Wednesday, October 13, 2010

ಕನ್ನಡ ಕಲಿ ಕಂದ...

ಕನ್ನಡವಿಲ್ಲದ ಈ ಹೊರದೇಶದಲ್ಲಿ ಪುಟ್ಟಿಗೆ ಕನ್ನಡ ಕಲಿಸುವುದು ಒಂದು ಸಾಹಸವೇ ಅನ್ನೋದು ಮೊದಲಿಂದಾ ಗೊತ್ತಿದ್ದೆ ಆದರೂ ಇತ್ತೀಚೆಗೆ ಅದರ ಅರಿವಾಗುತ್ತಿದೆ. ಇಲ್ಲಿಯವರೆಗೆ ಮನೆಯಲ್ಲಿಯೇ ಇದ್ದ ಪುಟ್ಟಿ ಈಗ ವಾರಕ್ಕೆರಡು ಅರ್ಧ ದಿನ ಶಾಲೆಗೆ ಹೋಗಲು ಆರಂಭಿಸಿದ ಮೇಲೆ ಬಹಳ ಬೇಗ ’english' ಮಾತಾಡಲು ಶುರು ಮಾಡಿದ್ದಾಳೆ. ಎಷ್ಟೇ ನೆನಪು ಮಾಡಿದ್ರೂ ಅವಳು ಮೊದಲು ಮಾತಾಡೋದು ಇಂಗ್ಳೀಷಿನಲ್ಲೇ. ಅವಳ ವಯಸ್ಸಿನ ಮಕ್ಕಳೇ ನಮ್ಮ ಕನ್ನಡ ಮಾತಾಡುವ ಹಾಗೆ ಆದ್ರೆ ಅವಳಿಗೂ ಮಾತಾಡಲು ಉತ್ಸಾಹ ಬರುತ್ತೆ ಅನಿಸಿ ಕ್ಲಾಸ್ ಶುರು ಮಾಡೋಣ ಅಂದುಕೊಂಡೆ.
ಕ್ಲಾಸ್ ಶುರು ಮಾಡೋದೇನೋ ಸರಿ. ಆದ್ರೆ ಹೇಳಿ ಕೊಡೋದೇನು? ಹೇಗೆ? ಅಂತ ಬಹಳಷ್ಟು ತಲೆ ಕೆಡಿಸಿಕೊಂಡೆ. ನಾನೇ ಕನ್ನಡ ಸರಿಯಾಗಿ ಕಲಿತಿಲ್ಲ, ಇನ್ನೂ ಈ ಪುಟ್ಟ ಮಕ್ಕಳಿಗೆ ಹೇಳಿ ಕೊಡೋದು ಹೇಗಪ್ಪ... ಸರಿ, ಎಂದಿನಂತೆ 'ಗೂಗಲ್ ದೇವರ’ ಮೊರೆ ಹೋದೆ. 


