Saturday, June 06, 2009

ನಾಲಗೆ ತಿರುಚು (ಟಂಗ್ ಟ್ವಿಸ್ಟರ್) !

ಮೊನ್ನೆ ಗೆಳೆಯರು ಬಂದಿದ್ರು. ಊಟದ ನಂತರ ನಮ್ಮ್ ಪುಟ್ಟಿ ಮಲಗಿ ಬಿಟ್ಟಿದ್ರಿಂದ ಬಂದಿದ್ದ ಗೆಳೆಯರ ಮಗಳೊಂದಿಗೆ ನಾನೇ ಆಡಬೇಕಾಯ್ತು. ಅವಳೂ ಅದೂ ಇದೂ ಹಾಡುಗಳನ್ನು ಹೇಳುತ್ತಾ ಕುಣಿಯುತ್ತಾ ಕೊನೆಗೆ ಇದನ್ನ ಫಾಸ್ಟ್ ಆಗಿ ಹೇಳಿ ನೋಡೋಣ ಅಂತ " ಬೆಟ್ಟಿ ಬಾಟ್ ಅ ಬಿಟ್ ಆಫ್ ಬಟರ್, ಬಟ್ ದ ಬಟರ್ ವಾಸ್ ಬಿಟ್ಟರ್" ನಾಲಗೆ ತಿರುಚೊಂದು (ಟಂಗ್ ಟ್ವಿಸ್ಟರ್) ಹೇಳಿದ್ಲು. ಅದನ್ನ ಹೇಳಲೋಗಿ ಅವಳೊಂದಿಗೆ ನಾವೂ ಸ್ವಲ್ಪ ಬ್ ಬ್ಬ್ ಬ್ ಅಂತೆಲ್ಲ ಬೊಬ್ಬೆ ಹಾಕಿ ನಕ್ಕಿದ್ದು ಆಯ್ತು.

ಅವರೆಲ್ಲ ಮನೆ ಸೇರಿದ ಮೇಲೆ ನನಗೆ ನಮ್ಮ ಕನ್ನಡದ ನಾಲಗೆ ತಿರುಚುಗಳ ನೆನಪಾಯಿತು. ಕನ್ನಡದ ಕೆಲವು ನಾಲಗೆ ತಿರಚುಗಳು ಮಾತ್ರ ನನಗೆ ಗೊತ್ತಿದ್ದವು. ಸರಿ ಅಮ್ಮನಿಗೆ ಒಂದು ಫೋನ್ ಮಾಡಿ ಅವರಿಂದ ಇನ್ನೊಂದಿಷ್ಟನ್ನ ಕಲಿತೆ. ಅವುಗಳ ಪಟ್ಟಿ ಇಲ್ಲಿದೆ.



"ಕಪ್ಪು ಕುಂಕುಮ, ಕೆಂಪು ಕುಂಕುಮ"

"ಕಾಗೆ ಪುಕ್ಕ, ಗುಬ್ಬಿ ಪುಕ್ಕ"

ಮೇಲಿನ ಸಾಲುಗಳು ನೋಡಲು ಸರಳವಾಗಿ ಕಂಡರೂ, ಅದರ ಒಳಗುಟ್ಟು ಗೊತ್ತಾಗೋದು ಅದನ್ನ ನಾವು ವೇಗವಾಗಿ ಹೇಳಲು ಯತ್ನಿಸಿದಾಗ ಮಾತ್ರ.

"ಅವಳರಳಳೆದ ಕೊಳಗದಲಿ ಇವಳರಳಳೆದಳು'



ಅರಳೀಮರಬುಡ ತಳಿರೊಡೆದೆರಡೆಲೆ ಮತ್ತೆರಡೆಲೆ ಹೆಚ್ಚಾಯ್ತು



"ಆಲದಮರಬುಡತಳಿರೊಡೆದೆರೆಡೆಲೆಯಾಯಿತು"



"ತರಿಕೆರೆಕೆರೆ ಏರಿ ಮೇಲೆ ಮೂರು ಕರಿಕುರಿಮರಿ ಮೇಯ್ತಿತ್ತು" ಇದನ್ನ ಹೇಳೋಕೆ ನಾವು ಕಷ್ಟ ಪಡುವಾಗ ’ದೇವರ ದುಡ್ಡ’ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಮಣ್ಯಂ ಅವರು ಎಷ್ಟ್ ಚೆನ್ನಾಗಿ ಹಾಡಿದ್ದಾರೆ ಕೇಳಿ.









