Tuesday, December 30, 2008

ನಾರೀಸಖಿ ಮೆಚ್ಚಿನ ಮಗು !!

ಎಲ್ಲಾ ಮಕ್ಕಳೂ ನೋಡಲು ಮುದ್ದಾಗಿಯೇ ಇರುತ್ತವೆ. "ಹೆತ್ತವಳಿಗೆ ಹೆಗ್ಗಣ ಮುದ್ದು" ಅನ್ನೋ ಮಾತಿನಂತೆ ಪುಟ್ಟಿ ಬೇರೆ ಮಕ್ಕಳಿಗಿಂತ ಹೆಚ್ಚು ಮುದ್ದಾಗಿ ಅವರಮ್ಮನ ಕಣ್ಣಿಗೆ ಕಾಣಿಸ್ತಾಳೆ. ಆದ್ದರಿಂದಲೇ ನಾರೀಸಖಿ ತಂಡದವರು ತಿಂಗಳ ಮುದ್ದುಮಗು ಸ್ಪರ್ಧೆಗೆ ನಿಮ್ಮ ಮಗುವಿನ ಫೋಟೋ ಕಳುಹಿಸಿ ಎಂದಾಗ ತಟ್ಟನೆ ಪುಟ್ಟಿಯ ಫೋಟೋ ಕಳುಹಿಸಿದ್ದು.
ಅಂತೂ ಪುಟ್ಟಿ ಡಿಸೆಂಬರ್ ತಿಂಗಳ ಸ್ಪರ್ಧೆಯಲ್ಲಿ ಗೆದ್ದೇ ಬಿಟ್ಟಳು. ಅವಳಿಗೆ ಓಟ್ ಮಾಡಿದ ಎಲ್ಲಾ ಆಂಟಿ ಅಂಕಲ್ ಗಳಿಗೆ ಅವಳ ಥ್ಯಾಂಕ್ಯೂ !!! ಅವಳ ಹುಟ್ಟುಹಬ್ಬಕ್ಕೆ ಸರಿಯಾಗಿ ಈ ಸುಂದರ ಸರ್ಟಿಫಿಕೇಟ್ ಮತ್ತೊಂದು ಕೈಚೀಲ ಬಹುಮಾನವಾಗಿ ಬಂತು.

ಬರ್ತ್ ಡೇ ಪಾರ್ಟಿ!!

ಪುಟ್ಟಿಗೆ ಇವತ್ತು ಖುಶಿಯೋ ಖುಶಿ. ಅವಳ ಹುಟ್ಟುಹಬ್ಬಕ್ಕೆ ಇಂಗ್ಲ್ಯಾಂಡಿನಿಂದ ಅವಳ ದೊಡ್ಡ ಸೋದರ ಮಾವ, ಅತ್ತೆ ಮತ್ತವರ ಮುದ್ದಿನ ಮಗಳು ಖುಶಿ, ಆಸ್ಟ್ರೇಲಿಯಾದಿಂದ ಚಿಕ್ಕ ಸೋದರಮಾವ, ಹೈದರಾಬಾದಿನಿಂದ ಅತ್ತೆ ಕುಟುಂಬ ಮತ್ತೆ ಇನ್ನು ಅನೇಕ ಸ್ನೇಹಿತರೂ ಹಿತೈಷಿಗಳೂ ಬಂದಿದ್ದರು. ಪಾರ್ಟಿಯಲ್ಲಿ ಅವಳ ಜೊತೆ ಆಡಲು ಮಿಕ್ಕಿ ಮೌಸ್ ಮತ್ತು ಡೋನಾಲ್ಡ್ ಅಂಕಲ್ ಕೂಡ ಬಂದಿದ್ರು. ಅಜ್ಜಿತಾತನ ಬಳಗ ದೊಡ್ಡದು, ಬಂದಿದ್ದ ೪೦೦ ಜನಗಳ ಜೊತೆ ಮಾತಾಡಿ ಫೋಟೋ ತೆಗೆಸ್ಕೊಂಡು ಸುಸ್ತಾದ್ಲು ಪುಟ್ಟಿ!! ಆದ್ರೂ ಮಜವಾಗಿತ್ತು ಅಂತ ಪಾರ್ತೀ ಅರೇಂಜ್ ಮಾಡಿದ್ದ ಅಜ್ಜಿತಾತರಿಗೆ ಥ್ಯಾಂಕ್ಸ್ ಹೇಳಿದ್ಲು:)

