂತ!!

ನೆನಸಿದ ಕಡ್ಲೆಕಾಳು, ಗೋಡಂಬಿ, ಬಾದಾಮಿ, ಕಾಸು ಇವುಗಳನ್ನು ಎರೆಯುತ್ತಿರುವುದು..



ನಮ್ಮಂತೆಯೇ ಕೆಂಪುನೀರಿನ ಆರತಿ ಅಲ್ಲದೇ, ಗೋದಿಹಿಟ್ಟಿನ ದೀಪಗಳನ್ನು ಮಾಡಿ ಅದರ ರಕ್ಷೆಯಿಟ್ಟದ್ದು ನನಗೆ ಹೊಸ ವಿಚಾರ!

ಗೋದಿಹಿಟ್ಟಿನ ದೀಪಗಳ ರಕ್ಷೆ ಮಕ್ಕಳಿಗೆ...

ಇದಲ್ಲದೇ ನಮ್ಮ ತಾಯಿಯವರು ಚಿಕ್ಕಂದಿನಲ್ಲಿ ಕಳಸದಲ್ಲಿದ್ದಾಗ ಅಲ್ಲಿ ಹಬ್ಬದ ದಿನ ಎಳ್ಳು ಬೀರುವುದು ಮದುವೆಯಾದ ಹೆಂಗಸರು ಮಾತ್ರವಂತೆ. ಆದ್ರೆ ಮಾರನೆಯ ದಿನ ಚಿಕ್ಕ ಚಿಕ್ಕ ಮಕ್ಕಳು ಗೊಂಬೆ ಆಕಾರದ ಡಬ್ಬಿಗಳಲ್ಲಿ ಎಳ್ಳು ತುಂಬಿ ಬೀರುತ್ತಿದ್ದರಂತೆ, ಅದಕ್ಕೆ 'ಗೊಂಬೆ ಎಳ್ಳು' ಅಂತ ಕೆರೆಯುವರಂತೆ:)
ಹಬ್ಬಕ್ಕೆ ವಿಶ್ ಮಾಡಲು ಗೆಳತಿ ಸ್ಮಿತಾಗೆ ಫೋನಾಯಿಸಿದಾಗ ತಿಳಿದ ಮತ್ತೊಂದು ವಿಚಾರ. ಮನೆಯಲ್ಲಿ ನವಜಾತ ಶಿಶು ಇದ್ದರೇ ಆ ವರ್ಷ ಅವರಿಗೆ 'ಬೊಂಬೆ ಎಳ್ಳು' ಹಬ್ಬವಂತೆ. ತನ್ನ ಹಸುಗೂಸು 'ಸಾಗರಿಕಾ' ಜೊತೆ ಈ ವರ್ಷ ಅವಳ ಹಬ್ಬ!!

ಮದುವೆಯ ನಂತರ ಹೈದರಾಬಾದ್ ನಲ್ಲಿ ನೆಲೆಸಿರುವ ಈಗ ಬಹುತೇಕ ಹಬ್ಬಗಳನ್ನು ಅಲ್ಲಿನವರಂತೆಯೇ ಮಾಡುವ ನನ್ನ ನಾದಿನಿ ಹೇಳಿದ್ದು.... ಹಬ್ಬದ ಮೊದಲ ದಿನ ಸಂಜೆ ಅವರು ಸಣ್ಣ ಮಕ್ಕಳಿಗೆ ’ಭೋಗಿ ಪಳ್ಳು’ ಎರೆಯುವರೆಂದು! ಈ ಭೋಗಿ ಪಳ್ಳು ಅಂದ್ರೆ ನೆನಸಿದ ಕಡ್ಲೆಕಾಳು, ಕಬ್ಬಿನ ಚೂರು, ರೇಗಿ ಪಂಡ್ಲು(ಎಲ್ಚಿ ಹಣ್ಣು) ಮತ್ತು ತಾಮ್ರದ ನಾಣ್ಯಗಳ ಮಶ್ರಣ. (ನನ್ನ ಗೆಳತಿ ಅರ್ಚನಾ ಮೂಲತಃ ತೆಲುಗಿನವರೆ ಹಾಗಾಗಿ ಅವರು ಕಡಲೆಕಾಳು ಉಪಯೋಗಿಸಿದ್ದು). ಅಲ್ಲದೇ ಕೆಲವರ ಮನೆಯಲ್ಲಿ ’ಬೊಮ್ಮಲ ಕೊಲ್ಲುವು’ ಅಂದ್ರೆ ಗೊಂಬೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿಡುತ್ತರಂತೆ.

