Tuesday, April 28, 2009

ಮರಳಿನಲ್ಲಿ ಅರಳಿದ ಕಲೆ!!!

ನಾವು ಚಿಕ್ಕಂದಿನಲ್ಲಿ ನದಿದಡ ಅಥವಾ ಸಮುದ್ರತೀರಕ್ಕೆ ಹೋದಾಗ ಮರಳಿನಲ್ಲಿ ಮನೆ ಮಾಡಿ ಆನಂದಿಸ್ತಾಯಿದ್ವಿ. ಈಗೆಲ್ಲಾ ಮಕ್ಕಳಿಗೆ ಮಣ್ಣಿನಲ್ಲಿ ಆಡ್ಲಿಕ್ಕೆ ಮತ್ತು ತರಹ ತರಹ ಡಿಸೈನ್ಸ್ ಮಾಡ್ಲಿಕ್ಕೆ ಮೌಲ್ಡ್ ಗಳು ಸಿಗುತ್ತೆ, ಅದಕ್ಕೆ ಮಣ್ಣು ತುಂಬಿ ನಿಧಾನಕ್ಕೆ ತೆಗೆದರಾಯ್ತು, ನಮಗೆ ಬೇಕಾದ ಪ್ರಾಣಿಗಳ ಡಿಸೈನ್ ರೆಡಿ. ಫ್ಲೋರಿಡಾಗೆ ಬಂದ ಮೇಲೆ ತಿಂಗಳಿಗೊಮ್ಮೆ ಬೀಚಿಗೆ ಹೋಗೋದು ರೂಢಿ ಆಯ್ತು, ಇಲ್ಲಿ ಬೀಚಿನಲ್ಲಿ ಕೆಲವರು ಮಣ್ಣಿನಲ್ಲಿ ಮೊಸಳೆ, ಏಡಿ ಇತರೆ ಆಕಾರಗಳನ್ನು ಸುಲಭದಲ್ಲಿ ಮಾಡಿದನ್ನು ನೋಡಿ ವಾಹ್ ಆಂತ ಫೋಟೋ ಕ್ಲಿಕ್ಕಿಸಿದ್ದೆ.

ಈಚೆಗೆ ಗೆಳೆಯರೊಬ್ಬರು ಕಳುಹಿಸಿದ ಈಮೈಲ್ ಇದು.. ಮರಳಿನಲ್ಲಿ ಮೂಡಿದ ವಿಸ್ಮಯಗಳಿವು. ಮರಳಿಗೆ ನೀರು ಬೆರೆಸಿ ಯಾವುದೇ ಸ್ಪೆಶಲ್ ಟೂಲ್ಸ್ ಇಲ್ಲದೆ, ಕೇವಲ ಕೈಯಿಂದಲೇ ಎಷ್ಟು ಚೆನ್ನಾಗಿ ಕ್ಯಾಸಲ್ , ಪ್ರಾಣಿ ಪಕ್ಷಿಗಳನ್ನೂ ಮೂಡಿಸಿದ್ದಾರೆ ನೋಡಿ....

ಓಹ್ ಇದು ಬಹಳ ದೊಡ್ಡ ಕಲೆ ಅಂತ ತಿಳಿಯಿತು. ಇದಕ್ಕೆ "ಸ್ಯಾಂಡ್ ಸ್ಕಲ್ಪಟಿಂಗ್" ಅಂತಾರೆ. ಪ್ರಪಂಚದ ನಾನಾ ದೇಶಗಳಲ್ಲಿ ಪ್ರತಿ ವರ್ಷ ಈ ರೀತಿಯ ಉತ್ಸವ ಮತ್ತು ಸ್ಪರ್ಧೆಗಳು ಕೂಡ ನೆಡೆಯುತ್ತದೆ. 1989ನಲ್ಲಿ "ಹ್ಯಾರಿಸ್ಯಾಂಡ್(Harrisand)" ಎಂದು ಕರೆಯಲ್ಪಡುವ Harrison Hot Springs (Canada, BC)ನಲ್ಲಿ ಶುರುವಾದ World Championship in Sand Sculptureನಲ್ಲಿ ಪ್ರತಿವರ್ಷ ಹಲವಾರು ಮಂದಿ ಪಾಲ್ಗೊಳ್ಳುತ್ತಾರೆ. 2008ನ ವಿಜಯಶಾಲಿ ಕಲಾಕೃತಿಗಳ ಫೋಟೋಗಳಿವು.
ಮಾಸ್ಟರ್ ಸೋಲೊನಲ್ಲಿ ಮೊದಲ ಬಹುಮಾನ ಮತ್ತು ಜನರ ಆಯ್ಕೆ
"What Lies Beneath" by Carl Jara