ಹೇಗಿದೆ ಪ್ರಿಂನ್ಸೆಸ್ಸ್ ಡೆಕೊರೇಶನ್!

ಆಹಾ! ನನ್ನ್ ಹೊಸ ಡ್ರೆಸ್ಸು
ಇದು ನನ್ನ್ ಕೇಕು:)
ಸೋದರಮಾವ ಕೊಡಿಸಿದ ಡ್ರೆಸ್ಸ್ ನಲ್ಲಿ ಮಿಂಚಿಂಗು !!

ಸತ್ಯನಾರಾಯಣ ಪೂಜೆ!!

ಸಾಹಿತ್ಯ ಮತ್ತವಳ ಸೋದರಮಾವನ ಮಗಳು ಖುಶಿಗೆ ಸಾಂಪ್ರದಾಯಿಕವಾಗಿ ನಾಮಕರಣ ಮಾಡೋಕೆ ಅಂತ ಅಜ್ಜಿತಾತ ಮನೇಲಿ ಎಲ್ಲಾ ಏರ್ಪಾಡು ಮಾಡಿದ್ದರು. ಆವತ್ತು ಪುಟ್ಟಿಯ ಜನ್ಮದಿನವೂ ಆದ್ದರಿಂದ ಸತ್ಯನಾರಾಯಣ ಪೂಜೆಯನ್ನೊ ಮಾಡಿಸಿದ್ರು. ಸಂಜೆ ಪಾರ್ಟಿ ಇರೋದ್ರಿಂದ ಪೂಜೆಗೆ ಕೇವಲ ಹತ್ತಿರದ ನೆಂಟರು ಅಂದ್ರೆ ೫೦ ಜನ ಮಾತ್ರ ಬಂದಿದ್ರು! ಪುಟ್ಟಿಯ ಅಮ್ಮನಿಗೆ ನಾಮಕರಣ, ಮದುವೆ ಮಾಡಿಸಿದ್ದ ಶ್ರೀ.ಸುಬ್ಬಾನಂಜುಂಡಶಾಸ್ತ್ರಿಗಳೆ ಇವತ್ತು ಪುಟ್ಟಿಗೆ ನಾಮಕರಣ ಮಾಡಿಸಲು ಬಂದಿದ್ದರು. 

ಪೂಜೆ

ಅಪ್ಪ ಮಗಳು

ರಸಾಯನ ಮಾಡುತ್ತಿರುವ ಆಂಟಿ, ಅಜ್ಜಿಯಂದಿರು

ಅಪ್ಪ ತನ್ನ ಹೆಸರನ್ನ ಸರಿಯಾಗಿ ಬರಿತಾರಾ ಅಂತ ನೋಡ್ತಾಯಿರೋ ಪುಟ್ಟಿ

ಪೂಜೆಯಾದ ಮೇಲೆ ದೇವರ ಮುಂದೆ ಒಂದು ಪೋಸು

ಮಾವನ ಮಗಳು ಖುಶಿಯೊಂದಿಗೆ

ವರುಷ ತುಂಬಿತು ಇಂದಿಗೆ !!!


