Saturday, November 20, 2010

ಪುಟ್ಟಿಯ ಚಿತ್ರ ಕನ್ನಡಪ್ರಭ ಪೇಪರಿನಲ್ಲಿ...

ಇವತ್ತಿನ ಕನ್ನಡಪ್ರಭದ ವಿಶೇಷ ಸಂಚಿಕೆ ಸಾಪ್ತಾಹಿಕಪ್ರಭದ ಕೊನೆಯ ಪುಟದಲ್ಲಿ ಪುಟ್ಟಿಯ ಚಿತ್ರ ಮತ್ತು ಅವಳು ಮಾಡಿದ್ದ ’Blow Paint Tree' ಯ ಚಿತ್ರ ’ಮಣ್ಣಿನ ಮಕ್ಕಳ ಬಣ್ಣದ ಲೋಕ’ ಎಂಬ ಅಂಕಣದಲ್ಲಿ ಪ್ರಕಟವಾಗಿದೆ!!

ಕಳೆದ ವಾರ ’ಮಕ್ಕಳ ದಿನ’ ದ ಅಂಗವಾಗಿ ಹಲವು ಚಿತ್ರಗಳು ಪ್ರಕಟವಾಗಿದ್ದವು. ಇದು ಅದರ ಮುಂದುವೆರೆದ ಕಂತು. ಪೇಪರ್ ನಲ್ಲಿ ಪುಟ್ಟಿಯ ಚಿತ್ರ ನೋಡಿ ನನಗಂತೂ ಹೇಳಿಕೊಳ್ಳಲಾರದಷ್ಟು ಸಂತಸವಾಗಿದೆ :)

Wednesday, November 17, 2010

ಅಪ್ಪ ಅಪ್ಪ ನನ್ನಪ್ಪ
ಮುದ್ದು ಮಾಡುವ ನನ್ನಪ್ಪ

ವಿದ್ಯೆಯ ಕಲಿಸುವ ನನ್ನಪ್ಪ
ಬುದ್ದಿಯ ಹೇಳುವ ನನ್ನಪ್ಪ

ಜೀವನ ಸ್ಫೂರ್ತಿ ನನ್ನಪ್ಪ
ಭಾವ ಜೀವಿ ನನ್ನಪ್ಪ
--ಸುಬ್ರಹ್ಮಣ್ಯ ಭಟ್

Friday, November 12, 2010

ಪುಟ್ಟಿಯ ಮೊದಲ ಸ್ಟೇಜ್ ಶೋ !!

ಪುಟ್ಟಿಗೆ ಡ್ಯಾನ್ಸ್ ಬಹಳ ಇಷ್ಟ! ಯಾವ ಮಗುವಿಗೆ ಇಷ್ಟವಿಲ್ಲ ಅಲ್ವಾ :) ನಮ್ಮೂರಿನ ಭಾರತೀಯ ಅಸೋಸಿಯೇಷನ್ ಅವರ ವಾರ್ಷಿಕೋತ್ಸವ 'Glimpses of India' ಕಾರ್ಯಕ್ರಮದಲ್ಲಿ ಈ ಸರ್ತಿ ಪುಟ್ಟಿ ಮತ್ತವಳ ಸ್ನೇಹಿತರದ್ದೂ ಒಂದು ಡ್ಯಾನ್ಸ್ ಇತ್ತು. ಪ್ರಾಕ್ಟೀಸ್ ಮಾಡುವಾಗಲಿಂದನೂ ಬಹಳ ಉತ್ಸಾಹದಿಂದಲೇ ಅದರಲ್ಲಿ ಭಾಗವಹಿಸಿದಳು. ಇದು ಅವಳ ಮೊದಲ ’ಸ್ಟೇಜ್ ಶೋ’ !! ಹಿಂದಿ ಚಲನಚಿತ್ರ ’ಹೋಮ್ ಡೆಲಿವೆರಿ’ ಯಲ್ಲಿರುವ ’ಹ್ಯಾಪಿ ದಿವಾಲಿ’ ಅನ್ನೋ ಹಾಡಿಗೆ :) ದೀಪಾವಳಿ ಹಬ್ಬವೂ ಅದೇ ಸಮಯದಲ್ಲಿ ಬಂದಿದ್ದರಿಂದ ಇದು ಎಲ್ಲರಿಗೂ ಮೆಚ್ಚುಗೆ ಆಯಿತು.

