Tuesday, December 30, 2008

ನಾರೀಸಖಿ ಮೆಚ್ಚಿನ ಮಗು !!

ಎಲ್ಲಾ ಮಕ್ಕಳೂ ನೋಡಲು ಮುದ್ದಾಗಿಯೇ ಇರುತ್ತವೆ. "ಹೆತ್ತವಳಿಗೆ ಹೆಗ್ಗಣ ಮುದ್ದು" ಅನ್ನೋ ಮಾತಿನಂತೆ ಪುಟ್ಟಿ ಬೇರೆ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಅವರಮ್ಮನ ಕಣ್ಣಿಗೆ ಕಾಣಿಸ್ತಾಳೆ. ಆದ್ದರಿಂದಲೇ ನಾರೀಸಖಿ ತಂಡದವರು ತಿಂಗಳ ಮುದ್ದುಮಗು ಸ್ಪರ್ಧೆಗೆ ನಿಮ್ಮ ಮಗುವಿನ ಫೋಟೋ ಕಳುಹಿಸಿ ಎಂದಾಗ ತಟ್ಟನೆ ಪುಟ್ಟಿಯ ಫೋಟೋ ಕಳುಹಿಸಿದ್ದು.
ಅಂತೂ ಪುಟ್ಟಿ ಡಿಸೆಂಬರ್ ತಿಂಗಳ ಸ್ಪರ್ಧೆಯಲ್ಲಿ ಗೆದ್ದೇ ಬಿಟ್ಟಳು. ಅವಳಿಗೆ ಓಟ್ ಮಾಡಿದ ಎಲ್ಲಾ ಆಂಟಿ ಅಂಕಲ್ ಗಳಿಗೆ ಅವಳ ಥ್ಯಾಂಕ್ಯೂ !!! ಅವಳ ಹುಟ್ಟುಹಬ್ಬಕ್ಕೆ ಸರಿಯಾಗಿ ಈ ಸುಂದರ ಸರ್ಟಿಫಿಕೇಟ್ ಮತ್ತೊಂದು ಕೈಚೀಲ ಬಹುಮಾನವಾಗಿ ಬಂತು.

ಬರ್ತ್ ಡೇ ಪಾರ್ಟಿ!!

ಪುಟ್ಟಿಗೆ ಇವತ್ತು ಖುಶಿಯೋ ಖುಶಿ. ಅವಳ ಹುಟ್ಟುಹಬ್ಬಕ್ಕೆ ಇಂಗ್ಲ್ಯಾಂಡಿನಿಂದ ಅವಳ ದೊಡ್ಡ ಸೋದರ ಮಾವ, ಅತ್ತೆ ಮತ್ತವರ ಮುದ್ದಿನ ಮಗಳು ಖುಶಿ, ಆಸ್ಟ್ರೇಲಿಯಾದಿಂದ ಚಿಕ್ಕ ಸೋದರಮಾವ, ಹೈದರಾಬಾದಿನಿಂದ ಅತ್ತೆ ಕುಟುಂಬ ಮತ್ತೆ ಇನ್ನು ಅನೇಕ ಸ್ನೇಹಿತರೂ ಹಿತೈಷಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಅವಳ ಜೊತೆ ಆಡಲು ಮಿಕ್ಕಿ ಮೌಸ್ ಮತ್ತು ಡೋನಾಲ್ಡ್ ಅಂಕಲ್ ಕೂಡ ಬಂದಿದ್ರು. ಅಜ್ಜಿತಾತನ ಬಳಗ ದೊಡ್ಡದು, ಬಂದಿದ್ದ ೪೦೦ ಜನಗಳ ಜೊತೆ ಮಾತಾಡಿ ಫೋಟೋ ತೆಗೆಸ್ಕೊಂಡು ಸುಸ್ತಾದ್ಲು ಪುಟ್ಟಿ!! ಆದ್ರೂ ಮಜವಾಗಿತ್ತು ಅಂತ ಪಾರ್ತೀ ಅರೇಂಜ್ ಮಾಡಿದ್ದ ಅಜ್ಜಿತಾತರಿಗೆ ಥ್ಯಾಂಕ್ಸ್ ಹೇಳಿದ್ಲು:)

ಹೇಗಿದೆ ಪ್ರಿಂನ್ಸೆಸ್ಸ್ ಡೆಕೊರೇಶನ್!

ಆಹಾ! ನನ್ನ್ ಹೊಸ ಡ್ರೆಸ್ಸು
ಇದು ನನ್ನ್ ಕೇಕು:)
ಸೋದರಮಾವ ಕೊಡಿಸಿದ ಡ್ರೆಸ್ಸ್ ನಲ್ಲಿ ಮಿಂಚಿಂಗು !!

ಸತ್ಯನಾರಾಯಣ ಪೂಜೆ!!

ಸಾಹಿತ್ಯ ಮತ್ತವಳ ಸೋದರಮಾವನ ಮಗಳು ಖುಶಿಗೆ ಸಾಂಪ್ರದಾಯಿಕವಾಗಿ ನಾಮಕರಣ ಮಾಡೋಕೆ ಅಂತ ಅಜ್ಜಿತಾತ ಮನೇಲಿ ಎಲ್ಲಾ ಏರ್ಪಾಡು ಮಾಡಿದ್ದರು. ಆವತ್ತು ಪುಟ್ಟಿಯ ಜನ್ಮದಿನವೂ ಆದ್ದರಿಂದ ಸತ್ಯನಾರಾಯಣ ಪೂಜೆಯನ್ನೊ ಮಾಡಿಸಿದ್ರು. ಸಂಜೆ ಪಾರ್ಟಿ ಇರೋದ್ರಿಂದ ಪೂಜೆಗೆ ಕೇವಲ ಹತ್ತಿರದ ನೆಂಟರು ಅಂದ್ರೆ ೫೦ ಜನ ಮಾತ್ರ ಬಂದಿದ್ರು! ಪುಟ್ಟಿಯ ಅಮ್ಮನಿಗೆ ನಾಮಕರಣ, ಮದುವೆ ಮಾಡಿಸಿದ್ದ ಶ್ರೀ.ಸುಬ್ಬಾನಂಜುಂಡಶಾಸ್ತ್ರಿಗಳೆ ಇವತ್ತು ಪುಟ್ಟಿಗೆ ನಾಮಕರಣ ಮಾಡಿಸಲು ಬಂದಿದ್ದರು. 

ಪೂಜೆ

ಅಪ್ಪ ಮಗಳು

ರಸಾಯನ ಮಾಡುತ್ತಿರುವ ಆಂಟಿ, ಅಜ್ಜಿಯಂದಿರು

ಅಪ್ಪ ತನ್ನ ಹೆಸರನ್ನ ಸರಿಯಾಗಿ ಬರಿತಾರಾ ಅಂತ ನೋಡ್ತಾಯಿರೋ ಪುಟ್ಟಿ

ಪೂಜೆಯಾದ ಮೇಲೆ ದೇವರ ಮುಂದೆ ಒಂದು ಪೋಸು

ಮಾವನ ಮಗಳು ಖುಶಿಯೊಂದಿಗೆ

ವರುಷ ತುಂಬಿತು ಇಂದಿಗೆ !!!


ಇಂದು ಡಬ್ಬಲ್ ಹುಟ್ಟುಹಬ್ಬ .. ಪುಟ್ಟಿಗೆ ಮತ್ತವಳ ಬ್ಲಾಗಿಗೆ ಇವತ್ತಿಗೆ ಒಂದು ವರುಷ ತುಂಬಿತು. ಅವಳು ಇಂಡಿಯಾದಲ್ಲಿ ಅಜ್ಜಿ-ಅಜ್ಜ ಮತ್ತೆಲ್ಲರ ಜೊತೆ ಖುಶಿಯಾಗಿದ್ದಾಳೆ. ಎಲ್ಲರ ಕಣ್ಮಣಿ ಈಗವಳು. ನೂರ್ಕಾಲ ನಗುನಗುತಾ ಬಾಳೂ ಅಂತ ಅಜ್ಜ ಅಜ್ಜಿ ಪ್ರೀತಿಯಿಂದ ಹಾರೈಸಿದ್ದಾರೆ. ಅಪ್ಪ-ಅಮ್ಮನ ಹಾರೈಕೆನೂ ಅದೇ!!

ಜನುಮದಿನವಿದು ನಿನದು ಬರಲಿ ನೂರ್ಬಾರಿ
ನಿನ್ನೆಲ್ಲ ಕಾರ್ಯದಲಿ ಸಿಗಲಿ ಜಯಭೇರಿ

ಅವಳು ಹುಟ್ಟಿದ ದಿನದಿಂದ ಇಲ್ಲಿಯವರೆಗೂ ತೆಗೆದ ಫೋಟೋಗಳ ಒಂದು ವಿಡಿಯೊ..
ಮನೆಯ ಬೆಳಗಿದ ದೀವಿಗೆ
ಮನವ ತಣಿಸುವ ದೇವಿಗೆ
ನಮ್ಮ ಮನೆಯ ರಾಣಿಗೆ
ವರುಷ ತುಂಬಿತು ಇಂದಿಗೆ.

ಎಲ್ಲರ ನೆಚ್ಚಿನ ಪುಟ್ಟಿಗೆ
ತಾತನ ನೆಚ್ಚಿನ ಚಿಟ್ಟಿಗೆ
ಹರುಷವ ಸುರಿಸುವ ಕಂದಗೆ
ವರುಷ ತುಂಬಿತು ಇಂದಿಗೆ.

ಎಲ್ಲರ ಕುಣಿಸಿ ನಕ್ಕು ನಲಿಸಿ
ಸರ್ಧೆಯಲ್ಲಿ ಜಯವ ಗಳಿಸಿ
ವಿಜಯಮಾಲೆ ಧರಿಸಿದ ಪೋರಿಗೆ
ವರುಷ ತುಂಬಿತು ಇಂದಿಗೆ .

ಮಿಂಚಿನಂತೆ ಓಡಾಡುವ
ಕಣ್ಣಿನಲ್ಲೇ ಎಲ್ಲರ ಸೆಳೆವ
ಮುದ್ದಿನ ಚಿನುಕುರುಳಿಗೆ
ವರುಷ ತುಂಬಿತು ಇಂದಿಗೆ.
--ರೂpaश्री

Monday, December 29, 2008

ಶಾಕುಂತಲೆ!!