ಆಗ ನಂಗೆ ಸಿಕ್ಕ ಮೊದಲ ತಾಣ ಕನ್ನಡ ಕಲಿ. ಅಲ್ಲಿಯ ಶ್ರೀ. ವಿಷ್ವೇಶ್ವರ ಅವರನ್ನು ಸಹಾಯಕ್ಕಾಗಿ ಸಂಪರ್ಕಿಸಿದಾಗ ಅವರ  ಉತ್ತರ "ಭಾಷೆ ಕಲಿಸ/ಯಲು ತಕ್ಕ ವಾತಾವರಣ ಅವಶ್ಯ. ಕನ್ನಡ ಮಾತಾಡುವವರ ಮಧ್ಯೆ ಇದ್ದರೆ, ಕನ್ನಡ ಕಿವಿಯ ಮೇಲೆ ಸದಾ ಬಿಳುತ್ತಿದ್ದರೆ ಅದು ತಾನಾಗೆ ಬರುತ್ತದೆ. ಈ ದಿಶೆಯಲ್ಲಿ, ಮನೆಯಲ್ಲಿ ಕನ್ನಡ ಮಾತಾಡುತ್ತ ಸರಿಯಾದುದನ್ನೆ ಮಾಡುತ್ತಿದ್ದೀರಿ. ಮಕ್ಕಳು ಇಲ್ಲಿ ಶಾಲೆಗೆ ಹೋಗುವ ವರೆಗೆ ಯಾವ ಸಂಕೋಚವೂ ಇಲ್ಲದೆ ಸ್ಪಷ್ಟವಾಗಿ ನಿಮ್ಮಡನೆ ಕನ್ನಡದಲ್ಲೆ ಮಾತಾಡುತ್ತಾರೆ. ಶಾಲೆಯ ವಾತಾವರಣದಲ್ಲಿ ತಾವೊಬ್ಬರೆ ಕನ್ನಡ ಮಾತಾಡುವುದನ್ನು ಕಂಡು ಕನ್ನಡ ಮಾತಾಡಲು ಹಿಂದೇಟು ಹೊಡೆಯುತ್ತಾರೆ. ನೀವು ಕನ್ನಡದಲ್ಲಿ ಪ್ರಶ್ನಿಸಿದರೂ ಉತ್ತರ ಇಂಗ್ಲೀಷಿನಲ್ಲೆ ಹೊರಬರುತ್ತದೆ. ಇದಕ್ಕೆ ಧೈರ್ಯಗುಂದದೆ ಮನೆಯಲ್ಲಿ ಕನ್ನಡ ಮಾತಾಡುವದನ್ನು ಮುಂದುವರೆಸಬೇಕು. ಸಮಾಧಾನದಿಂದ ತಿದ್ದುತ್ತ, ಅವರು ಹೇಳಿದ್ದನ್ನೆ  ಕನ್ನಡದಲ್ಲಿ ಹೇಳಿ, ಮಕ್ಕಳಿಂದ ಹೇಳಿಸಬೇಕು. ಕನ್ನಡ ಮಾತಾಡುವದು fun ಅನಿಸಬೇಕು; ಹೋರಾಟ ಬೇಡ. ಬೇರೆ ಕನ್ನಡ ಮಕ್ಕಳೊಡನೆ ಬೆರೆಯಬೇಕು. ಕನ್ನಡ ಕಲಿ ಈ ನಿಟ್ಟಿನಲ್ಲಿ ಬಹಳ ಅವಶ್ಯ. ಬೇರೆ ಕನ್ನಡ ಮಕ್ಕಳು ಕನ್ನಡ ಮಾತಾಡುವದನ್ನು ನೋಡಿ, ಅದು 'ಅಸಹಜ' ಎಂಬ ಭಾವನೆ ಬಾರದು. " ಹೀಗಿತ್ತು. 


ಅಂತೆಯೇ Kannada koota of northern california ದ ಶ್ರೀಮತಿ. ಸಂಧ್ಯಾ ಅವರನ್ನು ಸಂಪರ್ಕಿಸಿದಾಗ ಅವರು ಹೀಗೆಂದರು "ಮಕ್ಕಳಿಗೆ ಈ ಕನ್ನಡವಿಲ್ಲದ ಪರಿಸರದಲ್ಲಿ ಕನ್ನಡ ಕಲಿಸುವುದು ಒಂದು ಸಾಹಸವೇ ಸರಿ.  ಟೀ.ವಿ. ಯಲ್ಲಿ ಆಕರ್ಷಕ ಇಂಗ್ಲಿಷ್ ಕಾರ್ಯಕ್ರಮಗಳನ್ನು ನೋಡುವುದರಿಂದ ಮತ್ತು ಉಳಿದ ಮಕ್ಕಳು (ಕನ್ನಡದವರೂ) ಬರಿ ಇಂಗ್ಲಿಷಿನಲ್ಲೇ   ಮಾತನಾಡುವುದರಿಂದ ಕನ್ನಡ ಬೇಗ ಮರೆತು ಹೋಗುತ್ತದೆ. ನೀವು ಮಕ್ಕಳಿಗೆ ಕಲಿಸುವುದಾದರೆ, ನಾನು ಸಹಾಯ ಮಾಡುತ್ತೇನೆ""


ಹಾಗೆಯೇ ಕಾವೇರಿ ಕನ್ನಡ ಕೂಟದ ಶ್ರೀ ಫಣೀಂದ್ರ ಅವರು ನನ್ನನ್ನ ಅವರ ’ಕನ್ನಡ ಕಲಿಯೋಣ’ ಗುಂಪಿಗೆ ಸೇರಿಸಿಕೊಂಡರು. 


