Thursday, May 12, 2011

ಕುಂಟೆ ಬಿಲ್ಲೆ

ಶಾಲೆಯಿಂದ ಬಂದ್ಮೇಲೆ ಆಡ್ತಾಯಿದ್ದ ಕುಂಟೆ ಬಿಲ್ಲೆ ಆಟ ನೆನಪಿದ್ಯಾ? ಚಪಟ್ಟೆಯಾದ ಕಲ್ಲನ್ನು "ಬಚ್ಚ"ಅಂತ ಇದ್ದದ್ದು.....ಕಡ್ಡಿ ಹಿಡಿದು ಮಣ್ಣಿನ ನೆಲದ ಮೇಲೆ  ಗೆರೆಗಳ ಬರೆಯೋದು.. ರೋಡಿಗೆ ಟಾರ್(ಡಾಂಬಾರು) ಹಾಕಿದ ಮೇಲೆ ಸೀಮೆಸುಣ್ಣ ಅಥವಾ ಇಟ್ಟಿಗೆ ಚೂರಿನಿಂದ ಬರೀತಾ ಇದ್ವಿ.. ಆಮೇಲೆ ”ಬಚ್ಚ’ಗೆ ಮುತ್ತು ಕೊಟ್ಟು, ದೇವರನ್ನು ನೆನದು ಬಚ್ಚ ಗೆರೆಗೆ ತಾಕದಿರಲಿ ಅಂತ ಅವನ ಬೇಡಿ ಕೊಂಡು ಎಸೆದು. ಪಾದ ಗೆರೆಗೆ ತಾಕದಂತೆ ಎಚ್ಚರ ವಹಿಸಿ ಎಲ್ಲಾ ಮನೆಗಳಿಗೆ ಕುಂಟುತ್ತ ಹೋಗಿ, ಹಿಂತಿರುಗಿ ಬರುವಾಗ ಮರೆಯದೇ ಬಚ್ಚವನ್ನು ಎತ್ತಿಕೊಂಡು ಬರೋದು. ಆಮೇಲೆ ಚಾಚಿದ ಅಂಗೈ ಮೇಲೆ ಬಚ್ಚ ಇಟ್ಟುಕೊಂಡು ಕುಂಟೋದು, ಕೈಯನ್ನು ಮುಷ್ಟಿ ಮಾಡಿ ಅದರ ಮೇಲೆ ಬಚ್ಚ ಇಟ್ಟುಕೊಂಡು ಕುಂಟೋದು, ಕಣ್ಣು ಮುಚ್ಚಿಕೊಂಡು ಮನೆಗಳಿಗೆ ನಡೆದು ಕೊಂಡು ಹೋಗುತ್ತಾ "Am I right" ಅಂತ ಕೇಳೋದು. ಆ ದಿನಗಳೇ ಚೆಂದ ಅಲ್ವಾ :))

ಇವೆಲ್ಲಾ ಈಗಿನ ಮಕ್ಕಳು ಆಡ್ತಾರಾ? ಅವರಿಗೆ ಹೇಳಿ ಕೊಡಲು ದೊಡ್ಡವರಿಗೆ ಪುರುಸೊತ್ತು ಇದ್ಯಾ?