ಇಂದು ಡಬ್ಬಲ್ ಹುಟ್ಟುಹಬ್ಬ .. ಪುಟ್ಟಿಗೆ ಮತ್ತವಳ ಬ್ಲಾಗಿಗೆ ಇವತ್ತಿಗೆ ಒಂದು ವರುಷ ತುಂಬಿತು. ಅವಳು ಇಂಡಿಯಾದಲ್ಲಿ ಅಜ್ಜಿ-ಅಜ್ಜ ಮತ್ತೆಲ್ಲರ ಜೊತೆ ಖುಶಿಯಾಗಿದ್ದಾಳೆ. ಎಲ್ಲರ ಕಣ್ಮಣಿ ಈಗವಳು. ನೂರ್ಕಾಲ ನಗುನಗುತಾ ಬಾಳೂ ಅಂತ ಅಜ್ಜ ಅಜ್ಜಿ ಪ್ರೀತಿಯಿಂದ ಹಾರೈಸಿದ್ದಾರೆ. ಅಪ್ಪ-ಅಮ್ಮನ ಹಾರೈಕೆನೂ ಅದೇ!!

ಜನುಮದಿನವಿದು ನಿನದು ಬರಲಿ ನೂರ್ಬಾರಿ
ನಿನ್ನೆಲ್ಲ ಕಾರ್ಯದಲಿ ಸಿಗಲಿ ಜಯಭೇರಿ

ಅವಳು ಹುಟ್ಟಿದ ದಿನದಿಂದ ಇಲ್ಲಿಯವರೆಗೂ ತೆಗೆದ ಫೋಟೋಗಳ ಒಂದು ವಿಡಿಯೊ..
ಮನೆಯ ಬೆಳಗಿದ ದೀವಿಗೆ
ಮನವ ತಣಿಸುವ ದೇವಿಗೆ
ನಮ್ಮ ಮನೆಯ ರಾಣಿಗೆ
ವರುಷ ತುಂಬಿತು ಇಂದಿಗೆ.

ಎಲ್ಲರ ನೆಚ್ಚಿನ ಪುಟ್ಟಿಗೆ
ತಾತನ ನೆಚ್ಚಿನ ಚಿಟ್ಟಿಗೆ
ಹರುಷವ ಸುರಿಸುವ ಕಂದಗೆ
ವರುಷ ತುಂಬಿತು ಇಂದಿಗೆ.

ಎಲ್ಲರ ಕುಣಿಸಿ ನಕ್ಕು ನಲಿಸಿ
ಸರ್ಧೆಯಲ್ಲಿ ಜಯವ ಗಳಿಸಿ
ವಿಜಯಮಾಲೆ ಧರಿಸಿದ ಪೋರಿಗೆ
ವರುಷ ತುಂಬಿತು ಇಂದಿಗೆ .

ಮಿಂಚಿನಂತೆ ಓಡಾಡುವ
ಕಣ್ಣಿನಲ್ಲೇ ಎಲ್ಲರ ಸೆಳೆವ
ಮುದ್ದಿನ ಚಿನುಕುರುಳಿಗೆ
ವರುಷ ತುಂಬಿತು ಇಂದಿಗೆ.
--ರೂpaश्री

Monday, December 29, 2008

ಪುಟ್ಟಿ ಬರ್ತ್ ಡೇ ಗೆ ಬನ್ನಿ!!

ಎಲ್ಲರೊದನೆ ಕೂಡಿ ಆಡಿ ಹುಟ್ಟು ಹಬ್ಬ ಮಾಡ್ಕೊಬೇಕೂಂತ ಪುಟ್ಟಿಗೆ ಆಸೆ. ಅದಕ್ಕೆ ನೋಡಿ ಅವಳ ತಾತನಿಗೆ ಹೇಳಿ ಹೀಗೆ ಕಾರ್ಡ್ ಮಾಡಿಸಿ ನಿಮ್ಮನೆಲ್ಲಾ ಕರ್ದಿದ್ದಾಳೆ, ಖಂಡಿತಾ ಬನ್ನಿ.. ಬರ್ತೀರಲ್ಲಾ!

Sunday, December 28, 2008

ಮಲಗಲು ಕಲಿತ ಪುಟ್ಟಿ !!

