Thursday, March 31, 2011

ನಾವೆಲ್ಲ ಹಕ್ಕಿಗಳು...

ಚಿಕ್ಕಂದಿನಲ್ಲಿ ನಾವು ಹಾಡುತ್ತಿದ್ದ ಪಕ್ಷಿಗಳ ಪರಿಚಯ ಮಾಡಿಸುವ ಈ ಪದ್ಯ ನೆನಪು ಮಾಡಿಕೊಳ್ಳಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೆ. ಅಂತೂ ಇಂತೂ ಗೆಳಯರ ಸಹಾಯದಿಂದ ಇದು ಪೂರ್ತಿ ನೆನಪಾಯ್ತು.

ನಾವೆಲ್ಲ ಹಕ್ಕಿಗಳು
ರೆಕ್ಕೆ ಬಡಿದು ಹಾರುವೆವು
ಸಂತಸವ ಬೀರುವೆವು
ನಾನು ಗುಬ್ಬಚ್ಚಿ
ಬಹಳ ಚಿಕ್ಕದು
ನನ್ನಂತ ಚಿಕ್ಕದು
ಬೇರೆಲ್ಲೂ ಸಿಗದು //ನಾವೆಲ್ಲ//
ನಾನು ಗಿಡುಗ
ಬಹಳ ದೊಡ್ಡದು
ನನ್ನಂತ ದೊಡ್ಡದು
ಬೇರೆಲ್ಲೂ ಸಿಗದು//ನಾವೆಲ್ಲ//

ನಾನು ಕಾಗೆ
ಬಹಳ ಕಪ್ಪು
ನನ್ನಂತ ಕಪ್ಪು
ಬೇರೆಲ್ಲೂ ಸಿಗದು//ನಾವೆಲ್ಲ//
ನಾನು ನವಿಲು
ಬಹಳ ಚೆಂದ
ನನ್ನಂತ ಚೆಂದ 
ಬೇರೆಲ್ಲೂ ಸಿಗದು //ನಾವೆಲ್ಲ//

ನಾಲ್ಕು ಮಕ್ಕಳು ಸೇರಿ ಇದನ್ನು ಹಾಡುತ್ತಾ, ಹೆಜ್ಜೆ ಹಾಕುತ್ತಾ ಡ್ಯಾನ್ಸ್ ಮಾಡಿದ್ರೆ ಚೆನ್ನಾಗಿರುತ್ತೆ ಅಲ್ವಾ? :)
ಚಿತ್ರಕೃಪೆ : ಅಂತರ್ಜಾಲ 

Tuesday, March 29, 2011

ಗೌರ್ನ್ ಮೆಂಟ್ ಬಸ್ಸಲ್ಲಿ...

Buzzers ನವರ ಶಿಶುಗೀತೆಗಳ ವಿಡಿಯೋ ಸಿಡಿ ’ಚಿನ್ನಾರಿ ಮುತ್ತಿನ ಹಾಡುಗಳು". ಇದರ ಎಲ್ಲಾ ಹಾಡುಗಳು ಈಗ ಬಹಳಷ್ಟು ಜನಪ್ರಿಯ ಜೊತೆಗೆ ಇವು ಯೂಟ್ಯೂಬಿನಲ್ಲಿ ಕೂಡ ಲಬ್ಯವಿದೆ. ಇವರದೇ ಎರಡನೆ ವಿಡಿಯೋ ಸಿಡಿ 'ಚಿಣ್ಣರ ಚಿಲಿಪಿಲಿ’ ಯಲ್ಲಿನ ಬಹಳಷ್ಟು ಕನ್ನಡ ಪದ್ಯ( ರೈಮ್ಸ್) ಪುಟ್ಟಿ ಈಗ ಕಲ್ತಿದ್ದಾಳೆ. ಅದರ ಒಂದು ರೈಮ್ ಪುಟ್ಟಿ ಹಾಡೋದು ಹೀಗೆ :