ಇವರೆಲ್ಲರ ಬೆಂಬಲ ಮತ್ತು ಹಿರಿಯರ ಆಶೀರ್ವಾದ ’ಕನ್ನಡ ಕಲಿ ಕಂದ’ ಅನ್ನೋ ಪುಟ್ಟ ಕಾರ್ಯಕ್ರಮವನ್ನ ಇನ್ನ್ಮೇಲೆ ನಮ್ಮ ಮನೆಯಲ್ಲಿ ಶುರು ಮಾಡಲು ನಿರ್ಧರಿಸಿರುವೆ. ಅದರ ಆರಂಭ ನವರಾತ್ರಿಯ ಈ ಶುಭ ಘಳಿಗೆಯಲ್ಲಿ.  
 

ಸದ್ಯಕ್ಕೆ ನಮ್ಮ ಗಮನ ಮಾತಿನ ಕಡೆಗೆ ಹೆಚ್ಚು, ಮಕ್ಕಳಿಗೆ ಕಥೆ ಹೇಳುತ್ತಾ, ಅವರ ಕೈಯಲ್ಲೇ ಹೇಳಿಸೋದು.. ಅಲ್ಲದೆ ’ವಾರಕ್ಕೊಂದು ಅಕ್ಷರ’ ಕಲಿಸೋ ಯೋಜನೆ ಅದು ಆಟದ ಜೊತೆಗೆ ಪಾಠ ಅನ್ನೋ ರೀತಿಯಲ್ಲಿ. ಇದಕ್ಕೆ ನಾನ್ಗೆ ಸ್ಪೂರ್ತಿ ಈ ತಾಣಗಳು ’Kids matter' ಮತ್ತು ’No time for flash cards'. ಇದನ್ನ ನಮ್ಮ ಕನ್ನಡ ಅಕ್ಷರಗಳಿಗೆ ಅಳವಡಿಸೋದು ಹೇಗೆ ಅನ್ನೋದು ಇನ್ನೊ ತಿಳಿದಿಲ್ಲಾ... ನೋಡೋಣ ಏನ್ ಮಾಡ್ತೀವಿ ಅಂತ... ಸದ್ಯಕ್ಕೆ ’ಅ’ ಅಕ್ಷರದ printout ಗೆ ಅಕ್ಕಿ ಕಾಳನ್ನು ಅಂಟಿಸುವುದು. ತಿನ್ನಲು ’ಅನಾನಸ್’, ’ಅನ್ನ’, ’ಅ’ ಆಕಾರದ ದೋಸೆ... ಏನಂತೀರಾ? 

ಇದಕ್ಕೆ ನಿಮ್ಮೆಲ್ಲರ ಸಹಾಯನೂ ಬೇಕು. ನಿಮಗೆ ತಿಳಿದ ಹೊಸ ಕಲಿಕಾ ವಿಧಾನಗಳನ್ನ ಹಂಚಿಕೊಳ್ಳಿ. ನಮ್ಮ ಪುಟಾಣಿಗಳಿಗೆ ಮತ್ತು ನಮಗೆ ನಿಮ್ಮ ಪ್ರೋತ್ಸಾಹ ಇರಲಿ. 

6 comments:

ಪುಟ್ಟಿಯ ಹೆಸರೇ ಸಾಹಿತ್ಯ ಅಲ್ವಾ ,ಬೇಗ ಕಲೀತಾಳೆ ಬಿಡಿ!

ನಿಮ್ಮ ಕೆಲಸ ಸಕ್ಕತ್ ಚ್ಯಾಲೆಂಜಿಗ್ ಆಗಿದೆ.