ಪುಟ್ಟಿ ಹುಟ್ಟಿದಾಗಿನಿಂದ ಮಲಗೋದು ಬಹಳ ಕಮ್ಮಿ. ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ಮಲಗಿಸಿದ್ರೆ ಕೇವಲ ಅರ್ಧ ಘಂಟೆಲಿ ಎದ್ದು ಆಟವಾಡ್ತಿದ್ಲು. ಹಗಲು ಹೇಗೋ ಅವಳೊಂದಿಗೆ ಆಟವಾಡ ಬಹುದಿತ್ತು, ಆದ್ರೆ ರಾತ್ರಿಯೆಲ್ಲ ಹೀಗೆ ಆದ್ರಿಂದ ಎಲ್ಲರಿಗೂ ಸಾಕು ಸಾಕಾಗ್ತಿತ್ತು. "ಮೊದಲ ೩ ತಿಂಗಳು ಹೀಗೆ, ಆಮೇಲೆ ಮಕ್ಕಳು ಸರಿ ಹೋಗ್ತಾರೆ" ಅಂತ ಪುಟ್ಟಿಯ ಅಜ್ಜಿ ಸಮಾಧಾನ ಮಾಡ್ತಾಯಿದ್ದ್ರು. ೩ ತಿಂಗಳು ತುಂಬಿದ ಮೇಲೂ ಪುಟ್ಟಿಯ ಆಟ ಮುಂದುವರೆಯಿತು. ಆಗ ಆರು ತಿಂಗಳಿಗೆ ಸರಿ ಹೋಗ್ತಾಳೆ ಅಂದ್ರು.
"ನಿಮ್ಮ ಪಕ್ಕ ಮಲಗಿಸಿಕೊಳ್ಳಬೇಡಿ. ಅವಳದ್ದೇ ಮಂಚದಲ್ಲಿ ಬೇರೆ ರೂಮಿನಲ್ಲಿ ಮಲಗಿಸಿ" ಅನ್ನೋ ಅವಳ ಡಾಕ್ಟರ್ ಹೇಳೊ ಹಾಗೆ ಮಾಡಲು ಮನಸ್ಸು ಒಪ್ಪಲಿಲ್ಲ. "ಮನೆದೇವರ ಹೆಸರು ಇಡದೆ, ಇನ್ನೇನೋ ಇಟ್ಟ್ರಿ ಅದಕ್ಕೆ ಹೀಗೆ ಆಡ್ತಾಳೆ" ಅಂತ ಪುಟ್ಟಿಯ ಅಜ್ಜಿ ತಾತರ ವಾದ.
ಒಂಬತ್ತು ತುಂಬಿದ್ರೂ ಅವಳ ಆಟ ನಿಲ್ಲದಾಗ "ರಾತ್ರಿ ಅವಳು ಎದ್ದು ಆಡಲು ಶುರು ಮಾಡಿದ್ರೆ, ನೀವು ಸುಮ್ಮನಿರಿ, ಅತ್ತರೆ ಅಳಲಿ, ಸ್ವಲ್ಪ ಹೊತ್ತು ಅತ್ತು ಸುಮ್ಮನಾಗ್ತಾಳೆ, ಮಲಗ್ತಾಳೆ.... ನನ್ನ ಮಗನೂ ಹೀಗೆ ಮಾಡ್ತಿದ್ದ ಒಂದು ದಿನ ೨ ಘಂಟೆ ಅಳಲು ಬಿಟ್ಟೆ, ಆಮೇಲೆ ತಾನೆ ಮಲಗಿದ" ಅನ್ನೋ ಸ್ನೇಹಿತರ ಮಾತು ಮೊದಲಿಗೆ ಸರಿಯೆನಿಸಲಿಲ್ಲವಾದ್ರೂ, ಕೊನೆಗೆ ಇರ್ಲಿ ನೋಡೋಣ ಅಂತ ಪ್ರಯತ್ನಿಸಿದ್ರೆ ೫ ನಿಮಿಷ ಅಳುವಷ್ಟರಲ್ಲೇ ಆ ಅಳು ಕೇಳಲು ಆಗಲಿಲ್ಲ. ಸರಿ, ಅದೆಷ್ಟು ದಿನ ಹೀಗೆ ಇರ್ತಾಳೆ ಇರ್ಲಿ ನೋಡೋಣ ಅಂತ ಸುಮ್ಮನಾದ್ವಿ.