"ಯಾಕ್ ಯಕ್ ಚಿಕ್ಕಪ್ಪ ಕಣ್ ಕಣ್ ಬಿಡ್ತಿಯ" ಇದನ್ನು ವೇಗವಾಗಿ ಹೇಳುತ್ತಾ ಹೋದರೆ.. ಚಿಕ್ಕಪ್ಪ.. ಚಿಪ್ಪಕ್ಕ ಆಗಿರುತ್ತಾನೆ..



"ಸಂಪಂಗಪ್ಪನ ಮಗ ಮರಿಸಂಪಂಗಪ್ಪ" ಇದರಲ್ಲೇ ಸ್ವಲ್ಪ ಭಿನ್ನವಾದದ್ದು ಇನ್ನೆರಡು

"ಸಂಪಂಗಪ್ಪನ ಮಗ ಮರಿಸಂಪಂಗಪ್ಪ. ಮರಿಸಂಪಂಗಪ್ಪನ ಅಪ್ಪ ಸಂಪಂಗಪ್ಪ"

ಸಂಪಿಗೆ ಕೆಂಪುಗಂಗಪ್ಪನ ಮಗ ಮರಿಕೆಂಪುಗಂಗಪ್ಪಅನ್ನೋದನ್ನ ಬೇಗಬೇಗ ಹೇಳುತ್ತಾ ಹೋದರೆ ಗಂಗಪ್ಪ ಗಂಗಮ್ಮನಾಗಿ ಬದಲಾಗುತ್ತಾನೆ.



"ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ ಬಂಕಾಪುರದ ಕೆಂಪು ಕುಂಕುಮ"

ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಿಗಿ ತಂದಾನ'

"ತಾತಪ್ಪ ತುಂಬಿದ ತುಪ್ಪದ ತಂಬಿಗೆ ತಂದಾನ"

"ಕುರುಡು ಕುದುರೆಗೆ ಹುರಿದ ಹುರ್ಕಡ್ಲಿ"



ತಮಿಳಿನಲ್ಲೂ ಇಂಥದೊಂದು ಇದೆಯೆಂದು ಸ್ನೇಹಿತರು ಹೇಳಿದ್ರು: ಇದು ಯಾರ್‍ ತೆಚ್ಚ ಚಟ್ಟೆ, ಎಂಗ ತಾತ ತೆಚ್ಚ ಚಟ್ಟೆ (ಇದು ಯಾರು ಹೊಲಿದ ಅಂಗಿ, ನಮ್ಮ ತಾತ ಹೊಲಿದ ಅಂಗಿ) ಇದನ್ನು ವೇಗವಾಗಿ ಹೇಳುತ್ತಿದ್ದರೆ ಎಲ್ಲೋ ಒಂದು ಕಡೆ ತಾತ ಚತ್ತ’ (ತಾತ ಸತ್ತ) ಅಂತ ಆಗಿಬಿಡುತ್ತೆ.



ಮೇಲಿನ ಸಾಲುಗಳಲ್ಲಿ ಯಾವುದಾದರೂ ಒಂದನ್ನು ವೇಗವಾಗಿ ಹೇಳಲು ಪ್ರಯತ್ನಿಸಿ. ಎರಡು ಅಥವಾ ಮೂರು ಸಾರಿ ವೇಗವಾಗಿ ಹೇಳುವಷ್ಟರಲ್ಲಿ ನಿಮ್ಮ ನಾಲಗೆ ಹೇಗೆ ತೊಡರಿಕೊಳ್ಳುತ್ತೆ ಅಂತ ನೀವೇ ಅನುಭವಿಸಿ, ಆನಂದಿಸಿ! ಈ ನಾಲಗೆ ತಿರುಚುಗಳ ಮೋಜಿನ ಆಟ ಹೇಗಿತ್ತು ಅಂತ ತಪ್ಪದೇ ತಿಳಿಸಿ ಆಯ್ತಾ ;) ಹಾಗೇನೆ ನಿಮಗೆ ಇನ್ನೂ ಹಲವಾರು ಕನ್ನಡದ ನಾಲಗೆ ತಿರುಚುಗಳು ತಿಳಿದಿದ್ದಲ್ಲಿ, ದಯವಿಟ್ಟು ಹಂಚಿಕೊಳ್ಳುತ್ತೀರಾ?



23 comments:

ರೂಪಾರವರೆ...

ತುಂಬಾ ಚೆನ್ನಾಗಿದೆ....
ನಾವು ಸಣ್ಣವರಿದ್ದಾಗ ಇಂಥಹ
ಮಾತುಗಳನ್ನು ಆಡುತ್ತಿದ್ದೆವು...
ಈಗ ನೆನಪಾಗುತ್ತಿಲ್ಲ...