This may be useful :

http://silckannada.blogspot.com/

ಸಂದೀಪ್ ಅವರೆ,
ಮಕ್ಕಳು ಸ್ಪಾಂಜ್ ಇದ್ದಂತೆ, ಎಲ್ಲವನ್ನೂ ಬೇಗ ಕಲೀತಾರೆ! ನಮ್ಮ ಈ ಚ್ಯಾಲೆಂಜಿಂಗ್ ಕೆಲಸಕ್ಕೆ ನಿಮ್ಮೆಲ್ಲರ ಸಹಾಯ ಅವಶ್ಯಕ.
ಆ ಬ್ಲಾಗ್ ಬಹಳ ಹಿಂದೆ ನೋಡಿದ್ದೆ, ಅವರು ನಡೆಸುತ್ತಿರುವ 'Preschool' ಕೂಡ ಚೆನ್ನಾಗಿದೆ, ಮರೆತಿದ್ದೆ ನೆನಪಿಸಿದಕ್ಕೆ ವಂದನೆಗಳು!!
ಬರ್ತಾಯಿರಿ...

ನಾನು ಇರುವುದು ಇಂಗ್ಲಂಡಿನಲ್ಲಿ. ಮಗ ಹುಟ್ಟಿದ್ದು ಕೂಡ ಇಲ್ಲಿಯೇ. ನನ್ನ ಮಗನಿಗೆ ಇನ್ನು ಎರಡು ತಿಂಗಳಲ್ಲಿ ನಾಕು ಮುಗಿಸಿ ಐದನೇ ವಯಸ್ಸಿಗೆ ಕಾಲಿಡುತ್ತಾನೆ. ಆತ ತನ್ನ ಎರಡನೇ ವಯಸ್ಸಿನಿಂದನೇ ವಾರಕ್ಕೆ ಐದು ದಿನ ನರ್ಸರಿಗೆ ಹೋಗುತ್ತಿದ್ದ, ಈಗ ವಾರಕ್ಕೆ ಐದು ದಿನ ಶಾಲಗೆ ಹೋಗುತ್ತಾನೆ. ಇಷ್ಟೆಲ್ಲ ಆದರೂ (ನೀವು ಕಾರಣ ಕೊಟ್ಟಂತೆ), ಆತ ಮನೆಗೆ ಬರುತ್ತಿದ್ದಂತೆಯೇ ಕನ್ನಡದಲ್ಲಿ ಮಾತಾಡಲು ಶುರು ಮಾಡುತ್ತಾನೆ. ಏಕೆಂದರೆ ನಾವು ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ಮಗು ಹುಟ್ಟಿದಾಗಿನಿಂದ ಕನ್ನಡದಲ್ಲೇ ಮಾತಾಡುತ್ತೇವೆ. ಗೂಗಲ್ ಶೋಧಿಬೇಕಿಲ್ಲ, ’ಕನ್ನಡ ಕಲಿ’ ಮನೆಯಲ್ಲೇ ಇರುವಾಗ ಯಾವ ಶಾಲೆಗೂ ಮೌಖಿಕ ಕನ್ನಡ ಕಲಿಸಲು ಹೋಗಬೇಕಾಗಿಲ್ಲ ಎಂದು ಧೈರ್ಯವಾಗಿ ಹೇಳಬಲ್ಲೆ.