ವಿಡಿಯೋ ರೆಕಾರ್ಡ್ ಮಾಡಿ ಕೊಟ್ಟ ಶಿಶಿರ್ ಅಪ್ಪ ಮತ್ತು ಅರ್ಜುನ್ ಅಂಕಲ್ ಗೆ ತುಂಬಾ ತುಂಬಾ ಥ್ಯಾಂಕ್ಸ್ !!

Wednesday, November 10, 2010

ದೀಪಾವಳಿ ಪುಸ್ತಕ !!

ಇತ್ತೀಚೆಗೆ ನಾವು ಲೈಬ್ರರಿಗೆ ಹೋದಾಗಲೆಲ್ಲ ಪುಟ್ಟಿ ತನಗೆ ಬೇಕಾದ ಪುಸ್ತಕಗಳನ್ನು ಆರಿಸಿ ತರ್ತಾಳೆ. ನಾನು ಮೊದಲೇ ಲೈಬ್ರರಿಯ ವೆಬ್ಸೈಟಿನಲ್ಲಿ ಹುಡುಕಿ ಬೇಕಾದ ಪುಸ್ತಕವನ್ನು ಕಾದಿರಿಸಿಕೊಳ್ಳುವೆ.  ಪುಟ್ಟಿಗೆ ಅವರ ಸ್ಕೂಲಿನಲ್ಲಿ ವಾರಕ್ಕೊಂದು ’ಥೀಮ್’ ಇರುತ್ತೆ. ನಾನು ಅವಳಿಗೆ ಆ ಥೀಮಿನ ಅನುಗುಣವಾಗಿ ಪುಸ್ತಕಗಳನ್ನು ತರ್ತೀನಿ. ಮೊನ್ನೆ ಹ್ಯಾಲೋವೀನ್ ಟೈಮಿನಲ್ಲಿ ಓದಿದ್ದೆಲ್ಲಾ ಅದೇ ಪುಸ್ತಕಗಳೇ!
ಸರಿ ದೀಪಾವಳಿ ಬಂತಲ್ಲ ಅದರ ಬಗ್ಗೆ ಪುಸ್ತಕಗಳೇನಾದ್ರು ಇದೆಯಾ ಅಂತ ಹುಡುಕಿದೆ ಲೈಬ್ರರಿಯಲ್ಲಿ ಹಲವು ಪುಸ್ತಕಗಳು ಸಿಕ್ಕವು. ಅದರಲ್ಲಿ ಮಕ್ಕಳಿಗೆ ಅಂತ ಇದ್ದದ್ದು ಇದು "Lighting a Lamp: A Diwali Story (Festival Time)". ತಕ್ಷಣವೇ ಕಾದಿರಿಸಿದೆ. ಈ ಪುಸ್ತಕ ಮನೆಗೆ ತಂದಾಗಿನಿಂದ ಪುಟ್ಟಿ ಇದನ್ನು ದಿನಕ್ಕೆ ಒಂದು ಸಲವಾದ್ರೂ ತಿರುವಾಕಿದ್ದಾಳೆ.

ಅವಳು ಪುಸ್ತಕ ನೋಡುತ್ತಿರುವ ಒಂದು ವಿಡಿಯೋ...


ಇದಲ್ಲದೆ ಯೂಟ್ಯೂಬಿನಲ್ಲಿರುವ ಎರಡು ವಿಡಿಯೋ ಕೂಡ ಪುಟ್ಟಿಗೆ ಬಲು ಇಷ್ಟ.

Thursday, November 04, 2010

ದೀಪಾವಳಿಯ ಶುಭಾಶಯಗಳು!!

ದೀಪವಿರಲಿ ಮನದಲಿ,
ಬೆಳಗಲಿ ಕನಸುಗಳಾ
ಕರಗಿಸಲಿ ಕತ್ತಲೆಯಾ! 
 ನಿಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು!!

ಪೇಪರ್ ಲ್ಯಾಂಟರ್ನ್...