ಹಿಂದಿಯಲ್ಲಿ ಒಂದಿದೆ...
"ಕಚ್ಚಾ ಪಾಪಡ್.., ಪಕ್ಕಾ ಪಾಪಡ್.."

ಇದನ್ನು ಜೋರಾಗಿ ಹೇಳಲಾಗುವದಿಲ್ಲ....

ಅಭಿನಂದನೆಗಳು...

ರೂಪश्री ಮೇಡಂ,
ಚನ್ನಾಗಿದೆ ಎರಡೆಳೆಎಳೆದೆಲೆನಾಲಿಗೆ ತಿರುಚು...
Good Bllod Bad Blood ನಮಗೆ ಬಾಲ್ಯದಲ್ಲಿ ಹೆಚ್ಚಾಗಿ ಪೀಡಿಸಿದ್ದು. ಇನ್ನು- ಕಚ್ಚಾ ಪಾಪಡ್ ಪಕ್ಕಾ ಪಾಪಡ್- ಸಹಾ ಇನ್ನೋದು ಒಳ್ಳೆಯ ಟ್ವಿಸ್ಟರ್
She sells sea shells on the sea shore...
I put a bet with bhat but bhat lost best it made bhat to put no more bet
ಒಳ್ಲೆಯ ಪೋಸ್ಟ್ for a change...

ಚೆನ್ನಗಿದೆ ನಾಲಗೆ ತಿರುಚುವ ಸಾಲುಗಳ ಒಳ್ಳೇ ಕಲೆಕ್ಷನ... ಹಿಂದೀ ಫಿಲಂನಲ್ಲಿ ಒಂದು ಹಾಡು ಬಂದಿತ್ತು, ಚಂದಾ ಚಮ್ಕೆ... ಚಾಂದೀ.. ಚೋರ.. ಹೀಗೆ ಸರಿಯಾಗಿ ನೆನಪಿಲ್ಲ..

kannada tongue twister gaLa thumbaa oLLe collection... thanks for such a nice post... idannu Odi nanna baalyada dinagala nenapaytu

ಸಕತ್ತಾಗಿವೆ,
ನಾಲಿಗೆ ಹೊರಳದೆ ಒದ್ದಾಡಿದ್ದಾಯ್ತು.ಊಳ್ಳೆ ಸಂಗ್ರಹವನ್ನೇ ಕೊಟ್ಟಿರುವಿರಿ.

ನಾವು ಚಿಕ್ಕವರಾಗಿದ್ದಾಗ "ಸಂಪಂಗಪ್ಪನ ಮಗ ಮರಿಸಂಪಂಗಪ್ಪ" ಹಾಗು
"ಕುರುಗೋಡು, ಕುಡುಗೋಲು, ಗುಡಾರ " ಅನ್ನೋ ನಾಲಗೆ ತಿರುಚುಗಳನ್ನೂ (ಟಂಗ್ ಟ್ವಿಸ್ಟರ್) ಹೇಳಲು ಪ್ರಯತ್ನಿಸುತ್ತಿದ್ದೆವು..
ನಿನಪುಗಳನ್ನು ನೆನಪಿಸುವ ಲೇಖನ ಚನ್ನಾಗಿದೆ

ರೂಪ,

ನಾಲಿಗೆ ತಿರುಚುವ ಆಟ ನನಗೆ ತುಂಬಾ ಇಷ್ಟ. ಇತ್ತೀಚೆಗೆ ರೇಡಿಯೋನಲ್ಲೂ ಇದೇ ತರ ಮಾತನಾಡಿಸುತ್ತಾರೆ...ನಾವು ಗೆಳೆಯರು ಹೀಗೆ ಆಡುತ್ತಿದ್ದುದ್ದು ನೆನಪಾಯಿತು...

Hi Roopashree,

"ನಾಲಗೆ ತಿರುಚು (ಟಂಗ್ ಟ್ವಿಸ್ಟರ್)" tumba chennagide. Yeshtondu aatagalu ee busy life nali marthe hogirthivi allava...riddles-tongue twisters ella yen maja barta ittu aata aadakke. Maybe once my son also grows up i will recall all those games :)!
Here's 1 from me :Bankapurada kempu kunkuma, bankapurada kempu kunkuma, bankapurada kempu kunkuma....