ಗೌರ್ನ್ ಮೆಂಟ್ ಬಸ್ಸಲ್ಲಿ
ಮೂರ್ನೆ ಸೀಟಲ್ಲಿ
ಡುಮ್ಮ ಡುಮ್ಮಿ ಕೂತಿದ್ರು
ಡುಮ್ಮನ ಹೊಟ್ಟೆ ಹೊಡೆದು ಹೋಯ್ತು
ಡುಮ್ಮಿ ಅಳ್ತಾ ಕೂತಿದ್ಲು

ಇದೇ ತರಹ ನಾವು ಚಿಕ್ಕಂದಿನಲ್ಲಿ ಹಾಡ್ತಾಯಿದ್ದ ಇನ್ನೊಂದು ಹಾಡು ಸ್ವಲ್ಪ ನೆನಪಾಯ್ತು.
ಡುಮ್ಮ ಡುಮ್ಮಿ ಡುಪ್ಲಿಕೇಟ್
Door  ನಂಬರ್ 88 .......

ಮುಂದಕ್ಕೆ ನೆನಪಿಲ್ಲ :(

ವಿ.ಸೂ: ಈ ಸಿಡಿಯಲ್ಲಿರುವ ರೈಮ್ಸ್ ಅನ್ನು ಯೂ ಟ್ಯೂಬಿನಲ್ಲಿ ಅಪ್ಲೋಡ್ ಮಾಡೋದು ಹೇಗೆ ಗೊತ್ತಿದ್ರೆ ತಿಳಿಸಿ. ಇವೆಲ್ಲಾ swf ಫೈಲ್ಸ್ ಜೊತೆಗೆ ಕಾಪಿರೈಟೆಡ್ ಬೇರೆ!!

Tuesday, March 22, 2011

ಹೋಳಿ ಹಬ್ಬ

ಹೋಳಿ ಹಬ್ಬಕ್ಕೆಂದು ನಾವು ಮಾಡಿದ ಈ ಬ್ಯಾನರ್ ನೋಡುತ್ತಾ ದಿನವಿಡೀ "ಹ್ಯಾಪಿ ಹೋಳಿ’ ಅಮ್ಮ/ಅಪ್ಪ" ಅಂತ ಮನೆಯಲ್ಲಿ ಓಡಾಡುತ್ತಾ ಇದ್ದಾಳೆ. ನಿನ್ನೆ ತರಹ ಇವತ್ತು ಮತ್ತೊಮ್ಮೆ ಬಣ್ಣಗಳ ಜೊತೆಗೆ ಆಡೋಣ ಅಂತ ಕೇಳಿದ್ಲು. ಮತ್ತೆ ಮೈಗೆಲ್ಲಾ ಬಣ್ಣ ಹಚ್ಚಿಕೊಳ್ಳುವ ಮನಸಿಲ್ಲದೆ ಹೊಸ ರೀತಿಯ ಬಣ್ಣದಾಟ ಆಡೋಣ ಅಂತಂದೆ.
ಮೊದಲು ನೀರು ಹಾಕಿ ತೆಳುವಾಗಿಸಿದ ಪೈಂಟ್ ಅನ್ನು ಸ್ಟ್ರಾ ನಲ್ಲಿ ಗಾಳಿ ಊದಿ ಪೇಪರ್ ಮೇಲೆಲ್ಲಾ ಹರಡಿದೆವು. ಆದರೆ ಒಣಗಿದ ನಂತರ ಅದರ ಮೇಲೆ ಶುಭಾಶಯಗಳನ್ನು ಬರೆಯಲು ಜಾಗವಿಲ್ಲ ಅಂತ ಬೇಸರಿಸಿದಳು. 
 
