Wednesday, September 30, 2009

ಕರ್ಕಿಯವರ ದಿವ್ಯ ಜ್ಯೋತಿ!

ದಿವ್ಯ ಜ್ಯೋತಿ
ತಿಳಿ ನೀಲದಲ್ಲಿ ತಾ ಲೀನವಾಗಿ ಅವ ಹೋದ ದೂರ ದೂರ
ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು: ಇನ್ನೊಮ್ಮೆ ಏಕೆ ಬಾರ?

ಅಂದು ಸಂಜೆ ಪ್ರಾಥಱನೆಗೆ ದೇವಮಂದಿರದ ದಾರಿಯಲ್ಲಿ
ಆಚೆ ಈಚೆ ಮೊಮ್ಮಕ್ಕಳಿಬ್ಬರಲಿ ಮೈಯಭಾರ ಚೆಲ್ಲಿ
ಜಗದ ಕರುಣೆ ನಡೆವಂತೆ ನಡೆದು ಮಂದಿರದ ಪೀಠವೇರಿ
ನಿಂದನಿಲ್ಲೊ! ಜಡವುಳಿದು ಜೀವವೊಂದಾಯ್ತು ದೇವನಲ್ಲಿ.

ಎಸೆದ ಗುಂಡಿಗಾ ಕುಸಿದ ದೇಹದಲಿ ವಿಮಲ ರಕ್ತ ಚೆಲ್ಲಿ
ಮೀಯಿಸಿತ್ತು ಈ ಜಗದ ಮನವನೇ ಶೋಕ ಜಲಧಿಯಲ್ಲಿ
ಮುಗಿದ ಕೈಯು ಮುಗಿದಂತೆ ಇತ್ತು: ನೆಲಸಿತ್ತು ಕ್ಷಮೆಯು ಮೊಗದಿ
ಎದೆಯೊಳೆಂಥ ತಿಳಿಭಾವವಿತ್ತು! ಅದನಾವ ಬಲ್ಲ ಜಗದಿ?

ಹೋದ ಹೋದನವ ತ್ಯಾಗಜೀವನದ ತುತ್ತ ತುದಿಯನೇರಿ
ಏರಿ ಏರಿದೊಲು ಅಂತರಂಗದೈಸಿರಿಯ ಜಗಕೆ ತೂರಿ
ಸತ್ಯ ಪ್ರೇಮಗಳ ಸತ್ವವನ್ನೆ ಕಣ್ಣೆದುರು ಎತ್ತಿ ತೋರಿ
ಬೇರೆ ಲೋಕದನುಭಾವ ಬೀರಿ ಹೋದನಾವ ದಾರಿ?

ಎನಿತು ಸರಳ ನುಡಿ, ಎಷ್ಟು ಸಹಜ ನಡೆ ಮನದ ಮಹತಿಯೇನು!
ಅವನ ಎದೆಯ ಉನ್ನತಿಯ ನಿಲುಕುವುದು ಯಾವ ಗಿರಿಯ ಸಾನು?
ಇಹುದೆ ಅವನ ಕರುಣೆಯನು ಧರೆಗೆ ಕರೆವಂಥ ಕಾಮಧೇನು?
ಅವನು ಗೈದ ಲೀಲೆಯಲಿ ಲಯಸಿತೆಂಥವರ "ನಾನು-ನಾನು ".

ತಿಳಿದಿಹುದು ಚಿತ್ತ, ಹರಿದಿಹುದು ನೋಟ ಮೇಲಕ್ಕೆ ಬಾನಿನೆಡೆಗೆ
ಆ ಜಾಡ ಹಿಡಿದು ಇಳಿದಂತೆ ಇಹುದು ಬೆಳಕೊಂದು ಕೆಳಗೆ ಇಳೆಗೆ
"ಏನಷ್ಟು ಭ್ರಾಂತಿ? ಕಾಣದೆಯೆ ಜ್ಯೋತಿ?" ಎಂಬರುಹು ಮೂಡಲೊಡನೆ
ಬೆಳಕ ನಂಬಿ ನಿಂದಿಹನು ಧೀರ ಎದೆ ತೆರೆದು ನಾಡ ಕರೆಗೆ.
--ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ

ಯಾವುದೇ ಕನ್ನಡ ಸಮಾರಂಭ ಸಾಮಾನ್ಯವಾಗಿ ಶುರುವಾಗುವುದು "ಹಚ್ಚೇವು ಕನ್ನಡದ ದೀಪ" ಭಾವ ಗೀತೆಯಿಂದ. ಹಾಡು ಇಲ್ಲಿ ಕೇಳಿ ಈ ಗೀತೆಯಿಂದ, ಇದರ ರಚನಕಾರ "ಡಾ ದುಂಡಪ್ಪ ಸಿದ್ಧಪ್ಪ ಕರ್ಕಿ" ಯವರು ಕನ್ನಡಿಗರ ಮನೆಮಾತಾಗಿಬಿಟ್ಟಿದ್ದಾರೆ. ಇವರ ಕವನ ಸಂಕಲನಗಳು ನಕ್ಷತ್ರ ಗಾನ, ಭಾವ ತೀರ್ಥ, ಗೀತ ಗೌರವ, ಕರಿಕೆ ಕಣಗಿಲು, ನಮನ, ತನನ ತೋಂ, ಬಣ್ಣದ ಚೆಂಡು... ನಕ್ಷತ್ರ ಗಾನ ಪ್ರಕಟವಾದ ಕರ್ಕಿಯವರ ಮೊದಲ ಕವನ ಸಂಕಲನ. ’ಹಚ್ಚೇವು ಕನ್ನಡದ ದೀಪ’ ವನ್ನು ಒಳಗೊಂಡಿರುವ ಕವನಸಂಕಲನ ಇದು. ಭಾವತೀರ್ಥ ದಲ್ಲಿ, ನಮ್ಮ ನಾಡಿನ ಕಾರಾವರ, ಗೋಕರ್ಣ, ಕೂಡಲ ಸಂಗಮ, ಜೋಗ ಇತ್ಯಾದಿ ಹಲವಾರು ಪ್ರೇಕ್ಷಣೀಯ ಸ್ಥಳಗಳ ವರ್ಣನೆಯಿದೆ. ಕರ್ಕಿಯವರು ಮಕ್ಕಳಿಗಾಗಿ ರಚಿಸಿರುವ ಬಣ್ಣದ ಚೆಂಡು (ನನ್ನ ಮಗಳ ಬ್ಲಾಗ್ ನಲ್ಲಿದೆ ಓದಿ) ಮತ್ತು ತನನ ತೋಂ ಕವನ ಸಂಕಲನಗಳು ಬಹಳ ಸರಳವಾಗಿದ್ದು, ಮಕ್ಕಳಿಗೆ ಕಲಿಸಿಕೊಡಲು ಚೆನ್ನಾಗಿವೆ. ಬೆಲ್ಲ ತಿನ್ನುವ ಮಲ್ಲ ಇತ್ಯಾದಿ ಕಥಾನಕ ಪದ್ಯಗಳಾಗಿದ್ದು ಮಕ್ಕಳಲ್ಲಿ ಆಸಕ್ತಿ ಮೂಡಿಸುವಂತವಾಗಿವೆ. ಕರ್ಕಿಯವರ "ದಿವ್ಯ ಜ್ಯೋತಿ", ಮಹಾತ್ಮ ಗಾಂಧಿಯವರು ಮರಣ ಹೊಂದಿದಾಗ ಬರೆದ ಕವನ.

ಕರ್ಕಿಯವರ ತನನ ತೋಂ ಜೊತೆಗೆ ಈ ಕವನವನ್ನು ಕಳುಹಿಸಿ ಕೊಟ್ಟ ಮಂಜುನಾಥ್ ಬೊಮ್ಮನಕಟ್ಟಿ ಅವರಿಗೆ ವಂದನೆಗಳು!!

Tuesday, September 29, 2009

ಕಂದ ಕಣ್ಮಣಿಯೆ ಜೋ ಜೋ...

ಚಿತ್ರ: ಬಾಲ ನಾಗಮ್ಮ (1966)
ರಚನೆ: ಚಿ.ಉದಯಶಂಕರ್
ಸಂಗೀತ: ಎಸ್.ರಾಜೇಶ್ವರ ರಾವ್
ಗಾಯಕಿ : ಎಲ್.ಆರ್.ಈಶ್ವರಿ


ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....
ಹೂವಿನ ಹಾಸಿಗೆಯ ಹಾಸುವೆನು ತೂಗುವೆನು
ಜೋ ಜೋ ಹಾಡುವೆನು

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ.....

ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಕೊಡುವ ತಾರೆಗಳ ಆಡಲಿಕ್ಕೆ ಎನುತಿರುವ

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......