ವಿಧ ವಿಧವಾದ ಡ್ರೆಸ್ಸ್ ಹಾಕೋದು ಅಂದ್ರೆ ಪುಟ್ಟಿಗೆ ಬಲು ಇಷ್ಟ. ಇಲ್ಲಿ ಬೇಕಾದ ಡ್ರೆಸ್ಸ್ ಸಿಗದೇ, ಸೀರೆ ಉಡಿಸಲು ಬರದೇ ಇದ್ದ ಪುಟ್ಟಿ ಮತ್ತು ನಾನು ಇಂಡಿಯಾಗೆ ಹೋದಾಗ ಏನೆಲ್ಲಾ ಡ್ರೆಸ್ಸ್ ಮಾಡ್ಕೊಬೇಕೂಂತ ಒಂದ್ ದೊಡ್ಡ್ ಪಟ್ಟಿ ಮಾಡಿದ್ವಿ. ಆದ್ರೆ ಕಾರಣಾಂತರಗಳಿಂದ ಅದೆಲ್ಲಾ ಆಗ್ಲಿಲ್ಲ. ಹಾಕಿದ್ದು ಶಾಕುಂತಲೆ ಡ್ರೆಸ್ಸ್ ಮಾತ್ರ..

ನೋಡಿ ಹೇಗಿದ್ದಾಳೆ ನಮ್ಮ ಪುಟ್ಟ್ ಶಕುಂತಲಾ.....
ಓ ಶಕುಂತಲೆ
ನೀ ಕುಸುಮಬಾಲೆ
ಮಲ್ಲಿಗೆ ಮಾಲೆ
ಕೈಗಳಿಗೆ ಬಳೆ!

ಯಾರು ನಿನ್ನ ದುಶ್ಯಂತ
ಎಲ್ಲಿರುವನು ಆತ
ಮನದಲ್ಲಿ ಅವನ ನೆನೆಯುತ
ನಿಂತಿರುವೆಯಾ ಕಾಯುತ!!
--ರೂpaश्री

ಪುಟ್ಟಿ ಬರ್ತ್ ಡೇ ಗೆ ಬನ್ನಿ!!

ಎಲ್ಲರೊದನೆ ಕೂಡಿ ಆಡಿ ಹುಟ್ಟು ಹಬ್ಬ ಮಾಡ್ಕೊಬೇಕೂಂತ ಪುಟ್ಟಿಗೆ ಆಸೆ. ಅದಕ್ಕೆ ನೋಡಿ ಅವಳ ತಾತನಿಗೆ ಹೇಳಿ ಹೀಗೆ ಕಾರ್ಡ್ ಮಾಡಿಸಿ ನಿಮ್ಮನೆಲ್ಲಾ ಕರ್ದಿದ್ದಾಳೆ, ಖಂಡಿತಾ ಬನ್ನಿ.. ಬರ್ತೀರಲ್ಲಾ!

Sunday, December 28, 2008

ಮಲಗಲು ಕಲಿತ ಪುಟ್ಟಿ !!

ಪುಟ್ಟಿ ಹುಟ್ಟಿದಾಗಿನಿಂದ ಮಲಗೋದು ಬಹಳ ಕಮ್ಮಿ. ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಮಲಗಿಸಿದ್ರೆ ಕೇವಲ ಅರ್ಧ ಘಂಟೆಲಿ ಎದ್ದು ಆಟವಾಡ್ತಿದ್ಲು. ಹಗಲು ಹೇಗೋ ಅವಳೊಂದಿಗೆ ಆಟವಾಡ ಬಹುದಿತ್ತು, ಆದ್ರೆ ರಾತ್ರಿಯೆಲ್ಲ ಹೀಗೆ ಆದ್ರಿಂದ ಎಲ್ಲರಿಗೂ ಸಾಕು ಸಾಕಾಗ್ತಿತ್ತು. "ಮೊದಲ ೩ ತಿಂಗಳು ಹೀಗೆ, ಆಮೇಲೆ ಮಕ್ಕಳು ಸರಿ ಹೋಗ್ತಾರೆ" ಅಂತ ಪುಟ್ಟಿಯ ಅಜ್ಜಿ ಸಮಾಧಾನ ಮಾಡ್ತಾಯಿದ್ದ್ರು. ೩ ತಿಂಗಳು ತುಂಬಿದ ಮೇಲೂ ಪುಟ್ಟಿಯ ಆಟ ಮುಂದುವರೆಯಿತು. ಆಗ ಆರು ತಿಂಗಳಿಗೆ ಸರಿ ಹೋಗ್ತಾಳೆ ಅಂದ್ರು.
"ನಿಮ್ಮ ಪಕ್ಕ ಮಲಗಿಸಿಕೊಳ್ಳಬೇಡಿ. ಅವಳದ್ದೇ ಮಂಚದಲ್ಲಿ ಬೇರೆ ರೂಮಿನಲ್ಲಿ ಮಲಗಿಸಿ" ಅನ್ನೋ ಅವಳ ಡಾಕ್ಟರ್ ಹೇಳೊ ಹಾಗೆ ಮಾಡಲು ಮನಸ್ಸು ಒಪ್ಪಲಿಲ್ಲ. "ಮನೆದೇವರ ಹೆಸರು ಇಡದೆ, ಇನ್ನೇನೋ ಇಟ್ಟ್ರಿ ಅದಕ್ಕೆ ಹೀಗೆ ಆಡ್ತಾಳೆ" ಅಂತ ಪುಟ್ಟಿಯ ಅಜ್ಜಿ ತಾತರ ವಾದ.
ಒಂಬತ್ತು ತುಂಬಿದ್ರೂ ಅವಳ ಆಟ ನಿಲ್ಲದಾಗ "ರಾತ್ರಿ ಅವಳು ಎದ್ದು ಆಡಲು ಶುರು ಮಾಡಿದ್ರೆ, ನೀವು ಸುಮ್ಮನಿರಿ, ಅತ್ತರೆ ಅಳಲಿ, ಸ್ವಲ್ಪ ಹೊತ್ತು ಅತ್ತು ಸುಮ್ಮನಾಗ್ತಾಳೆ, ಮಲಗ್ತಾಳೆ.... ನನ್ನ ಮಗನೂ ಹೀಗೆ ಮಾಡ್ತಿದ್ದ ಒಂದು ದಿನ ೨ ಘಂಟೆ ಅಳಲು ಬಿಟ್ಟೆ, ಆಮೇಲೆ ತಾನೆ ಮಲಗಿದ" ಅನ್ನೋ ಸ್ನೇಹಿತರ ಮಾತು ಮೊದಲಿಗೆ ಸರಿಯೆನಿಸಲಿಲ್ಲವಾದ್ರೂ, ಕೊನೆಗೆ ಇರ್ಲಿ ನೋಡೋಣ ಅಂತ ಪ್ರಯತ್ನಿಸಿದ್ರೆ ೫ ನಿಮಿಷ ಅಳುವಷ್ಟರಲ್ಲೇ ಆ ಅಳು ಕೇಳಲು ಆಗಲಿಲ್ಲ. ಸರಿ, ಅದೆಷ್ಟು ದಿನ ಹೀಗೆ ಇರ್ತಾಳೆ ಇರ್ಲಿ ನೋಡೋಣ ಅಂತ ಸುಮ್ಮನಾದ್ವಿ.

ಇಂಡಿಯಾಗೆ ಬಂದು ೧ ವಾರದಲ್ಲೇ ಪುಟ್ಟಿ ಆರಾಮಾಗಿ ರಾತ್ರಿಯಿಡೀ ಮಲಗಲು ಶುರುಮಾಡಿದ್ಲು:)) ತನ್ನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಅವಳು ಅಪ್ಪ ಅಮ್ಮನಿಗೆ ಕೊಟ್ಟ ಗಿಫ್ಟ್ ಇದು:))

Saturday, December 20, 2008

ಪುಟ್ಟ ಕರು

ಪುಟ್ಟಿಗೆ ಈಗ ಬೀದಿಯಲ್ಲಿ ಬರುವ ಹಸು/ಎಮ್ಮೆಗಳನ್ನು ನೋಡಿದ್ರೆ ಬಹಳ ಸಂತೋಷ "ಬಾ,ಬಾ" ಅಂತ ಕೈ ಸನ್ನೆ ಮಾಡಿ ಕೂಗ್ತಾಳೆ. ಅಜ್ಜಿ ಕೊಡುವ ಬಾಳೆಹಣ್ಣು ತಿನ್ನೋ ಹಸುನ ನೋಡೋದೇ ಅವಳಿಗೆ ಬಲು ಖುಶಿ. ಊಟ ಮಾಡಲು ಹಠಮಾಡಿದಾಗ ಮನೆ ಹೊರಗೆ ಬಂದು ಅಂಬಾ ನೋಡುತ್ತಾ ನಿಂತ್ರೆ ನಿಮಿಷದಲ್ಲಿ ಊಟ ಖಾಲಿ.

ನಾನು ನೋಡಿದ ಪುಟ್ಟ ಕರು
ಹಸುವಿನ ಮರಿಯಿದು ಕರು
ನಾಲ್ಕು ಕಾಲುಗಳ್ಳುಳ್ಳ ಕರು
ಚೆಂಗು ಚೆಂಗನೆ ನೆಗೆಯುವ ಕರು

ಅಮ್ಮನ ಹಾಲು ಕುಡಿವ ಕರು
ಹುಲ್ಲನು ಮೇಯುವ ಕರು
ಕಂದು ಬಣ್ಣದ ಮೈಯ ಕರು
ಅಂಬಾ ಅಂಬಾ ಎಂದು ಕರೆವ ಕರು


ನಾ ಕೊಟ್ಟ ಬಾಳೆಹಣ್ಣು ತಿಂದ ಕರು
ನನ್ನನ್ನೇ ಹಿಂಬಾಲಿಸಿ ಬಂದ ಕರು
ನನ್ನ ಮೆಚ್ಚಿನ ಮುದ್ದು ಕರು
ನಾ ಹೋಗಿ ಬರುವೆ ನೀನಿಲ್ಲೇ ಇರು
-ರೂpaश्री

Saturday, December 13, 2008

ಏರೋಪ್ಲೇನ್ ಏರಿದ ಪೋರಿ !!!