ಇಂಡಿಯಾಗೆ ಬಂದು ೧ ವಾರದಲ್ಲೇ ಪುಟ್ಟಿ ಆರಾಮಾಗಿ ರಾತ್ರಿಯಿಡೀ ಮಲಗಲು ಶುರುಮಾಡಿದ್ಲು:)) ತನ್ನ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಅವಳು ಅಪ್ಪ ಅಮ್ಮನಿಗೆ ಕೊಟ್ಟ ಗಿಫ್ಟ್ ಇದು:))

Saturday, December 20, 2008

ಪುಟ್ಟ ಕರು

ಪುಟ್ಟಿಗೆ ಈಗ ಬೀದಿಯಲ್ಲಿ ಬರುವ ಹಸು/ಎಮ್ಮೆಗಳನ್ನು ನೋಡಿದ್ರೆ ಬಹಳ ಸಂತೋಷ "ಬಾ,ಬಾ" ಅಂತ ಕೈ ಸನ್ನೆ ಮಾಡಿ ಕೂಗ್ತಾಳೆ. ಅಜ್ಜಿ ಕೊಡುವ ಬಾಳೆಹಣ್ಣು ತಿನ್ನೋ ಹಸುನ ನೋಡೋದೇ ಅವಳಿಗೆ ಬಲು ಖುಶಿ. ಊಟ ಮಾಡಲು ಹಠಮಾಡಿದಾಗ ಮನೆ ಹೊರಗೆ ಬಂದು ಅಂಬಾ ನೋಡುತ್ತಾ ನಿಂತ್ರೆ ನಿಮಿಷದಲ್ಲಿ ಊಟ ಖಾಲಿ.

ನಾನು ನೋಡಿದ ಪುಟ್ಟ ಕರು
ಹಸುವಿನ ಮರಿಯಿದು ಕರು
ನಾಲ್ಕು ಕಾಲುಗಳ್ಳುಳ್ಳ ಕರು
ಚೆಂಗು ಚೆಂಗನೆ ನೆಗೆಯುವ ಕರು

ಅಮ್ಮನ ಹಾಲು ಕುಡಿವ ಕರು
ಹುಲ್ಲನು ಮೇಯುವ ಕರು
ಕಂದು ಬಣ್ಣದ ಮೈಯ ಕರು
ಅಂಬಾ ಅಂಬಾ ಎಂದು ಕರೆವ ಕರು


ನಾ ಕೊಟ್ಟ ಬಾಳೆಹಣ್ಣು ತಿಂದ ಕರು
ನನ್ನನ್ನೇ ಹಿಂಬಾಲಿಸಿ ಬಂದ ಕರು
ನನ್ನ ಮೆಚ್ಚಿನ ಮುದ್ದು ಕರು
ನಾ ಹೋಗಿ ಬರುವೆ ನೀನಿಲ್ಲೇ ಇರು
-ರೂpaश्री

Saturday, December 13, 2008

ಏರೋಪ್ಲೇನ್ ಏರಿದ ಪೋರಿ !!!