- ಕೇಶವ

ನಮಸ್ಕಾರ ಕೇಶವಕುಲಕರ್ಣಿ ಅವರೆ,

ನಿಮ್ಮ ಕಮೆಂಟ್ ಓದಿ ಸಂತೋಷವಾಯ್ತು, ಜೊತೆಗೆ ನನ್ನ ಪುಟ್ಟಿಯೂ ಕನ್ನಡ ಮಾತಾಡಬಹುದೇನೋ ಅನ್ನುವ ಆಸೆ ಮೂಡಿದೆ:)
ನಾನಿಲ್ಲಿ ನೋಡಿರುವ ಬಹುತೇಕ ಎಲ್ಲಾ ಮಕ್ಕಳಿಗೂ ಅವರವರ ಮಾತೃ ಭಾಷೆ ಅರ್ಥವಾಗುತ್ತಾದರೂ ಮಕ್ಕಳ ಉತ್ತರ ಮಾತ್ರ ಇಂಗ್ಳೀಷಿನಲ್ಲೇ! ನಾವೂ ಕೂಡ ಮನೆಯಲ್ಲಿ ಕನ್ನಡವನ್ನೇ ಮಾತಾಡೋದು, ಮನೆಯಲ್ಲಿ ಕೇಬಲ್ ಹಾಕಿಸಿಲ್ಲ, ಹಾಗಾಗಿ ಅವಳು ಟಿ.ವಿ ಯಲ್ಲಿ ನೋಡುವುದೂ ಕನ್ನಡ ಹಾಡುಗಳು.. ಬಹುತೇಕ ಎಲ್ಲಾ ಮಕ್ಕಳ ಹಾಡುಗಳು (ಚಲನಚಿತ್ರದ್ದು) ಅವಳಿಗೆ ಕಂಠಪಾಠವಾಗಿದೆ. ಯೂಟ್ಯೂಬಿನಲ್ಲಿರುವ ಶಿಶಿಗೀತೆಗಳು ಇತ್ಯಾದಿ ಏನೆ ಹೇಳಿ ಕೊಟ್ಟರೂ ಗಿಣಿಮರಿಯಂತೆ ಕಲಿತು ಹೇಳುತ್ತಾಳೆ. ಆದ್ರೆ ಇತ್ತೀಚೆಗೆ ಅಂದ್ರೆ ನರ್ಸರಿ ಶುರುವಾದಾಗಿಂದ ಇಂಗ್ಳೀಶ್ ಮಾತಾಡಲು ಶುರು ಮಾಡಿದ್ದಾಳೆ. ಅದು ಅವಳಿಗೆ ಹೊಸ ಭಾಷೆಯಾದ್ದರಿಂದ ಕಲಿಯುತ್ತಿದ್ದಾಳೆ ಜೊತೆಗೆ ಕಲಿತದ್ದನ್ನು ನಮಗೆ ತೋರಿಸಲೋ ಎಂಬಂತೆ ನಮ್ಮೊಡನೆಯೂ ಮಾತಾಡುತ್ತಾಳೆ. ’ಮನೆಯಲ್ಲಿ ಕನ್ನಡ’ ’ಸ್ಕೂಲಿನಲ್ಲಿ ಮಾತ್ರ ಇಂಗ್ಳೀಷ್’ ಅನ್ನುವ ನಮ್ಮ ಮಾತು ಅವಳಿಗೆ ಇನ್ನೊ ಮನದಟ್ಟಾಗಿಲ್ಲ. ಇವೆಲ್ಲದರ ಜೊತೆಗೆ ಇಲ್ಲಿರುವ ಇತರೆ ಕನ್ನಡ ಪುಟಾಣಿಗಳ ಜೊತೆ ಹೆಚ್ಚಿನ ಒಡನಾಟಕ್ಕಾಗಿ ಈ ನಮ್ಮ ಹೊಸ ಕಾರ್ಯಕ್ರಮ!!
ವಂದನೆಗಳು.

-ರೂಪ

ಕನ್ನಡವೇ ಮಾತೃಭಾಷೆ ಆಗಿದ್ರು ಕರ್ನಾಟಕದಲ್ಲೇ ಕನ್ನಡವನ್ನ ಮಾತಾಡದ ಈ ಕಾಲದಲ್ಲಿ,ವಿದೇಶದಲ್ಲಿದ್ಕೊಂಡು ಕನ್ನಡವನ್ನ ಉಳಿಸಿ ಬೆಳಸುವ ನಿಮ್ಮ ಉತ್ಸಾಹ ಹಾಗು ಪ್ರಯತ್ನ ನನಗೆ ತುಂಬ ಮೆಚ್ಚುಗೆ ಆಯಿತು.

Post a Comment