Rashmi

ವಾಹ್,,, ಸಕತ್ ಆಗಿ ಇದೆ ಇ article,,,, ನಾನು ಮೊನ್ನೆ ತಾನೆ, ಯಾವುದೊ ರೇಡಿಯೋ ಶೋ ನಲ್ಲಿ ಇದನ್ನ ಕೇಳ್ತಾ ಇರ್ಬೇಕಾದ್ರೆ ಬೇರೆ ಯಾವುದಾದರು ಕಷ್ಟದ combination ಸಿಗುತ್ತೇನೋ ಅಂತ ಯೋಚನೆ ಮಾಡ್ತಾ ಇದ್ದೆ.... ನೀವು ಎಸ್ತೊಂದ್ ಪದಗಳನ್ನ ಹಾಕಿದ್ದೀರ.....ಗುಡ್,
ಸದ್ಯಕ್ಕೆ ಗೊತ್ತಿರುವುದೆಲ್ಲ ನೀವೇ ಹೇಳಿಬಿತ್ ಇದ್ದೀರಾ.. ಬೇರೆ ಯಾವುದಾದರು ನೆನಪಿಗೆ ಬಂದರೆ ಹೇಳುತ್ತೇನೆ....

ಗುರು

ಪ್ರಕಾಶ್ ಅವರೆ,
ಓಹ್ ಇದನ್ನ ಮರೆತು ಬಿಟ್ಟಿದ್ದೆ.. ವೇಗವಾಗಿ ಹೇಳಲೋಗಿ ಇದು ’ಪಾಚಡ” ಆಗ್ತಾಯಿತ್ತು!
ನೆನಪಿಸಿದಕ್ಕೆ ಧನ್ಯವಾದಗಳು...

ಜಲನಯನ ಅವರೆ,
ಥ್ಯಾಂಕ್ಸ್ ಇನ್ನಷ್ಟು ತಿರುಚುಗಳನ್ನ ಸೇರಿಸಿದಕ್ಕೆ.. blood, shells ಗೊತ್ತಿತ್ತಾದರೂ bhat ನನಗೆ ಹೊಸತು!

ಪ್ರಭು ಅವರೆ,
ಥ್ಯಾಂಕ್ಸ್ ತಿರುಚೊಂದನ್ನು ಕೊಟ್ಟಿದಕ್ಕೆ.. ನೀವು ಹೇಳ್ತಾಯಿರೋ ಹಾಡು ಇದು
"ಚಂದು ಕಿ ಚಾಚಾನೆ
ಚಂದು ಕಿ ಚಾಚಿ ಕೊ
ಚಾಂದಿ ಕೆ ಚಮಚೆ ಸೆ
ಚಟನಿ ಚಟಾಯಿ"
ಈ dialogues 'ಕಭಿ ಖುಶಿ ಕಭಿ ಘಂ' ಚಿತ್ರದಲ್ಲಿ ಕೂಡಾಯಿದೆ

ವಿಜಯ್ ಅವರೆ,
ನನ್ನೀ ಪೋಸ್ಟ್ ನಿಮಗೆ ಬಾಲ್ಯದ ನೆನಪು ತರಿಸಿತು ಅಂತ ತಿಳಿದು ಖುಶಿ ಆಯ್ತು. ಬರ್ತಾಯಿರಿ...

ಮಲ್ಲಿಕಾರ್ಜುನ ಅವರೆ,
ನಮ್ಮೊಂದಿಗೆ ನೀವೂ ನಾಲಿಗೆಗೆ ಕಸರತ್ತು ಕೊಟ್ಟಿದ್ದು ತಿಳಿಯಿತು. ಥ್ಯಾಂಕ್ಸ್ ಪೋಸ್ಟ್ ಮೆಚ್ಚಿದಕ್ಕೆ!

ಶಿವಪ್ರಕಾಶ್ ಅವರೆ,
ನಿಮ್ಮ ಚಿಕ್ಕಂದಿನ ನೆನಪುಗಳನ್ನ ನೆನೆಯುತ್ತಾ ನಮ್ಮೊಂದಿಗೆ ಕೆಲವು ತಿರುಚುಗಲನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು.

ಶಿವು,
ಓಹೋ ರೇಡಿಯೋದವರು ಹೀಗೆ ಮಾತಾಡುತ್ತಾರೋ.. ನಮ್ಗೆಲ್ಲಿ ಸಾರ್ ಆ ಭಾಗ್ಯ ಇಲ್ಲಿ? :(
ಗೆಳೆಯರೊಂದಿಗೆ ಈಗಲೂ ಸಮಯ ಸಿಕ್ಕಾಗ ಆಡಿ ಮಜ ಮಾಡಿ!

