Thursday, January 20, 2011

ಪೇಪರ್ ಟ್ಯೂಬ್ ಕಬ್ಬು

ಸಂಕ್ರಾಂತಿ ಹಬ್ಬಕ್ಕೆಂದು ಮಾಡಿದ ಮತ್ತೊಂದು ಕ್ರಾಫ್ಟ್ ಇದು. ಮೊದಲಿಗೆ ಖಾಲಿಯಾದ ಗಿಫ್ಟ್ ವ್ರಾಪ್ ಪೇಪರ್ ನ ಒಳಗಿನ ಪೇಪರ್ ಟ್ಯೂಬ್ ಗೆ ಬಣ್ಣ ಹಚ್ಚಲು ಪುಟ್ಟಿಗೆ ಕೊಟ್ಟೆ. ಅಡುಗೆಮನೆಯ ಪೇಪರ್ ಟವೆಲ್ ಅಥವಾ ಅಲುಮಿನಿಯಂ ಫಾಯಿಲ್ ಒಳಗಿನ ಟ್ಯೂಬ್ ಆದರೂ ಆಗುತ್ತೆ. ಕೆಂಪು ಬಣ್ಣಕ್ಕೆ ಸ್ವಲ್ಪೇ ಸ್ವಲ್ಪ ಕಪ್ಪು ಬೆರಸಿದ್ದೆ. ಅದು ಒಣಗಿದ ನಂತರ ಅದರ ಮೇಲೆ ಅಲ್ಲಲ್ಲಿ ಕಪ್ಪು ಮತ್ತು ಬಿಳಿಯ ಬಣ್ಣದ ಗೆರೆಗಳನ್ನು ಬರೆದೆ. ನಂತರ ಒಂದಷ್ಟು ಲಿಲ್ಲಿ ಹೂವಿನ ಎಲೆಗಳನ್ನು ತಂದು ಒಂದು ತುದಿಗೆ ಅಂಟಿಸಿದೆ!
 

Monday, January 17, 2011

ಸಂಕ್ರಾಂತಿಗೆ ಸಿಹಿ ಸರ

ಸಂಕ್ರಾಂತಿ ದಿನ ಸಂಜೆ ಮಕ್ಕಳಿಗೆ ಆರತಿ ಮಾಡೋವಾಗ ಸಿಹಿ ಕುಸುರಿ ಕಾಳಿನ ಹಾರವನ್ನು ಹಾಕೋದು ವಾಡಿಕೆ. ಇವುಗಳ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ಇದು ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಚಲಿತ ಅಂತ ತಿಳಿಯಿತು. ಅಲ್ಲಿಯವರು ಸಂಕ್ರಾಂತಿ ಸಮಯದಲ್ಲಿ ಮಾಡುವ "ಬೋರ್ ನಹನ್" (ಬೋರ್ ಅಂದ್ರೆ ಒಂದು ರೀತಿಯ ಸಣ್ಣ ಹಣ್ಣು, ಮತ್ತು ನಹನ್ ಅಂದ್ರೆ ಸ್ನಾನ) ಅನ್ನುವ ಆಚಾರಣೆ ಸಂದರ್ಭದಲ್ಲಿ ಚಿಕ್ಕ ಮಕ್ಕಳಿಗೆ ಕಪ್ಪು ಬಣ್ಣದ ಹೊಸ ಬಟ್ಟೆ ತೊಡಿಸಿ ಕುಸುರಿ ಕಾಳಿನಿಂದ ಮಾಡಿದ ಸರ, ಬಳೆ, ಕಿರೀಟ ಇತ್ಯಾದಿ ಒಡವೆಗಳನ್ನು ತೊಡಿಸಿ ಅಲಂಕರಿಸುವರಂತೆ. ಆಮೆಲೆ ಮಕ್ಕಳ ತಲೆಮೇಲೆ ಹಣ್ಣು ಮತ್ತಿತರೆ ವಸ್ತುಗಳನ್ನು ಚೆಲ್ಲಿ ಆರತಿ ಮಾಡುವರಂತೆ :)
 ಚಿತ್ರ ಕೃಪೆ ಅಂತರ್ಜಾಲ