ಮಾಸ್ಟರ್ ಸೋಲೊನಲ್ಲಿ ಎರಡನೆ ಬಹುಮಾನ ಪಡೆದ
"Rise Of The Golden Dragon" by Tan Joo Heng
ಮಾಸ್ಟರ್ ಸೋಲೊನಲ್ಲಿ ಮೂರನೆ ಬಹುಮಾನ ಪಡೆದ
"The Beginning And The End" by Baldrick Buckle
ಮಾಸ್ಟರ್ ಡಬಲ್ಸ್ ನಲ್ಲಿ ಮೊದಲ ಬಹುಮಾನ ಪಡೆದ "Colliding Dreams"
by Hanneke Supply & Martijn Rijerse
ಮಾಸ್ಟರ್ ಡಬಲ್ಸ್ ನಲ್ಲಿ ಎರಡನೆ ಬಹುಮಾನ ಪಡೆದ "Swing With Me Baby"
by Melineige Beauregard & Tan Joo Heng
ಮಾಸ್ಟರ್ ಡಬಲ್ಸ್ ನಲ್ಲಿ ಮೂರನೆ ಬಹುಮಾನ ಪಡೆದ"Transanding"
by Stephen Robert & Jobi Bouchard
ಮಾಸ್ಟರ್ ಡಬಲ್ಸ್ ನಲ್ಲಿ ಜನರ ಆಯ್ಕೆ"Deep Sleep"
by Michel de Kok & Charlotte Koster
ಟೀಮ್ ವರ್ಗದಲ್ಲಿ ಮೊದಲ ಬಹುಮಾನ ಪಡೆದ Luny-landing
ಟೀಮ್ ವರ್ಗದಲ್ಲಿ ಎರಡನೆ ಬಹುಮಾನ ಪಡೆದ Land Grab
ಟೀಮ್ ವರ್ಗದಲ್ಲಿ ಮೂರನೆ ಬಹುಮಾನ ಪಡೆದ Donot Press Button