ಬೇಬಿ ಕಾರ್ ಸೀಟಿನಲ್ಲಿ ಕೂರಲು ಬಲು ಗಲಾಟೆ ಮಾಡುತ್ತಿದ್ದ ಪುಟ್ಟಿಯನ್ನ ಹೇಗಪ್ಪ ವಿಮಾನದಲ್ಲಿ ಭಾರತಕ್ಕೆ ಕರೆದೊಯ್ಯೋದು ಅನ್ನೋದು ಪುಟ್ಟಿ ಅಮ್ಮ-ಅಪ್ಪನ ಚಿಂತೆ ಆಗಿತ್ತು. ಆದ್ರೂ ಅವಳ ಮೊದಲ ವರ್ಷದ ಹುಟ್ಟುಹಬ್ಬವನ್ನ ಮನೆಯವರೆಲ್ಲರ ಜೊತೆ ಆಚರಿಸಬೇಕು ಅಂತ ಹೊರಟೇ ಬಿಟ್ಟ್ರು. ತಲಹಸೀಯಿಂದ ಬೆಂಗಳೂರಿಗೆ ಹೋಗೋಷ್ಟರಲ್ಲಿ ಪುಟ್ಟಿ-ಅಮ್ಮ-ಅಪ್ಪ ಎಲ್ಲರಿಗೂ ಸಾಕು ಸಾಕಾಯ್ತು.
ವಿಮಾನದಲ್ಲಿ ತನ್ನದೇ ತೊಟ್ಟಿಲಲ್ಲಿ ಮಲಗಿದ್ದು ಹೀಗೆ...


ಶಿಗಾಗೋ ವಿಮಾನನಿಲ್ದಾಣದಲ್ಲಿ ಮುಂದಿನ ಫ್ಲೈಟ್-ಗೆ ಕಾಯ್ದು ಸಾಕಾಗಿ ಅಲ್ಲೇ ಹಾಯಾಗಿ ನಿದ್ರಿಸಿದ್ದು ಹೀಗೆ...

ನಿದ್ರಿಸಿ ಸಾಕಾದಾಗ ತೊಟ್ಟಿಲಿನಲ್ಲೇ ಕುಳಿತು ಊಟ, ಆಟ ಎಲ್ಲಾ...

Tuesday, December 02, 2008

ತಲೆ ಕೆಳಗಾದ ಮುಖ!!

ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ ಅನ್ನಿಸಿತು.

ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

Monday, December 01, 2008

ಬಾನಿನಲ್ಲೊಂದು ನಗು ಮುಖ :)

ಪ್ರತಿ ವರ್ಷ ಥ್ಯಾಂಕ್ಸ್ ಗೀವಿಂಗ್ ಗೆ ಇಲ್ಲಿ ಅಮೇರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರುತ್ತಾರೆ. ಇದೇ ಸಮಯಕ್ಕೆ ಈ ವರ್ಷ ಬಾನಿನಲ್ಲಿ ಚಂದಿರ, ಗುರು ಮತ್ತು ಶುಕ್ರ ಗ್ರಹಗಳು ಒಂದೆಡೆ ಕೂಡಿ ನಮ್ಮನ್ನೋಡಿ ನಗೆ ಚೆಲ್ಲುವುದೆಂದು ಹಲವು ದಿನಗಳಿಂದ ನ್ಯೂಸ್ ನಲ್ಲಿ ಬರ್ತಾಯಿತ್ತು.


252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.

ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.
ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.ಮೋಡಗಳು ನಮ್ಮನ್ನು ನೋಡಿ ನಗೋದು ಹೀಗೆ.
ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳ ನಗೆ.
ಏರ್ ಶೋ ಸಮಯದಲ್ಲಿ ಬಂದ ಪ್ರೇಕ್ಷಕರನ್ನು ವಿಮಾನಗಳು ಸ್ವಾಗತಿಸಿದ್ದು ಹೀಗೆ.

Sunday, November 30, 2008

ಹನ್ನೊಂದನೆ ತಿಂಗಳ ಹುಟ್ಟು ಹಬ್ಬ :)

ಪುಟ್ಟಿಯ ಹನ್ನೊಂದನೆ ತಿಂಗಳ ಹುಟ್ಟು ಹಬ್ಬ ಬಂದೇ ಬಿಡ್ತು. ಭಾರತಕ್ಕೆ ಅಜ್ಜಿ- ತಾತನ ಮನೆಗೆ ಹೋಗಿದ್ದ ಅವಳ ಫ್ರೆಂಡ್ಸ್ ಶಕ್ತಿ, ಸುಮುಖ್ ಮತ್ತು ಸಿದ್ದಾರ್ಥ್ ಅಣ್ಣ ಇವೆರೆಲ್ಲ ವಾಪಸ್ ಬಂದಿದ್ರು. ಪುಟ್ಟಿ ಜೊತೆ ಆಡಲು ಹೊಸ ಹೊಸ ಆಟ ಕಲಿತು ಬಂದಿದ್ದ್ರು.

ಸದ್ಯದಲ್ಲೇ ತಾನೂ ಅಪ್ಪ-ಅಮ್ಮನ ಜೊತೆ ಇಂಡಿಯಾದಲ್ಲಿರುವ ಅಜ್ಜ-ಅಜ್ಜಿ ಮನೆಗೆ ಹೋಗೋದಕ್ಕೆ ರೆಡಿಯಾಗ್ತಾ ಇರುವ ಪುಟ್ಟಿ ಅವರಿಂದ ಹಲವು ಟಿಪ್ಸ್ ತಗೊಂಡ್ಲು. ಎಲ್ಲರೂ ಕೇಕ್ ತಿಂದು ಸಂತಸ ಪಟ್ಟರು :)

Monday, November 24, 2008

ಪುಟ್ಟಿಯ ಮೊದಲ Fall !!

ಟೈಟಲ್ ನೋಡಿ ಪುಟ್ಟಿ ಬಿದ್ದ್ ಬಿಟ್ಟ್ಲಾ ಅಂತ ಯೋಚಿಸಿದ್ರಾ? ಅಯ್ಯೊ ಇಲ್ಲಾ... ಈಗಿಲ್ಲಿ Autumn / ಶರದ್ /Fall ಎನ್ನುವ ಎಲೆಗಳು ಉದುರೋ ಕಾಲ ಶುರುವಾಗಿದೆ. ಎಲೆಗಳನ್ನೆಲ್ಲಾ ಉದುರಿಸಿ ಚಳಿಗಾಲಕ್ಕೆ ಪೂರಾ ಬೋಳಾಗಿ ನಿಲ್ಲುವ ಮೇಪಲ್, ಬರ್ಚ್, ಎಲ್ಮ್, ಕೆಲಬಗೆಯ ಓಕ್ ಮುಂತಾದ ಮರಗಳಲ್ಲಿ ಎಲೆ ಉದುರುವುದಕ್ಕೆ ಮುನ್ನ ಸಂಭವಿಸುವ ವರ್ಣವೈಭವದಲ್ಲಿ ಕಣ್ಣು ತುಂಬುವಷ್ಟು ಬಣ್ಣ. ಸೆಪ್ಟೆಂಬರ್ ನಲ್ಲಿ ಅಧಿಕೃತವಾಗಿ fall ಶುರುವಾದಾಗ ಇಲ್ಲಿಯವರೆಗೂ ಹಸಿರಾಗಿದ್ದ ಎಲೆಗಳೆಲ್ಲ ಹಳದಿ, ಕೇಸರಿ, ಕೆಂಪು, ಕಂದು, ನೇರಳೆ ಬಣ್ಣಕ್ಕೆ ತಿರುಗಿ ನೋಡುವವರ ಕಣ್ಣಿಗೆ ಹಬ್ಬ ಉಂಟೂ ಮಾಡುತ್ತದೆ. ವಸಂತದಲ್ಲೂ, ಬೇಸಿಗೆಯಲ್ಲೂ ಎಲೆಯಲ್ಲಿನ ಹಸಿರಿಗೆ ಕಾರಣವಾಗುವ ಕ್ಲೋರೋಫಿಲ್ ಎಂಬ ಹಸಿರು ಪಿಗ್ಮೆಂಟಿನ ಉತ್ಪಾದನೆಗೆ fallನಲ್ಲಿ ತಡೆಯಾಗಿ, ಅಲ್ಲಿಯವರೆಗೂ ಈ ಹಸಿರಿನ ಹಿಂದೆಯೇ ಬಚ್ಚಿಟ್ಟು ಕೊಂಡಿದ್ದ ಬೇರೆ ಬೇರೆ ಬಣ್ಣಗಳು ಎಲೆಗಳಲ್ಲಿ ಕಾಣತೊಡಗುವುದೇ ಈ ವರ್ಣವೈಭವಕ್ಕೆ ಮುಖ್ಯ ಕಾರಣವಂತೆ. ಫ್ಲೋರಿಡಾದಲ್ಲಿ ಈ ವರ್ಣವೈಭವ ಹೆಚ್ಚೇನು ಇಲ್ಲದಿದ್ದರೂ, ಇರುವುದನ್ನೇ ಪುಟ್ಟಿ ಕಂಡು ಖುಶಿಪಟ್ಟಳು.
ಶರದ್ ಬಂತು
ಚಳಿಯ ತಂತು
ಎಲೆಗಳು ಉದುರಲು ರೆಡಿ ಆಯ್ತು
ಹಸಿರು ಬೋರ್ ಆಯ್ತು
ಎಲೆಗಳ ಬಣ್ಣ ಬದಲಾಯ್ತು
ಹಳದಿ, ಕೆಂಪು, ನೇರಳೆ ಎಲ್ಲೆಡೇ ತುಂಬಿತ್ತು
--ರೂpaश्री

Saturday, November 22, 2008

ಮಕ್ಕಳ ಸಪ್ತಾಹ !!!