ನಮಗಿಲ್ಲಿ ಅದು ಲಭ್ಯವಿಲ್ಲದೇ ಇರುವುದರಿಂದ ಅವುಗಳ ಬದಲಿಗೆ ಸಿಹಿ ಮಾರ್ಶ್ ಮೆಲ್ಲೋಸ್ ಪೋಣಿಸಿ ಹಾರ ಮಾಡಿದ್ದೆವು ಕಳೆದ ವರ್ಷ. ಈ ವರ್ಷ ಅದೇ ರೀತಿ ಹಾರಗಳನ್ನ ಪುಟ್ಟಿಯೇ ಬಣ್ಣಬಣ್ಣದ ಫ್ರೂಟ್ ಲೂಪ್ಸ್ ಪೋಣಿಸಿ ಮಾಡಿದಳು. ಮೊದಲು ಬಣ್ಣಗಳ ಪ್ರಕಾರ ಅವನ್ನು ಬೇರ್ಪಡಿಸಿ, ನಂತರ ತನಗೂ ಮನೆಗೆ ಬರುವ ತನ್ನ ಸ್ನೇಹಿತರಿಗೂ ಸುಂದರ ಹಾರಗಳನ್ನು ಮಾಡಿಟ್ಟಳು.
  

Sunday, January 16, 2011

ಸಂಕ್ರಾಂತಿ ಕಲರಿಂಗ್ ಪೇಜ್

ಸಂಕ್ರಾಂತಿ ಹಬ್ಬದ ವಿಶೇಷತೆಗಳನ್ನು ಬಿಂಬಿಸುವ ಒಂದೆರೆಡು ಕಲರಿಂಗ್ ಪೇಜ್ ಗಳನ್ನು ಗೂಗಲ್ ನಲ್ಲಿ ಸಿಕ್ಕ ಚಿತ್ರಗಳನ್ನು ಉಪಯೋಗಿಸಿಕೊಂಡು ಮಾಡಿಕೊಂಡೆ. ದಿನಕ್ಕೊಂದೆರೆಡು ಪೇಜ್ ಗಳಿಗೆ ಪುಟ್ಟಿ ಬಣ್ಣ ತುಂಬುತ್ತಿದ್ದಳು. ಅಕ್ಷರಗಳು ಸರಿಯಾಗಿ ಮೂಡದಿದ್ದರೂ ಕಲರಿಂಗ್ ಮಾಡಿದ್ದರ ಪರಿಣಾಮ ಜೊತೆಗೆ ನನ್ನ ಕಾಮೆಂಟರಿ ಎಲ್ಲಾ ಸೇರಿ ಇವತ್ತು ಪುಟ್ಟಿ ತಾತನ ಹತ್ರ ಫೋನ್ ನಲ್ಲಿ ಮಾತಾಡೋವಾಗ "ಸಂಕ್ರಾಂತಿ ಮಾಡಿದ್ವಿ" ಅಂತ ಹೇಳಿದ್ದು ಕೇಳಿ ನಾನು ಸಂತಸದಿಂದ ಸ್ವಲ್ಪ ಉಬ್ಬಿರುವೆ:)
ಕಲರಿಂಗ್ ಮಾಡಿರುವ ಕೆಲವು ಚಿತ್ರಗಳು..