ದೀಪಾವಳಿಗೆ ಆಕಾಶಬುಟ್ಟಿ ಮಾಡಿ ಅದರೊಳಗೊಂದು ಸಣ್ಣ ದೀಪವನ್ನು ಹಚ್ಚಿ ಮನೆಯ ಮುಂದೆ ನೇತು ಹಾಕುವುದನ್ನು ಅಮ್ಮ ಹೇಳಿದ್ದನ್ನು ಕೇಳಿದ್ದೆ. ಬೆಂಗಳೂರಿನಲ್ಲಿ ಕೆಲವರು ಮನೆಯ ಮುಂದೆ ಹಾಕಿದ್ದ ಅಂಗಡಿಯಲ್ಲಿ ಸಿಗುವ ’ಬಟ್ಟೆಯ ಆಕಾಶಬುಟ್ಟಿ’ ಯನ್ನು ನೋಡೂ ಇದ್ದೆ. ಅದು ಮತ್ತೆ ಇನ್ನೂ ಕೆಲವು ದೀಪಾವಳಿಯ ಆಚರಣೆ  ನಶಿಸುತ್ತಿರುವ ಬಗ್ಗೆ ಒಂದು ಲೇಖನ ಇಲ್ಲಿ.
ಮೊನ್ನೆ ನಡೆದ ’Asian festival' ನಲ್ಲಿ ಥೈಲಾಂಡಿನವರ ಬೂತಿನಲ್ಲಿ ಮಕ್ಕಳಿಗೆ ಮಾಡಿಸುತ್ತಿದ್ದ ಪೇಪರ್ ಲ್ಯಾಂಟರ್ನ್ ಪುಟ್ಟಿ ಕೂಡ ಮಾಡಿದ್ದಳು. ಅದು ಮಾಡಲು ಬಲು ಸುಲಭ.

ಸರಿ, ನಾವೂ ಕೂಡ ನಮ್ಮ ಹಬ್ಬಕ್ಕೆ ಮಾಡೋಣ ಅಂತ ಶುರು ಮಾಡಿದೆವು. ಮೊದಲು ಮಾಡಿದ್ದು ಸರಿಯಾಗಲಿಲ್ಲ. ತಪ್ಪಾಗಿ ಕಟ್ ಮಾಡಿದೆವು. ಆದ್ರೆ ಅದನ್ನು ಅಂಟಿಸಿದಾಗ, ಅದು ಹೀಗಾಯ್ತು!

ನಂತರ ಕೆಲವನ್ನು ಮಾಡಿಯೇ ಬಿಟ್ಟೆವು...

ಕೆಲವನ್ನು ಪೈಂಟ್ ಮಾಡಿದಳು, ಕೆಲವರಲ್ಲಿ ಮಾರ್ಕರ್/ ಕ್ರಯಾನ್ಸ್ ನಿಂದ ಸಿಂಗರಿಸಿದ್ದಳು. . ಕತ್ತರಿಸುವಾಗ ಪುಟ್ಟಿಗೆ ಸಹಾಯವಾಗಲೆಂದು ಹಾಳೆ ಹಿಡಿದೆ. ಕೆಲವೊಂದು ಸ್ವಲ್ಪ ಹೆಚ್ಚಾಗಿ ಕಟ್ ಕೂಡ ಆಯ್ತು:) ಯಾವುದೂ ಪರ್ಫೆಕ್ಟ್ ಆಗಿಲ್ಲ, ಪರ್ವಾಗಿಲ್ಲ:)  ಇವುಗಳು ಈಗ ಅಡುಗೆ ಮನೆಯ ಬಾಗಿಲಲ್ಲಿವೆ!

ನೀವೂ ಕೂಡ ಮಾಡಬೇಕೆ? ಹಾಗಾದ್ರೆ ನೋಡಿ ವಿಡಿಯೋ ಇಲ್ಲಿದೆ. ಒಳಗಿನ ಪೇಪರ್ ಟ್ಯೂಬ್ ಇಲ್ಲದೆಯೂ ಮಾಡಬಹುದು.

Wednesday, November 03, 2010

ಪೇಪರ್ ದೀಪಗಳ ಹಾರ...