ನವೆಂಬರ್ ೧೪ ಚಾಚಾ ನೆಹರೂ ಅವರ ಹುಟ್ಟುಹಬ್ಬವನ್ನು ಮಕ್ಕಳದಿನ ಎಂದು ಭಾರತದಲ್ಲಿ ಆಚಾರಿಸುತ್ತಾರೆ. ನವೆಂಬರ್ ೨೦ ವಿಶ್ವ ಮಕ್ಕಳ ದಿನ. ಇವರೆಡನ್ನೂ ಸೇರಿಸಿ ವಾರ ಪೂರ್ತಿ ಪುಟ್ಟಿ ಮತ್ತವರಮ್ಮ ಪುಟ್ಟಿ ಪ್ರಪಂಚದಲ್ಲಿ ವಿಶೇಷ ರೀತಿಯಲ್ಲಿ "ಮಕ್ಕಳ ಸಪ್ತಾಹ" ಆಚರಿಸಿಕೊಂಡರು. ಹೇಗೂ ಛಳಿ ಜಾಸ್ತಿಯಾಗಿದೆ ಹೊರಗೆಲ್ಲೂ ಹೋಗೋಹಾಗಿಲ್ಲ, ಸರಿ ಇದೇ ಸಮಯ ಅಂತ ನವರಾತ್ರಿಯಲ್ಲಿ ಕೃಷ್ಣನಾಗಿದ್ದ ಪುಟ್ಟಿ ಈಗ ವಾರವಿಡೀ ದಿನಕ್ಕೊಂದು ಅವತಾರತಾಳಿದಳು. ಭಾರತದಲ್ಲಿದ್ದಿದ್ದರೆ ರೆಡಿಮೇಡ್ ಡ್ರೆಸ್ಸ್ ಸಿಗುತ್ತಿತ್ತು, ಇಲ್ಲಿ ಆ ಸೌಲಭ್ಯ ಇಲ್ಲ. ಜೊತೆಗೆ ಪುಟ್ಟಿಯಮ್ಮನಿಗೆ ಪಂಚೆ/ಕಚ್ಚೆ/ ಸೀರೆ ಉಡಿಸಲು ಬರೋಲ್ಲ, ಹಾಗಾಗಿ ಫೋಟೋಗಳನ್ನ ಸ್ವಲ್ಪ ಅಡ್ಜಸ್ಟ್ ಮಾಡಿ ಪ್ಲೀಸ್.


ನವೆಂಬರ್ ೧೪. ನಮ್ಮ್ ಮನೆಯ ಬಿಗ್ ಬಾಸ್ ಇವ್ರೇ
ನವೆಂಬರ್ ೧೫. ಪುಟ್ಟ್ ಜುಟ್ಟು ಪುಟ್ಟ್ ಪೂಜಾರಿ


ನವೆಂಬರ್ ೧೬. ಅಡವಿ ದೇವಿ


ನವೆಂಬರ್ ೧೭. ಶ್ರೀ ರಾಮ

ನವೆಂಬರ್ ೧೮. ಸಾಯಿಬಾಬ ಮತ್ತು ಶ್ರೀ ರಾಘವೇಂದ್ರಸ್ವಾಮಿ

ನವೆಂಬರ್ ೧೯. ಹಳ್ಳಿಯ ಮಹಿಳೆ

ನವೆಂಬರ್ ೨೦.ಪುಟ್ಟ್ ಶಿವ

Friday, November 14, 2008

ಮಕ್ಕಳ ದಿನಾಚರಣೆ ಶುಭಾಶಯಗಳು !!


ಜವಹರ್ ಲಾಲ್ ನೆಹರೂ ಅವರಿಗೆ ಮಕ್ಕಳೆಂದರೆ ಬಲು ಇಷ್ಟವಂತೆ. ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಸೇರಿಸಿ ಸಂತೋಷಪಡುತ್ತಿದ್ದರಂತೆ. ಮಕ್ಕಳು ಮತ್ತು ಹೂವುಗಳನ್ನು ಹೋಲಿಸುತ್ತಿದ್ದ ನೆಹರು, "ಮಕ್ಕಳೆಂದರೆ ಹೋದೋಟದಲ್ಲಿರುವ ಸುಂದರ ಮೊಗ್ಗುಗಳು" ಎನ್ನುತ್ತಿದ್ದರಂತೆ. ಪುಟ್ಟ ಮಕ್ಕಳ ಕುರಿತು ಕಾಳಜಿ ವಹಿಸಬೇಕು, ಮಕ್ಕಳನ್ನು ಪ್ರೀತಿಯಿಂದ ಪೋಷಿಸಬೇಕು, ಮಕ್ಕಳೇ ದೇಶದ ಭವಿಷ್ಯ ಹಾಗೂ ನಾಳಿನ ನಾಗರಿಕರು ಎಂಬುದು ನೆಹರು ಅಭಿಮತ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ಅವರ ಜನ್ಮದಿನವನ್ನು ದೇಶದಾದ್ಯಂತ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಚಾಚಾ ನೆಹರೂ ಅವರು ಮಕ್ಕಳಿಗಾಗಿ ಬರೆದ ಒಂದು ಪತ್ರ ಎಲ್ಲೋ ಓದಿದ್ದೆ, ಅದನ್ನು ನನ್ನ ಕಂಪ್ಯುಟರ್’ನಲ್ಲಿ ಉಳಿಸಿಕೊಂಡಿದ್ದೆ. ಇಲ್ಲಿದೆ ಆ ಪತ್ರ :


ಡಿಸೆಂಬರ್ 03, 1949

ಮುದ್ದು ಪುಟಾಣಿಗಳೇ,
ನಗೆ ಮಕ್ಕಳೊಂದಿಗೆ ಒಡನಾಟ ಬಲು ಇಷ್ಟ. ಮಕ್ಕಳೊಂದಿಗೆ ಮಾತುಕತೆ, ನಗುನಗುತ್ತಾ ಸಮಯ ಕಳೆಯೋದು, ಆಟವಾಡುವುದು... ನನಗಿಷ್ಟ. ಮಕ್ಕಳ ಜೊತೆಗಿದ್ದರೆ ಒಂದು ಕ್ಷಣ ನಾನೊಬ್ಬ ಇಳಿವಯಸ್ಸಿನವ ಎಂಬುದನ್ನು ಮರೆತೇಬಿಡುತ್ತೇನೆ, ನನ್ನ ಬಾಲ್ಯದ ದಿನಗಳು ಎಂದೋ ಕಳೆದಿವೆ ಎನ್ನುವ ಪರಿವೆಯೂ ಇರುವುದಿಲ್ಲ. ಆದರೆ ಪ್ರೀತಿಯಿಂದ ನಿಮಗೆ ಪತ್ರ ಬರೆಯಲು ಪೆನ್ನು ಹಿಡಿದಾಗ ನನ್ನ ವಯಸ್ಸು, ನಿಮ್ಮ-ನನ್ನ ನಡುವಿನ ಅಂತರ ಹಾಗೂ ನಮ್ಮ ನಡುವಿನ ನಿಜ ವ್ಯತ್ಯಾಸ ಮರೆಯಲಾಗದು. ಕಿರಿಯರಿಗೆ ಉಪದೇಶ ಮತ್ತು ಸಲಹೆ ನೀಡುವುದೇ ಹಿರಿಯರ ಅಭ್ಯಾಸ. ನನಗಿನ್ನೂ ನೆನಪಿದೆ, ಪುಟ್ಟ ಹುಡುಗನಾಗಿದ್ದಾಗ ನನಗೂ ಇಂಥ ಉಪದೇಶಗಳೆಂದರೆ ಕಿರಿಕಿರಿ. ಈಗ ನನ್ನ ಮಾತುಗಳೂ ನಿಮಗೆ ಹಿಡಿಸದೆ ಇರಬಹುದು.ಇತರರ ಮಾತುಗಳನ್ನು ಆಲಿಸಿದಾಗಲೆಲ್ಲಾ ನಾನೊಬ್ಬ ಜ್ಞಾನಿ, ಬುದ್ಧಿವಂತ ಹಾಗೂ ಪ್ರಮುಖ ವ್ಯಕ್ತಿಯಾಗುವ ಕನಸು ಕಾಣುತ್ತಿದ್ದೆ. ಆದರೆ ನನ್ನ ನಿಜ ವ್ಯಕ್ತಿತ್ವದ ಕಡೆ ದೃಷ್ಟಿ ಹರಿಸಿದಾಗೆಲ್ಲಾ ಆ ಬಗ್ಗೆ ಅನುಮಾನ ಮೂಡುತ್ತಿತ್ತು. ಅನೇಕ ಬಾರಿ ಜನರು ಎಷ್ಟೇ ಶ್ರೇಷ್ಠ ಜ್ಞಾನಿಗಳಾಗಿರಲಿ, ತಮ್ಮ ಬಗ್ಗೆ ಕೊಚ್ಚಿಕೊಳ್ಳುವುದಿಲ್ಲ. ಹಾಗಿದ್ದಲ್ಲಿ ನಾನೇನು ಬರೆಯಲಿ? ಸುತ್ತ ಮುತ್ತಲಿನ ಈ ಅಭೂತಪೂರ್ವ ಸೌಂದರ್ಯ... ಎಲ್ಲವನ್ನೂ ಮರೆಯುವ ನಾವು ಅಥವಾ ನಮ್ಮ ಹಿರಿಯರು ನಮ್ಮದೇ ವಾದ-ವಿವಾದ ಮಂಡಿಸುತ್ತಾ ಕಾಲಹರಣ ಮಾಡಿ ಸ್ವಂತಿಕೆಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಕಚೇರಿಯಲ್ಲಿ ಕುಳಿತು ಮಹತ್ಕಾರ್ಯ ಮಾಡುತ್ತಿದ್ದೇವೆ ಎಂದುಕೊಳ್ಳುತ್ತೇವೆ.ಆದರೆ ನನಗೆ ಗೊತ್ತು. ನೀವೆಲ್ಲಾ ತುಂಬಾ ಬುದ್ಧಿವಂತರು, ನಿಮ್ಮ ಕಣ್ಣು ಮತ್ತು ಕಿವಿಗಳು ಜಗತ್ತಿನ ಸೌಂದರ್ಯ ಮತ್ತು ಸುತ್ತಲಿನ ಬದುಕನ್ನು ಆಸ್ವಾದಿಸಲು ತೆರೆದೇ ಇರುತ್ತದೆ. ಒಂದು ಸುಂದರ ಹೂವನ್ನು ಅದರ ನಾಮಧೆಯದಿಂದ ಗುರುತಿಸುವಿರಾ ಅಥವಾ ಹಕ್ಕಿಯೊಂದು ಹಾಡುತ್ತಿದ್ದರೆ ಆ ಹಕ್ಕಿಯ ಹೆಸರು ಹೇಳಬಲ್ಲಿರಾ? ಅವುಗಳೊಂದಿಗೆ ಅದೆಷ್ಟು ಸರಳವಾಗಿ ಸ್ನೇಹ ಬೆಳೆಸುತ್ತೀರಿ. ಅಥವಾ ಒಂದಿಷ್ಟು ಪ್ರೀತಿಯಿಂದ ಬಳಿ ಸರಿದರೆ ಸಾಕು ಪ್ರಕೃತಿಯ ಪ್ರತಿ ಜೀವ-ಜಂತುಗಳೂ ನಿಮ್ಮ ಒಡನಾಡಿಯಾಗಬಲ್ಲವು. ಆದರೆ ನಾವು ಹಿರಿಯರು ನಮ್ಮದೇ ಸೀಮಿತ ವಲಯದೊಳಗೆ ಬದುಕು ಸವೆಸುತ್ತೇವೆ. ಹಿರಿಯರು ತಮ್ಮ-ತಮ್ಮೊಳಗೆ ಧರ್ಮ, ಜಾತಿ, ವರ್ಣ, ಪಕ್ಷ, ರಾಷ್ಟ್ರ, ಪ್ರಾಂತ್ಯ, ಭಾಷೆ, ಪದ್ಧತಿ ಮತ್ತು ಬಡವ-ಬಲ್ಲಿದರೆಂಬ ತಡೆಗೋಡೆಗಳನ್ನು ನಿರ್ಮಿಸಿರುತ್ತಾರೆ. ಸ್ವತಃ ತಾವೇ ನಿರ್ಮಿಸಿದ ಕಾರಾಗೃಹದಲ್ಲಿ ಬದುಕು ಸವೆಸುತ್ತಾರೆ. ಅದೃಷ್ಟವಶಾತ್ ಮುಗ್ಧ ಮಕ್ಕಳು ಈ ತಡೆಗೋಡೆಗಳ ಬಗ್ಗೆ ಹೆಚ್ಚೇನೂ ಅರಿಯಲಾರರು. ಅವರು ಜೊತೆಯಾಗಿ ಆಡುತ್ತಾರೆ, ಜೊತೆಯಾಗಿ ನಲಿಯುತ್ತಾರೆ ಮತ್ತು ಕೆಲಸ ಮಾಡುತ್ತಾರೆ. ಆದರೆ ಮಕ್ಕಳು ಬೆಳೆದು ಪ್ರೌಢಾವಸ್ಥೆಗೆ ತಲುಪಿದ ಮೇಲೆ ಈ ತಡೆಗೋಡೆಗಳ ಬಗ್ಗೆ ಕಲಿಯಲಾರಂಭಿಸುತ್ತಾರೆ. ನನಗೊಂದು ನಂಬಿಕೆಯಿದೆ; ನೀವು ಬೆಳೆಯಲು ಇನ್ನೂ ತುಂಬಾ ವರ್ಷಗಳೇ ಬೇಕಾಗಬಹುದು ಎಂಬ ವಿಶ್ವಾಸವದು.ಪುಟಾಣಿಗಳೇ, ನಮ್ಮ-ನಿಮ್ಮ ನಡುವೆ ಒಬ್ಬ ಮಹಾನ್ ವ್ಯಕ್ತಿ ಇದ್ದಾರೆಂಬುವುದು ನಿಮಗೂ ಗೊತ್ತಲ್ಲ? ಅವರೇ ರಾಷ್ಟ್ರಪಿತ ಮಹಾತ್ಮಗಾಂಧಿ. ಇವರನ್ನು ನಾವು ಪ್ರೀತಿಯಿಂದ ಬಾಪೂಜಿ ಎನ್ನುತ್ತೇವೆ. ಅವರೊಬ್ಬ ಮಹಾನ್ ಜ್ಞಾನಿ. ಆದರೆ ಅವರೆಂದೂ ತಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸಿಲ್ಲ. ಬಲು ಸರಳ ಮತ್ತು ಮಕ್ಕಳಂಥ ಮುಗ್ಧ ಮನಸ್ಸು ಅವರದು. ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದರು. ಎಷ್ಟೋ ಬಾರಿ, ನಗುನಗುತ್ತಲೇ ಜಗತ್ತನ್ನು ಎದುರಿಸಲು ಸಿದ್ಧರಾಗಿ ಎಂಬ ನೀತಿಪಾಠವನ್ನು ನಮಗೆ ಬೋಧಿಸುತ್ತಿದ್ದರು.ನಮ್ಮದು ಬೃಹತ್ ರಾಷ್ಟ್ರ, ನಾವೆಲ್ಲರೂ ದೇಶ ಸೇವೆ ಮಾಡಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ದೇಶಕ್ಕಾಗಿ ಅಳಿಲು ಸೇವೆ ಮಾಡಿದರೂ ಸಾಕು, ಭಾರತ ಉಜ್ವಲವಾಗಿ ಬೆಳಗಲಿದೆ. ನನ್ನ ಪಕ್ಕದಲ್ಲೇ ಕುಳಿತು ನನ್ನೆಲ್ಲಾ ಮಾತುಗಳನ್ನು ಪ್ರೀತಿಯಿಂದ ಆಲಿಸುತ್ತಿದ್ದೀರೆಂದು ಭಾವಿಸಿ, ಪತ್ರದ ಮೂಲಕ ನನ್ನೆಲ್ಲಾ ಪ್ರೀತಿಯನ್ನು ಅರುಹುತ್ತಿದ್ದೇನೆ. ನಾನು ಹೇಳಬೇಕೆಂದು ಬಯಸಿದ್ದಕ್ಕಿಂತ ಹೆಚ್ಚು ವಿಷಯಗಳನ್ನೇ ಈ ಪತ್ರದಲ್ಲಿ ತುರುಕಿದ್ದೇನೆ.
ಪ್ರೀತಿಯಿಂದ,