ಇಶ್ವದ ಅತೀ ಎತ್ತರದ ಮರಳಿನ ಕ್ಯಾಸಲ್ ಮೂಡಿದ್ದು South Carolinaದ Myrtle Beachನಲ್ಲಿ 2007 Sun Fun Festival ಸಂದರ್ಭದಲ್ಲಿ. 300 ಟ್ರಕ್ ಬರ್ತಿ ಮರಳು ಉಪಯೋಗಿಸಿ ಸತತ ಹತ್ತು ದಿನಗಳ ಕಾಲ ಸರಸೋಟದ ಏಳು ಜನರು ಶ್ರಮಿಸಿ 49.55 ಅಡಿ(15.1ಮಿ) ಎತ್ತರದ ಬೃಹತ್ ಕ್ಯಾಸಲ್ ನಿರ್ಮಿಸಿದ್ದರು. ಅದರ ಫೋಟೋಸ್ ಮತ್ತು ಹೆಚ್ಚಿನ ಮಾಹಿತಿ ಇಲ್ಲಿದೆ.
ಕೇವಲ ಸ್ಪರ್ಧೆಗಾಗಿ ಈ ರೀತಿಯ ಕಲೆ ಮೂಡುತ್ತೆ ಅನ್ಕೋಬೇಡಿ, ಸೆಪ್ಟೆಂಬರ್ 1, 2007ರಲ್ಲಿ Ed Jarrett 31.7ಅಡಿ(9.66ಮಿ) ಎತ್ತರದ "Castle to the Sun"ಅನ್ನು Point Sebago Resort, Maineಯಲ್ಲಿ ರೋಗಗ್ರಸ್ತ ಮಕ್ಕಳ ನಿಧಿ ಸಹಾಯಯಾರ್ಥ ನಿರ್ಮಿಸಿದ್ದರು.
ಭಾರತದ ಸುದರ್ಶನ್ ಪಟ್ನಾಯಕ್ ಮತ್ತು ಜೆಯವೇಲ್ ಮುರುಗನ್ ಇವರುಗಳು ಸುನಾಮಿಯಲ್ಲಿ ಮಡಿದವರ ನೆನಪಿಗಾಗಿ "ಪುರಿ"ಯಲ್ಲಿ ಒಂದು ನಿರ್ಮಿಸಿದ್ದಾರೆ. ಸುದರ್ಶನ್ ಪಟ್ನಾಯಕ್ ಅವರು 1995ರಲ್ಲಿ ಗೋಲ್ದನ್ ಆರ್ಟ್ ಇನ್ಸ್ಟಿಟ್ಯೂಟ್ ಪ್ರಾರಂಭಿಸಿ ಈ ಕಲೆಗೆ ಯುವಕರಲ್ಲಿ ಹೆಚ್ಚಿನ ಆಸಕ್ತಿ ಮೂಡುವಂತೆ ಮಾಡಿದ್ದಾರೆ.
ಆಂಧ್ರಾಪ್ರದೇಶದ ಶ್ರೀಕಾಕುಲಂ ನವರಾದ ತರಾಣಿ ಮಿಶ್ರೊ ಅವರ ಕೈಯಲ್ಲಿ ಮೂಡಿದ ಮರಳು ಕಲೆ ಇಲ್ಲಿದೆ ನೋಡಿ.
ಮರಳಿನಲ್ಲಿ ಮೂಡಿದ ದುರ್ಗಾದೇವಿ

ಬೀಜಿಂಗ್ ಓಲಂಪಿಕ್ಸ್ 2008ಹೊಸ ವರ್ಷದ ಸ್ವಾಗತ !!

2009 ಹೊಸ ವರ್ಷದ ಸ್ವಾಗತ !!

ಇಸ್ರೈಲಿನ ಹೈಫಾ ಎಂಬಲ್ಲಿ 2006ರಲ್ಲಿ ’Fairy Tales Theme'ನಲ್ಲಿ ಅರಳಿದ ಕಲಾಕೃತಿಗಳು...

ಓಲಂಪಿಕ್ಸ್ ನ ಇತಿಹಾಸವನ್ನು ಉಲ್ಲೇಖಿಸುವ ಮರಳಿನ ಕಲಾಕೃತಿಗಳು Zhujiajian Island, East China’s Zhejiang Provinceನಲ್ಲಿ 2008ನ ಓಲಂಪಿಕ್ಸ್ ಸಮಯದಲ್ಲಿ ಮೂಡಿವೆ.





ಮರಳನ್ನು ಒಟ್ಟುಗೂಡಿಸಿ ಅತ್ಯಾಕರ್ಷಕ ಕಲಾಕೃತಿಗಳನ್ನು ಮಾಡುತ್ತಿರುವ ಈ ಎಲ್ಲಾ ಕಲಾವಿದರಿದೆ ನನ್ನ ಹ್ಯಾಟ್ಸ್ ಆಫ್ !!

Friday, April 17, 2009

ಎಲ್ಲಾ ಹಣ್ಣುಗಳು ಇಷ್ಟ !!!