ಅಮ್ಮನ ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಅಮ್ಮನು ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಮಗುವೆ ಶಂಕರನು ನಿನ್ನನು ತಾ ಪಾಲಿಸಲಿ

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ......
ಹೂವಿನ ಹಾಸಿಗೆಯ ಹಾಸುವೆನು ತೂಗುವೆನು
ಜೋ ಜೋ ಹಾಡುವೆನು

ಕಂದ ಕಣ್ಮಣಿಯೆ ಅಮ್ಮನ ಅರಗಿಣಿಯೆ ಓ ರಾಜ....

Friday, September 11, 2009

ಅವ್ವ ಅಪ್ಪ ಯಾರು ಗೊತ್ತಾ ನಿಮ್ಗೆ?

ಮೊನ್ನೆ ಪುಟ್ಟಿ ಅವರಜ್ಜಿ ಜೊತೆ ಮಾತಾಡುತ್ತಿದ್ಲು. ನಾನು ಒಂದ್ ನಿಮ್ಷ ಒಳಗೆ ಹೋಗಿ ಬಂದೆ ಅಷ್ಟ್ರಲ್ಲಿ ಅಮ್ಮ ಇದೇನೆ ರೂಪ, ಪುಟ್ಟಿ ’ಅವ್ವ ಅಪ್ಪ’ ಅಂತ ಹೇಳ್ತಿದ್ದಾಳೆ ಆಗಿನಿಂದ ಅಂದ್ರು. ನನಗೂ ಆಶ್ಚರ್ಯವೆನಿಸಿ ಪುಟ್ಟಿಗೆ ಏನಮ್ಮ ಅದು ಅಂದೆ. ಅದಕ್ಕವಳು ತನ್ನ ಕೈಗಳನ್ನ ಟ್ವಿಂಕ್ಲಿಂಗ್ ಮಾಡುತ್ತಾ ’ಅವ್ವ ಅಪ್ಪ’ ಅಂದ್ಲು. ಅವಳು ೨-೩ ಸರ್ತಿ ತೋರ್ಸಿದಮೇಲೆ ಗೊತ್ತಾಯ್ತು ಅವಳು ’ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್’ ರೈಮಿನ ’ಹೌ ಐ ವಂಡರ್’(ಅವ್ವ).. ಅಪ್ ಅಬೋವ್(ಅಪ್ಪ) ಹೇಳಲು ಪ್ರಯತ್ನಿಸ್ತಾಯಿದ್ದಾಳೆ ಅಂತ!!

ಇಲ್ಲಿಯವರೆಗೆ ತನಗೆ ಹಾಡಬೇಕೆನಿಸಿದಾಗ ಅಮ್ಮನಿಗೆ ಆಕ್ಷನ್ ಮೂಲಕ ಯಾವ ಹಾಡು/ ರೈ ಅಂತ ಹೇಳ್ತಾಯಿದ್ದ ಪುಟ್ಟಿ, ಇತ್ತೀಚೆಗೆ ಬಹಳಷ್ಟು ರೈಮ್ ಗಳನ್ನ ಹೇಳಲು ಪ್ರಯತ್ನಿಸುತ್ತಿದ್ದಾಳೆ.
ಅವಳು ಹೇಳೊದನ್ನ ನನ್ನ ಸ್ನೇಹಿತೆ ’ ಫಿಲ್ಲ್ ಅಪ್ ದ ಬ್ಯ್ಲಾಂಕ್ಸ್’ ಅಂತ ಕರಿತಾರೆ. ಅವಳು ಹೇಳೋ ರೀತಿ ಹೀಗೆ
ಪುಟ್ಟಿ: ಉಂಡಾ ಉಂಡ (ಉಂಡಾಡಿ ಗುಂಡ)
ನಾನು: ಮದ್ವೆ ಮನೆಗೆ ಹೋದ
ಪುಟ್ಟಿ: ತನ್ನೆಲ್ಲ ಬೆರಳುಗಳನ್ನ ತೋರಿಸುತ್ತಾ.... ಹತ್ತು
ನಾನು: ಹತ್ತು ಲಾಡು
ಪುಟ್ಟಿ: ತಿಂಟ(ತಿಂದ)
ಪುಟ್ಟಿ: ಇನ್ನು
ನಾನು: ಇನ್ನು ಬೇಕು ಎಂದ
ಪುಟ್ಟಿ: ಅಮ್ಮ ಬೆ....
ನಾನು: ಅಮ್ಮ ಬೆಣ್ಣೆ ಕೊಟ್ಟ್ರು
ಪುಟ್ಟಿ: ಅಪ್ಪ ...
ನಾನು: ಅಪ್ಪ ದೊಣ್ಣೆ ತಂದ್ರು
ಪುಟ್ಟಿ: ತನ್ನ ಕೈಗಳನ್ನ ಕಟ್ಟಿ, ಬೆರಳಿಂದ ಬಾಯ್ ಮುಚ್ಚಿಕೊಳ್ಳುವಳು
ನಾನು: ಕೈ ಕಟ್ಟ್ ಬಾಯ್ ಮುಚ್ಚ್