ಜವಹರಲಾಲ್ ನೆಹರು


ಅಂದ ಹಾಗೆ ನವೆಂಬರ್ ಇಪ್ಪತ್ತರಂದು ವಿಶ್ವ ಮಕ್ಕಳ ದಿನಾಚರಣೆ. ನಮ್ಮ ಭಾರತದಲ್ಲಿ ಮಾತ್ರ ನವೆಂಬರ್ ಹದಿನಾಲ್ಕು. ಈ ತಿಂಗಳು ಜಗತ್ತಿನ ಎಲ್ಲಾ ಮಕ್ಕಳಿಗೂ ಮಕ್ಕಳಹಬ್ಬದ ಶುಭಾಶಯಗಳು. ಕಲ್ಮಶವರಿಯದ ಮುಗ್ಧ ಮಕ್ಕಳ ನಗು ನಮಗೆಲ್ಲಾ ಚೇತನ. ಈ ನಗು ಮಕ್ಕಳ ಮೊಗದಲ್ಲಿ ಸದಾ ಇರಲಿ. :)

Wednesday, November 05, 2008

ಸಾವು ಕೊನೆಯಲ್ಲ ...

ಕೋಣೆಯ ತುಂಬಾ ಮೌನ ಆವರಿಸಿತ್ತು. ಸವಿತಾಳ ಅಳುವಿನ ಸಣ್ಣದನಿಯೊಂದೇ ಆಗಾಗ್ಗೆ ಆ ಮೌನ ಮುರಿಯುತ್ತಿತ್ತು. ಹಾಸಿಗೆಯ ಮೇಲೆ ಮಲಗಿದ್ದ ತನ್ನ ಕಂದನನ್ನು ನೋಡಿ ಮತ್ತೆ ಮತ್ತೆ ಬಿಕ್ಕಳಿಸುತ್ತಿದ್ದಳು. ತನ್ನ ಮುದ್ದು ಅವಿನಾಶ್ ಇನ್ನಿಲ್ಲವೆಂದು ಡಾಕ್ಟರ್ ಆಗಷ್ಟೆ ಹೇಳಿದ ಮಾತನ್ನು ನಂಬಲು ಅವಳಿಂದ ಆಗುತ್ತಿಲ್ಲ. "ಆ ದೇವರು ಇಷ್ಟು ಕ್ರೂರಿ ಆಗಲು ಹೇಗೆ ಸಾಧ್ಯ? ಈ ಎಳೆ ಕಂದಮ್ಮನಿಗೆ ಈ ಘೋರ ಶಿಕ್ಷೆ ಏಕೆ?" ಎಂದೆಲ್ಲಾ ಯೋಚಿಸುತ್ತಾ ಮಲಗಿದ್ದ ಮಗನ ದೇಹ ದಿಟ್ಟಿಸಿ ಕಣ್ಣೀರೊರೆಸಿಕೊಂಡಳು. "ಅವಿ, ನಾ ನಿನ್ನ ಸಾಯೋಕೆ ಬಿಡೋಲ್ಲ ಪುಟ್ಟು, ಯಾರ್ ಏನೇ ಹೇಳಿದರೂ ಸರಿ ನೀನು ಸಾಯುವುದಿಲ್ಲ" ಸವಿತ ಬಡಬಡಿಸುತ್ತಾ ಹಾಸಿಗೆಯ ತುದಿಯಲ್ಲಿ ಕುಸಿದಳು.

