Saturday, June 30, 2012

ಪೇಪರ್ ಎಲೆಗಳ ಮರ!

ಪುಟ್ಟಿ ಪೈಂಟ್ ಮಾಡಲು ಕುಳಿತಾದ ಕೆಲವೊಮ್ಮೆ ’ಏನು ಮಾಡೋಣ ಅಮ್ಮ?’ ಅಂತ ಕೇಳ್ತಾಳೆ. ನಿನ್ನಿಷ್ಟ ಪುಟ್ಟಿ ಏನಾದ್ರೂ ಮಾಡು ಅನ್ನೋ ಮಾತು ಕೆಲವೊಮ್ಮೆ ಅವಳಿಗೆ ಅಸ್ರಿ ಅನಿಸೊಲ್ಲ. ಆಗೆಲ್ಲಾ ನಾನು ಅಂತರ್ಜಾಲದಲ್ಲಿ ಹುಡುಕಿ ಉಳಿಸಿಕೊಂಡಿದ್ದ ಮಕ್ಕಳ ಆರ್ಟ್ ಫೋಟೋಗಳನ್ನು ತೋರಿಸಿ ಅದರಲ್ಲಿ ಯಾವುದು ಮಾಡಲು ಅವಳು ಇಷ್ಟಪಡ್ತಾಳೋ ಅದನ್ನ ಮಾಡೊದು ಅಂದ್ರೆ ಮಾಡಲು ಪ್ರಯತ್ನಿಸೋದು!
ನಿನ್ನೆ ಕೂಡ ಹಾಗೆ ಆಯ್ತು. ಅವಳ ಅಂದಿನ ಆಯ್ಕೆ ಈ ಪೇಪರ್ ಮರ. ಸರಿ, ಅಂದು ವಾಕ್ ಹೋದಾಗ ಎಂದಿನಂತೆ ಎಲೆಗಳನ್ನ ಕಿತ್ತು ಮನೆಗೆ ತಂದು ಅವುಗಳನ್ನು ಪೇಪರ್ ನ ಕೆಳಗೆ ಇಟ್ಟು, ಮೇಲೆ ಕ್ರಯಾನ್ಸ್ ನಿಂದ ಉಜ್ಜಿದೆವು. ಇದು ಪುಟ್ಟಿಗೆ ಬಲು ಇಷ್ಟ. ಮೊದಲೂ ಇದನ್ನ ಬಹಳ ಸರ್ತಿ ಮಾಡಿದ್ದಾಳೆ!
ಆಮೇಲೆ ಅವುಗಳನ್ನು ಕತ್ತರಿಸಿದ್ದು. ಪುಟ್ಟಿಗೆ ಇನ್ನೂ ಬೇಕಾದ ಆಕಾರಕ್ಕೆ ತಕ್ಕಂತೆ ಕತ್ತರಿಸಲು ಬರೋಲ್ಲ, ಹಾಗಾಗಿ ಆ ಕೆಲಸ ನನ್ನದಾಯ್ತು. ಆಮೇಲೆ ಅವುಗಳನ್ನು ಪೇಪರ್ ಟವೆಲ್ ನ ಖಾಲಿ ಟ್ಯೂಬಿಗೆ ಅಂಟ್ಸಿದೆವು :)

ಎಲೆಗಳ ಹಿಂದೆ ಅಕ್ಷರಗಳ ಪ್ರಿಂಟ್ ಕಾಣಿಸಿತಾ? ಪುಟ್ಟಿಗೆ ನಾನು ಬಹುತೇಕ ಯಾವಾಗಲೂ ಕೊಡುವುದು, ಒಂದು ಕಡೆ ಪ್ರಿಂಟ್ ಆಗಿರುವ ಪೇಪರನ್ನೇ, ಅದು ಅವರಪ್ಪನ ಆಫೀಸಿನಲ್ಲಿ ಬಹಳ ಸಿಗುತ್ತೆ. ಕಸದ ಬುಟ್ಟಿ ಸೇರುವ ಬದಲು ಅದು ಪುಟ್ಟಿ ಕೈಸೇರುತ್ತೆ, ಸೇರಿ ಕಲೆಯಾಗಿ ಮಾರ್ಪಡುತ್ತೆ :)

0 comments:

Post a Comment