ಆಂಧ್ರ ಪ್ರದೇಶದ ಇನ್ನು ಕೆಲವು ಕಡೆ ಅಕ್ಕಿ, ಮತಿತರೆ ಧಾನ್ಯದ ಮಿಶ್ರಣ ಜೊತೆಗೆ ಕಾಸು, ಹೂವಿನ ದಳ ಇವುಗಳನ್ನು ಮಕ್ಕಳ ಮೇಲೆ ಎರೆದು ಹರಸುತ್ತಾರೆ ಎಂಬ ವಿಚಾರ ಅಂತರ್ಜಾಲದಲ್ಲಿ ಸುತ್ತಾಡುವಾಗ ತಿಳಿಯಿತು.

ನನ್ನ ಗೆಳತಿ ಆರತಿ ಅವರು ಮಕ್ಕಳಿಗೆ ಎರೆಯಲು ಸುಂದರವಾಗಿ ಸಿದ್ಧಪಡಿಸಿರುವ ತಟ್ಟೆ ! ಇದರಲ್ಲಿಯೇ ಕಡಲೆಪುರಿ, ಕಬ್ಬಿಣ ಚೂರು, ಕಾಸು, ಸಿಹಿ ಮಿಠಾಯಿಗಳಿವೆ...
ಆಚರಣೆಯಲ್ಲಿ ಏನೇ ವೈವಿದ್ಯವಿದ್ದರೂ ಎಲ್ಲರ ಮೂಲ ಉದ್ದೇಶ ಒಂದೆ ಅಲ್ವಾ ನಮ್ಮ ಮಕ್ಕಳ ಒಳಿತಿಗಾಗಿ ಪ್ರಾರ್ಥಿಸೋದು :))

Wednesday, January 13, 2010

ಸಂಕ್ರಾಂತಿಯ ಸಂತಸ!!!

ಎಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !! ಕಳೆದ ವರ್ಷ ಬೆಂಗಳೂರಿನಲ್ಲಿ ಅಜ್ಜಿಯ ಮನೆಯಲ್ಲಿ ಎಲ್ಲರ ಜೊತೆಗೂಡಿ ಹಬ್ಬ ಮಾಡಿದ್ಲು ಪುಟ್ಟಿ. ಅವಳು ಮತ್ತು ಅವಳ ಸೋದರ ಮಾವನ ಮಗಳು 'ಖುಶಿ' ಗೆ ಸಂಜೆ ಎಳ್ಳು ಎರೆದು ಆರತಿ ಮಾಡಿದಾಗಿನ ಫೋಟೊಗಳಿವು:)


ಮಾವನ
ಮಗಳೆ ಖುಶಿ ಬಾರೆ
ಎಳ್ಳು ಬೆಲ್ಲ ಬೀರೋಣ ಬಾ
ಜರತಾರಿ ಲಂಗ ಕುಪ್ಪಸ ತೊಟ್ಟು ಬಾ
ರೇಷಿಮೆ ಲಂಗ ತೊಟ್ಟು ನಾ ಬರುವೆ
ಅಜ್ಜಿ ಕೊಟ್ಟ ಎಳ್ಳು ಬೆಲ್ಲವ
ಎಲ್ಲರ ಮನೆಗಳಿಗೆ ಬೀರೋಣ ಬಾ!!
(ತವಿಶ್ರೀ ಅವರು ಬರೆದ ಚೆಂದದ ಪದ್ಯವನ್ನು ಸ್ವಲ್ಪ ಮಾರ್ಪಡಿಸಿರುವೆ )


ಮಾಲಾ ರಾವ್ ಅವರು ನಂದಗೋಕುಲದಲ್ಲಿ ಪುಟ್ಟ ಅಮ್ಮುವಿಗೆ ಬರೆದ ಎಳ್ಳು ಎರೆಯುವ ಹಾಡು.