ಉಲ್ಲಾಸ್ ಜೊತೆ ಮಾತನಾಡುತ್ತಾ ಕೋಣೆಗೆ ಬಂದರು ಪ್ರಖ್ಯಾತ ಮಕ್ಕಳ ವೈದ್ಯ ಡಾ. ಹರ್ಷ. ಸವಿತಾಳನ್ನು ಕಂಡು ಉಲ್ಲಾಸ್ "ಡಾ. ಹರ್ಷ ನಿನ್ನೊಂದಿಗೆ ಮಾತಾಡಲು ಬಂದಿದ್ದಾರೆ ಸವಿತ, ನೋಡಿಲ್ಲಿ" ಎಂದವಳನ್ನು ಎತ್ತಿ ಕೂರಿಸಿದನು. ಡಾಕ್ಟರ್’ನ್ನು ಹತಾಶಳಾಗಿ ನೋಡುತ್ತಾ "ಏನು, ಇನ್ನೇನಿದೆ ನೀವು ಹೇಳಲಿಕ್ಕೆ?" ಅಂದಳು. "ನೋಡಿ ಸವಿತ ಅವರೆ, ನಿಮ್ಮ ದುಃಖ ನನಗೆ ಅರ್ಥವಾಗುತ್ತದೆ. ನಮ್ಮ ಪ್ರಯತ್ನ ನಾವು ಮಾಡಿದ್ವಿ, ಈಗ ನಾವು ಅವಿನಾಶ್’ನ ದೇಹವನ್ನು ತಗೊಂಡು ಹೋಗಬೇಕು". ಅವರ ಮಾತಿನ್ನೂ ಪೂರ್ತಿಗೊಳ್ಳುವ ಮುಂಚೆಯೇ "ಇಲ್ಲಾಆಆಆಆ" ಎಂದು ಅರಚುತ್ತಾ ಎದ್ದ ಸವಿತ ಮಗನ ದೇಹವನ್ನು ಬಿಗಿದಪ್ಪಿ "ನೀವ್ಯಾರೂ ನನ್ನ ಕಂದನನ್ನು ಮುಟ್ಟಬೇಡಿ, ಯಾರಿಗೂ ಅವನನ್ನು ಮುಟ್ಟಲು ನಾ ಬಿಡೊಲ್ಲ. ಅವನು ನನ್ನ ಬಿಟ್ಟು ಎಲ್ಲೂ ಹೋಗಿಲ್ಲ, ಇಲ್ಲೇ ಇದ್ದಾನೆ". "ಸಮಾಧಾನ ಮಾಡಿಕೊಳ್ಳಿ ಸವಿತ, ನಿಜ ಸ್ಥಿತಿಯನ್ನು ಅರಿಯಿರಿ. ಅವಿನಾಶ್ ಇನ್ನಿಲ್ಲ ಅನ್ನೋದು ನಿಜ ". ಡಾಕ್ಟರ್ ಮಾತು ಕೇಳಿ ಸವಿತ "ಇನ್ನೊಂದು ಸ್ವಲ್ಪ ಹೊತ್ತು ನನ್ನ ಮಗನೊಂದಿಗೆ ಇರಲು ಬಿಡಿ" ಎಂದು ಅಂಗಲಾಚಿದಳು. "ನಿಮ್ಮ ಮಾತು, ನೋವು ನನಗೆ ಅರ್ಥವಾಗುತ್ತದೆ ಸವಿತ ಅವರೆ, ಆದರೆ ಈಗ ನೀವು ಯೊಚಿಸಬೇಕಾದ್ದ ಮತ್ತೊಂದು ಮುಖ್ಯ ವಿಚಾರವಿದೆ. ನೀವು ಇಷ್ಟಪಟ್ಟಲ್ಲಿ ಅವಿನಾಶ್ ಅಂತಹ ಹಲವು ಮಕ್ಕಳಿಗೆ ನೀವು ಸಹಾಯ ಮಾಡಬಹುದು". ಅವರ ಮಾತು ಅರ್ಥವಾಗದೆ ಅವರನ್ನು ಪ್ರಶ್ನಾರ್ಥವಾಗಿ ದಿಟ್ಟಿಸುತ್ತಾ ಕುಳಿತಳು. "ನಮ್ಮಲ್ಲಿ ಅವಿನಾಶ್’ನಂತೆಯೇ ಹೃದಯ ತೊಂದರೆಯಿಂದ ಬಳಲುತ್ತಿರುವ ಹಲವು ಮಕ್ಕಳಿದ್ದಾರೆ. ಅವರಿಗೆ ಸುಸ್ಥಿತಿಯಲ್ಲಿರುವ ಅಂಗಾಗಗಳು ಬೇಕು. ಹಾಗೆಯೆ ಅಂಧ ಮಕ್ಕಳಿಗೆ ನಿಮ್ಮ ಅವಿನಾಶನ ಕಣ್ಣುಗಳು ಬೆಳಕಾಗಬಲ್ಲವು". "ಇಲ್ಲ, ನನ್ನ ಮುದ್ದು ಕಂದನಿಗೆ ನೀವ್ಯಾರು ಇನ್ನೂ ಹಿಂಸೆ ಮಾಡಬೇಡಿ. ಅವನು ಇನ್ನಾದರೂ ನೆಮ್ಮದಿಯಿಂದಯಿರಲಿ. ಅವನ ಹತ್ತಿರ ನಾನ್ಯಾರನ್ನೂ ಬಿಡೋಲ್ಲ" ಉಲ್ಲಾಸ್ ಸವಿತಾಳನ್ನು ಅಪ್ಪಿಹಿಡಿದು ಸಾಂತ್ವಾನಗೊಳಿಸಲು ಪ್ರಯತ್ನಿಸುತ್ತಾ ಅವಳನ್ನು ಕೋಣೆಯಿಂದ ಹೊರಗೆ ಕರೆದೊಯ್ದ, ಹಾಗೆಯೆ ಡಾಕ್ಟರ್’ಗೆ ಕಣ್ಣ್’ಸನ್ನೆಯಲ್ಲಿ ತನ್ನ ಸಮ್ಮತಿ ತಿಳಿಸಿದ.

ಆಫೀಸ್’ನಿಂದ ಬಂದ ಉಲ್ಲಾಸ್ ಕೈಯಲ್ಲಿ ಅವಿನಾಶನ ಫೋಟೋ ಹಿಡಿದು ಅಳುತ್ತಾ ಸೋಫಾದ ಮೇಲೆ ಮಲಗಿದ್ದ ಸವಿತಾಳನ್ನು ಕಂಡು "ಸವಿತ, ಸಾಕು ಮಾಡು ಈ ಅಳು, ಆಗಲೇ ೨ ವಾರ ಆಯಿತು. ಬಾ ಆಸ್ಪತ್ರೆಗೆ ಹೋಗಿ ಬರೋಣ" ಅನ್ನುತ್ತಾ ಅವಳನ್ನು ಎಬ್ಬಿಸಿದನು. "ಈಗೇನಿದೆ ಅಲ್ಲಿ ನಮಗೆ ಕೆಲಸ? ನಾನಲ್ಲಿಗೆ ಬರೋಲ್ಲ, ಅವರೆಲ್ಲ ನನ್ನ ಅವಿಯನ್ನು ನನ್ನಿಂದ ದೂರ ಮಾಡಿದರು. ಕೊನೆಗೆ ಅವನಿಗೆ ಚಿತ್ರಹಿಂಸೆ ಕೊಟ್ಟರು." "ನೀನಲ್ಲಿ ನೋಡಬೇಕಾದ್ದು ಇದೆ ಸವಿತ, ನನ್ನ ಮಾತು ನಂಬು, ನನಗೋಸ್ಕರ ಆದ್ರೂ ಬಾ" ಎನ್ನುತ್ತಾ ಅವಳನ್ನು ಹೊರಡಿಸಿದ.

ಆಸ್ಪತ್ರೆಯಲ್ಲಿ ಸೀದಾ ಡಾ. ಹರ್ಷರ ಕೋಣೆಗೆ ನಡೆದರು. ಇವರ ಬರುವಿಕೆಯನ್ನೆ ಎದುರು ನೋಡುತ್ತಿವರಂತೆ ಹರ್ಷ "ಬನ್ನಿ, ನಿಮಗಾಗಿಯೇ ಕಾಯುತ್ತಿದ್ದೆ. ಹೇಗಿದ್ದೀರಾ ಸವಿತ? ಬನ್ನಿ ಹೋಗೋಣ" ಅನ್ನುತ್ತಾ ಲಿಫ್ಟ್’ನಲ್ಲಿ ಮೂರನೆ ಮಹಡಿಗೆ ಕರೆದೊಯ್ದರು. ಏನಾಗುತ್ತಿದೆ ಅಂತ ತಿಳಿಯದೆ ಸವಿತ "ನಾವೆಲ್ಲಿಗೆ ಹೋಗುತ್ತಿದ್ದೇವೆ ಉಲ್ಲಾಸ್" ಎಂದು ಪ್ರಸ್ನಿಸಿದಳು, ಅಷ್ಟರಲ್ಲಿ ಅವರು ಪೋಸ್ಟ್-ಆಪರೇಟೀವ್ ವಾರ್ಡಿಗೆ ಬಂದಿದ್ದರು. ಡಾ.ಹರ್ಷರನ್ನು ನೋಡುತ್ತಿದ್ದಂತೆಯೇ ನರ್ಸ್ ಮಕ್ಕಳನ್ನು ಅವರ ಬಳಿ ಕರೆತಂದಳು. ಸವಿತಾಳಿಗೆ ಇದೇನು ಅರ್ಥವಾಗುತ್ತಿಲ್ಲ, "ಈ ಮಕ್ಕಳು ಯಾರು? ನನ್ನ ಬಳಿ ಏಕೆ ಕರೆತಂದರು, ಇದೆಲ್ಲ ಏನು" ಅಂತ ಉಲ್ಲಾಸನ ಕಡೆ ತಿರುಗಿದಾಗ "ಆ ಹುಡುಗಿಯ ಕಣ್ಣು ನೋಡು ಸವಿತ" ಅಂದನು. ಗೊಂದಲಗೊಂಡ ಸವಿತ ಉಲ್ಲಾಸ್ ತೋರಿಸಿದ ಹುಡುಗಿಯತ್ತ ಮತ್ತೊಮ್ಮೆ ನೋಡಿದಳು. ಇದು ಸಾಧ್ಯನಾ? ಅದೇ ಸುಂದರ ಕಣ್ಣುಗಳು, ತನ್ನ ಅವಿನಾಶನ ಕಣ್ಣುಗಳು. ತನಗೇ ಗೊತ್ತಿಲ್ಲದಂತೆ "ಅವಿ....." ಎಂದು ಕಿರುಚುತ್ತಾ ಆ ಹುಡುಗಿಯನ್ನು ಬಿಗಿದಪ್ಪಿ ಮುದ್ದಾಡಿದಳು. ಅಷ್ಟರಲ್ಲಿ ಉಲ್ಲಾಸ್ ಮತ್ತೊಬ್ಬ ಹುಡುಗನನ್ನು ಸವಿತಳ ಬಳಿ ಕರೆತಂದನು. ಸವಿತ ಆ ಮಗುವನ್ನು ಅಪ್ಪುತ್ತಿದ್ದಂತೆಯೇ ಹೃದಯ ಬಡಿತ ಲಬ್-ಡಬ್ ಲಬ್-ಡಬ್ ಕೇಳಿಸಲಾರಂಭಿಸಿತು ಆದರದು ಅವಳ ಕಿವಿಗೆ ಅಮ್ಮ ಅಮ್ಮ ಎಂದು ಕೇಳಿಸಿತು.ಚಕಿತಳಾದ ಸವಿತ ಉಲ್ಲಾಸನ ಮುಖ ನೋಡಿದಳು. "ಹೌದು ಸವಿತ, ನಮ್ಮ ಅವಿಯ ಹೃದಯವದು. ನಾವು ಒಬ್ಬ ಮಗನನ್ನು ಕಳೆದುಕೊಂಡು ದುಃಖಿಸುತ್ತಿದ್ದೆವು. ಈಗ ನೋಡು ನಮ್ಮ ಅವಿ ಇವರೆಲ್ಲರಲ್ಲಿ ಬದುಕಿದ್ದಾನೆ." ತನ್ನ ಕಣ್ಣೀರೊರೆಸಿಕೊಳ್ಳುತ್ತಾ ಸವಿತ "ಹೌದು ನನ್ನ ಅವಿ ಇಲ್ಲೇ ಇದ್ದಾನೆ, ಇನ್ನು ನಾನೇಕೆ ಅಳಲಿ?" ಎನ್ನುತ್ತಾ ಆ ಮಕ್ಕಳನ್ನು ಮತ್ತೊಮ್ಮೆ ಬಿಗಿದಪ್ಪಿದಳು. :)

Saturday, November 01, 2008

ಕನ್ನಡದ ಕಂದ !