ಬೇಬಿ ಕಾರ್ ಸೀಟಿನಲ್ಲಿ ಕೂರಲು ಬಲು ಗಲಾಟೆ ಮಾಡುತ್ತಿದ್ದ ಪುಟ್ಟಿಯನ್ನ ಹೇಗಪ್ಪ ವಿಮಾನದಲ್ಲಿ ಭಾರತಕ್ಕೆ ಕರೆದೊಯ್ಯೋದು ಅನ್ನೋದು ಪುಟ್ಟಿ ಅಮ್ಮ-ಅಪ್ಪನ ಚಿಂತೆ ಆಗಿತ್ತು. ಆದ್ರೂ ಅವಳ ಮೊದಲ ವರ್ಷದ ಹುಟ್ಟುಹಬ್ಬವನ್ನ ಮನೆಯವರೆಲ್ಲರ ಜೊತೆ ಆಚರಿಸಬೇಕು ಅಂತ ಹೊರಟೇ ಬಿಟ್ಟ್ರು. ತಲಹಸೀಯಿಂದ ಬೆಂಗಳೂರಿಗೆ ಹೋಗೋಷ್ಟರಲ್ಲಿ ಪುಟ್ಟಿ-ಅಮ್ಮ-ಅಪ್ಪ ಎಲ್ಲರಿಗೂ ಸಾಕು ಸಾಕಾಯ್ತು.
ವಿಮಾನದಲ್ಲಿ ತನ್ನದೇ ತೊಟ್ಟಿಲಲ್ಲಿ ಮಲಗಿದ್ದು ಹೀಗೆ...


ಶಿಗಾಗೋ ವಿಮಾನನಿಲ್ದಾಣದಲ್ಲಿ ಮುಂದಿನ ಫ್ಲೈಟ್-ಗೆ ಕಾಯ್ದು ಸಾಕಾಗಿ ಅಲ್ಲೇ ಹಾಯಾಗಿ ನಿದ್ರಿಸಿದ್ದು ಹೀಗೆ...

ನಿದ್ರಿಸಿ ಸಾಕಾದಾಗ ತೊಟ್ಟಿಲಿನಲ್ಲೇ ಕುಳಿತು ಊಟ, ಆಟ ಎಲ್ಲಾ...

Tuesday, December 02, 2008

ತಲೆ ಕೆಳಗಾದ ಮುಖ!!

ಮೊನ್ನೆ ರಾತ್ರಿ ಬಾನಿನಲ್ಲಿ ಎಲ್ಲರಿಗೂ ಕಂಡ ನಗು ಮುಖ ನಮಗೆ ಇವತ್ತಾದರೂ ಕಾಣಿಸುತ್ತೋ ಇಲ್ಲವೋ ಅಂತ ಕತ್ತಲಾಗುವದನ್ನೇ ಕಾಯುತ್ತಿದ್ದೆ. ಹೊರಗಡೆ ಹೋದಾಗ ಆಕಾಶದಲ್ಲಿ ಮೋಡವಿಲ್ಲದ್ದು ಕಂಡು ಖುಶಿ ಆಯಿತು. ಹುಡುಕುತ್ತಿದ್ದ ಮುಖ ದರ್ಶನವಾದಾಗ ನಿಧಿ ಸಿಕ್ಕವಳಂತೆ ರೋಡಿನಲ್ಲೇ ಕುಣಿದಾಡಿದೆ. ಅಮೇರಿಕಾದಲ್ಲಿ ಸಪ್ಪೆ ಮೊರೆ ಕಾಣಿಸುವುದಾಗಿ ನ್ಯೂಸ್-ನಲ್ಲಿ ಹೇಳಿದ್ದರು, ಇಲ್ಲಿ ನನಗೆ ಕಂಡದ್ದು ತಲೆ ಕೆಳಗಾದ ಮುಖ!! ಇಲ್ಲಿನ ಆರ್ಥಿಕ ಪರಿಸ್ತಿಥಿಯನ್ನು ಬಿಂಬಿಸುತ್ತಿದೆಯೋ ಏನೋ ಅನ್ನಿಸಿತು.