ನಮ್ಮ್ ಪುಟ್ಟಿಗಂತು ಈಗ ಇದು ನೆಚ್ಚಿನ ಆಟ. ಅವಳ ಆಟಕ್ಕೆ ಯಾವುದೇ ರೂಲ್ಸ್ ಇಲ್ಲ. ಅವಳಿನ್ನೂ ಒಂದು ಕಾಲಿನಲ್ಲಿ ನೆಗೆಯುವುದು(ಕುಂಟೋದು) ಕಲಿತಿಲ್ಲ. ಸುಮ್ಮನೆ ಎಲ್ಲಾ ಮನೆಗಳಿಗೂ ಅಂಕಿಗಳ ಎಣಿಸುತ್ತಾ ನೆಗೆಯುತ್ತಾ ಹೋಗ್ತಾಳೆ. ನೆಗೆಯುವುದರ ಜೊತೆಗೆ ’ಒಂದು ಎರಡು’ ಎಣಿಕೆಯ ಹಾಡನ್ನು ಹೇಳುತ್ತಾ ನೆಗೆಯುವುದು ರೂಢಿ ಮಾಡಿರುವೆ. ಈಗವಳಿಗೆ ಈ ಹಾಡು ಬಾಯಿಪಾಠವಾಗಿದೆ.
ಒಂದು ಎರಡು ಬಾಳೆಲೆ ಹರಡು
ಮೂರು ನಾಲ್ಕು ಅನ್ನ ಹಾಕು
ಐದು ಆರು ಬೇಳೆ ಸಾರು
ಏಳು ಎಂಟು ಪಲ್ಯಕೆ ದಂಟು
ಒಂಬತ್ತು ಹತ್ತು ಎಲೆ ಮುದಿರೆತ್ತು
ಒಂದರಿಂದ ಹತ್ತು ಹೀಗಿತ್ತು 
ಊಟದ ಆಟವು ಮುಗಿದಿತ್ತು !!
ಅಲ್ಲದೆ ಈ ಮನೆಗಳಲ್ಲಿ ಅಂಕಿಗಳನ್ನು ಕನ್ನಡದಲ್ಲಿ ಬರೆದು, ’ಒಂದನೆ’ ಮನೆಗೆ ಹೋಗಿ ನಿಲ್ಲು ಅಥ್ವಾ ’ನಾಲ್ಕನೆ’ ಮನೆಗೆ ಹೋಗು ಎಂದು ಹೇಳುತ್ತಾ ಆಟವಾಡುತ್ತಾ ಸುಲಭವಾಗಿ ಅಂಕಿಗಳನ್ನೂ ಕಲೀಬಹುದು:)
ಅಂಕಿಗಳ ಮತ್ತೊಂದು ಹಾಡು:

ಒಂದು ಎರಡು ತಿಂಡಿ ತಿನ್ನಕ್ ಹೊರಡು
ಮೂರು ನಾಲ್ಕು ನಾಲ್ಕೇ ದೋಸೆ ಸಾಕು
ಐದು ಆರು ಬಿಸಿ ಕಾಫಿ ಹೀರು
ಏಳು ಎಂಟು ಸ್ಕೂಲಿಗೆ ರಜ ಉಂಟು
ಒಂಬತ್ತು ಹತ್ತು ಬಂತು ಆಟದ ಹೊತ್ತು!!


ಒಂದು ಎರಡು ಬೇಸನ್ ಲಾಡು
ಮೂರು ನಾಲ್ಕು ಮೈಸೂರ್ ಪಾಕು
ಐದು ಆರು ಶ್ಯಾವಿಗೆ ಖೀರು(ಬಾದಾಮಿ ಖೀರು)
ಏಳು ಎಂಟು ಪೆಪ್ಪರ್‍ಮಿಂಟು(ಮಿಠಾಯಿ ಗಂಟು)
ಒಂಬತ್ತು ಹತ್ತು ಕೇಸರಿ ಬಾತು( ಗರಂ ಗರಂ ಬಿಸ್ಕತ್ತು) !!

2 comments:

ತುಂಬಾ ಚೆನ್ನಾಗಿದೆ ಅಂಕಿ ಕಲಿಸುವ ಪರಿ... ಹಾಗೆ ಪುಟ್ಟಿ ಸಹ ತುಂಬಾ ಚೆನ್ನಾಗಿ ಬಾಳೆಲೆ ಹಾಡನ್ನು ಕಲಿತಿದ್ದಾಳೆ

@ಮನಸು ವಂದನೆಗಳು! ನಿಮ್ಮ ’ಕನ್ನಡ ಕನ್ನಡಿಗ ಕರ್ನಾಟಕ’ ಬ್ಲಾಗ್ ನೋಡಿ ಬಹಳ ಖುಶಿ ಆಯ್ತು:)

Post a Comment