ಬಾ ಬಾ .. ಈಪ್(ಶೀಪ್).. ವೂಲ್.. ಎಚ್ಚ ಎಚ್ಚ(ಯಸ್ ಸರ್ ಯಸ್ ಸರ್)... ಇದು ಅವಳು ಬಾ ಬಾ ಬ್ಲ್ಯಾಕ್ ಶೀಪ್ ಹೇಳೊ ರೀತಿ :)

ಅಲ್ಲದೇ ನಾಯಿಮರಿ ಹಾಡು, ನಮ್ಮ ಮನೆಯ ಪಾಪ, ಒಂದು ಎರಡು ಮುಂತಾದವನ್ನ ಸ್ವಲ್ಪ ಸ್ವಲ್ಪ ಹೇಳಲು ಶುರು ಮಾಡಿದ್ದಾಳೆ!

Saturday, September 05, 2009

ಹಾವು ಅಂದ್ರೆ ನಮ್ಮ್ ಪುಟ್ಟಿಗೆ ದಿಗಿಲೇ ಇಲ್ವೇನೆ !!

ಪುಟ್ಟಿಗೆ ಹಾವು ಅಂದ್ರೆ ಸಾಕು ತನ್ನ ಕೈಯನ್ನ ಹಾವಿನ ಹೆಡೆಯಂತೆ ಬಾಗಿಸಿ "ಹಿಸ್ಸ್ ಹಿಸ್ಸ್" ಅಂತ ಸದ್ದು ಮಾಡುತ್ತಾ ತನ್ನನ್ನ ತಾನೆ ಕಚ್ಚಿಸಿಕೊಳ್ತಾಳೆ!! ಜೂನ್ ನಲ್ಲಿ ಜ್ಯಾಕ್ಸನ್ ವಿಲ್ಲ್ ಎಂಬ ಊರಿನ ಪ್ರಾಣಿ ಸಂಗ್ರಹಾಲಯದಲ್ಲಿ ನೋಡಿದ ಹೆಬ್ಬಾವಿದು.ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ -

ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ - ೨

ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಹ್ಯಾಗಿರತ್ತೆ ?
ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ
ಒಕ್ಕಲಿ ಬೆನ್ನು ತಿಕ್ಕಿ ಕೊಳ್ತಾ ಅಮ್ಮ ಅನ್ನುತ್ತೆ

ಒಳ್ಳೆ ಪ್ರಶ್ನೆ ಹಾವು ಹ್ಯಾಗಿರತ್ತೆ ? ಹಾವು ಹ್ಯಾಗಿರತ್ತೆ ?

ಹಾವು ಇರುತ್ತೆ ಹಾವಿನ ಹಾಗೆ ಕಾಗೆ ಕಪ್ಪಗೆ

ಸಪೂರ ತಳ ತಳ ಕೆಂಡದ ಕಣ್ಣು ಕಟ್ಟೆ ದಪ್ಪಗೆ


ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ


ಒಂದು ಸಾರಿ ಪುಟಾಣಿ ಗುಬ್ಬಿ ಅಮ್ಮನ ಕೇಳುತ್ತೆ

ಅಮ್ಮ ಅಮ್ಮ ಬೂಸ್ಸ್ ಬೂಸ್ಸ್ ಹಾವು ಯಾಗಿರತ್ತೆ ?