 ಹಾಗಾಗಿ ಮತ್ತೊಂದು ಕಾರ್ಡ್ ಮಾಡಿಸಿದೆ. ಇದರಲ್ಲಿ ಮೊದಲಿಗೆ ಶುಭಾಶಯ ಬೆರೆದಳು, ನಂತರ ಅದರ ಸುತ್ತಾ ಪೈಂಟ್ ಮಾದಲು q tips ಕೊಟ್ಟೆ. ಒಂದರ್ಧ ಘಂಟೆ ಕುಳಿತಲ್ಲಿಂದ ಎಳದೇ ಈ ಸುಂದರ ಕಾರ್ಡ್ ಮಾಡಿಟ್ಟಳು:) 

Monday, March 21, 2011

ಚೆಲ್ಲಿದರೋಕುಳಿಯಾ

 ಮೊದಲೇ ಅಂದಿಕೊಂಡಂತೆ ನಮ್ಮೂರಿನ ಭಾರತೀಯ ಅಸೋಷಿಯೇಶನ್ ಅವರು ಆಯೋಜಿಸಿದ್ದ ಹೋಳಿ ಹಬ್ಬದ ಆಚರಣೆಗೆ ನನ್ನ ನೆಗಡಿ ಹೆಚ್ಚಾಗಿದ್ದರಿಂದ ಹೋಗಲಾಗಲಿಲ್ಲ. ಪುಟ್ಟಿಗೆ ಇದು ಬಹಳ ಬೇಸರ ಮಾಡಿಸಿತ್ತು, ಅದಕ್ಕೆ ಮನೆಯಲ್ಲಿ ನಾವು ಮೂವರೇ ಸಣ್ಣದಾಗಿ ಒಬ್ಬರಿಗೊಬ್ಬರು ಬಣ್ಣಗಳನ್ನು ಹಚ್ಚಿಕೊಳ್ಳುತ್ತಾ ಆಟವಾಡಿದೆವು. ಪುಟ್ಟಿ ತನಗೆ ತಾನೇ ಬಣ್ಣ ಹಚ್ಚಿಕೊಳ್ಳುವುದು ಹೆಚ್ಚು ಮೋಜೆನಿಸಿತು. ತಟ್ಟೆಯಲ್ಲಿದ್ದ ಬಣ್ಣಗಳನ್ನೆಲ್ಲಾ ಕೈಗೆ ಹಚ್ಚಿಕೊಂಡಳು. ಬಣ್ಣಗಳಿಂದ ತುಂಬಿದ್ದ ಆ ಪುಟ್ಟ ಕೈಗಳನ್ನು ನೋಡುವುದೇ ಖುಶಿ:) ಕೊನೆಗೆ ಅವಳ ಇಡೀ ಮೈಯಿಗೆ ಬಣ್ಣ ಹಚ್ಚಿಕೊಂಡಿದ್ದಳು.
ಚಿಕ್ಕಂದಿನಲ್ಲಿ ಕೋಲಾಟವಾಡಿದ್ದ ಈ ಹಾಡು ನೆನಪಾಯ್ತು. ಈ ಹಾಡಿನ ಲಿಂಕ್ ಇದ್ರೆ ತಿಳಿಸಿ ಪ್ಲೀಸ್...

ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ದಾದೆನುತ
ಬಲ್ಲಿದ ರಂಗನ್‌ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯಾ 
ಅರೆದರು ಅರಿಶಿಣವ ಅದಕೆ ಬೆರಸ್ಯಾರೆ ಸುಣ್ಣವ
ಅಂದವುಳ್ಳ ರಂಗನ್‌ ಮೇಲೆ ಚೆಲ್ಲಿದರೋಕುಳಿಯಾ 
ಹಾಲಿನೋಕುಳಿಯೋ ಒಳ್ಳೆ ನೀಲದೋಕುಳಿಯೋ
ಲೋಲನಾದ ರಂಗನ್‌ ಮ್ಯಾಲೆ ಚೆಲ್ಲಿದರೋಕುಳಿಯಾ
 ತುಪ್ಪದೋಕುಳ್ಲಿಯೋ ಒಳ್ಳೆ ಒಪ್ಪದೋಕುಳಿಯೋ
ಒಪ್ಪವುಳ್ಳ ರಂಗನ್‌ ಮ್ಯಾಲೆ ಚೆಲ್ಲಿದರೋಕುಳಿಯಾ
  
  

  