ಪುಟ್ಟಿಗೆ ಘನ ಆಹಾರ ಕೊಡಲು ಶುರು ಮಾಡಿದಾಗಿನಿಂದಲೂ ಎಲ್ಲಾ ಹಣ್ಣು ಮತ್ತು ತರಕಾರಿಗಳು ಬಲು ಇಷ್ಟ. ಈಗಂತೂ ಅನ್ನ/ ಚಪಾತಿ/ರೊಟ್ಟಿ ಜೊತೆಗೆ ಪಲ್ಯ ಕೊಟ್ಟರೆ, ಪಲ್ಯ ಮಾತ್ರ ಖಾಲಿ ಆಗುತ್ತೆ, ಅನ್ನ ಅಲ್ಲೇ ಇರುತ್ತೆ. ಹಣ್ಣು ಕಂಡರಂತೂ ಶುರು ಅವಳ "ಕುಂಯ್, ಕುಂಯ್" ಅಂದ್ರೆ ಕುಯ್ದು ಕೊಡು ಅನ್ನೊ ಮಾತು. ಅದರಲ್ಲೂ ಬಾಳೆಹಣ್ಣು ತುಂಬಾನೆ ಇಷ್ಟ, ಅಮ್ಮ ಈಗ ಅದನ್ನ ಬಚ್ಚಿಡಿರೋ ಪರಿಸ್ಥಿತಿ ಬಂದಿದೆ. ಅವಳು ಆರು ತಿಂಗಳ ಮಗುವಿದ್ದಾಗಿಂದ ತೆಗೆದ ಹಲವು ಫೋಟೋಗಳು ಮತ್ತು ಇತ್ತೀಚೆಗೆ ಅವಳು ಫೋರ್ಕ್-ನಲ್ಲಿ ಹಣ್ಣು ತಿಂತಾಯಿರೋ ವಿಡೀಯೊ ಇಲ್ಲಿದೆ. ಜೊತೆಗೆ ಹಣ್ಣುಮಾರುವವನ ಹಾಡು.





ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತೀಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು







ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು
.
.
.
.





ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನ ಹಳ್ಳಿಯ ಚಕ್ಕೋತ







ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಯುವೆವು


.
.
.
.
.
ಗಂಜಾಂ ಅಂಜೀರ್ ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನನಾಸು
ಕೊಳ್ಳಿರಿ ಮರೆತು ಸಿಹಿ ತಿನಿಸು

.


ಕೊಲ್ಲಿರಿ ಬಗೆ ಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ

Wednesday, April 15, 2009

ಕಣ್ಣಾ ಮುಚ್ಚೆ ಕಾಡೆ ಗೂಡೆ...

ಕಣ್ಣಾ ಮುಚ್ಚೆ ಕಾಡೆ ಗೂಡೆ
ಉದ್ದಿನ ಮೂಟೆ ಉರುಳೇ ಹೋಯ್ತು
ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ
ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ

ಈ ಹಾಡು ನಮ್ಮಲ್ಲಿ ಅನೇಕರು ಚಿಕ್ಕಂದಿನಲ್ಲಿ ಹಾಡಿದ್ದೀವಿ, ಹಾಡ್ತಾ ಆಟವಾಡಿದ್ದೀವಿ. ಆದ್ರೆ ಇದರ ಹಿಂದೆ ಇರೋ ಅರ್ಥ ನನಗೆ ತಿಳಿದದ್ದು ಇತ್ತೀಚೆಗಷ್ಟೆ.
  • ಇದರ ಸಾರಾಂಶ ಹೀಗಿದೆ:
    ಉದ್ದಿನ ಮೂಟೆಯನ್ನು ಇಲ್ಲಿ ವಯಸ್ಸಾದ ಜನರಿಗೆ ಹೋಲಿಸುತ್ತಾರೆ. ವಯಸ್ಸಾದ ಜನರನ್ನು ಅವರ ಮಕ್ಕಳು ಸರಿಯಾಗಿ ನೋಡಿಕೊಳ್ಳದೆ ಅವರು ಕಾಲಾಂತರವಾದ ನಂತರ ಪರಿತಪಿಸುವುದನ್ನು ಹೇಳುತ್ತಿದ್ದಾರೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ ಅಂದರೆ, ನಮ್ಮ ಅಪ್ಪ ಅಮ್ಮಂದಿರನ್ನು ಅವರ ಮುಪ್ಪಿನ ಸಮಯದಲ್ಲಿ ಸರಿಯಾಗಿ ನೋಡಿಕೊಂಡಿಲ್ಲ ಎಂದು. ಹಾಗೆಯೆ ನಿಮ್ಮಯ ಹಕ್ಕಿ ಹಿಡಿದುಕೊಳ್ಳಿ ಎಂದರೆ, ನಾನಂತು ಸರಿಯಾಗಿ ನೋಡಿಕೊಳ್ಳಲಿಲ್ಲ ನೀವಾದರು ಅವರನ್ನು ಹಿಡಿದುಕೊಳ್ಳಿ ಅಂದರೆ ಸರಿಯಾಗಿ ಜೋಪಾನ ಮಾಡಿ ಎಂದು.
  • ಅಲ್ಲದೆ ಇದು ರಾಮಾಯಣದ ಕಥೆಯನ್ನೇ ಹೇಳುತ್ತದೆ ಎನ್ನತ್ತಾರೆ:
    ಕಣ್ಣಾ ಮುಚ್ಚೆ : ದಶರಥನು ಕಣ್ಣು ಮುಚ್ಚಲಾಗಿ
    ಕಾಡೆ ಗೂಡೆ : ರಾಮಿನಿಗೆ ಕಾಡೆ ಗೊಡಾಯಿತು (ವಾಸ ಸ್ಥಳವಾಯ್ತು)
    ಉದ್ದಿನ ಮೂಟೆ ಉರಳೇ ಹೋಯ್ತು : ಮೂಟೆಯಂತಹ(ದೈತ್ಯಾಕಾರದ) ರಾವಣ ಉರಳೇ ಹೋದ.
  • ಇದನ್ನ ನಮ್ಮ ಯುವಕರು ಮಾರ್ಪಡಿಸಿ ಹಾಡೋದು ಹೀಗೆ :
    ಕಣ್ಣಾ ಮುಚ್ಚೆ ಲವರ್ಸ್ ಡೇ
    ಕಾಡೇಗೂಡೇ ಡೇಟಿ೦ಗ್ ಡೇ
    ಉದ್ದಿನ ಮೂಟೇ ಪ್ರೆಗ್ನೆ೦ಟ್ಸ್ ಡೇ
    ಉರುಳೇ ಹೋಯ್ತು ಡೆಲಿವರಿ ಡೇ !!

Saturday, April 04, 2009

ಏಣಿ ಏರೋದು ಹೀಗೆ...

ಪುಟ್ಟಿ ಈಗ ಎಲ್ಲಿ ಮೆಟ್ಟಲು ಕಂಡ್ರೂ ಸರಿ ಹತ್ತಬೇಕು. ಮೊದಲೆಲ್ಲ ಅಮ್ಮನ ಕರೀತಾ ಇದ್ದ್ಲು ಜೊತೆಗೆ ಬಾ ಅಂತ. ಇತ್ತೀಚೆಗೆ ಧೈರ್ಯ ಹೆಚ್ಚಾಗಿ ತಾನೆ ಹತ್ತುತ್ತಾಳೆ. ಮೊನ್ನೆ ಅವರ ಅಜ್ಜ ಏಣಿ ಹತ್ತಿ ಕೆಲಸ ಮಾಡೋದನ್ನ ನೋಡಿದಳು. ಥಟ್ಟನೆ ತಾನೂ ಹತ್ತಬೇಕು ಅಂತ ಹಠಮಾಡಿ ತಾನೂ ಹತ್ತಿ ಎಲ್ಲರಿಂದ ಸೈ ಅನಿಸಿಕೊಂಡಳು.