ಸೂರಿಗೆ ಸುತ್ತಿ ಜೋತಾಡುತ್ತೆ ಗೋದಿ ಬೆನ್ನು

ದೀಪದ ಹಾಗೆ ಉರಿತಿರುತ್ತೆ ಹಾವಿನ ಕಣ್ಣು

ಬೂಸ್ ಎನ್ನುತ್ತೆ ದರಿದ್ರ ಹಾವಿಗೆ ತುಂಬದ ಹೊಟ್ಟೆ

ಹಿಡಿ ಹಿಡಿಯಾಗಿ ನುಗ್ ಬಿಡುತ್ತೆ ಹಕ್ಕಿ ಮೊಟ್ಟೆ


ಹಾವು ಅಂದ್ರೆ ಮರಿ ಗುಬ್ಬಿಗೆ ಬಾರಿ ದಿಗಿಲೇನೆ

ನೆನಿಸಿಕೊಂದ್ರೆ ಮೈ ನಡುಗುತ್ತೆ ಹಾಡೇ ಹಗಲೇನೆ


ಹಕ್ಕಿಯ ಮೊಟ್ಟೆ ನುಗಿದ ಮೇಲೆ ಹಿಡಿ ಹಿಡೀಲಿ

ಹಕ್ಕಿ ಮರಿ ಬೆಳ್ಕೊಳುತ್ತೆ ಹಾವಿನ ಹೊಟ್ಟೆಲಿ

ಹಕ್ಕಿ ಮರಿ ಹುಟ್ಟ ಕೊಳುತ್ತೆ ಹಾವಿನ ಹೊಟ್ಟೆಲಿ

ಅಂತ ಪುಟಾಣಿ ಕುಣಿದಾಡ್ತಿತ್ತು ಅಮ್ಮನ ತೋಳಲ್ಲಿ - ೨


ನಿಟ್ಟುಸ್ಸಿರ್ ಇಡ್ತು ಇಲ್ಲ ಬಂಗಾರ

ಇನ್ನು ನಿನಗೆ ತಿಳಿಯದಮ್ಮ ಹಾವಿನ ಹುನ್ನಾರ

ಹಾವಿನ ಹೊಟ್ಟೆ ಸೇರಿದ ಮೇಲೆ ಹೇಳೋದ್ ಇನ್ನೇನು - ೨

ಹಾವಿನ ಮೊಟ್ಟೆ ಆಗ್ ಬಿಡುತ್ತೆ ಹಕ್ಕಿ ಮೊಟ್ಟೇನುಹಾವಿನ ಹಾಡು ಇಲ್ಲಿ ಕೇಳಿ

Thursday, September 03, 2009

ಜೂ.. ಜೂ ...ಆಗಟ್

ಪುಟ್ಟಿಗೆ ಏನೇ ಹೊಸ ವಿಚಾರ ತೋರ್ಸಿದ್ರೂ / ಹೇಳಿಕೊಟ್ಟರೂ ಬಲು ಬೇಗ ಕಲಿತಾಳೆ. ಮಕ್ಕಳೇ ಹಾಗೆ ಅಲ್ವಾ, ಸ್ಪಂಜಿನಂತೆ ಎಲ್ಲವನ್ನೂ ತಮ್ಮೊಳಗೆ ಹೀರಿಕೊಳ್ತಾರೆ:-)
ಈಗ ಬೆಳಗ್ಗಿನ ನಿದ್ದೆಯನ್ನು ಬಿಟ್ಟು ಕೇವಲ ಮದ್ಯಾಹ್ನ ಮಾತ್ರ ೧ ಘಂಟೆ ಮಲಗೋ ಪುಟ್ಟಿಯನ್ನ ಇಡೀ ದಿನ ಬಿಜಿಯಾಗಿ ಬೋರ್ ಆಗದಂತೆ ನೋಡಿಕೊಳ್ಳೊದು ನನ್ನ ಕೆಲ್ಸ! ರೈಮ್ಸ್, ಪ್ರಾಣಿಗಳ ವಿಡಿಯೋ ಹೊರತಾಗಿ ಟಿವಿಯಂತೂ ನೋಡೊದೇ ಇಲ್ಲ. ಸರಿ, ಉಳಿದಂತೆ ಅದೂ ಇದೂ ಹೇಳ್ಕೊಡ್ತಾಯಿರ್ತೀನಿ. ಪುಟ್ಟಿಗೆ ಒಮ್ಮೆ ಹೇಳ್ಕೊಟ್ಟ್ರೆ ಮತ್ತೆ ಮತ್ತೆ ಅದನ್ನೇ ಕೇಳ್ತಾಳೆ. ಅವಳು ಈಗ ದಿನಗಳ, ಮಾಸಗಳ ಮತ್ತು ಗ್ರಹಗಳ ಇಂಗ್ಲಿಷ್ ಹೆಸ್ರು ಹೇಳ್ತಾಳೆ. ಅಲ್ಲದೇ ಒಂದರಿಂದ ಹತ್ತರವರೆಗೆ ಅಂಕಿ, ಹಲವು ರೈಮ್ಸ್/ ಹಾಡು ಎಲ್ಲಾ ಗೊತ್ತು ಪುಟ್ಟಿಗೆ.