Saturday, March 19, 2011

ಬಣ್ಣಗಳ ಹಬ್ಬ ಹೋಳಿ

ಕೆಂಪು, ನೀಲಿ, ಹಳದಿ,ಗುಲಾಬಿ,ಹಸಿರು, ಕಂದು - ಎಲ್ಲೆಲ್ಲೂ ರಂಗು...ಇದು ಹೋಳಿ ಹಬ್ಬದ ಗುಂಗು!! ಬಣ್ಣಗಳ ಈ ಹಬ್ಬದ ಬಗ್ಗೆ ಪುಟ್ಟಿಗೆ ತಿಳಿಸುತ್ತಾ ಗೂಗಲ್ ನಲ್ಲಿದ್ದ ಒಂದಷ್ಟು ಫೋಟೋಗಳನ್ನು ತೋರಿಸಿದೆ. ಬಣ್ಣಗಳನ್ನು ಮೈಮೇಲೆಲ್ಲಾ ಹಾಕಿಕೊಂಡದನ್ನು ಕಂಡು ಖುಶಿಪಟ್ಟು "ನಾನೂ ಮಾಡ್ತೀನಿ ಅಮ್ಮ, ಇದು ಮುಖಕ್ಕೆ ಪೈಂಟ್ ಹಚ್ಚೋ ತರಹ!!" ಅಂದ್ಲು. ಆಯ್ತು ಕಂದ ಕಲರ್ಸ್ ತರ್ತೀನಿ ಅಂದೆ. ಸರಿ, ಇಲ್ಲಿನ ಭಾರತೀಯ ಅಸೋಸಿಯೇಷನ್ ಅವರು ಆಯೋಜಿಸುವ ಹೋಳಿ ಹಬ್ಬಕ್ಕೆ ಹೋಗೋಣ ಅಂತಂದೆ. ಜೊತೆಗೆ ಹೋಳಿಕಾ ದಹನದ ಕಥೆಯನ್ನೂ ನನಗೆ ತಿಳಿದಂತೆ ತಿಳಿಸಿದೆ. ಇದರ ಕುರಿತು ಯಾವುದಾದರು ವಿಡಿಯೋ ಸಿಕ್ಕರೆ ತಿಳಿಸಿ ಪ್ಲೀಸ್. 
ಜೊತೆಗೆ ಎಂದಿನಂತೆ ಪುಟ್ಟಿ ಮನೆಯಲ್ಲಿ ತನ್ನ ಬಣ್ಣಗಳ ಜೊತೆ ಆಟವಾಡಿದಳು. ಇದು ಅವಳು ಮಾಡಿದ ಹಬ್ಬದ ಶುಭಾಶಯ ಪತ್ರ.
ಯಾವುದೋ ಸಾಮಾನಿನ ಪ್ಯಾಕೇಜಿಂಗ್ ನಲ್ಲಿ ಬಂದಿದ್ದ ಪೇಪರ್ ಜೊತೆಗೆ ಬಣ್ಣಗಳನ್ನು ಪುಟ್ಟಿಗೆ ಕೊಟ್ಟೆ. ಬಹಳ ಖುಶಿಯಿಂದಲೇ ಪೈಂಟ್ ಮಾಡಿದಳು. ಎಲ್ಲೂ ಗ್ಯಾಪ್ ಬಿಡದೇ ಪೈಂಟ್ ಮಾಡೋದು ಈಗವಳಿಗೆ ಬಲು ಇಷ್ಟ. 
ಪೈಂಟ್ ಒಣಗಿದ ಮೇಲೆ ಬೇರೆ ಹಾಳೆಯ ಮೇಲೆ ಶುಭಾಶಯ ಬರೆದು, ಕಟ್ ಮಾಡಿ ಅಂಟಿಸಿದೆವು. ಇಂಗ್ಳೀಷ್ ನಲ್ಲಿ ಬರೆದು ಕಟ್ ಮಾಡಿದ್ದು ಪುಟ್ಟಿ. ನಂಗೆ ಕನ್ನಡ ಬರಲ್ಲ ನೀನು ಬರೀ ಅಮ್ಮ ಅಂತಂದ್ಲು :)

ನಿಗೆಲ್ಲರಿಗೂ ಣ್ಣ ಬ್ಬ ಶುಭಾಳು !!!!