ಮನೆಯೊಳಗೆ ಓಡಿ ಬಂದು ಕ್ಯಾಮೆರಾ ಹಿಡಿದು ರೋಡಿಗೆ ದೌಡಾಯಿಸಿದೆ. ನೆಗಡಿ ಇದ್ದರಿಂದ ಹೇಮಂತ್ ಹೆಚ್ಚು ಹೊತ್ತು ಫೋಟೋ ತೆಗೆಯುತ್ತಾ ಹೊರಗೆ ನಿಲ್ಲಲಿಲ್ಲ. ನಾನೇ ಫೋಟೋ ತೆಗೆಯಲು ಪ್ರಯತ್ನಿಸಿದೆ, ಅಷ್ಟೇನು ಚೆನ್ನಾಗಿಲ್ಲ...



ಇದ್ದುದರಲ್ಲಿ ವಿಡೀಯೋ ಪರವಾಗಿಲ್ಲ ಅನಿಸುತ್ತೆ. ಅದನ್ನೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

Monday, December 01, 2008

ಬಾನಿನಲ್ಲೊಂದು ನಗು ಮುಖ :)

ಪ್ರತಿ ವರ್ಷ ಥ್ಯಾಂಕ್ಸ್ ಗೀವಿಂಗ್ ಗೆ ಇಲ್ಲಿ ಅಮೇರಿಕೆಯಲ್ಲಿ ಕುಟುಂಬದ ಸದಸ್ಯರೆಲ್ಲಾ ಒಂದೆಡೆ ಸೇರುತ್ತಾರೆ. ಇದೇ ಸಮಯಕ್ಕೆ ಈ ವರ್ಷ ಬಾನಿನಲ್ಲಿ ಚಂದಿರ, ಗುರು ಮತ್ತು ಶುಕ್ರ ಗ್ರಹಗಳು ಒಂದೆಡೆ ಕೂಡಿ ನಮ್ಮನ್ನೋಡಿ ನಗೆ ಚೆಲ್ಲುವುದೆಂದು ಹಲವು ದಿನಗಳಿಂದ ನ್ಯೂಸ್ ನಲ್ಲಿ ಬರ್ತಾಯಿತ್ತು.


252,000 ಮೈಲಿ ದೂರವಿರುವ ಚಂದಿರ ಈ ಮೂವರಲ್ಲಿ ನಮಗೆ ತೀರಾ ಹತ್ತಿರದಲ್ಲಿರುವ ಮತ್ತು ಚಿಕ್ಕದಾದ್ದು. ಗುರು ನಮ್ಮಿಂದ 94 million ಮೈಲಿ ದೂರದಲ್ಲಿದ್ದರೆ ಶುಕ್ರ 540 million ಮೈಲಿಗಳು. ಈ ಮೂರು ಆಗಾಗ್ಗೆ ಒಂದರ ಹತ್ತಿರ ಒಂದು ಬರುತ್ತಾವಾದ್ರೂ ಬಹಳಷ್ಟು ಸಲ ಹಾಗಾದಾಗ ಸೂರ್ಯನಿಗೆ ತುಂಬಾ ಹತ್ತಿರದಲ್ಲಿರುವುದರಿಂದ ನಮಗೆ ಈ ಮಿಲನ ಕಾಣಿಸುವುದಿಲ್ಲ. ಈ ಸುಂದರ ಮಿಲನ ಮತ್ತೊಮ್ಮೆ ನಮ್ಮ ಕಣ್ಣಿಗೆ ಗೋಚರಿಸುವುದು Nov. 18, 2052ರಲ್ಲಿ ಅನ್ನುತ್ತಾರೆ ಮೈಯಾಮಿ ಪ್ಲಾನೆಟೇರಿಯಂನ ನಿರ್ದೇಶಕ ಜ್ಯಾಕ್ ಹಾರ್ಕ್-ಹೀಮರ್ ಅವರು.