ಇನ್ನು ಬರಿಯೋ ವಿಚಾರಕ್ಕೆ ಬಂದ್ರೆ ಅದು ಪುಟ್ಟಿಗೆ ಬಲು ಇಷ್ಟದ ಕೆಲ್ಸ! ಇತ್ತೀಚೆಗೆ ಅವಳ ಗೀಚುವಿಕೆ ನೇರ ಗೆರೆ ಅಥವಾ ಸೊನ್ನೆ ಸುತ್ತೋ ರೀತಿ ಕಾಣಿಸುತ್ತಿದೆ. ಅವಳು ಬರಿಯುವಾಗ ಗೆರೆ ಎಳೆದಾಗ ಒನ್/ ಒಂದು ಅಂತಲೂ .. ಸೊನ್ನೆ ಸುತ್ತಿದಾಗ ಸೊನ್ನೆ/ಜೀರೊ ಅಂತಲೂ ಹೇಳಿದ್ದಾಗಿದೆ, ಅದೀಗ ಅವಳಿಗೆ ಕರತಲಾಮಲಕ. ಕೇಳಿದಾಗ ಒನ್ ಅಥವಾ ಜೀರೋ ಬರೆದು ತೋರಿಸ್ತಾಳೆ! ಸದ್ಯದಲ್ಲೇ ಅವಲಿಗೆ ’ಅಕ್ಷರಾಭ್ಯಾಸ’ ಮಾಡಿಸೋಣವೆಂದಿದ್ದೇವೆ:)

ನಮ್ಮ್ ಪುಟ್ಟಿನ ಈಗ ಪಾಪ/ಬೇಬಿ ಅನ್ನುವಂತಿಲ್ಲ! ಹಾಗೇನಾದ್ರೂ ಅಂದ್ರೆ ತನ್ನ ಬಳಿಯಿರುವ ಗೊಂಬೆಗಳನ್ನ ತೋರಿಸಿ ಅದನ್ನ ’ಪಾಪ’ ಅಂತ ಕರಿತಾಳೆ:) ಎಷ್ಟ್ ಬೇಗ ಬೆಳ್ದ್ ಬಿಟ್ಟ್ಲು ಅನ್ನ್ಸುತ್ತೆ, ಈ ರೀತಿ ಅವ್ಳು ಹೇಳಲು ನಾವೂ ಕಾರಣ. ಅವಳಿಗೆ potty ಟ್ರೈನಿಂಗ್ ಶುರು ಮಾಡಿದಾಗಿಂದ ’ನೀನೀಗ big girl, ಡೈಪರ್ಸ್ ಬೇಬಿ ಮಾತ್ರ ಹಾಕೋದು, ನೀನು ಟಾಯ್ಲೆಟಿನಲ್ಲಿ pee, poo ಮಾಡ್ಬೇಕು’ ಅಂತೆಲ್ಲಾ ಹೇಳ್ತಾಯಿದ್ದೀವಿ.
ಏನೋ ಅಂತೂ ಪುಟ್ಟಿ ಈಗ ಹಗಲು ದೈಪರ್ಸ್ ಗೆ ’ಟಾ ಟಾ’ ಹೇಳಿದ್ದಾಳೆ. ಸುಮಾರು ೧೩ ತಿಂಗಳಿಗೇ ಡೈಪರ್ ಭಾರವೆನಿಸಿದಾಗ ಅಮ್ಮ ’ಐವಿ(heavy)' ಅಂತ ಹೇಳೋಕೆ ಶುರುಮಾಡಿದ್ಲು. ಈಗ ಸ್ವಲ್ಪ ದಿನದಿಂದ ಮನೆಯಲ್ಲಿ ಮಾತ್ರ ಅಮ್ಮನಿಗೆ ಹೇಳ್ತಾಯಿದ್ದವಳು ಈಗ ಒಂದು ವಾರದಿಂದ ಹೊರಗೆ ಅಂಗಡಿ/ ಪಾರ್ಕಿಗೆ ಹೋದ್ರೂ ಹೇಳಿ ಅಲ್ಲಿ ರೆಸ್ಟ್ ರೂಮಿನಲ್ಲಿ ಮಾಡ್ತಾಯಿದ್ದಾಳೆ. ಇನ್ನೇನಿದ್ದರೂ ರಾತ್ರಿ ಹೊತ್ತು ಮಾತ್ರ ಡೈಪರ್!!