ಹೋಳಿ ಹೋಳಿ ಹೋಳಿ ಹೋಳಿ

ಏಳೇಳು ಬಣ್ಣದ ಬೆಳ್ಳಿ ಹೋಳಿ
ರಾಗ ರಂಗಿನ ರಂಗು ರಂಗೋಲಿ
ಕಾಮನ ಬಿಲ್ಲಿಂದ ಬಣ್ಣಗಳ ಕದಿಯೋಣ
ಮೋಡದ ಕಡಲಿಂದ ಪನ್ನೀರ ಕಡೆಯೋಣ
ಬಿಳಿ ಹೆತ್ತ ಬಣ್ಣಗಳ ಬಿಳಿ ಬಿಳಿ ಬಟ್ಟೆಗೆ ಚೆಲ್ಲೋಣ
ಓಹೋ ಓಕುಳಿ ಆಡೋಣ
  
  

Friday, March 18, 2011

ನಾವು ಮತ್ತೆ ಹಾಜರ್

ಪುಟ್ಟಿಪ್ರಪಂಚ ಎರಡು ತಿಂಗಳಿಂದ ಬಾಗಿಲು ಮುಚ್ಚಿತ್ತು. ಕಾರಣಾಂತರದಿಂದ ಇಲ್ಲಿ ಬರೆಯಲಾಗಿರಲಿಲ್ಲ. ಹೇಳದೇ ಕೇಳದೇ ಬ್ಲಾಗ್ ನಿಂದ ರಜೆ ಪಡೆದಿದ್ದಕ್ಕೆ ಪುಟ್ಟಿಯ ಹಲವು ಮಿತ್ರರಿಗೆ ಬೇಜಾರಾಗಿದೆ. ನಮ್ಮ ಮೇಲಿನ ಕಾಳಜಿಯಿಂದ ಫೋನ್ ಮಾಡಿ, ಈ ಮೈಲ್ ಮಾಡಿ, ಮುಖಪುಸ್ತಕದಲ್ಲಿ ಪ್ರೀತಿಯಿಂದ ವಿಚಾರಿಸಿಕೊಂಡ/ ಕಂಪ್ಲೈನ್ ಮಾಡಿದ ಎಲ್ಲ ಮಿತ್ರರಿಗೂ ವಂದನೆಗಳು:)
 • ವ್ಯಾಲೆಂಟೈನ್ಸ್ ಡೇ ಗೆ ಪುಟ್ಟಿ ತನ್ನ ಶಾಲೆಯ ಮಿತ್ರರಿಗೆಲ್ಲಾ ಪುಟ್ಟ ಪುಟ್ಟ ಕಾರ್ಡ್ಸ್ ಮತ್ತು ಸಿಹಿ ಕೊಟ್ಟಳು. ಜೊತೆಗೆ ಅವರೆಲ್ಲಾ (೨೮ ಮಕ್ಕಳು) ಕೊಟ್ಟ ಶುಭಾಶಯ ಪತ್ರ, ಸ್ಟಿಕರ್, ಪೆನ್ಸಿಲ್, ಕ್ಯಾಂಡಿ ಎಲ್ಲವನ್ನೂ ಟೇಚರ್ ಸಹಾಯದಿಂದ ತಾನೇ ಮಾಡಿದ್ದ ಕೆಂಪು ಬಣ್ಣದ ಕೈಚೀಲದಲ್ಲಿ ತುಂಬಿಕೊಂಡು ಮನೆಗೆ ಬಂದಳು. 
 • ಪುಟ್ಟಿಗೆ ನಾಯಿಮರಿ, ಬೆಕ್ಕು ಅಂದ್ರೆ ಬಲು ಪ್ರೀತಿ ನಾವು ಹೊರಗೆ ವಾಕ್ ಹೋದಾಗಲೆಲ್ಲಾ ಎದುರಿಗೆ ಸಿಗುವ ಪ್ರಾಣಿಗಳನ್ನು ನೋಡಿ, ಮುಟ್ಟಿ, ಮೈ ಸವರೈ ಖುಶಿ ಪಡುತ್ತಾಳೆ. ನಮ್ಮ ಮನೆಗೂ ಬೆಕ್ಕು ತರಬೇಕೆಂದು ಬಹಳ ಸರ್ತಿ ಹಠ ಹಿಡಿದ್ದಿದ್ದಾಳೆ ಕೂಡ. ಆದ್ರೆ ಮೊದಲೇ ನನಗೆ ನಾಯಿ ಕಂಡ್ರೆ ಭಯ, ಜೊತೆಗೆ ಅವಗಳನ್ನು ನೋಡಿಕೊಳ್ಳುವ ಸಹನೆಯೂ ಇಲ್ಲ. ಇರುವ ಫಿಶ್ ಟ್ಯಾಂಕ್ ಸಾಕು ಅನಿಸಿದೆ:)