ಪುಟ್ಟಿ ಪೈಂಟ್ ಮಾಡಿರೋ ಕೆಲವು ಹಾಳೆಗಳನ್ನು ಅರ್ಧ ಸರ್ಕಲ್ ಆಗಿ ಕತ್ತರಿಸಿದೆ. ಒಂದು ಹಾ;ಎ ಪೂರ್ತಿ ಹಳದಿ ಬಣ್ಣ ಪೈಂಟ್ ಮಾಡಿಸಿ, ಅದನ್ನು 'tear shape'ನಲ್ಲಿ ಕಟ್ ಮಾಡಿ, ಮದ್ಯ ಸ್ವಲ್ಪ ಕೆಂಪು ಹಾಕಿ ದೀಪಗಳನ್ನು ಮಾಡಿದೆವು. ಅವುಗಳನ್ನು ಹಬ್ಬದ ದಿನ ಡೈನಿಂಗ್ ಟೇಬಲ್ ನಲ್ಲಿ ಹೀಗೆ ಜೋಡಿಸಿಡುವ ಇರಾದೆ ನನಗಿತ್ತು.
ಅಥವಾ ಬಾಗಿಲಿಗೆ ತೋರಣದ ತರಹ ಈ ದೀಪಗಳ ಹಾರ ಹಾಕಬಹುದಿತ್ತು!
ಆದ್ರೆ, ಪುಟ್ಟಿಯ ಐಡಿಯಾ ಬೇರೆಯಗಿತ್ತು. ಮೊನ್ನೆ ಹ್ಯಾಲೋವೀನ್ ಗೆಂದು ಮಾಡಿದ್ದ ವ್ರೆತ್ ಹಬ್ಬ ಮುಗಿದ ಮೇಲೆ ತೆಗೆದು ಹಾಕಿದ್ದೆ. ಹಾಗಾಗಿ ಅಲ್ಲಿಗೆ ಇವನ್ನು ಅಂಟಿಸಬೇಕೆಂಬ ಆಸೆ ಅವಳದ್ದು. ಕೊನೆಗೆ ಅವಳ ಆಸೆಯೇ ಸದ್ಯಕ್ಕೆ ಗೆದ್ದಿದೆ:)

Tuesday, November 02, 2010

ಹಬ್ಬಕ್ಕೆ ದೀಪಗಳು!

ಕಳೆದ ವರ್ಷ ಪ್ಲೇಡೋನಿಂದ ಕೆಲವು ದೀಪಗಳನ್ನು  ಮಾಡಿ ಹಬ್ಬ ಆಚರಿಸಿದ್ದೆವು. ನನ್ನ ಗೆಳತಿಯೊಬ್ಬರು ಮಣ್ಣಿನಿಂದ ಹಣತೆ ಮಾಡಿ ಹಬ್ಬದ ದಿನ ಮಕ್ಕಳ ಕೈಲಿ ಅದಕ್ಕೆ ಪೈಂಟ್ ಮಾಡಿಸಿ, ಚಮುಕಿ ಎಲ್ಲಾ ಹಾಕಿ ಚೆಂದದ ದೀಪಗಳನ್ನು ಮಾಡಿಸಿದ್ದರು. ಅವರ ಫೋಟೋಗಳನ್ನು ನೋಡಿ, ನಾವೂ ಮುಂದಿನ ವರ್ಷ ಹಾಗೇ ಮಾಡಬೇಕೆನಿಸಿತ್ತು.
ಆದ್ರೆ ಈ ವರ್ಷ ಹಬ್ಬದ ದಿನ ನಮ್ಮೂರಿನ ಭಾರತೀಯ ಅಸೊಸಿಯೇಷನ್ ನವರ ವಾರ್ಷಿಕೋತ್ಸವ ಕಾರ್ಯಕ್ರಮವಿದೆ. ಹಾಗಾಗಿ ಎಲ್ಲರೂ ಅದರಲ್ಲಿ ಬಿಜಿ. ಅದಕ್ಕೆ ನಾನು ಪುಟ್ಟಿ ಮಾತ್ರ ದೀಪಗಳನ್ನು ಮಾಡಿದ್ವಿ.
ಗಣಪನ ಮಾಡಲು ತಂದಿದ್ದ ಜೇಡಿಮಣ್ಣು ಸ್ವಲ್ಪ ಉಳಿದಿತ್ತು. ಅದರಲ್ಲಿ ಕೆಲವು ದೀಪಗಳನ್ನು ಮಾಡಿದೆ. ಮೊಟ್ಟೆಯಾಕಾರಕ್ಕೆ ಲಟ್ಟಿಸಿದ ಕ್ಲೇ ಮೇಲೆ ಒಂದು ಎಲೆಯನ್ನು ಚೆನ್ನಾಗಿ ಪ್ರೆಸ್ಸ್ ಮಾಡಿ ತೆಗೆದು, ಎಲೆಯಾಕಾರ ಕತ್ತರಿಸಲು crinkle cut knife ಬಳಸಿದೆ. ಉಳಿದವೆಲ್ಲಾ ಹಾಗೆ ಕೈಯಲ್ಲಿ ಮಾಡಿದ್ದು. ಅವುಗಳ ಮೇಲೆ ಡಿಸೈನ್ ಮೂಡಿಸಲು. Flori pasta ಮತ್ತು ಸ್ಟ್ರಾ ವನ್ನು ಬಳಸಿದೆವು. 