Thursday, January 13, 2011

ಮಕರ ಸಂಕ್ರಾಂತಿ ಶುಭಾಶಯಗಳು

ಭಾರತದಲ್ಲಿ ಬೆಳೆವ ಮಕ್ಕಳಿಗೆ ನಮ್ಮ ಹಬ್ಬ ಹರಿದಿನಗಳ ಬಗ್ಗೆ ಹೇಳಿಕೊಡಲು ಯಾವುದೇ ಪಠ್ಯಪುಸ್ತಕ ಬೇಕಿಲ್ಲ. ಅಲ್ಲಿ ಸುತ್ತಲಿನ ಹಬ್ಬದ ವಾತಾವರಣವೇ ಕಲಿಸುತ್ತದೆ. ಯಾವ ಹಬ್ಬಕ್ಕೆ ಏನು ವಿಶೇಷ ಅನ್ನುವುದು ಆ ಹಬ್ಬದ ದಿನ ಮನೆಯ ಹತ್ತಿರದ ಅಂಗಡಿ/ ಮಾರುಕಟ್ಟೆಗೆ ಒಂದು ಸುತ್ತು ಹೋಗಿ ಬಂದರೆ ಸಾಕು:)
ಆದರೆ ಇದೆಲ್ಲದರಿಂದ ದೂರವಿರುವ ನನ್ನ ಪುಟ್ಟಿಗೆ ಇವುಗಳನ್ನ ನಾವೇ ಮನೆಯಲ್ಲಿ ಹೇಳಿಕೊಡಬೇಕು. ಇಲ್ಲಿನ ಹಬ್ಬಗಳು/ ಆಚರಣೆಗಳು ಬಂತೆಂದರೆ ಶಾಲೆಗಳಲ್ಲಿ ಆ ವಾರ/ ತಿಂಗಳೆಲ್ಲಾ ಬರೀ ಅದೇ ಹಬ್ಬದ ಪುಸ್ತಕ ಓದೋದು, ಅದೇ ಹಾಡುಗಳು, ಅದೇ ಥೀಮಿನ ಕಲೆ ಮಾಡಿಸುವುದು, ಹಬ್ಬದ ತಿಂಡಿ ಇತ್ಯಾದಿ. ನಾನೂ ಕೂಡ ಇನ್ನು ಮೇಲೆ ಇದೇ ಮಾರ್ಗದಲ್ಲಿ ಪುಟ್ಟಿಗೆ ನಮ್ಮ ಹಬ್ಬಗಳ ಬಗ್ಗೆ ತಿಳಿಸಿಕೊಡಬೇಕೆಂದು ಅಂದುಕೊಂಡಿದ್ದೆ.
ಸಂಕ್ರಾಂತಿಗೆ ಒಂದು ಪವರ್ ಪಾಯಿಂಟ್ ಸ್ಲೈಡ್ ಶೋ ಮಾಡೋಣವೆಂದಿದ್ದೆ, ಆದ್ರೆ ಮನೆಯಲ್ಲಿ ೧-೨ ತಿಂಗಳಿನಿಂದ ಎಲ್ಲರಿಗೂ ಬಿಡದೇ ನೆಗಡಿ/ಕೆಮ್ಮು ಸತಾಯಿಸುತ್ತಿದೆ, ಇವುಗಳ ಮದ್ಯೆ ಏನೂ ಮಾಡಲಾಗಲಿಲ್ಲ. ಗೂಗಲ್ ನಲ್ಲಿರುವ ಕೆಲವು ಹಬ್ಬದ ಚಿತ್ರಗಳನ್ನು ತೋರಿಸುತ್ತಾ ಪುಟ್ಟಿಗೆ ಸಂಕ್ರಾಂತಿ ಬಗ್ಗೆ ನಂಗೆ ತಿಳಿದಷ್ಟು ಹೇಳ್ತಾ ಬಂದಿರುವೆ.
ಜೊತೆಗೆ ಹಬ್ಬದ ಶುಭಾಶಯಗಳ ಬ್ಯಾನರ್ ಕೂಡ ಅವಳೇ ಪೈಂಟ್ ಮಾಡಿದ್ದಾಳೆ ನೋಡಿ ಹೇಗಿದೆ.

ಕಾಫಿ ಫಿಲ್ಟರ್ ಪೇಪರ್ ಅನ್ನು ಸೂರ್ಯನ ಕಿರಣಗಳಂತೆ ಕಾಣುವಂತೆ ಕತ್ತರಿಸಿ ಪೈಂಟ್ ಮಾಡಲು ಪುಟ್ಟಿಗೆ ಬಣ್ಣಗಳನ್ನು ಕೊಟ್ಟೆ. ಈ ಪೇಪರ್ ಮೇಲೆ ಪೈಂಟ್ ಮಾಡುವುದು ಪುಟ್ಟಿಗೆ ಬಲು ಇಷ್ಟ, ಬಣ್ಣಗಳು ಸುಲಭವಾಗಿ ಹರಡಿ, ಬೆರೆತುಕೊಳ್ಳುತ್ತವೆ. ಮುಂಚೆಯೂ ಬಹಳಷ್ಟು ಸರ್ತಿ ಇದರ ಮೇಲೆ ಪೈಂಟ್ ಮಾಡಿದ್ದಾಳೆ. ಸೂರ್ಯ ಮಾಡಬೇಕಿದ್ದರಿಂದ ಹಳದಿ, ಕೆಂಪು ಮತ್ತು ಕಿತ್ತಳೆ ಬಣ್ಣವನ್ನು ಮತ್ರ ಕೊಟ್ಟೆ. ಪೈಂಟ್ ಮಾಡಿದ ಮೇಲೆ ಪ್ರಿಂಟ್ ಮಾಡಿದ ಅಕ್ಷರಗಳನ್ನು ಅವಕ್ಕೆ ಅಂಟಿಸಿ ಗೋಡೆಗೆ ಹಾಕಿರುವೆ!!
ನಿಮಗೆಲ್ಲರಿಗೂ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು !!

Tuesday, January 04, 2011

ಹುಟ್ಟುಹಬ್ಬ ಪಾರ್ಟಿ ಫೋಟೋಗಳು..

 ಪುಟ್ಟಿ
  
 ಸ್ನೇಹಿತರು
ಕೇಕ್ ಕತ್ತರಿಸುತ್ತಾ..


ಮಿಕ್ಕ ಫೋಟೋಗಳು ಮತ್ತು ಆಡಿದ ಆಟಗಳ ವಿವರ ಮುಂದಿನ ಪೋಸ್ಟ್ ನಲ್ಲಿ...