  ನಮ್ಮೂರಿನಲ್ಲಿ ನಡೆದ ಡಾಗ್ ಶೋಗೆ ಹೋಗಿ ಬಂದ್ಲು. ಅಲ್ಲಿ ತರಹೇವಾರಿ ನಾಯಿಮರಿಗಳನ್ನು ಕಂಡು ಬಲು ಖುಶಿಪಟ್ಟಳು.
 • ಪುಟ್ಟಿ ಈಗ A-Z ಪೂರ್ತಿಯಾಗಿ ತಾನೇ ಬರೆಯುತ್ತಾಳೆ. C, S, G ಇವುಗಳು ಉಳ್ಟ ಬರೆಯುತ್ತಾಳೆ ಅದು ಸರಿಯಲ್ಲ ಅನ್ನೋದು ಅವಳಿಗೂ ಗೊತ್ತು ಆದ್ರೆ ಅವಳ ಕೈ ಹೊರಳೋದೆ clockwise. 
 •  
 • ಇಲ್ಲೀಗ ವಸಂತ. ಎಲ್ಲೆಡೆ ಹೊಸ ಚಿಗುರು, ಮರಗಳಲ್ಲಿ ಮತ್ತೆ ಹಸಿರು ತುಂಬಿಕೊಳ್ಳುತ್ತಿದೆ. ಚಳಿ ಹೋಗಿ ಬಿಸಿಲು ಶುರುವಾಗಿದೆ, ಆಗಲೇ ಪುಟ್ಟಿ ಒಂದು ರೌಂಡ್ ಬೀಚಿಗೂ ಹೋಗಿ ಬಂದ್ಲು. ಬೇಸರದ ಸಂಗತಿ ಅಂದ್ರೆ ಇವೆಲ್ಲದರ ಜೊತೆಗೆ ನನ್ನ pollen allergy ಕೂಡ ಮರುಕಳಿಸುವುದು:(
 •  ಪುಟ್ಟಿ ಶಾಲೆಯಲ್ಲಿ ಮೊದಲೆಲ್ಲಾ ತನ್ನ ಕ್ಲಾಸಿನ ಐದಾರು ಮಕ್ಕಳ ಜೊತೆಗೆ ಮಾತ್ರ ಆಡುತ್ತಿದ್ದಳು. ಇತ್ತೀಚೆಗೆ ಹೆಚ್ಚು ಹೆಚ್ಚು ಇತರೆ ಸ್ನೇಹಿತರೊಡನೆ ಆಟವಾಡುತ್ತಿದ್ದಾಳೆ. ಅವಳನ್ನು ಕರೆತರಲು ಹೋದಾಗ ತನ್ನ ಅಂದಿನ ಫ್ರೆಂಡ್ ಅನ್ನು ಅಪ್ಪನಿಗೂ ಪರಿಚಯಿಸುತ್ತಾಳೆ.
 •  ಪುಟ್ಟಿಗೆ ಈಗ ನೆಚ್ಚಿನ ಟಿ.ವಿ ಕಾರ್ಯಕ್ರಮ ಅಂದ್ರೆ ’ಪುಟಾಣಿ ಏಜೆಂಟ್ ೧೨೩’ ಚಲನ ಚಿತ್ರ. ಅದರಲ್ಲಿನ ಎರಡೂ ಹಾಡುಗಳು ಅವಳಿಗೆ ಬಾಯಿಪಾಠವಾಗಿವೆ.