ನಮ್ಮ್ ಪುಟ್ಟಿ ಕನ್ನಡ ರಾಜ್ಯೋತ್ಸವ ಆಚರಿಸಿದ್ದು ಹೀಗೆ !! ನಡೆ ಕನ್ನಡ ನುಡಿ ಕನ್ನಡ,
ತನು ಕನ್ನಡ ಮನ ಕನ್ನಡ,
ಕಣಕಣ್ದಲ್ಲೂ ಹರಿಯುತ್ತಿರೋ,
ಬಿಸಿ ನೆತ್ತರ ಕಿಡಿ ಕನ್ನಡ,
ನಿನ್ನ ಅಮ್ಮನ ಹೊತ್ತು ಪೊರೆದ,
ವಾತ್ಸಲ್ಯದ ಮಣ್ಣು ಕನ್ನಡ,
ನಾಲಿಗೆಗೆ ಮಾತು ಕೊಟ್ಟ,
ತಾಯ್ನುಡಿಯು ಚಿರ ಕನ್ನಡ.

-ಗೋವರ್ಧನ.

Friday, October 31, 2008

ಹ್ಯಾಲೋವೀನ್ !!

ಇದು ಪುಟ್ಟಿಯ ಮೊದಲ ಹ್ಯಾಲೋವೀನ್. ತನ್ನ ಕುಂಬಳಕಾಯಿ ಡ್ರೆಸ್ಸ್ ಹಾಕಿಕೊಂಡು ಅಪ್ಪ ಅಮ್ಮನ ಜೊತೆ ಮಾಲ್-ಗೆ ಹೋಗಿದ್ದಳು. ಅಲ್ಲಿ ವಿವಿಧ ವೇಷ ದರಿಸಿದ್ದ ಮಕ್ಕಳನ್ನು ನೋಡಿ ಆನಂದಿಸಿದಳು. ಎಲ್ಲ ಅಂಗಡಿಯವರು ಕೊಟ್ಟ ಚಾಕಲೇಟ್-ಗಳನ್ನು ತನ್ನ ಪುಟ್ಟು ಚೀಲದಲ್ಲಿ ತುಂಬಿ ಮನೆಗೆ ಬಂದಳು. ನೆಚ್ಚಿನ ಆಂಟಿ ನಿನಾ ಅವಳಿಗಾಗಿ ತಂದಿದ್ದ ಕೇಕ್ ತಿಂದು ಮಜಾ ಮಾಡಿದ್ದು ಹೀಗೆ.


ಕನ್ನಡ ಈಗ ಶಾಸ್ತ್ರೀಯ ಭಾಷೆಗಳ ಪಟ್ಟಿಗೆ !!!
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು !!!
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ನೀಡಿರುವ ವಿಷಯ ಕೇಂದ್ರ ಸರ್ಕಾರ ಇಂದು ಸಂಜೆ ಪ್ರಕಟಿಸಿದೆ. ಇಲ್ಲಿಯವರೆಗೆ ಸಂಸ್ಕೃತ ಮತ್ತು ತಮಿಳು ಭಾಷೆಗೆ ಸೀಮಿತವಾಗಿದ್ದ ಆ ಗೌರವ, ಈಗ ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಲಭಿಸಿದೆ. ಈಗಾಗಲೇ ಕರ್ನಾಟಕದಾದ್ಯಂತ ಸಂಭ್ರಮದ ವಾತಾವರಣ ಶುರುವಾಗಿದೆ. 53ನೇ ರಾಜ್ಯೋತ್ಸವ ಆಚರಿಸುತ್ತಿರುವ ಕನ್ನಡಿಗರಿಗೆ ಹೆಚ್ಚಿನ ಸಂತೋಷವಾಗಿದೆ, ಎಲ್ಲೆಲ್ಲೂ ಹಬ್ಬದ ವಾತಾವರಣ ಕಂಡಿದೆಯಂತೆ.
ಸುದ್ಧಿ ಓದಿ ಬಹಳ ಸಂತಸವಾಯಿತು. ಶಾಸ್ತ್ರೀಯ ಭಾಷೆ ಅಂದ್ರೆ ಏನು ಮತ್ತಿತರ ವಿವರಗಳಿಗೆ ಇಲ್ಲಿ ಮತ್ತು ಇಲ್ಲಿ ನೋಡಿ.
ಹಾಗೆಯೆ ಮನದಲ್ಲಿ ಅನೇಕ ಪ್ರಶ್ನೆಗಳು ಎದ್ದವು... ಇದರಿಂದ ಭಾಷೆಗೆ ಏನು ಪ್ರಯೋಜನ? ಕರ್ನಾಟಕದಲ್ಲಿ ಮರೆಯಾಗುತ್ತಿರುವ ಕನ್ನಡದ ಉಳಿವಿಕೆ ಇದರಿಂದ ಸಾಧ್ಯವೇ? ಇದು ಕೇವಲ ರಾಜಕೀಯ ವ್ಯಕ್ತಿಗಳು ಕೆಲವು ರಾಜ್ಯದ ಜನರನ್ನು ಸಂತೃಪ್ತಿ ಪಡಿಸಲು/ ಓಟ್ ಗಳಿಸಲು ಹೂಡಿದ ತಂತ್ರವೇ?


Thursday, October 30, 2008

ಹತ್ತರ ಗಮ್ಮತ್ತು !!!

ಮಕ್ಕಳಿಗೆ ಅಂಕಿ/ಲೆಕ್ಕ ಕಲಿಸುವ "ಹತ್ತು ಹತ್ತು ಇಪ್ಪತ್ತು ತೋಟಕೆ ಹೋದನು ಸಂಪತ್ತು" ಪದ್ಯ ನಿಮಗೆಲ್ಲ ಗೊತ್ತೇ ಇದೆ. ಇದನ್ನ ನಮ್ಮ್ ಪುಟ್ಟಿ ಹಾಡೋದು ಹೀಗೆ...
ಹತ್ತು ಹತ್ತು ಇಪ್ಪತ್ತು
ಹುಟ್ಟುಹಬ್ಬ ಮತ್ತೆ ಬಂತು
ಇಪತ್ತು ಹತ್ತು ಮೂವತ್ತು
ಮನೆಯವರಿಗೆಲ್ಲ ಸಂತಸ ತಂತು

ಮೂವತ್ತು ಹತ್ತು ನಲವತ್ತು
ನಂಗೆ ಹೊಸ ಬೈಕು ಸಿಕ್ತು

ನಲ್ವತ್ತು ಹತ್ತು ಐವತ್ತು

ಬಲ್ಗೇರಿಯಾ ಕುಟುಂಬ ಮನೆಗೆ ಬಂತು

ಐವತ್ತು ಹತ್ತು ಅರವತ್ತು

ಅವರ್ ಮಗಳು ಸಿಮೋನಾ ಅಂತ ಗೊತ್ತಾಯ್ತು

ಅರ್ವತ್ತು ಹತ್ತು ಎಪ್ಪತ್ತು

ಕೇಕ್ ಕಟ್ ಮಾಡಿ ತಿಂದಾಯ್ತು
ಎಪ್ಪತ್ತು ಹತ್ತು ಎಂಬತ್ತು

ಎಲ್ಲರ ಬಾಯಿ ಸಿಹಿ ಆಯ್ತು


ಎಂಬತ್ತು ಹತ್ತು ತೊಂಬತ್ತು
ಅಮ್ಮ ಕೊಟ್ಟ್ರು ನಂಗೆ ಮುತ್ತು
ತೊಂಬತ್ತು ಹತ್ತು ನೂರು
ಖುಶಿಯಾಗಿ ಎಲ್ಲ್ರೂ ಮನೆಗೆ ಹೋದ್ರು :)

Monday, October 27, 2008

ಬಣ್ಣ ಬಣ್ಣದ ದೀಪಗಳು !!!

ಗಣೇಶನ ಮಾಡಲು ತಂದಿದ್ದ ಕ್ಲೇ ಇನ್ನೂ ಸ್ವಲ್ಪ ಉಳಿದಿತ್ತು. ಅದರಲ್ಲಿ ದೀಪಾವಳಿಗೆ ದೀಪಗಳನ್ನು ಮಾಡೋಣ ಅಂತ ಪ್ರಯತ್ನಿಸಿದ್ದೆ. ಆದರೆ ಕೆಲಸಕ್ಕೆ ಹೊರಡುವ ಆತುರದಲ್ಲಿ ಹೊರಗೆ ಒಣಗಲು ಇಟ್ಟಿದ್ದ ದೀಪಗಳನ್ನು ಅಲ್ಲೇ ಬಿಟ್ಟು, ಅವು ಮಳೆಗೆ ನೆಂದು ತೊಪ್ಪೆಯಾದವು :( ಕೊನೆಗೆ ಎಂದಿನಂತೆ Tealight Candlesನ ಹಚ್ಚಿ ಹಬ್ಬ ಮಾಡೋಣ ಅಂತ ಸುಮ್ಮನಾದೆ.
ಆರ್ಕುಟ್’ನಲ್ಲಿ ನನ್ನ ಕೆಲವು ಗೆಳತಿಯರು ಮಾಡಿದ ಈ ಸುಂದರ ದೀಪಗಳನ್ನು ನೋಡಿ.