ಇದನ್ನು ನೋಡಲು ಬಲು ಕಾತುರದಿಂದ ಕಾಯುತ್ತಿದ್ದೆವು ಆದರೆ ಈಗಿಲ್ಲಿ ಮೋಡಕವಿದ ವಾತಾವರಣವಿದ್ದು ನಿನ್ನೆ ಏನೂ ಕಾಣಿಸಲಿಲ್ಲ. ಇಂದು ಅಂತರ್ಜಾಲದಲ್ಲಿ ಎಲ್ಲೆಡೆ ಆ ಸುಂದರ ದೃಶ್ಯದ ಚಿತ್ರಗಳು ಭಿತ್ತರಿಸಿವೆ. ಮೈಸೂರಿನಲ್ಲಿರುವ ಗೆಳೆಯರು ತಾವು ತೆಗೆದ ಈ ಅಪುರೂಪದ ಫೋಟೋಗಳನ್ನ ತಮ್ಮ ಬ್ಲಾಗಿನಲ್ಲೇರಿಸಿದ್ದಾರೆ. ಈ ಚಿತ್ರಗಳನ್ನ ನೋಡ್ತಾಯಿದ್ದ್ರೆ ಡ್ರೀಮ್-ಲ್ಯಾಂಡ್-ನಲ್ಲಿರುವ ಅನುಭವ ಆಗುತ್ತೆ. ಪ್ರಕೃತಿಯ ಸೊಬಗು ಹಣ್ಣಿಗೆ ಹಬ್ಬ ಅಲ್ವ. ಅಂತೆಯೇ ಸಿನೆಮಾಗಳಲ್ಲಿ ಹಾಡಿನ ಸನ್ನಿವೇಶಕ್ಕೆಂದು ತಾರೆಗಳ ಸೆಟ್ಟಿಂಗ್ ನೆನಪಾಯ್ತು. ಇಂದು ಸಂಜೆಗಾದರೂ ನಮಗೆ ಈ ಅಪುರೂಪದ ದೃಶ್ಯ ನೋಡೋ ಭಾಗ್ಯ ಸಿಗುತ್ತಾ ಕಾದು ನೋಡಬೇಕು.



ಆಸ್ಟ್ರೇಲಿಯಾದಲ್ಲಿ ಜನರು ಸೆರೆ ಹಿಡಿದ ಚಿತ್ರಗಳು ಇಲ್ಲಿವೆ. ಹಾಂಗ್-ಕಾಂಗ್ ನಲ್ಲಿರುವ ಗೆಳೆಯರೊಬ್ಬರು ಕಳುಹಿಸಿದ ಫೋಟೋ ಇದು.
ಈ ಫೋಟೋಗಳಂತೆಯೇ ಬಾನಿನಲ್ಲಿ ನಗು ಮುಖ ಮೂಡಿಸಿದ ಇನ್ನು ಕೆಲವು ಫೋಟೋಗಳು ಕೆಲಗಿವೆ ನೋಡಿ. ಯಾವಾಗಲೋ ಅಂತರ್ಜಾಲದಲ್ಲಿ ನೋಡಿದ್ದ ಚಿತ್ರಗಳಿವು, ನನ್ನ ಕಂಪ್ಯೂಟರ್ ನಲ್ಲಿದ್ದವು, ಇವನ್ನು ಸೆರೆಹಿಡಿದು ನಮಗಾಗಿ ಅಂತರ್ಜಾಲದಲ್ಲಿ ಹಾಕಿದವರಿಗೆ ನನ್ನ ಅಭಿನಂದನೆಗಳು.



ಮೋಡಗಳು ನಮ್ಮನ್ನು ನೋಡಿ ನಗೋದು ಹೀಗೆ.
ಆಕಾಶದಲ್ಲಿ ಹಾರುತ್ತಿರುವ ಹಕ್ಕಿಗಳ ನಗೆ.
ಏರ್ ಶೋ ಸಮಯದಲ್ಲಿ ಬಂದ ಪ್ರೇಕ್ಷಕರನ್ನು ವಿಮಾನಗಳು ಸ್ವಾಗತಿಸಿದ್ದು ಹೀಗೆ.