 • ಪುಟ್ಟಿಗೆ ಇತ್ತೀಚೆಗೆ ಅನ್ನ ಸಾರು ಬೇಡವಾಗಿದೆ ಆದ್ರೆ ಚಿತ್ರಾನ್ನ, ಪಲಾವ್ ಓಕೆ. ಹೆಚ್ಚಾಗಿ ದೋಸೆ/ರೊಟ್ಟಿಯನ್ನೇ ಕೇಳುತ್ತಾಳೆ. ಅದರಲ್ಲೂ ತರಕಾರಿ ಹಾಕಿದ ಗೋಧಿ ದೋಸೆ ಮತ್ತು ರಾಗಿರೊಟ್ಟಿ ಅಚ್ಚುಮೆಚ್ಚು. ಜೊತೆಗೆ ಪಲ್ಯಗಳಿಗಿಂತ ಚಟ್ನಿನೇ ಇಷ್ಟ ಬರೀ ಚಟ್ನಿಯನ್ನು ತಿನ್ನೋದೂ ಇದೆ.
 • ತನ್ನ ಮೂರು ಚಕ್ರದ ಸೈಕಲ್ಲನ್ನು ಸಲೀಸಾಗಿ ಹಿಂದೆ-ಮುಂದೆ, ಎಡ-ಬಲ/ U ಟರ್ನ್ ಎಲ್ಲಾ ರೀತಿಯಲ್ಲೂ ಆಟವಾಡುತ್ತಾಳೆ. ಚಳಿ ಇದ್ದಿದ್ದರಿಂದ ಇಷ್ಟು ದಿನ ಮನೆಯಲ್ಲೇ ಅವಲ ಸವಾರಿ ನಡೆದಿತ್ತು. ಜೊತೆಗೆ ಸೈಕಲ್ ಮೇಲೆ ತನ್ನ ಆಟದ ಗೊಂಬೆಗಳಿಗೂ ರೌಂಡ್ ಹಾಕಿಸಿದ್ದಾಳೆ. ಹೊಸದಾದ ದೊಡ್ಡ ಸೈಕಲ್ ಬೇಕು ಅವಳಿಗೆ. ಚಳಿ ಹೇಗೂ ಕಮ್ಮಿ ಆಗಿದೆ, ಈಗ ಕೊಡಿಸಬೇಕು.
 • ಶಾಲೆಗೆ ಹೋಗುವಾಗ ಪುಟ್ಟಿಯನ್ನು ರೆಡಿ ಮಾಡುವುದೇ ಒಂದು ದೊಡ್ಡ ಕೆಲ್ಸ ಅದರಲ್ಲೂ ಜೆಡೆ ಹೆಣೆಯುವುದು ಇತ್ತೀಚೆಗೆ ಬಲು ಕಷ್ಟವೆನಿಸಿದೆ, ಹಾಗಾಗಿ ಅವಳ ಜುಟ್ಟಿಗೆ ಕತ್ತರಿ ಬಿತ್ತು.
  ಎರಡು ವರ್ಷದ ಹಿಂದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೂದಲು ಕಟ್ ಮಾಡಿಸಿದ್ದಾಗ ಅತ್ತು ಕರೆದು ರಂಪ ಮಾಡಿ, ವಾಂತಿಯನ್ನೂ ಮಾಡಿದ್ದಳು. ಅದನ್ನು ನೆನೆದು ಹೆದರುತ್ತಲೇ ಅವಳನ್ನು ಕರೆದೋಯ್ದಿದ್ದೆ. ಆದ್ರೆ ಅವಳು ಬಹಳ ಖುಶಿಯಾಗಿ ಅಲ್ಲಿದ್ದ ಆಂಟಿಗೆ ಅವರ ಬುಕ್ ನಲ್ಲಿ ನಂಗೆ ಹೀಗೆ ಕಟ್ ಮಾಡಿ ಅಂತೆಲ್ಲಾ  ಹೇಳಿ ಕೂದಲು ಕತ್ತರಿಸಿಕೊಂಡಳು.