ಈ ಮಣ್ಣು ಕಟ್ಟಿಯಾಗಿದ್ದರಿಂದ ಪುಟ್ಟಿಗೆ ಹೆಚ್ಚು ಆಟವಾಡಲಾಗಲಿಲ್ಲ. ಅದಕ್ಕೆ ಮೈದಾಹಿಟ್ಟಿನಿಂದ ಕೆಲವು ಹಣತೆ ಮಾಡಿದೆವು. ಇದರಲ್ಲಿ ಪುಟ್ಟಿ ಉದ್ದದ ಸುರಳಿ ಮಾಡಿಕೊಟ್ಟು ಅಮ್ಮನಿಗೆ ಸಹಾಯ ಮಾಡಿದ್ಲು. 


ನಂತರದ ಕೆಲಸವೆಲ್ಲಾ ಪುಟ್ಟಿಯದೇ..

ನಂತರ ಇವುಗಳನ್ನು ಸ್ವಲ್ಪ ಸಿಂಗರಿಸಿದ್ದು ನಾನು


ಮರಳಿ ಬಂದಿರುದು ದೀಪಾವಳಿ
ಎಲ್ಲೆಲ್ಲೂ ಸಡಗರ ತುಂಬಲಿ


ಮಾಡಿರುವೆವು ಬಗೆಬಗೆಯ ದೀಪ
ಬಣ್ಣ ಹಚ್ಚಿದಳು ನಮ್ಮ ಮನೆ ಪಾಪ
ಇದು ಕತ್ತಲೆ ಹೊಡೆದೊಡಿಸೋ ದೀಪ


ಚೆಲ್ಲಲಿ ದೀಪದ ಬೆಳಕು ಎಲ್ಲರ ಬಾಳಲ್ಲಿ
ತರಲಿ ಇದು ಹರುಷವ ಎಲ್ಲರ ಮನದಲ್ಲಿ
-ರೂpaश्री

ಹ್ಯಾಲೋವೀನ್ ೨೦೧೦ !

ಪ್ರತಿ ವರ್ಷದಂತೆ ಈ ವರ್ಷವೂ ಪುಟ್ಟಿ ಹ್ಯಾಲೋವೀನ್ ಗೆ ಹತ್ತಿರದ ಮಾಲ್ ಗೆ ಹೋಗಿ ಕ್ಯಾಂಡಿ ಕಲೆಕ್ಟ್ ಮಾಡಿಕೊಂಡು ಬಂದಳು. ಸಿಹಿ ಹೆಚ್ಚು ತಿನ್ನದ ನಮ್ಮ್ ಪುಟ್ಟಿ ಅವುಗಳನ್ನು ಅಲ್ಲೇ ಸಿಕ್ಕ ಸ್ನೇಹಿತರಿಗೆ ’ಟ್ರೀಟ್’ ಅಂತ ಕೊಟ್ಟು ಖಾಲಿಯನ್ನೂ ಮಾಡಿದಳು !!
Pretty Pink Poodle :)
ತಾನೆ ಪೈಂಟ್ ಮಾಡಿದ ಟ್ರೀಟ್ ಬ್ಯಾಗ್ ..(ಎರಡು foam bowls ಅನ್ನು ಅಂಟಿಸಿ ಮಾಡಿದ್ದು)
 
ಚಿಟ್ಟೆ , ಪೂಡಲ್ ಮತ್ತು ಜೇಡ...
 ಲೇಡಿ ಬಗ್ ಜೊತೇಲಿ..