ಪೆನ್ಸಿಲ್ ಸ್ಕೆಚ್ ಪ್ರವೀಣೆ ಉಮಾ ಅವರ ಕೈಯಲ್ಲಿ ಮೂಡಿದ ಸುಂದರ ಬಣ್ಣಬಣ್ಣದ ಪ್ಲೇ ಡೋ ದೀಪಗಳು.

Sunday, October 26, 2008

ದೀಪಾವಳಿ ಹಾಡುಗಳು !!!

ಸಂಜೆ ದೀಪ ಹಚ್ಚುವಾಗ ಅಮ್ಮ ಹೇಳ್ತಾಯಿದ್ದ ’ರಂಜನಿ’ ರಾಗದಲ್ಲಿರುವ ಈ ಹಾಡು ನನಗೆ ಬಹಳ ಇಷ್ಟ.
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ
ದೀಪಲಕ್ಷ್ಮಿ ದೇವಿ ಜಯ ದೀಪಲಕ್ಷ್ಮಿ//ಪ//
ಶುಕ್ರವಾರದಲ್ಲಿ ನಿನ್ನ/ ಕೀರ್ತನೆಯಗೈವೆ
ಭಕ್ತಿಯಿಂದ ಬೇಡುವೆ ಮುಕ್ತಿ ಸಂಪದವ ನೀಡೆ //ದೀಪ//ನಿನ್ನನ್ನೆ ಪಾಡುವೆ ನಿನ್ನನ್ನೆ ಪೊಗಳುವೆ
ನಿನ್ನ ಚರಣ್ದಲ್ಲಿ ಶಿರವನಿಟ್ಟು ನಾ ನಮಿಸುವೆ//೨//
ನಿನ್ನ ಕೃಪೆ ಕಟಾಕ್ಷವು ನನ್ನದಾಗಿ ಬೆಳಗುತಿರಲಿ//ದೀಪ//ಅಜ್ಞಾನದ ಕತ್ತಲಲ್ಲಿ ಬಳಲಿ ಬೆಂಡಾಗಿಹೆನು
ಸುಜ್ಞಾನದ ಬೆಳಕು ನೀಡಿ ಜೀವನ ಹಸನಾಗಿಸು//೨//
ಅಭಯವ ನೀಡು ಬಾ/ ಕರುಣೆಯ ತೋರು ಬಾ
ಮನಸು/ ನಿನ್ನಲ್ಲಿ/ ನಿಲ್ಲಿಸು/ ತಾಯೇ //ದೀಪ//

ನಮ್ಮ ಕನ್ನಡ ಚಲನಚಿತ್ರಗಳಲ್ಲಿ ಕೆಲವು ದೀಪಾವಳಿ ಹಾಡುಗಳಿವೆ. ಅವುಗಳಲ್ಲಿ ಡಾ. ರಾಜ್ ಮತ್ತು ಹರಿಣಿ ಅಭಿನಯದ "ನಂದಾ ದೀಪ" ಚಿತ್ರದಲ್ಲಿರುವ "ನಾಡಿನಂದಾ ಈ ದೀಪಾವಳಿ ಬಂತು.. ...." ಹಾಡು ನನಗೆ ಬಹಳ ಇಷ್ಟ. ಅಂತರ್ಜಾಲದಲ್ಲಿ ಬಹಳಷ್ಟು ಹುಡುಕಿದರೂ ಈ ಹಾಡು ನನಗೆ ಸಿಗಲಿಲ್ಲ. ನಿಮ್ಮಲ್ಲಿ ಇದ್ದರೆ ನನಗೆ ದಯವಿಟ್ಟು ಈ-ಮೇಲ್ ಮಾಡಿ.

೨೦೦೩ರಲ್ಲಿ ಬಿಡುಗಡೆಯಾದ ’ನಂಜುಂಡಿ’ ಚಲನಚಿತ್ರದಲ್ಲಿರುವ ಈ ಅರ್ಥಪೂರ್ಣ ಹಾಡು ನೋಡಿ . ಸಾಹಿತ್ಯ ಮತ್ತು ಸಂಗೀತ ಹಂಸಲೇಖ ಅವರಿಂದ. ಹಾಡಿರುವವರು ಮಧು ಬಾಲಕೃಷ್ಣ ಮತ್ತು ನಂದಿತ್.

ದೀಪದಿಂದ ದೀಪವ

ಹಚ್ಚಬೇಕು ಮಾನವ

ಪ್ರೀತಿಯಿಂದ ಪ್ರೀತಿ ಹಂಚಲು

ಮನಸಿನಿಂದ ಮನಸನು

ಬೆಳಗಬೇಕು ಮಾನವ

ಮೇಲು ಕೀಳು ಭೇದ ನಿಲ್ಲಲು

ಭೇದವಿಲ್ಲ ಬೆಂಕಿಗೆ

ದ್ವೇಷವಿಲ್ಲ ಬೆಳಕಿಗೆ

ನೀ ತಿಳಿಯೋ ಪ

ಆಸೆ ಹಿಂದೆ ದುಃಖವೆಂದರು

ರಾತ್ರಿ ಹಿಂದೆ ಹಗಲು ಎಂದರು

ದ್ವೇಷವೆಂದು ಹೊರೆ ಎಂದರು

ಹಬ್ಬವದಕೆ ಹೆಗಲು ಎಂದರು

ಎರಡು ಮುಖದ

ನಮ್ಮ ಜನುಮದ ವೇಷಾವಳಿತಿಳಿದು

ಹಾಲ್ಬೆಳಕ ಕುಡಿವುದೇ ದೀಪಾವಳಿ ೧

ಮಣ್ಣಿನಿಂದ ಹಣತೆಯಾದರೆ

ಬೀಜದಿಂದ ಎಣ್ಣೆಯಾಯಿತು

ಅರಳೆಯಿಂದ ಬತ್ತಿಯಾದರೆ

ಸುಡುವ ಬೆಂಕಿ ಜ್ಯೋತಿಯಾಯಿತು

ನಂದಿಸುವುದು ತುಂಬ ಸುಲಭವೋ

ಹೇ ಮಾನವ

ಆನಂದಿಸುವುದು ತುಂಬ ಕಠಿಣವೋ

ಹೇ ದಾನವ೨

ದೀಪಾವಳಿ ಹಬ್ಬದ ಶುಭಾಶಯಗಳು !!!

ಬಂದಿದೆ ಬೆಳಕಿನ ಹಬ್ಬ ದೀಪಾವಳಿ
ಎಲ್ಲೆಲ್ಲೂ ಪಟಾಕಿಗಳ ಹಾವಳಿ !!

ಶುಭವ ತರಲಿ ಈ ದೀಪಾವಳಿ
ನಮ್ಮನಿಮ್ಮೆಲ್ಲರ ಬಾಳಿನಲಿ !!!

ದೀಪಾವಳಿ ಬೆಳಕಿನ ಹಬ್ಬ, ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯುವ ಹಬ್ಬ, ಅಜ್ಞಾನದಿಂದ ಸುಜ್ಞಾನದತ್ತ ಕರೆದೊಯ್ಯುವ ಹಬ್ಬ, ಅಂಧಕಾರ ಕಳೆಯುವ, ಪ್ರೀತಿ-ವಿಶ್ವಾಸದ ಹಬ್ಬ ದೀಪಾವಳಿ.

ದೀಪಾವಳಿ ಅಂದೊಡನೆ ಮನಸಿಗೆ ಬರುವುದು ಸಾಲುಸಾಲು ದೀಪಗಳು, ಢಂ ಢಂ ಪಟಾಕಿಗಳು, ಬಣ್ಣ ಬಣ್ಣದ ರಂಗೋಲಿ, ಬಗೆಬಗೆಯ ಸಿಹಿ ತಿಂಡಿಗಳು. ಹೊಸ ಬಟ್ಟೆ ಹಾಕಿಕೊಂಡು, ಅಣ್ಣ ತಮ್ಮಂದಿರ ಜೊತೆ ಪೈಪೋಟಿಯ ಮೇಲೆ ಪಟಾಕಿ ಹಚ್ಚೋದು.. ಅದರಲ್ಲೂ ಬೆಳಗ್ಗೆ ಎಲ್ಲರಿಗಿಂತಾ ಮೊದಲು ನಾನೇ ಪಾಟಾಕಿ ಸಿಡಿಸಬೇಕೆಂದು ಬೇಗ ಎದ್ದು, ಸ್ನಾನ ಮುಗಿಸಿ, ಅಮ್ಮ "ಇಷ್ಟು ಬೇಗ ಪಟಾಕಿ ಸಿಡಿಸಿ ಗಲಾಟೆ ಮಾಡಬೇಡ" ಎಂದರೂ ಕೇಳದೇ "ಇರಲಿ ಬಿಡಮ್ಮ ಮಲಗಿರೋರಿಗೆ ಅಲರಾಮ್ ಆಗುತ್ತೆ" ಅಂತ ಹೇಳಿ ರೋಡಿಗೆ ಓಡ್ತಾಯಿದ್ದೆ :D

ಹಬ್ಬದ ಬಗೆಗಿನ ಹೆಚ್ಚಿನ ಮಾಹಿತಿಗೆ ಇಲ್ಲಿ ನೋಡಿ.

Tuesday, October 21, 2008

ಕುಂಬಳಕಾಯಿ ಜಾತ್ರೆ !!

ಹ್ಯಾಲೋವೀನಿಗೆ ನಮ್ಮೂರ ಚರ್ಚಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಕುಂಬಳಕಾಯಿ ಜಾತ್ರೆ - Pumpkin Patch ನಡೆಯಿತು. ಹಲವು ಗಾತ್ರದ ಕುಂಬಳಕಾಯಿಗಳಿದ್ದವು. ಎಲ್ಲರೂ ಕಾಯಿ ಕೊಳ್ಳಲು ಹೋದರೆ ನಾವು ಜಾತ್ರೆ ನೋಡಿ, ಪುಟ್ಟಿಗೆ ಅಲ್ಲಿ ಆಟ ಆಡಿಸಿ ಬರಲು ಹೋಗಿದ್ವಿ. ಅಲ್ಲಿದ ಎಲ್ಲಾ ಕಾಯಿಗಳಿಗಿಂತ ನಮ್ಮ್ ಪುಟ್ಟ್ ಕುಂಬಳಕಾಯಿನೇ ಮುದ್ದಾಗಿದ್ದದ್ದು.