ರಶ್ಮಿ ಅವರೆ,
ಹೌದು ನಿಮ್ಮ ಮಾತು ನಿಜ ಈಗಿನ ಮಕ್ಕಳು ಕಂಪ್ಯೂಟರ್ ಆಟಗಳಲ್ಲೇ ಮುಳುಗಿರುತ್ತಾರೆ.. ಅದಕ್ಕೆ ನಾವೂ ಕಾರಣ ಅನಿಸುತ್ತೆ..
ನಿಮ್ಮ ಮಗನೊಂದಿಗೆ ನೀವೂ ಆಡಿ ನಮ್ಮೊಂದಿಗೆ ಆ ಆನಂದವನ್ನ ಹಂಚಿಕೊಳ್ಳಿ:)

ಗುರು ಆವ್ರೆ,
ನೀವು ಕೊಟ್ಟಿರೋ quizಗೆ ನಾವೆಲ್ಲಾ ಉತ್ತರ ಹುಡುಕುವಷ್ಟರಲ್ಲಿ ಸುಲಭವಾಗಿ ಬಿಟ್ಟಿರುತ್ತೇನೋ!
ಥ್ಯಾಂಕ್ಸ್..

ಇಗೋ ಇಲ್ಲಿ ಇನ್ನೊಂದು. ಒಬ್ಬರೇ ಇದ್ದಾಗ ಪ್ರಯತ್ನಿಸಿ!(ಇಲ್ಲಿ 'ಹಿಡಿ'ನಾಮ ಪದ=ಪೊರಕೆ)

ಕುಂಟ್ ಹಿಡಿ ಮೋಟ್ ಹಿಡಿ ಯರ್ಡ್ ತರ್ದ್ ಯರ್ಡ್ ಹಿಡಿ.

ಈಗೋ ಮತ್ತೊಂದು.

ಶ್ರೀಗಂಧದ ಕೊರಡು ತಳೆದು ತೊಳೆದು ಕೊರಡೆರಡಾಯಿತು.

ಹ್ಹೆ ಹ್ಹೆ... ಸಖತ್ತಾಗಿತ್ತು ರೂಪಶ್ರೀ... ಕೆಲವು ಕನ್ನಡ ನಾಲಗೆ ತಿರುಚುಗಳನ್ನು ಹೇಳಲು ಹೋಗಿ ಸಿಕ್ಕಾಪಟ್ಟೆ ನಕ್ಕಿದ್ದೂ ಆಯಿತು.. ಒಳ್ಳೇ ಸಂಗ್ರಹ.. ಸಖತ್ತಾಗಿದೆ ನಿಮ್ಮ ಬರವಣಿಗೆ... ನಿಮ್ಮ ಫೋಟೋ ನೋಡಿ ಸಿಕ್ಕಾಪಟ್ಟೆ ಮಾಡರ್ನ್, ಕನ್ನಡದಲ್ಲಿ ಅದೇನು ಬರೆದಿರ್‌ತಾರೋ ಅಂದ್ಕೊಂಡಿದ್ದೆ.. ತುಂಬಾ ಚೆನ್ನಾಗಿ ಕನ್ನಡ ಬರೀತೀರಾ.. ಒಧಿ ಖುಷಿಯಾಯ್ತು.

ಉಮೇಶ್ ಅವರೆ,
ಹ್ಹ ಹ್ಹ ಹ್ಹ! ಮುಖ ನೋಡಿ ಮಣೆ ಹಾಕಿದ್ರಾ? ನನ್ನ ಪ್ರೊಫೈಲ್ ನಲ್ಲಿ ತಿಳಿಸಿರುವಂತೆ ನಾನು ಓದಿದೆಲ್ಲವೂ ಆಂಗ್ಲ ಮಾಧ್ಯಮ, ಕನ್ನಡ ೩ ಭಾಷೆ. ಶಾಲೆಯ ಬುಕ್ಸ್ ಬಿಟ್ಟ್ರೆ ಬೇರೆನೂ ಓದಿದವಳಲ್ಲ:((
ಇರಲಿ, ನೀವು ಲೇಖನ ಮೆಚ್ಚಿ ಪ್ರೋತ್ಸಾಹಿಸಿದಕ್ಕೆ ವಂದನೆಗಳು.
ಬರ್ತಾಯಿರಿ...

tarikere eri mele song kelsiddakke haagu nimma mattondu vibhinna prayogakke abhinandane. :)

Post a Comment